ADVERTISEMENT

ಶಿವಮೊಗ್ಗ | ಗಮನ ಸೆಳೆದ ಈದ್ ಮೆರವಣಿಗೆ: ಹಿಂದೂಗಳಿಂದ ತಂಪು ಪಾನೀಯ ವಿತರಣೆ

​ಪ್ರಜಾವಾಣಿ ವಾರ್ತೆ
Published 16 ಸೆಪ್ಟೆಂಬರ್ 2025, 5:12 IST
Last Updated 16 ಸೆಪ್ಟೆಂಬರ್ 2025, 5:12 IST
<div class="paragraphs"><p>ಶಿವಮೊಗ್ಗದಲ್ಲಿ ಸೋಮವಾರ ಈದ್ ಮಿಲಾದ್ ಆಚರಣೆ ಅಂಗವಾಗಿ ಮುಸ್ಲಿಂ ಸಮುದಾಯದಿಂದ ನಡೆದ ಮೆರವಣಿಗೆಯ ನೋಟ</p></div>

ಶಿವಮೊಗ್ಗದಲ್ಲಿ ಸೋಮವಾರ ಈದ್ ಮಿಲಾದ್ ಆಚರಣೆ ಅಂಗವಾಗಿ ಮುಸ್ಲಿಂ ಸಮುದಾಯದಿಂದ ನಡೆದ ಮೆರವಣಿಗೆಯ ನೋಟ

   

–ಪ್ರಜಾವಾಣಿ ಚಿತ್ರ

ಶಿವಮೊಗ್ಗ: ಇಸ್ಲಾಂ ಧರ್ಮದ ಸಂಸ್ಥಾಪಕ ಪ್ರವಾದಿ ಮೊಹಮ್ಮದ್ ಪೈಗಂಬರ್‌ರ 1500ನೇ ಜನ್ಮದಿನದ ನೆನಪಿನ ಈದ್ ಮಿಲಾದ್ ಹಬ್ಬದ ಅಂಗವಾಗಿ ನಗರದಲ್ಲಿ ಸೋಮವಾರ ವೈಭವದ ಮೆರವಣಿಗೆ ನಡೆಯಿತು.

ಸುನ್ನಿ ಜಾಮಿಯಾ ಮಸೀದಿ ನೇತೃತ್ವದಲ್ಲಿ ಮುಸ್ಲಿಂ ಸಮಾಜದಿಂದ ನಡೆದ ಮೆರವಣಿಗೆಯಲ್ಲಿ ಸಾವಿರಾರು ಮಂದಿ ಶ್ರದ್ಧೆ ಭಕ್ತಿಯಿಂದ ಪಾಲ್ಗೊಂಡು ಪ್ರವಾದಿ ಅವರ ಜನ್ಮದಿನವನ್ನು ಸ್ಮರಿಸಿ, ಸಂಭ್ರಮಿಸಿದರು.

ಗಾಂಧಿ ಬಜಾರ್‌ನ ಸುನ್ನಿ ಜಾಮಿಯಾ ಮಸೀದಿಯಿಂದ ಮಧ್ಯಾಹ್ನ 3 ಗಂಟೆಗೆ ಮೆರವಣಿಗೆ ಆರಂಭವಾಯಿತು. ಮದಾರಿ ಪಾಳ್ಯ, ಸೂಳೆಬೈಲು, ನ್ಯೂಮಂಡ್ಲಿ, ಹಳೆಮಂಡ್ಲಿ, ಇಲಿಯಾಸ್ ನಗರ, ಟಿಪ್ಪು ನಗರ, ಇಮಾಮ್ ಬಾಡ (ಸೀಗೆಹಟ್ಟಿ), ಕ್ಲಾರ್ಕ್‌ಪೇಟೆ, ಬೈಪಾಸ್, ಲಷ್ಕರ್‌ ಮೊಹಲ್ಲಾ, ಪೆನ್ಷನ್ ಮೊಹಲ್ಲಾ, ಚಿಕ್ಕಲ್, ರಾಗಿಗುಡ್ಡ, ಜೆಪಿಎನ್ ನಗರ, ಬಾಪೂಜಿ ನಗರ, ಟ್ಯಾಂಕ್ ಮೊಹಲ್ಲಾ, ಅಮೀರ್‌ ಅಹಮದ್‌ ಕಾಲೊನಿ, ಬಸವನಗುಡಿ ಭಾಗದಿಂದ ಬಂದ ಮುಸ್ಲಿಮರು ಮೆರವಣಿಗೆಯನ್ನು ಮುನ್ನಡೆಸಿದರು.

