ADVERTISEMENT

ಗ್ರಹಣ: ಬಿಕೋ ಎನ್ನುತ್ತಿದ್ದ ಶಿವಮೊಗ್ಗ ನಗರ

​ಪ್ರಜಾವಾಣಿ ವಾರ್ತೆ
Published 21 ಜೂನ್ 2020, 12:18 IST
Last Updated 21 ಜೂನ್ 2020, 12:18 IST
ಶಿವಮೊಗ್ಗ ನಗರದ ಪ್ರೆಸ್‌ಟ್ರಸ್ಟ್ ಎದುರಿನ ಕಟ್ಟಡದಲ್ಲಿ ಭಾನುವಾರ ಜನರು ಸೂರ್ಯ ಗ್ರಹಣ ವೀಕ್ಷಿಸಿದರು 
ಶಿವಮೊಗ್ಗ ನಗರದ ಪ್ರೆಸ್‌ಟ್ರಸ್ಟ್ ಎದುರಿನ ಕಟ್ಟಡದಲ್ಲಿ ಭಾನುವಾರ ಜನರು ಸೂರ್ಯ ಗ್ರಹಣ ವೀಕ್ಷಿಸಿದರು    

ಶಿವಮೊಗ್ಗ: ನಗರದ ಕೆಲವೆಡೆ ಭಾನುವಾರ ಸೂರ್ಯ ಗ್ರಹಣವನ್ನು ಜನರು ಕುತೂಹಲದಿಂದ ವೀಕ್ಷಿಸಿದರು.

ನಗರದ ಪ್ರೆಸ್‌ಟ್ರಸ್ಟ್ ಎದುರಿನ ಕಟ್ಟಡದಲ್ಲಿ ಕರ್ನಾಟಕ ಜ್ಞಾನ ವಿಜ್ಞಾನ ಸಮಿತಿಯಿಂದ ವೀಕ್ಷಣೆಗೆ ವ್ಯವಸ್ಥೆ ಮಾಡಲಾಗಿತ್ತು. ಬೆಳಿಗ್ಗೆ 10.30ರಿಂದ ಮಧ್ಯಾಹ್ನ 1.30 ವರೆಗೆ ಧೀರ್ಘಕಾಲದ ಸೂರ್ಯಗ್ರಹಣ ಸಂಭವಿಸುವುದನ್ನು ಸಾರ್ವಜನಿಕರು ಕುತೂಹಲದಿಂದ ವೀಕ್ಷಿಸುವುದು ಕಂಡುಬಂತು.

ಗ್ರಹಣದ ಸಮಯದಲ್ಲಿ ಆಹಾರ ಸೇವನೆ ಮಾಡಬಾರದು ಎಂಬ ಮೂಢನಂಬಿಕೆ ತೊರೆಯಲು ಗ್ರಹಣ ವೀಕ್ಷಿಸುತ್ತಾ ಮಂಡಕ್ಕಿ ತಿನ್ನುವ ವ್ಯವಸ್ಥೆಯನ್ನು ಸಮಿತಿ ಮಾಡಿತ್ತು. ಮಂಡಕ್ಕಿ ತಿನ್ನುತ್ತಾ ಜನರು ಗ್ರಹಣ ವೀಕ್ಷಿಸಿದರು.

ADVERTISEMENT

ಸೂರ್ಯಗ್ರಹಣ ಇದ್ದ ಕಾರಣ ನಗರದ ಎಲ್ಲಾ ರಸ್ತೆಗಳು ಬಿಕೋ ಎನ್ನುತ್ತಿದ್ದವು. ಭಾನುವಾರವಾದ ಕಾರಣ ಮೊದಲೇ ವಾಹನ ಸಂಚಾರ ವಿರಳ. ಅದರಲ್ಲೂ ಗ್ರಹಣ ಬಂದಿದ್ದರಿಂದ ರಸ್ತೆಗಳಲ್ಲಿ ಜನರ ಓಡಾಟ ಕಡಿಮೆ ಇತ್ತು. ಮನೆಗಳಲ್ಲಿ ಜನರು ಧ್ಯಾನ, ಜಪಗಳಲ್ಲಿ ನಿರತರಾಗಿದ್ದುದ್ದು ಕಂಡುಬಂತು.

ನಗರದ ಎಲ್ಲಾ ದೇವಸ್ಥಾನಗಳ ಬಾಗಿಲು ಮುಚ್ಚಲಾಗಿತ್ತು. ಗ್ರಹಣ ಮೋಕ್ಷ ಕಾಲದ ನಂತರ ದೇವಸ್ಥಾನಗಳು, ಮನೆಗಳನ್ನು ಸ್ವಚ್ಛಗೊಳಿಸುವುದು ಅಲ್ಲಲ್ಲಿ ಕಂಡುಬಂತು. ಕೆಲವು ದೇವಸ್ಥಾನಗಳಲ್ಲಿ ದೇವರಿಗೆ ವಿಶೇಷ ಪೂಜೆ, ಹೋಮ ನಡೆಸಲಾಯಿತು. ನಂತರ ಸಾರ್ವಜನಿಕರ ದರ್ಶನಕ್ಕೆ ಅನುವು ಮಾಡಿಕೊಡಲಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.