ಶಿವಮೊಗ್ಗ: ವರಾಹಿ ಮುಳುಗಡೆಯ ಪರಿಹಾರದ ಹಣ ಬಂದಾಗ ಅಪ್ಪ ಖರೀದಿಸಿ ಕೊಟ್ಟಿದ್ದ ಜಮೀನಿನಲ್ಲಿ ಮೂರು ದಶಕಗಳು ನಡೆಸಿದ ನಿರಂತರ ಕೃಷಿ ಪ್ರಯೋಗದಿಂದ ಯಶಸ್ಸು ಕಂಡವರು ಶಿವಮೊಗ್ಗ ತಾಲ್ಲೂಕು ಹೊಸಳ್ಳಿ ಖಾನೆಹಳ್ಳದ ವೈ.ಕೆ. ಮಹೇಶ್.
ವರಾಹಿ ನದಿಗೆ ಕಟ್ಟಿದ ಮಾಣಿ ಅಣೆಕಟ್ಟೆ ಪರಿಣಾಮ ಹೊಸನಗರ ತಾಲ್ಲೂಕು ಯಡೂರಿನ ವೈ.ಡಿ. ಕೃಷ್ಣಪ್ಪ ಹೆಗ್ಡೆ–ಜಯಮ್ಮ ಕೆ. ಹೆಗ್ಡೆ ದಂಪತಿಯ ಅರ್ಧದಷ್ಟು ಜಮೀನು ಮುಳುಗಡೆಯಾಗುತ್ತದೆ. ಮೂವರು ಪುತ್ರರಲ್ಲಿ ಇಬ್ಬರಿಗೆ ಸರ್ಕಾರಿ ನೌಕರಿ ದೊರೆತಿದ್ದ ಕಾರಣ ಪರಿಹಾರದ ಹಣದಲ್ಲಿ ಪುತ್ರ ಮಹೇಶ್ ಅವರಿಗೆ ಹೊಸಳ್ಳಿಯ ತುಂಗಾ ನದಿ ತೀರದಲ್ಲಿ 13 ಎಕರೆ ಜಮೀನು ಕೊಡಿಸುತ್ತಾರೆ. ಆ ಜಮೀನಿನಲ್ಲಿ ಇದ್ದ ಅರ್ಧದಷ್ಟು ಭತ್ತ, ಉಳಿದರ್ಧ ಕಬ್ಬು ಬೆಳೆಯನ್ನೇ ಮುಂದುವರಿಸಿದ ಅವರು ನಿಧಾನಕ್ಕೆ ಕಸುವು ಕಳೆದುಕೊಂಡ ಭೂಮಿಗೆ ಪುನಶ್ಚೇತನ ನೀಡಲು ತೊಡಗುತ್ತಾರೆ.
ಭತ್ತ, ಕಬ್ಬಿನ ಜಾಗದಲ್ಲಿ ಅಡಿಕೆ, ತೆಂಗು, ಬಾಳೆ, ಕಾಳು ಮೆಣಸು, ಕೊಕೊ, ಪುನರ್ಪುಳಿ, ಏಲಕ್ಕಿ, ಲವಂಗ, ಜಾಯಿಕಾಯಿ, ಕಾಫಿ, ಲಿಂಬು, ಅಮಟೆ, ಸಪೋಟ, ನೇರಳೆ, ಹಲಸು, ಮಾವು, ಹುಣಸೆ, ಅಂಜೂರ, ಬಟರ್ ಫ್ರೂಟ್, ನೀರು ಸೇಬು ಸೇರಿ ಹತ್ತುಹಲವು ವೈವಿಧ್ಯಮಯ ಮರ, ಗಿಡಗಳನ್ನು ಬೆಳೆಸಿದ್ದಾರೆ. ತೋಟದ ಒಳಗೆ ಹೋದರೆ ದಟ್ಟ ಕಾಡಿನ ಮಧ್ಯೆ ಸಾಗಿದಂತೆ ಭಾಸವಾಗುತ್ತದೆ.
ಭತ್ತಕ್ಕೆ ಬಳಸಿದ ಕ್ರಿಮಿನಾಶಕ, ಕಳೆನಾಶಕಗಳು, ಕಬ್ಬಿನ ಗದ್ದೆಗೆ ಹಚ್ಚಿದ ಬೆಂಕಿ ಪರಿಣಾಮ ಭೂಮಿ ಸಾಕಷ್ಟು ಫಲವತ್ತತೆ ಕಳೆದುಕೊಂಡಿತ್ತು. ಫಲವತ್ತತೆ ಮರಳಿ ತರಲು ದಶಕಗಳೇ ಬೇಕಾದವು. ನಿಯಮಿತವಾಗಿ ಮಣ್ಣು, ದನದ ಗೊಬ್ಬರ, ಕುರಿಗೊಬ್ಬರ, ಜೀವಾಮೃತ ನೀಡುತ್ತಾ ಬಂದ ಕಾರಣ ನೆಲ ಮತ್ತೆ ನೈಸರ್ಗಿಕ ಸ್ಥಿತಿಗೆ ಬಂದಿದೆ.