ಮೆರವಣಿಗೆ ಹಿನ್ನೆಲೆಯಲ್ಲಿ ಅಮೀರ್‌ ಅಹಮದ್‌ ವೃತ್ತದಲ್ಲಿ ಮುಸ್ಲಿಮರ ಪವಿತ್ರ ಧಾರ್ಮಿಕ ಕೇಂದ್ರ ಮೆಕ್ಕಾ–ಮದೀನಾದ ಪ್ರತಿಕೃತಿ, ಹಜರತ್ ಅಲಿ ಸೇರಿದಂತೆ ಧಾರ್ಮಿಕ ಹಾಗೂ ಸಾಂಸ್ಕೃತಿಕ ನಾಯಕರ ಸ್ಮರಣೆಯ ಚಿಹ್ನೆಗಳನ್ನು ಅಳವಡಿಸಲಾಗಿತ್ತು. ಗಾಂಧಿ ಬಜಾರ್, ಅಮೀರ್ ಅಹಮದ್ ವೃತ್ತ ಸೇರಿದಂತೆ ಶಿವಮೊಗ್ಗದ ಪ್ರಮುಖ ರಸ್ತೆ ಹಾಗೂ ವೃತ್ತಗಳು ಹಸಿರು ಹೊದ್ದು ಅಲಂಕೃತಗೊಂಡಿದ್ದವು. ಪ್ರಮುಖ ರಸ್ತೆ ಹಾಗೂ ಪ್ರಾರ್ಥನಾ ಮಂದಿರಗಳ ಬಳಿ ವಿದ್ಯುತ್ ದೀಪಾಲಂಕಾರ ಮಾಡಲಾಗಿತ್ತು.

ಆಟೊ, ಟ್ರ್ಯಾಕ್ಟರ್, ಮಿನಿ ಗೂಡ್ಸ್ ಗಾಡಿಗಳು ಸೇರಿದಂತೆ ಬೇರೆ ಬೇರೆ ವಾಹನಗಳಲ್ಲಿ ಪ್ರಾರ್ಥನಾ ಮಂದಿರ, ಗುಂಬಜ್‌ ಹಾಗೂ ಧಾರ್ಮಿಕ ಚಿಹ್ನೆಗಳ ಪ್ರತಿಕೃತಿ ನಿರ್ಮಿಸಿ ಅದಕ್ಕೆ ಹೂವು ಹಾಗೂ ಬೆಳಕಿನ ಅಲಂಕಾರ ಮಾಡಿ ಮೆರವಣಿಗೆಯಲ್ಲಿ ಕೊಂಡೊಯ್ಯಲಾಯಿತು.

ಮೆರವಣಿಗೆ ಲಷ್ಕರ್ ಮೊಹಲ್ಲಾ, ಪೆನ್ಷನ್ ಮೊಹಲ್ಲಾ, ಬಿ.ಎಚ್. ರಸ್ತೆ, ಟ್ಯಾಂಕ್ ಮೊಹಲ್ಲಾ, ಬಾಲರಾಜ ಅರಸ್ ರಸ್ತೆ , ಮಹಾವೀರ ವೃತ್ತ, ಗೋಪಿ ವೃತ್ತ, ಅಶೋಕ ವೃತ್ತ, ಎನ್.ಟಿ. ರಸ್ತೆ, ಆಜಾದ್‌ ನಗರ, ಎಸ್‌ಪಿ ರಸ್ತೆ ಮೂಲಕ ಅಮೀರ್‌ ಅಹಮದ್‌ ವೃತ್ತ ತಲುಪಿತು.

ಮೆರವಣಿಗೆಯಲ್ಲಿ ಬೇರೆ ಬೇರೆ ವೇಷ ಧರಿಸಿದ್ದ ಮಕ್ಕಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದ್ದರು. ಹಬ್ಬಕ್ಕೆ ಸಂಬಂಧಿಸಿದ ಘೋಷಣೆಗಳು ಮೆರವಣಿಗೆ ಉದ್ದಕ್ಕೂ ಮೊಳಗಿದವು. ಮಧ್ಯಾಹ್ನ ಆರಂಭವಾದ ಮೆರವಣಿಗೆ ರಾತ್ರಿಯವರೆಗೆ ಪ್ರಮುಖ ಬೀದಿಗಳಲ್ಲಿ ಭವ್ಯವಾಗಿ ನಡೆಯಿತು.

