ADVERTISEMENT

ಕೊಡಚಾದ್ರಿ ಪ್ರವಾಸಕ್ಕೆ ದುಬಾರಿ ಶುಲ್ಕ- ಶುಲ್ಕ ಹೆಚ್ಚಳಕ್ಕೆ ಪ್ರವಾಸಿಗರ ಅಸಮಾಧಾನ

ರವಿ ನಾಗರಕೊಡಿಗೆ
Published 11 ಜುಲೈ 2021, 6:04 IST
Last Updated 11 ಜುಲೈ 2021, 6:04 IST
ಕೊಡಚಾದ್ರಿ ಗಿರಿಯ ಮನಮೋಹಕ ದೃಶ್ಯ
ಕೊಡಚಾದ್ರಿ ಗಿರಿಯ ಮನಮೋಹಕ ದೃಶ್ಯ   

ಹೊಸನಗರ: ಹಣ ಇದ್ದರೆ ಮಾತ್ರ ಕೊಡಚಾದ್ರಿಗಿರಿ ಪ್ರವಾಸ ಕೈಗೂಡುತ್ತದೆ. ಇಲ್ಲದಿದ್ದರೆ ದೂರದಿಂದಲೇ ನೋಡಬೇಕಾದ ಪರಿಸ್ಥಿತಿ ಇದೆ. ಪ್ರವಾಸಿ ತಾಣದ ಶು‌ಲ್ಕ ಹೆಚ್ಚಿಸಿದ್ದು, ದುಬಾರಿ ಶುಲ್ಕ ಭರಿಸಿದರಷ್ಟೇ ಪಾಸು. ಬರಿಗೈಲಿ ಹೋದರೆ ವಾಪಸ್‌ ಬರುವಂತಾಗಿದೆ.

ಪ್ರವಾಸಿಗರ ‘ಭೂ ಸ್ವರ್ಗ’ ಎಂದೇ ಕರೆಸಿಕೊಳ್ಳುತ್ತಿರುವ ಭುವನಗಿರಿ ಕೊಡಚಾದ್ರಿ ಗಿರಿ ಪ್ರವಾಸಕ್ಕೆ ದುಬಾರಿ ಶುಲ್ಕದ ಹೊರೆ ಬಿದ್ದಿದೆ. ಬೆಟ್ಟದ ಚಾರಣ ಮಾಡುವವರಿಗೆ ಮಾತ್ರವಲ್ಲದೆ ಕೈಯಲ್ಲಿದ್ದ ಕ್ಯಾಮೆರಾಗೂ ಶುಲ್ಕ ಭರಿಸಬೇಕಾಗಿದೆ. ಅಲ್ಲದೇ ಗಿರಿಯಲ್ಲಿ ಸಮಯದ ಮಿತಿಯನ್ನೂ ಹೇರಲಾಗಿದೆ.

ಮೂಕಾಂಬಿಕಾ ವನ್ಯಜೀವಿ ಅಭಯಾರಣ್ಯ ಇಲಾಖೆಗೆ ಸೇರುವ ಕೊಡಚಾದ್ರಿ ಗಿರಿಗೆ ಇಲಾಖೆಸಾವಿರಾರು ರೂಪಾಯಿ ಶುಲ್ಕ ನಿಗದಿ ಮಾಡಿದೆ.

ADVERTISEMENT

ಕೊಡಚಾದ್ರಿ ಬೆಟ್ಟದ ಪ್ರವಾಸ ಅಷ್ಟು ಸುಲಭವಲ್ಲ. ಭೇಟಿ ನೀಡುವ ಪ್ರತಿ ಪ್ರವಾಸಿಗರು ದುಬಾರಿ ಶುಲ್ಕವನ್ನು ಭರಿಸಲೇಬೇಕಾಗಿದೆ. ಇದರಿಂದ ಸುಲಭದಲ್ಲಿ ಗಿರಿಯ ಸೌಂದರ್ಯವನ್ನು ಆಸ್ವಾದಿಸಿ ಸಾಗುತ್ತಿದ್ದ ಪ್ರವಾಸಿಗರ ಜೇಬಿಗೆ ಕತ್ತರಿ ಬೀಳಲಿದೆ. ವಾಹನ ಪಾರ್ಕಿಂಗ್ ಸೇರಿ ವಿವಿಧ ಶುಲ್ಕಗಳನ್ನು ದಿಢೀರ್ ಏರಿಸಲಾಗಿದೆ. ಕ್ಯಾಮೆರಾಗೂ ಶುಲ್ಕ ನಿಗದಿ ಪಡಿಸಿದ್ದು ಪರಿಸರ ಪ್ರೇಮಿಗಳ ಅಸಮಾಧಾನಕ್ಕೆ ಕಾರಣವಾಗಿದೆ.

