ADVERTISEMENT

ಪಂಚಾಯಿತಿ ಮಟ್ಟದಲ್ಲಿ ಸಂಘಟನೆಗೆ ಒತ್ತು ನೀಡಿ: ಮಂಜುನಾಥ್ ಭಂಡಾರಿ

ಕಾಂಗ್ರೆಸ್‌ ಪ್ರಚಾರ ಸಮಿತಿ ಉಸ್ತುವಾರಿ ಮಂಜುನಾಥ್ ಭಂಡಾರಿ

​ಪ್ರಜಾವಾಣಿ ವಾರ್ತೆ
Published 27 ಜನವರಿ 2023, 5:46 IST
Last Updated 27 ಜನವರಿ 2023, 5:46 IST
ಶಿವಮೊಗ್ಗದಲ್ಲಿ ಗುರುವಾರ ಆಯೋಜಿಸಿದ್ದ ಪ್ರಚಾರ ಸಮಿತಿ ಸಭೆಯನ್ನು ಮಾಜಿ ಸಚಿವ ಕಾಗೋಡು ತಿಮ್ಮಪ್ಪ ಉದ್ಘಾಟಿಸಿದರು.
ಶಿವಮೊಗ್ಗದಲ್ಲಿ ಗುರುವಾರ ಆಯೋಜಿಸಿದ್ದ ಪ್ರಚಾರ ಸಮಿತಿ ಸಭೆಯನ್ನು ಮಾಜಿ ಸಚಿವ ಕಾಗೋಡು ತಿಮ್ಮಪ್ಪ ಉದ್ಘಾಟಿಸಿದರು.   

ಶಿವಮೊಗ್ಗ: ಗ್ರಾಮ ಪಂಚಾಯಿತಿ ಮಟ್ಟದಲ್ಲಿ ಸೋತವರೇ ನಿಜವಾದ ನಾಯಕರು. ಪ್ರಚಾರ ಸಮಿತಿ ಸದಸ್ಯರು ಅವರನ್ನು ಸಂಪರ್ಕಿಸಿ ಬೂತ್ ಮಟ್ಟದಿಂದ ಜನರನ್ನು ಒಗ್ಗೂಡಿಸಲು ಮುಂದಾಗಿ ಎಂದು ಜಿಲ್ಲಾ ಕಾಂಗ್ರೆಸ್‌ ಪ್ರಚಾರ ಸಮಿತಿ ಉಸ್ತುವಾರಿ ಮಂಜುನಾಥ್ ಭಂಡಾರಿ ಹೇಳಿದರು.

ಇಲ್ಲಿನ ಕಾಂಗ್ರೆಸ್ ಭವನದಲ್ಲಿ ಗುರುವಾರ ಆಯೋಜಿಸಿದ್ದ ಜಿಲ್ಲಾ ಕಾಂಗ್ರೆಸ್ ಪ್ರಚಾರ ಸಮಿತಿ ಸಭೆಯಲ್ಲಿ ಮಾತನಾಡಿದರು.

‘ಪ್ರಚಾರ ಸಮಿತಿಯ ಉದ್ದೇಶ ಪಕ್ಷದ ಸಂಘಟನೆ ಮಾಡುವುದು. ಅದು ಒಂದು ಜವಾಬ್ದಾರಿ. ಯುವಕರನ್ನು ಸಂಘಟಿಸಿ, ಪಕ್ಷವನ್ನು ಬಲಿಷ್ಠಪಡಿಸುವುದು. ಈಗಾಗಲೇ ರಚಿಸಿರುವ ಕಮಿಟಿಯಲ್ಲಿರುವ ಸದಸ್ಯರು ಹೊಸಬರಿಗೆ ಅವಕಾಶ ಮಾಡಿಕೊಡಬೇಕು. ಪಕ್ಷಕ್ಕೆ ಹೊಸ ರಕ್ತ ಹರಿದು ಬರಬೇಕು. ನೀವೇ ಎಲ್ಲಾ ಜವಾಬ್ದಾರಿ ಹಂಚಿಕೊಂಡರೆ ಪಕ್ಷ ಬಲಿಷ್ಠವಾಗಲು ಕಷ್ಟವಾಗಬಹುದು’ ಎಂದರು.

ADVERTISEMENT

‘ಜಾತಿ, ಮತ, ಧರ್ಮ ಎಲ್ಲವನ್ನೂ ಪಕ್ಕಕ್ಕಿಟ್ಟು, ಸಾಮರಸ್ಯದಿಂದ ಕೆಲಸ ಮಾಡಿ. 31 ಜಿಲ್ಲೆಗಳಲ್ಲಿ ಕೇವಲ ಮೂರು ಜಿಲ್ಲೆಗಳಲ್ಲಿ ಮಾತ್ರ ನಾವು ಗೆದ್ದಿದ್ದೇವೆ. ಅದನ್ನು ತಲೆಯಲ್ಲಿರಿಸಿಕೊಳ್ಳುವುದು ಮುಖ್ಯವಾಗುತ್ತದೆ. ಈ ಬಾರಿಯ ವಿಧಾನಸಭೆ ಚುನಾವಣೆಯನ್ನು ಗಂಭೀರವಾಗಿ ಪರಿಗಣಿಸಿ ಜಿಲ್ಲೆಯ ಅಭಿವೃದ್ಧಿ ಬಗ್ಗೆ ಸ್ಥಳೀಯ ಪ್ರಣಾಳಿಕೆ ಸಿದ್ಧಪಡಿಸಬೇಕು’ ಎಂದು ಸಲಹೆ ನೀಡಿದರು.

ರಾಹುಲ್ ಗಾಂಧಿ ಅವರ ಭಾರತ್‌ ಜೋಡೋ ಯಾತ್ರೆಯ ಸಮಾರೋಪ ಶ್ರೀನಗರದಲ್ಲಿ ಜ.30ರಂದು ನಡೆಯಲಿದ್ದು, ಅಂದು ನಗರದ ಗೋಪಿ ವೃತ್ತದಲ್ಲಿ ವಿವಿಧ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದು ಜಿಲ್ಲಾ ಕಾಂಗ್ರೆಸ್ ಪ್ರಚಾರ ಸಮಿತಿ ಅಧ್ಯಕ್ಷ ಎನ್. ರಮೇಶ್ ಹೇಳಿದರು.

ಮಾಜಿ ಸಚಿವ ಕಾಗೋಡು ತಿಮ್ಮಪ್ಪ, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಎಚ್.ಎಸ್. ಸುಂದರೇಶ್, ಮಾಜಿ ಶಾಸಕ ಕೆ.ಬಿ ಪ್ರಸನ್ನ ಕುಮಾರ್, ವಿಧಾನಪರಿಷತ್ ಮಾಜಿ ಸದಸ್ಯ ಆರ್. ಪ್ರಸನ್ನ ಕುಮಾರ್, ಮುಖಂಡರಾದ ಕಲಕೋಡು ರತ್ನಾಕರ, ಎಚ್.ಸಿ. ಯೋಗೇಶ್, ಎಸ್.ಪಿ. ದಿನೇಶ್, ಡಾ. ರಾಜನಂದಿನಿ ಕಾಗೋಡು, ಜಿ.ಪಲ್ಲವಿ, ರೇಖಾ ರಂಗನಾಥ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.