ಮೆರವಣಿಗೆಯಲ್ಲಿ ಕವ್ವಾಲಿ, ಲಾವಣಿಗಳನ್ನು ಹಾಡಿ ಮೊಹಮ್ಮದ್ ಪೈಗಂಬರರ ಗುಣಗಾನ ಮಾಡುತ್ತಾ ಸಾಗಿದರು. ಸಾಂಪ್ರದಾಯಿಕ ಉಡುಪು ಧರಿಸಿದ ಮುಸ್ಲಿಮರು ಸಾಗಿಬಂದರು. ಕೆಲವು ವೃತ್ತಗಳಲ್ಲಿ ಡಿಜೆ ಸದ್ದು, ಧಾರ್ಮಿಕ ಘೋಷಣೆ ಮೊಳಗಿದವು. ಪಟಾಕಿ ಸದ್ದು ಜೋರಾಗಿತ್ತು. ಮೆರವಣಿಗೆ ಅಮೀರ್ ಅಹಮದ್ ಸರ್ಕಲ್‌ಗೆ ಬಂದಾಗ ಅಲ್ಲಿ ಸಮುದಾಯದ ಮಹಿಳೆಯರು ಹಾಗೂ ಮಕ್ಕಳು ಹೆಚ್ಚಿನ ಸಂಖ್ಯೆಯಲ್ಲಿ ನೆರೆದು ವೀಕ್ಷಣೆ ಮಾಡಿದರು. ಶಿವಪ್ಪ ನಾಯಕ ವೃತ್ತ ಮತ್ತು ಅಮೀರ್ ಅಹಮದ್ ವೃತ್ತದಲ್ಲಿ ಯುವಜನರು ನೃತ್ಯ ಮಾಡಿದರು.

ಕಾರು, ಬೈಕ್‌ಗಳಲ್ಲಿ ಕುಟುಂಬ ಸಮೇತವಾಗಿ, ಗೆಳೆಯರೊಂದಿಗೆ ಮೆರವಣಿಗೆಯಲ್ಲಿ ಪಾಲ್ಗೊಂಡು ಮೊಹಮ್ಮದ್ ಪೈಗಂಬರ್ ಅವರನ್ನು ಸ್ಮರಿಸಿದರು. ಮೆರವಣಿಗೆ ಸಾಗಿ ಬಂದ ಹಾದಿ ಹಸಿರುಮಯವಾಗಿ ಮಾರ್ಪಟ್ಟಿತು. ಹಸಿರು, ಬಿಳಿ ಬಾವುಟ, ಧಾರ್ಮಿಕ ಬರಹಗಳು ಕಂಡುಬಂದವು.

ಮೊಬೈಲ್‌ ಫೋನ್‌ಗಳಲ್ಲಿ ಮೆರವಣಿಗೆಯ ದೃಶ್ಯಗಳನ್ನು ಚಿತ್ರೀಕರಿಸುವುದರ ಜೊತೆಗೆ ಸೆಲ್ಫಿ ತೆಗೆದುಕೊಳ್ಳುವುದು ಕಂಡು ಬಂತು. ಮೆರವಣಿಗೆ ಹೋದ ಕಡೆಯೆಲ್ಲಾ ರಸ್ತೆ ಬದಿ ಮತ್ತು‌ ಕಟ್ಟಡಗಳ ಮಹಡಿಯಲ್ಲಿ ನಿಂತು ಜನರು ವೀಕ್ಷಿಸಿದರು.

ಮಹಾವೀರ ವೃತ್ತ ಹಾಗೂ ಗಾಂಧಿ ಬಜಾರ್‌ನಲ್ಲಿ ಕಾಂಗ್ರೆಸ್ ಜಿಲ್ಲಾ ಘಟಕದ ಅಧ್ಯಕ್ಷ ಆರ್.ಪ್ರಸನ್ನಕುಮಾರ್, ಸುಡಾ ಅಧ್ಯಕ್ಷ ಎಚ್.ಎಸ್.ಸುಂದರೇಶ, ಕಾಂಗ್ರೆಸ್ ಮುಖಂಡರಾದ ಎಚ್.ಸಿ.ಯೋಗೀಶ್, ಎಂ.ಶ್ರೀಕಾಂತ್, ಶರತ್ ಮರಿಯಪ್ಪ, ರಮೇಶ ಇಕ್ಕೇರಿ, ಕೆ.ದೇವೇಂದ್ರಪ್ಪ, ಸಿ.ಜೆ.ಮಧುಸೂಧನ್‌, ಶಿವಕುಮಾರ್, ಎಸ್.ಟಿ.ಹಾಲಪ್ಪ, ಇಕ್ಬಾಲ್ ನೇತಾಜಿ ಮತ್ತಿತರರು ಮುಸ್ಲಿಂ ಸಮಾಜದವರಿಗೆ ಈದ್ ಮಿಲಾದ್ ಶುಭಾಶಯ ಕೋರಿದರು.

