ADVERTISEMENT

ತೀರ್ಥಹಳ್ಳಿ | ಮಳೆಯೂರಲ್ಲಿ ಬರಗಾಲ.. ಪಾತಾಳಕ್ಕಿಳಿದ ಅಂತರ್ಜಲ...

ನಿರಂಜನ ವಿ.
Published 9 ಮಾರ್ಚ್ 2024, 5:13 IST
Last Updated 9 ಮಾರ್ಚ್ 2024, 5:13 IST
ತೀರ್ಥಹಳ್ಳಿ ತಾಲ್ಲೂಕಿನ ಚಂಗಾರು ಸಮೀಪ ಮಾಲತಿ ನದಿ ಸಂಪೂರ್ಣ ಬತ್ತಿರುವುದು
ತೀರ್ಥಹಳ್ಳಿ ತಾಲ್ಲೂಕಿನ ಚಂಗಾರು ಸಮೀಪ ಮಾಲತಿ ನದಿ ಸಂಪೂರ್ಣ ಬತ್ತಿರುವುದು   

ತೀರ್ಥಹಳ್ಳಿ: ಮಲೆನಾಡಿನಲ್ಲಿ ಕಳೆದ ಬಾರಿ ಮಳೆ ಕೊರತೆಯ ಕಾರಣ ಅಂತರ್ಜಲ ಪಾತಾಳಕ್ಕೆ ಇಳಿದಿದ್ದು, ಕುಡಿಯುವ ನೀರಿಗೆ ಪರದಾಡಬೇಕಾದ ಸ್ಥಿತಿ ನಿರ್ಮಾಣವಾಗಿದೆ.

ಗ್ರಾಮಗಳಿಗೆ ಕುಡಿಯುವ ನೀರು ಪೂರೈಸಲು ಆಯಾ ಪಂಚಾಯಿತಿಗಳು 716 ಕೊಳವೆಬಾವಿಗಳನ್ನು ಅವಲಂಬಿಸಿವೆ. ಬೇಸಿಗೆ ಆರಂಭದಲ್ಲಿಯೇ 285 ಕೊಳವೆಬಾವಿಗಳಲ್ಲಿ ನೀರು ಕಡಿಮೆಯಾಗಿದ್ದು, 431ರಲ್ಲಿ ನೀರು ಇದೆ. ತಾಲ್ಲೂಕಿನಲ್ಲಿ ಹರಿದಿರುವ ತುಂಗಾ, ಮಾಲತಿ, ಕುಶಾವತಿ ನದಿಗಳು ಬಹುತೇಕ ಬತ್ತಿವೆ. ಮುಂಬರುವ ದಿನಗಳಲ್ಲಿ ನೀರಿನ ಅಭಾವ ಉಂಟಾಗುವ ಸಾಧ್ಯತೆ ಹೆಚ್ಚಿದೆ.

ಕಳೆದ ವರ್ಷ ಶೇಕಡ 53ರಷ್ಟು ವಾಡಿಕೆ ಮಳೆ ಸುರಿದಿದ್ದು, ಜನವರಿ ತಿಂಗಳ ಆರಂಭದಲ್ಲೇ ನೀರಿಗೆ ಅಭಾವ ಸೃಷ್ಟಿಯಾಗಿದೆ. ಸಾವಿರ ಅಡಿ ಆಳದವರೆಗೂ ಕೊಳವೆ ಬಾವಿ ಕೊರೆದರೂ ನೀರಿನ ಪಸೆ ಪತ್ತೆಯಾಗುತ್ತಿಲ್ಲ. ಹಲವೆಡೆ ಕಳೆದ ಬೇಸಿಗೆಯಲ್ಲಿ ಭರಪೂರ ನೀರು ನೀಡಿದ್ದ ಕೊಳವೆಬಾವಿಗಳು ಬತ್ತಿವೆ. ಗ್ರಾಮೀಣ ಭಾಗದ ಜನರು ಚಿಂತೆಗೀಡಾಗಿದ್ದಾರೆ.

ADVERTISEMENT

ತಾಲ್ಲೂಕಿನ 87 ಗ್ರಾಮಗಳಲ್ಲಿ ಕುಡಿಯುವ ನೀರಿನ ಕೊರತೆ ಇದೆ. ನೆರಟೂರು, ನೊಣಬೂರು, ಮೇಲಿನ ಕುರುವಳ್ಳಿ, ಹಣಗೆರೆ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಕುಡಿಯುವ ನೀರಿಗೆ ಅಭಾವ ಸೃಷ್ಟಿಯಾಗಿಲ್ಲ ಎಂದು ಸರ್ಕಾರಕ್ಕೆ ತಾಲ್ಲೂಕು ಆಡಳಿತದಿಂದ ವರದಿ ಸಲ್ಲಿಕೆಯಾಗಿದೆ.

