ಶಿಕಾರಿಪುರ: ಪಠ್ಯದ ಜ್ಞಾನ ಮಾತ್ರ ಶಿಕ್ಷಣವಲ್ಲ. ಅದರ ಪರಿಭಾಷೆ ಬದಲಾಗಿದ್ದು, ವಿಸ್ತೃತ ಸ್ವರೂಪದ ಕಲಿಕೆ ಎಲ್ಲರಿಗೂ ಸಿಗುವಂತ ಶಿಕ್ಷಣ ವ್ಯವಸ್ಥೆ ಬರಬೇಕಿದೆ ಎಂದು ಸಂಸದ ಬಿ.ವೈ.ರಾಘವೇಂದ್ರ ಹೇಳಿದರು.
ಪಟ್ಟಣದ ಕುಮದ್ವತಿ ಬಿ.ಇಡಿ. ಕಾಲೇಜಿನಲ್ಲಿ ಶುಕ್ರವಾರ ನಡೆದ ಮೂರನೇ ಅಂತರರಾಷ್ಟ್ರೀಯ ಶೈಕ್ಷಣಿಕ ಸಮ್ಮೇಳನ ಉದ್ಘಾಟಿಸಿ ಅವರು ಮಾತನಾಡಿದರು.
‘ರ‍್ಯಾಂಕ್ ಪಡೆದವರು ಜೀವನದಲ್ಲಿ ಸೋತರೆ ಶಿಕ್ಷಣಕ್ಕೆ ಬೆಲೆ ಎಲ್ಲಿರುತ್ತದೆ. ಉದ್ಯೋಗ ಸಿಗದಿದ್ದಾಗ ಬೇಸರವಾಗದೇ ಸ್ವಯಂ ಉದ್ಯೋಗ ಮಾಡುವ ಮನಸ್ಸು ಬರಬೇಕು. ಸಿಕ್ಕ ಕೆಲಸ ಮಾಡುವ ಮನೋಭಾವ ಬೆಳೆಯಬೇಕು. ಜೀವನದಲ್ಲಿ ಎಷ್ಟೇ ಕಷ್ಟ ಬಂದರೂ ಅದನ್ನು ಎದುರಿಸುವ ಶಕ್ತಿ ಶಿಕ್ಷಣಕ್ಕೆ ಬರಬೇಕಿದೆ’ ಎಂದರು.
ಶಿಕ್ಷಣ ಮಗುವಿನ ಸುಪ್ತವಾಗಿರುವ ಶಕ್ತಿ. ಅದನ್ನು ಕ್ರಿಯಾತ್ಮಕವಾಗಿ ಹೊರತರುವ ಶಕ್ತಿ ಶಿಕ್ಷಕರಲ್ಲಿರುತ್ತದೆ. ಶಿಕ್ಷಣ ಎಂದರೆ ಎಲ್ಲವನ್ನೂ ಕಲಿಸುವುದಲ್ಲ. ಕಲಿಯುವಂತೆ ಮಾರ್ಗದರ್ಶನ ಮಾಡುವ ಜತೆ ಮಗುವಿನಲ್ಲಿರುವ ಅಂತಃಸತ್ವವನ್ನು ಹೇಗೆ ಹೊಸತನದೊಂದಿಗೆ ಪ್ರಸ್ತುತಪಡಿಸಬೇಕು ಎಂಬುದಾಗಿದೆ ಎಂದು ಕುವೆಂಪು ವಿವಿ ಕುಲಪತಿ ಶರತ್ ಅನಂತಮೂರ್ತಿ ಹೇಳಿದರು.
ಸಮ್ಮೇಳನದ ಸ್ಮರಣ ಸಂಚಿಕೆ ಬಿಡುಗಡೆ ಮಾಡಲಾಯಿತು. ಸ್ವಾಮಿ ವಿವೇಕಾನಂದ ವಿದ್ಯಾಸಂಸ್ಥೆಯ ಅಧ್ಯಕ್ಷ ಎಂ.ಬಿ.ಶಿವಕುಮಾರ್, ಡೀಮ್ಡ್ ವಿವಿ ಬೆಂಗಳೂರಿನ ಜಿ.ಆರ್.ಅಂಗಡಿ, ಕಲಬುರಗಿ ಕೇಂದ್ರೀಯ ವಿವಿ ಪ್ರಾಚಾರ್ಯ ಜಿ.ಎಸ್.ಶಿವಕುಮಾರ್, ಪ್ರಾಚಾರ್ಯ ಜಿ.ಎಸ್.ಶಿವಕುಮಾರ್, ಸಂಪನ್ಮೂಲ ವ್ಯಕ್ತಿಗಳು, ಪ್ರಶಿಕ್ಷಣಾರ್ಥಿಗಳು ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.