ಶಿಕಾರಿಪುರ: ಕೇಂದ್ರದ ಬಿಜೆಪಿ ನೇತೃತ್ವದ ಸರ್ಕಾರ ಚುನಾವಣಾ ಆಯೋಗ, ಇ.ಡಿ., ಸಿಬಿಐ ಸೇರಿ ಹಲವು ಸಂಸ್ಥೆಗಳನ್ನು ದುರ್ಬಳಕೆ ಮಾಡಿಕೊಂಡಿದೆ. ಇದರ ವಿರುದ್ಧ ಜನ ಜಾಗೃತಿ ಅಗತ್ಯವಿದೆ ಎಂದು ಕಾಂಗ್ರೆಸ್ ಶಿವಮೊಗ್ಗ ಜಿಲ್ಲಾ ಘಟಕ ಅಧ್ಯಕ್ಷೆ ಶ್ವೇತಾ ಬಂಡಿ ಅಭಿಪ್ರಾಯಪಟ್ಟರು.
ಪಟ್ಟಣದಲ್ಲಿ ಬುಧವಾರ ಕಾಂಗ್ರೆಸ್ ಆಯೋಜಿಸಿದ್ದ ವೋಟ್ ಚೋರ್, ಗದ್ದಿ ಛೋಡ್ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ಚುನಾವಣಾ ಆಯೋಗದ ಮೂಲಕ ಮತದಾರರ ಪಟ್ಟಿಯಲ್ಲಿ ಗೋಲ್‌ಮಾಲ್ ಮಾಡುವ ಕೆಲಸವನ್ನು ಬಿಜೆಪಿ ಮಾಡಿದ್ದು, ಸಂವಿಧಾನ ದುರ್ಬಳಕೆ ಮಾಡಿಕೊಂಡಿದೆ. ಈ ಪ್ರವೃತ್ತಿ ವಿರುದ್ಧ ಜನರು ಜಾಗೃತರಾಗಬೇಕಿದೆ. ದೇಶದಲ್ಲಿ ವಿರೋಧ ಪಕ್ಷವನ್ನು ದುರ್ಬಳಗೊಳಿಸುವುದಕ್ಕೆ ಸಾಂವಿಧಾನಿಕ ತನಿಖಾ ಸಂಸ್ಥೆಗಳನ್ನು ದುರ್ಬಳಕೆ ಮಾಡಿಕೊಳ್ಳಲಾಗುತ್ತಿದೆ ಎಂದು ಆರೋಪಿಸಿದರು.
ಕಾಂಗ್ರೆಸ್ ತಾಲ್ಲೂಕು ಘಟಕದ ಅಧ್ಯಕ್ಷ ಶಿವರಾಮ ಪಾರಿವಾಳ ಮಾತನಾಡಿ, ‘ಮತದಾನ ಪ್ರಜಾಪ್ರಭುತ್ವದ ಪವಿತ್ರ ಕಾರ್ಯ. ಅದಕ್ಕೆ ಸಂಬಂಧಿಸಿದ ಮತದಾರರ ಪಟ್ಟಿಯನ್ನು ಬೇಕಾಬಿಟ್ಟಿ ತಿದ್ದಿರುವುದು ಬೆಳಕಿಗೆ ಬಂದಿದೆ. ಇದು ಪ್ರಜಾತಂತ್ರಕ್ಕೆ ಮಾಡಿದ ಅವಮಾನ. ಭ್ರಷ್ಟಾಚಾರಕ್ಕೆ ಹೆಸರಾದ ವ್ಯಕ್ತಿಗಳೆಲ್ಲರೂ ಬಿಜೆಪಿಗೆ ಸೇರ್ಪಡೆಗೊಂಡ ನಂತರ ಪರಿಶುದ್ಧ ಆಗುತ್ತಿದ್ದಾರೆ. ಅಂದರೆ ಇ.ಡಿ, ಸಿಬಿಐ ದುರ್ಬಳಕೆ ಜನಸಾಮಾನ್ಯರಿಗೂ ತಿಳಿಯುತ್ತಿದ್ದು, ಜನತೆ ಚುನಾವಣೆಯಲ್ಲಿ ಬಿಜೆಪಿಗೆ ತಕ್ಕಪಾಠ ಕಲಿಸಬೇಕು ಎಂದು ಒತ್ತಾಯಿಸಿದರು.
ಯುವ ಕಾಂಗ್ರೆಸ್ ಅಧ್ಯಕ್ಷ ಶಿವು ಹುಲ್ಮಾರ್, ಪುರಸಭೆ ಸದಸ್ಯರಾದ ರವಿಕಿರಣ್, ಸುರೇಶ್ ಧಾರವಾಡ, ಪಕ್ಷದ ಮುಖಂಡರಾದ ಚಂದ್ರಶೇಖರಗೌಡ, ಅರುಣ್ ಕಣಿವೆಮನೆ, ಶೋಭಾ, ಹಸೀನಭಾನು, ತಿಪ್ಪಣ್ಣ, ಈಶ್ವರಪ್ಪ, ಬೆಳಕೇರಪ್ಪ ಸೇರಿ ನೂರಾರು ಜನರು ಪಾಲ್ಗೊಂಡಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.