ದಕ್ಷಿಣದ ಚಿರಾಪುಂಜಿಯಲ್ಲೇ ಮಳೆಯಿಲ್ಲ: ಅಕೇಶಿಯಾ ನೆಡುತೋಪು, ಮಿತಿಮೀರಿದ ಮರಳು ಸಾಗಣೆ, ತರಿ ಭೂಮಿ ಪರಿವರ್ತನೆ, ಹೆಚ್ಚಿದ ಅಡಿಕೆ ತೋಟ, ಜೀವ ವೈವಿಧ್ಯತೆ ನಾಶ, ಕಣ್ಮರೆಯಾದ ಬಿದಿರು, ಪರಿಸರ ಅಸಮತೋಲನ, ಮಾನವ ಹಸ್ತಕ್ಷೇಪ, ಅಭಿವೃದ್ಧಿ ಮುಂತಾದ ಕಾರಣಗಳಿಂದ ‘ದಕ್ಷಿಣದ ಚಿರಾಪುಂಜಿ’ ಎಂಬ ಖ್ಯಾತಿ ಪಡೆದಿದ್ದ ಆಗುಂಬೆಯ ಪರಿಸರದಲ್ಲೇ  ಮಳೆಯ ಪ್ರಮಾಣ ಕಡಿಮೆಯಾಗಿ, ಕುಡಿಯುವ ನೀರಿಗೆ ತತ್ವಾರ ಉಂಟಾಗಿದೆ.

ಬಿದರಗೋಡು, ಆಗುಂಬೆ, ಹೊನ್ನೇತ್ತಾಳು, ನಾಲೂರು, ಮೇಗರವಳ್ಳಿ, ಅರೇಹಳ್ಳಿ, ಹೊಸಹಳ್ಳಿ, ತೀರ್ಥಮುತ್ತೂರು, ಹೆಗ್ಗೋಡು ಗ್ರಾಮ ಪಂಚಾಯಿತಿ ವ್ಯಾಪ್ತಿಯ ವಿವಿಧ ಹಳ್ಳಿಗಳಲ್ಲಿ ನೀರಿಗೆ ತೀವ್ರ ಅಭಾವ ಉಂಟಾಗಿದೆ. ತುಂಗಾ, ಮಾಲತಿ ನದಿಗಳಲ್ಲಿ ನೀರಿನ ಹರಿವು ಸ್ಥಗಿತವಾಗಿರುವುದರಿಂದ ಸ್ಥಳೀಯರ ಆತಂಕ ಬಿಗಡಾಯಿಸುವಂತೆ ಮಾಡಿದೆ.

ಹಳ್ಳಿ ತಲುಪದ ಜೆಜೆಎಂ ಪೈಪ್‌: ಮಂಡಗದ್ದೆ, ಸಿಂಗನಬಿದರೆ ಬಹುಗ್ರಾಮ ಕುಡಿಯುವ ನೀರು ಯೋಜನೆ ವಿಫಲವಾಗಿದೆ. ಶಾಶ್ವತ ನೀರು ಕೊಡಲಾಗುವುದು ಎಂದು ಸ್ಥಾಪಿಸಿದ ಯೋಜನೆಯಡಿ ಒಂದು ಹನಿ ನೀರು ಬರುತ್ತಿಲ್ಲ. 20ಕ್ಕಿಂತ ಕಡಿಮೆ ಮನೆಗಳಿರುವ ಮಜರೆ ಹಳ್ಳಿಗಳಿಗೆ ಜೆಜೆಎಂ ಪೈಪ್‌ ಅಳವಡಿಸುತ್ತಿಲ್ಲ.

ಮಲೆನಾಡಿನ ಹಳ್ಳಿಗಳ ಕಲ್ಪನೆಯಿಲ್ಲದ ಯೋಜನೆ ಗ್ರಾಮ ಮಟ್ಟದಲ್ಲಿ ಗೊಂದಲ ರೂಪಿಸುತ್ತಿದೆ. ಜೆಜೆಎಂ ಯೋಜನೆ ಪೂರ್ಣಗೊಳ್ಳಲು 4,000 ಮೀಟರ್‌ ಎಚ್‌ಡಿಪಿ ಪೈಪ್‌ ಅಗತ್ಯವಿದೆ ಎಂದು ಮಂಡಗದ್ದೆ ಗ್ರಾಮ ಪಂಚಾಯಿತಿ ಸದಸ್ಯ ರಾಘವೇಂದ್ರ ಪುಟ್ಟೋಡ್ಲು ತಿಳಿಸಿದರು.

ಜಿಲ್ಲಾ ಪಂಚಾಯಿತಿಯಿಂದ ₹ 25 ಲಕ್ಷ ವೆಚ್ಚದಲ್ಲಿ ಕುಡಿಯುವ ನೀರಿನ ಕ್ರೀಯಾ ಯೋಜನೆ ಸಿದ್ಧವಾಗಿದೆ. ಕೊಳವೆಬಾವಿ ಕೊರೆಸಲು ಅನುದಾನ ನೀಡುತ್ತಿಲ್ಲ. ತೆರೆದ ಬಾವಿಗಳಿಗೆ ಅವಕಾಶ ಇದೆ. ಸದ್ಯ ಯಾವುದೇ ಗ್ರಾಮದಲ್ಲಿ ಕುಡಿಯುವ ನೀರಿಗೆ ಅಭಾವ ಇಲ್ಲ.
ಶೈಲಾ ಎನ್‌., ಇ.ಒ, ತಾಲ್ಲೂಕು ಪಂಚಾಯಿತಿ
ತೀರ್ಥಹಳ್ಳಿ ತಾಲ್ಲೂಕಿನ ಚಂಗಾರು ಸಮೀಪ ಮಾಲತಿ ನದಿ ಸಂಪೂರ್ಣ ಬತ್ತಿರುವುದು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.