‘ಸ್ನಾತಕೋತ್ತರ ಪದವಿ ಪಡೆದರೂ ಇತರೆ ಕ್ಷೇತ್ರಗಳಲ್ಲಿ ಆಸಕ್ತಿ ಇರಲಿಲ್ಲ. ಹಾಗಾಗಿ, ತಂದೆಯ ಕೃಷಿ ಕಾಯಕ ಮುಂದುವರಿಸಲು ನಿರ್ಧರಿಸಿದ್ದೆ. ಅವರೇ ನನಗೆ ದಾರಿದೀಪ. ಕೃಷಿ ಬಿಟ್ಟು ಇದುವರೆಗೂ ಬೇರೆ ಯಾವ ವ್ಯವಹಾರವನ್ನೂ ಮಾಡಿಲ್ಲ. ಜಮೀನಿನಲ್ಲೇ ದುಡಿದು, ಜೀವನಕ್ಕೆ ಬೇಕಾದಷ್ಟು ಇಟ್ಟುಕೊಂಡು ಉಳಿಕೆ ಹಣ ಅದಕ್ಕೇ ಖರ್ಚು ಮಾಡುತ್ತಾ ಬಂದಿರುವೆ. ಇಂದು ತೋಟದಲ್ಲಿ ಸಮೃದ್ಧತೆ ಕಾಣುತ್ತಿರುವೆ. ಕೃಷಿ ಕೆಲಸದಲ್ಲಿ ಸಂತೃಪ್ತಿ ಇದೆ‘ ಎಂದು ಕೃಷಿ ಬಗೆಗಿನ ಅನನ್ಯ ಪ್ರೀತಿ ತೆರೆದಿಡುತ್ತಾರೆ ಮಹೇಶ್.
ಹೊಸ ಪ್ರಯೋಗಕ್ಕೆ ನಿರಂತರ ಹುಡುಕಾಟ:
ವೈವಿಧ್ಯಮಯ ಸಸಿಗಳನ್ನು ತಂದು ಬೆಳೆಸಲು ಸದಾ ತವಕಿಸುವ ಅವರು ವಿಭಿನ್ನ ಸಸಿಗಳಿಗಾಗಿ ರಾಜ್ಯದ ಮೂಲೆಮೂಲೆಗಳನ್ನೂ ಹುಡುಕಿದ್ದಾರೆ. ಬೇರೆ ಬೇರೆ ನರ್ಸರಿಗಳಿಂದ ತಂದು ಬೆಳೆಸಿದ್ದಾರೆ. ಆನ್‌ಲೈನ್‌ನಲ್ಲೂ ಖರೀದಿಸಿದ್ದಾರೆ. ಒಂದೆರಡು ಬಾರಿ ಮೋಸ ಸಹ ಹೋಗಿದ್ದಾರೆ.
ಮಹೇಶ್ ತೋಟಗಾರಿಕಾ ಬೆಳೆಗಳತ್ತ ಗಮನ ಹರಿಸಿದರೆ ಪತ್ನಿ ರೇಣುಕಾ ಮಹೇಶ್, ಖಾಸಗಿ ಕಂಪನಿಯಲ್ಲಿ ತೆರಿಗೆ ವಿಶ್ಲೇಷಕಿಯಾಗಿರುವ ಪುತ್ರಿ ರಿಯಾ ಹೆಗ್ಡೆ ಅವರು ಹೂವಿನ ಸಸ್ಯ ಸಂಕುಲ ಬೆಳೆಸಲು ಸಾಕಷ್ಟು ಶ್ರಮಿಸಿದ್ದಾರೆ.
ಜೇನು ಕೃಷಿಯಲ್ಲೂ ಯಶಸ್ಸು
ತೋಟದ ಒಂದು ಬದಿಯಲ್ಲಿ ಜೇನು ಕೃಷಿಗೂ ಆದ್ಯತೆ ನೀಡಲಾಗಿದೆ. ನದಿ ತೀರ, ಹೂವಿನ ಗಿಡಗಳು ಹೆಚ್ಚಾಗಿರುವ ಕಾರಣ ಪೆಟ್ಟಿಗೆಗಳಲ್ಲಿ ಸಮೃದ್ಧ ಜೇನು ಸಂಗ್ರಹವಾಗುತ್ತಿದೆ. ಹೊರಗಿನವರಿಗೂ ಜೇನು ಪೆಟ್ಟಿಗೆ ಇಟ್ಟುಕೊಳ್ಳಲು ಅವಕಾಶ ಮಾಡಿಕೊಟ್ಟಿದ್ದಾರೆ.
ಗಮನ ಸೆಳೆವ ಬಿದಿರು
ತೋಟದ ಸುತ್ತಲೂ ಹಳ್ಳ, ನದಿ ತೀರದಲ್ಲಿ ಬಿದಿರು ಬೆಳೆಯಲಾಗಿದೆ. ಬಿದಿರಿನಲ್ಲೂ ಬರ್ಮಾ ಬಿದಿರು, ಬಣ್ಣದ ಬಿದಿರು, ದೋಟಿ ಬಿದಿರು ಗಮನ ಸೆಳೆಯುತ್ತವೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.