ಎಸ್ಪಿ ನೇತೃತ್ವದಲ್ಲಿ ಬಿಗಿ ಭದ್ರತೆ

ಮೆರವಣಿಗೆ ಹಿನ್ನೆಲೆಯಲ್ಲಿ ಇಡೀ ನಗರದಲ್ಲಿ 2000ಕ್ಕೂ ಹೆಚ್ಚು ಪೊಲೀಸರ ಸರ್ಪಗಾವಲು ಹಾಕಲಾಗಿತ್ತು. ಸ್ವತಃ ಎಸ್ಪಿ ಜಿ.ಕೆ.ಮಿಥುನ್‌ಕುಮಾರ್, ಮೂವರು ಎಎಸ್ಪಿಗಳು, 15 ಮಂದಿ ಡಿವೈಎಸ್ಪಿಗಳು ಬಂದೋಬಸ್ತ್‌ನ ನೇತೃತ್ವ ವಹಿಸಿದ್ದರು.

ಸಿ.ಸಿ.ಟಿ.ವಿ ಕ್ಯಾಮೆರಾ ಹಾಗೂ ಡ್ರೋನ್‌ ಕ್ಯಾಮೆರಾದ ಕಣ್ಗಾವಲು ಇಡಲಾಗಿತ್ತು. ಮೆರವಣಿಗೆ ಸಾಗುವ ಹಾದಿಯಲ್ಲಿ ವಾಹನಗಳ ಸಂಚಾರ ಮತ್ತು ನಿಲುಗಡೆ ನಿಷೇಧಿಸಲಾಗಿತ್ತು. ಪ್ರಮುಖ ರಸ್ತೆಗಳನ್ನು ಕೂಡುವ ಒಳ ರಸ್ತೆಗಳನ್ನೂ ಬಂದ್ ಮಾಡುವ ಮೂಲಕ ಯಾವುದೇ ಅಹಿತಕರ ಘಟನೆಗೆ ಆಸ್ಪದ ಆಗದಂತೆ ಪೊಲೀಸರು ಬಿಗಿ ಕ್ರಮ ಕೈಗೊಂಡಿದ್ದರು.

ವಿಶೇಷತೆಗಳು

  • ಮಿಳಘಟ್ಟದಲ್ಲಿ ಹಿಂದೂ ಸಮಾಜದ ಗಣಪತಿ ಸಮಿತಿಯವರಿಂದ ತಂಪು ಪಾನೀಯ, ಮಜ್ಜಿಗೆ ವಿತರಣೆ

  • ಲಷ್ಕರ್ ಮೊಹಲ್ಲಾದ ಮೆರಾಜ್ ಮಸೀದಿ ಕಾಂಪೌಂಡ್‌ನಲ್ಲಿ ಬೆಳಿಗ್ಗೆ ಅಲ್ಲಿನ ಯುವಕ ಸಂಘಟನೆಯವರಿಂದ ರಕ್ತದಾನ

  • ಮುಸ್ಲಿಂ ಮುಖಂಡರು, ಧರ್ಮಗುರುಗಳು ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದರು.

  • ಹುಲಿಯ ಪ್ರತಿಕೃತಿಯ ಹಿಂದೆ ಕುಳಿತು ಟಿಪ್ಪು ವೇಷಧರಿಸಿದ್ದ ಹುಡುಗ

  • ಸಾಂಪ್ರದಾಯಿಕ ದಿರಿಸು ಧರಿಸಿ ಕುದುರೆ ಮೇಲೆ ಮೆರವಣಿಗೆಗೆ ಬಂದರು

  • ರಾತ್ರಿ ಅಮೀರ್ ಅಹಮ್ಮದ್ ವೃತ್ತದಲ್ಲಿ ಕವ್ವಾಲಿಯ ಗಾಯನ ಕಳೆಗಟ್ಟಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.