ಸಾಗರ: ‘ಮಕ್ಕಳ ಮಾನಸಿಕ, ದೈಹಿಕ ಬೆಳವಣಿಗೆಗೆ ಪೂರಕವಾಗಿರುವ ಈಜು ಕಲಿಯಲು ಚಿಕ್ಕ ವಯಸ್ಸಿನಲ್ಲೇ ಮಕ್ಕಳಿಗೆ ಪೋಷಕರು ಪ್ರೋತ್ಸಾಹಿಸಬೇಕು’ ಎಂದು ನಗರಸಭೆ ಅಧ್ಯಕ್ಷೆ ಮೈತ್ರಿ ಪಾಟೀಲ್ ಹೇಳಿದರು.
ಇಲ್ಲಿನ ವಿಜಯನಗರ ಬಡಾವಣೆಯಲ್ಲಿರುವ ನಗರಸಭೆಯ ಈಜುಕೊಳದಲ್ಲಿ ಭಾನುವಾರ ನಡೆದ ಸಾಗರ- ಸಿದ್ದಾಪುರ ತಾಲ್ಲೂಕು ಮಟ್ಟದ ಈಜು ಸ್ಪರ್ಧೆಯನ್ನು ಉದ್ಘಾಟಿಸಿ ಮಾತನಾಡಿದ ಅವರು, ‘ಚಿಕ್ಕ ವಯಸ್ಸಿನಲ್ಲೇ ಮಕ್ಕಳು ಈಜು ಕಲಿಯಲು ಮುಂದಾದರೆ ಶೀಘ್ರವಾಗಿ ಅದರಲ್ಲಿ ಪರಿಣತಿ ಸಾಧಿಸುತ್ತಾರೆ’ ಎಂದರು.
‘ತಾಲ್ಲೂಕು ಕೇಂದ್ರದಲ್ಲಿ ನಗರಸಭೆ ವತಿಯಿಂದ ನಡೆಸುವ ಸುಸಜ್ಜಿತ ಈಜುಕೊಳ ಇರುವುದು ಈಜು ಪ್ರಿಯರಿಗೆ ವರದಾನವಾಗಿರುವ ಸಂಗತಿಯಾಗಿದೆ. ಆದಾಗ್ಯೂ ನಿರೀಕ್ಷಿತ ಸಂಖ್ಯೆಯಲ್ಲಿ ಈಜು ಕಲಿಯಲು ಮಕ್ಕಳು ಬರುತ್ತಿಲ್ಲ. ಈಜುಕೊಳದ ಸದುಪಯೋಗ ಪಡೆಯಲು ನಾಗರಿಕರು ಮುಂದಾಗಬೇಕು’ ಎಂದು ನಗರಸಭೆ ಉಪಾಧ್ಯಕ್ಷೆ ಸವಿತಾ ವಾಸು ಹೇಳಿದರು.
‘ದೇಹದ ಎಲ್ಲಾ ಅಂಗಗಳಿಗೆ ಏಕಕಾಲದಲ್ಲಿ ವ್ಯಾಯಾಮ ಕೊಡುವ ಕ್ರೀಡೆಯೆಂದರೆ ಅದು ಈಜು ಆಗಿದೆ. ಮತ್ತೊಬ್ಬರ ಪ್ರಾಣವನ್ನು ಉಳಿಸುವ ಶಕ್ತಿ ಸಾಮರ್ಥ್ಯವನ್ನು ಈಜು ನೀಡುತ್ತದೆ ಎಂಬುದನ್ನು ನಾವು ಮರೆಯಬಾರದು’ ಎಂದು ನಗರಸಭೆ ಸದಸ್ಯ ರವಿ ವಿಜಯನಗರ ಹೇಳಿದರು.
ಇದೇ ಸಂದರ್ಭದಲ್ಲಿ ಅಂತರರಾಷ್ಟ್ರೀಯ ಈಜುಪಟು ಶ್ಯಾಮ್ ಸುಂದರ್, ಈಜು ತರಬೇತುದಾರ ಹರೀಶ್ ನವಾತೆ ಅವರನ್ನು ಸನ್ಮಾನಿಸಲಾಯಿತು.
ನಗರಸಭೆ ಸದಸ್ಯ ಅರವಿಂದ ರಾಯ್ಕರ್, ಈಜು ತರಬೇತುದಾರ ಸಿದ್ದರಾಜು, ಐ.ಎನ್.ಸುರೇಶ್ ಬಾಬು, ಹರೀಶ್, ಡಿ.ದಿನೇಶ್, ಬಿ.ಗಿರಿಧರರಾವ್ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.