ಶಿವಮೊಗ್ಗ: ವಿದ್ಯುತ್ ನಿಗಮದ ನೌಕರರಿಗಾಗಿ ಇಲ್ಲಿ ಆಯೋಜಿಸಿದ್ದ ಕ್ರಿಕೆಟ್ ಟೂರ್ನಿಯಲ್ಲಿ ಮೈಸೂರು ಬ್ಲೂ ಬಾಯ್ಸ್ ತಂಡ ಚಾಂಪಿಯನ್ ಆಗಿದೆ. ಉಡುಪಿ ಸ್ಟ್ರೈಕರ್ಸ್ ತಂಡ ರನ್ನರ್ಸ್ ಅಪ್ ಆದರೆ, ಗುಂಡ್ಲುಪೇಟೆಯ ಟೈಗರ್ಸ್ ತಂಡ ತೃತೀಯ ಸ್ಥಾನ ಪಡೆದಿದೆ.
ಆಕಸ್ಮಿಕವಾಗಿ ವಿದ್ಯುತ್ ಆಘಾತದಿಂದ ಮೃತಪಟ್ಟ ಕರ್ತವ್ಯ ನಿರತ ಪವರ್ ಮ್ಯಾನ್‌ಗಳ ಸ್ಮರಣಾರ್ಥವಾಗಿ ಆಯೋಜಿಸಿದ್ದ ರಾಜ್ಯಮಟ್ಟದ ಎಸ್ಕಾಂ ಕ್ರಿಕೆಟ್ ಲೀಗ್‌ನಲ್ಲಿ 24 ತಂಡಗಳು ಭಾಗವಹಿಸಿದ್ದವು. ವಿಜೇತ ತಂಡಗಳಿಗೆ ವಿದ್ಯುತ್ ನಿಗಮದ ಅಧೀಕ್ಷಕ ಎಂಜಿನಿಯರ್ ಎಸ್.ಜಿ. ಶಶಿಧರ್ ಅವರು ನಗದು ಹಾಗೂ ಟ್ರೋಫಿ ವಿತರಿಸಿದರು.
ಶಿವಮೊಗ್ಗ, ಜಗಳೂರು, ಸಾತನೂರು, ಗುಂಡ್ಲುಪೇಟೆ, ಪಾವಗಡ, ತಿಪಟೂರು, ಚಿಕ್ಕಬಳ್ಳಾಪುರ, ಹಾಸನ, ಚಿತ್ರದುರ್ಗ, ಮೈಸೂರು, ಉಡುಪಿ, ಹಳಿಯಾಳ, ಕುಂಸಿ, ಭದ್ರಾವತಿ, ಬಾಗೇಪಲ್ಲಿ ಸೇರಿದಂತೆ ವಿವಿಧೆಡೆಯಿಂದ ತಂಡಗಳು ಭಾಗವಹಿಸಿದ್ದು, 4 ವಿಭಾಗಗಳಲ್ಲಿ ಲೀಗ್ ಪಂದ್ಯಗಳು ನಡೆದವು.
ಇದೇ ಮೊದಲ ಬಾರಿಗೆ ರಾಜ್ಯ ಮಟ್ಟದಲ್ಲಿ ವಿದ್ಯುತ್ ನಿಗಮದ ನೌಕರರಿಗೆ ಟೂರ್ನಿ ಆಯೋಜಿಸಲಾಗಿತ್ತು. ಶಿವಮೊಗ್ಗದ ಜೆಎನ್ಎನ್‌ಸಿ ಕ್ರೀಡಾಂಗಣ ಹಾಗೂ ಕೃಷಿ ವಿಶ್ವವಿದ್ಯಾಲಯದ ಕ್ರೀಡಾಂಗಣದಲ್ಲಿ ಪಂದ್ಯಗಳನ್ನು ನಡೆಸಲಾಗಿತ್ತು.
‘ಮನಸ್ಸಿನ ಸ್ಥೀಮಿತತೆಯಿಂದ ಸಕಲವೂ ಸಾಧ್ಯ. ಕೆಲಸದ ಒತ್ತಡ ಎಂದುಕೊಂಡು ಇರುವ ಅವಧಿ ಕಳೆದುಕೊಳ್ಳದಿರಿ. ನಿಮ್ಮ ನಿಮ್ಮ ದೈಹಿಕ ಹಾಗೂ ಮಾನಸಿಕ ಸಂತಸ ಹಾಗೂ ಉತ್ಸಾಹಕ್ಕಾಗಿ ದಿನದ ಒಂದಿಷ್ಟು ಸಮಯ ನಿಗದಿಪಡಿಸಿಕೊಳ್ಳಿ’ ಎಂದು ಮುಖ್ಯ ಅಧೀಕ್ಷಕ ಎಂಜಿನಿಯರ್ ಎಸ್.ಜಿ.ಶಶಿಧರ್ ತಿಳಿಸಿದರು.
‘ದೇಶದ ಸೈನಿಕರಂತೆ ನೀವುಗಳು ವಿದ್ಯುತ್ ನಿಗಮಗಳಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದೀರಿ. ಯಾವುದೇ ಕಾರಣಕ್ಕೂ ಜಾಗ್ರತೆ ಇಲ್ಲದೆ ಕೆಲಸ ನಿರ್ವಹಿಸಬೇಡಿ’ ಎಂದು ಸಮಾಜ ಸೇವಕ ಹೊಳಲೂರು ಸಂತೋಷ್ ಕಿವಿಮಾತು ಹೇಳಿದರು.
ಟ್ರಸ್ಟ್‌ನ ಸಂಸ್ಥಾಪಕ ಎಚ್.ಬಿ.ಜಗದೀಶ್, ಅಧ್ಯಕ್ಷ ಸುರೇಶ್, ಹಿರಿಯ ಪತ್ರಕರ್ತ ಎಸ್.ಕೆ.ಗಜೇಂದ್ರ ಸ್ವಾಮಿ, ಮೆಸ್ಕಾಂ ಅಧಿಕಾರಿಗಳಾದ ಅಶೋಕ್, ಲೋಕೇಶ್ ನಾಯ್ಕ, ಜಗದೀಶ್ ಕುಂಸಿ, ಕಾರ್ಯಕ್ರಮದ ಆಯೋಜಕರಾದ ಎಚ್.ಬಿ.ಮಂಜುನಾಥ್, ಶಿವಕುಮಾರ್, ಕೃಷ್ಣ, ನಂದೀಶ್, ಚೇತನ್, ರಾಜೀವ್, ಸುದೀರ್, ಸುರೇಶ್, ಶಿವಾನಂದ್, ರಾಜು, ಮಂಜುನಾಥ, ಕೀರ್ತಿ, ವಿನಯ್, ಕುಮಾರ್, ಅಜಯ್, ಸುನಿಲ್, ತಿಪ್ಪೇಸ್ವಾಮಿ ಉಪಸ್ಥಿತರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.