ರಮಣೀಯ ಸ್ಥಳ:ಕರ್ನಾಟಕ ಅರಣ್ಯ ಇಲಾಖೆಯ ಮೂಕಾಂಬಿಕಾ ವನ್ಯಜೀವಿ ಅಭಯಾರಣ್ಯ ವ್ಯಾಪ್ತಿಗೆ ಒಳಪಡುವ ಕೊಡಚಾದ್ರಿ ನೋಡುಗರ ಪಾಲಿಗೆ ನಿಸರ್ಗದ ಅರಮನೆಯೇ ಸರಿ. ಇಲ್ಲಿನ ಪ್ರಾಕೃತಿಕ ಸೌಂದರ್ಯಕ್ಕೆ ಮನಸೋಲದವರೇ ಇಲ್ಲ. ಕೊಡಚಾದ್ರಿ ಗಿರಿ ಸುಮಾರು 370.37 ಚದರ ಕಿ.ಮೀ.ವರೆಗೆ ವ್ಯಾಪಿಸಿದೆ. ಪಶ್ಚಿಮ ಘಟ್ಟದ ನಿತ್ಯಹರಿದ್ವರ್ಣ, ಅರೆ ನಿತ್ಯಹರಿದ್ವರ್ಣ ಮತ್ತು ತೇವಾಂಶವುಳ್ಳ ಕಾಡುಗಳನ್ನು ಒಳಗೊಂಡಿರುವ ಪರ್ವತ ಶ್ರೇಣಿ ಇದಾಗಿದೆ. ಪ್ರತಿವರ್ಷ ಸಾವಿರಾರು ಪ್ರವಾಸಿಗರು ಕೊಡಚಾದ್ರಿ ಚಾರಣಕ್ಕಾಗಿಯೇ ಬರುತ್ತಾರೆ. ಮೂಕಂಬಿಕಾ ವನ್ಯಜೀವಿ ಅಭಯಾರಣ್ಯ ಇಲಾಖೆಯು ಏಪ್ರಿಲ್‌ನಿಂದಲೇ ಜಾರಿಗೆ ಬರುವಂತೆ ಶುಲ್ಕಗಳನ್ನು ಏರಿಸಿ ಆದೇಶ ಹೊರಡಿಸಿದೆ. ಈ ಕುರಿತು ಅಲ್ಲಲ್ಲಿ ಮಾಹಿತಿ ಫಲಕ ಅಳವಡಿಸಲಾಗಿದೆ.

ಯಾವುದಕ್ಕೆ ಎಷ್ಟು: ವಾಹನಗಳ ಮೂಲಕ ಕೊಡಚಾದ್ರಿಗೆ ಕಟ್ಟಿನಹೊಳೆ ಮೂಲಕ ಬರುವ ಭಾರತೀಯರು ₹ 50, ಮಕ್ಕಳಿಗೆ ₹ 25 ದರ ಹಾಗೂ ವಿದೇಶಿಗರು ₹ 400 ನಿಗದಿಪಡಿಸಲಾಗಿದೆ.

ವಳೂರು, ಹಿಂಡ್ಲುಮಿನೆ ಫಾಲ್ಸ್ ಮೂಲಕ ಕೊಡಚಾದ್ರಿಗೆ ಬರಲು ಭಾರತೀಯರು ₹ 100, ಮಕ್ಕಳಿಗೆ ₹ 50 ಹಾಗೂ ವಿದೇಶಿಗರು ₹ 400 ಶುಲ್ಕ ಪಾವತಿಸಬೇಕಾಗಿದೆ.

ಚಾರಣಕ್ಕೆ ಪ್ರತಿ ವ್ಯಕ್ತಿಗೆ ₹ 300, ಗೈಡ್ ಶುಲ್ಕ ₹ 1000, ವಾಹನ ಪ್ರವೇಶಕ್ಕೆ ಪ್ರತಿ ಟ್ರಿಪ್‌ಗೆ ₹ 100, ಪಾರ್ಕಿಂಗ್ ಜೀಪ್‌ಗೆ ಪ್ರತಿದಿನಕ್ಕೆ ₹ 30. ಅಲ್ಲದೇ ಕ್ಯಾಮೆರಾ ಲೆನ್ಸ್ 70 ಎಂ.ಎಂವರೆಗೆ ₹ 300 ಪ್ರತಿ ಟ್ರಿಪ್‌ಗೆ. 70-200 ಎಂ.ಎಂ ಪ್ರತಿ ಟ್ರಿಪ್‌ಗೆ ₹ 500. ಕ್ಯಾಮೆರಾ ಲೆನ್ಸ್ 200 ಎಂ.ಎಂಗಿಂತ ಹೆಚ್ಚಿದ್ದರೆ ಪ್ರತಿ ಟ್ರಿಪ್‌ಗೆ ₹ 1000 ದರ ನಿಗದಿ ಮಾಡಲಾಗಿದೆ.

ಗೇಟ್ ನಿರ್ಮಾಣ:ಈ ಮೊದಲು ಇಲ್ಲಿ ಇದ್ದ ಉಚಿತ ಪ್ರವೇಶ ನಿಷೇಧಿಸಿ ಅರಣ್ಯ ಇಲಾಖೆ ಗೇಟ್ ನಿರ್ಮಾಣ ಮಾಡಿತ್ತು. ಹಿಂದಿನಿಂದಲೂ ಪ್ರವಾಸಿಗರಿಗೆ ಮುಕ್ತವಾಗಿದ್ದ ಕೊಡಚಾದ್ರಿ ಚಾರಣ ಹಣ ಕೊಟ್ಟರಷ್ಟೇ ಚಾರಣ ಎಂಬಂತಾಗಿ ಹಲವರ ಅಸಮಾಧಾನಕ್ಕೆ ಗುರಿಯಾಯಿತು. ಇದೀಗ ದುಬಾರಿ ಶುಲ್ಕ ವಿಧಿಸಿದ್ದು, ಪ್ರವಾಸಿಗರ ಅಸಮಾಧಾನಕ್ಕೆ ಕಾರಣವಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.