
ಶಿವಮೊಗ್ಗ: ಆಹಾರ ಭದ್ರತಾ ಕಾಯ್ದೆಯ ಪರಿಣಾಮಕಾರಿ ಅನುಷ್ಠಾನದ ಬಗ್ಗೆ ಮಾಹಿತಿ ಪಡೆಯಲು ರಾಜ್ಯ ಆಹಾರ ಆಯೋಗ ಜಿಲ್ಲೆಯಲ್ಲಿ ನಾಲ್ಕು ದಿನಗಳ ಪ್ರವಾಸದಲ್ಲಿದೆ. ಅನುಮಾನಾಸ್ಪದ ವಹಿವಾಟು ಕಂಡುಬಂದ ಕಾರಣ ಮೊದಲ ದಿನ ಶಿವಮೊಗ್ಗದ ಮೂರು ನ್ಯಾಯಬೆಲೆ ಅಂಗಡಿಗಳ ಲೈಸೆನ್ಸ್ ರದ್ದುಪಡಿಸಲಾಗಿದೆ ಎಂದು ಆಯೋಗದ ಅಧ್ಯಕ್ಷ ಡಾ.ಎಚ್.ಕೃಷ್ಣ ತಿಳಿಸಿದರು.
ನಗರದಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಜಿಲ್ಲೆಯಲ್ಲಿ ನ್ಯಾಯಬೆಲೆ ಅಂಗಡಿಗಳ ಕಾರ್ಯವೈಖರಿಯ ಬಗ್ಗೆ ಹೆಚ್ಚಿನ ದೂರುಗಳು ಇವೆ. ಅವುಗಳನ್ನು ಪತ್ತೆ ಮಾಡಲು ಬೆಂಗಳೂರಿನಿಂದ ಆಯೋಗ ಬರಬೇಕಾಯಿತು. ಇಲ್ಲಿನ ಅಧಿಕಾರಿಗಳು ಏನು ಮಾಡುತ್ತಿದ್ದಾರೆ ಎಂದು ಪ್ರಶ್ನಿಸಿದರು.
ಪಿಎಂ ಪೋಷಣ್ ಅಭಿಯಾನ, ಬಿಸಿಯೂಟ ಯೋಜನೆ, ವಸತಿ ನಿಲಯಗಳಲ್ಲಿ ಆಹಾರ, ಅಂಗನವಾಡಿಗಳಲ್ಲಿ ಗರ್ಭಿಣಿ, ಬಾಣಂತಿಯರಿಗೆ ನೀಡುವ ಪೌಷ್ಟಿಕಾಂಶ ಆಹಾರ, ಮಕ್ಕಳಿಗೆ ನೀಡುವ ಪೌಷ್ಟಿಕ ಆಹಾರ ಸೇರಿದಂತೆ ಸರ್ಕಾರ ನೀಡುವ ಎಲ್ಲ ಆಹಾರ ಯೋಜನೆಗಳು ಸಮರ್ಪಕವಾಗಿ ಮತ್ತು ಗುಣಮಟ್ಟದೊಂದಿಗೆ ಫಲಾನುಭವಿಗಳಿಗೆ ತಲುಪಬೇಕು. ಅದನ್ನು ಖಚಿತಪಡಿಸಿಕೊಳ್ಳಲು ಆಯೋಗ ಪರಿಶೀಲನೆ ನಡೆಸುತ್ತಿದೆ ಎಂದರು.
ಶಿವಮೊಗ್ಗದ ಎಫ್‌ಸಿಐ ಗ್ರಾಮಾಂತರ ಮತ್ತು ನಗರ ಗೋದಾಮಿಗೆ ಭೇಟಿ ನೀಡಿದ್ದು, ಅಲ್ಲಿ 32 ಕ್ವಿಂಟಲ್ ಅಕ್ಕಿ ಹೆಚ್ಚುವರಿ ದಾಸ್ತಾನು ಇರುವುದು ಕಂಡು ಬಂದಿದೆ. ಇಲ್ಲಿನ ಪಡಿತರ ವ್ಯವಸ್ಥೆಯ ಅವ್ಯವಸ್ಥೆಯ ಬಗ್ಗೆ ಸರ್ಕಾರಕ್ಕೆ ವರದಿ ಸಲ್ಲಿಸಲಾಗುವುದು ಎಂದರು.
ನ್ಯಾಯಬೆಲೆ ಅಂಗಡಿಗೆ ನಿಗದಿತ ವೇಳೆಯೊಳಗೆ ಪಡಿತರ ತಂದು ವಿತರಿಸದೇ ಇದ್ದ ಹಾಗೂ ಇತರೆ ಲೋಪದೋಷ ಕಂಡು ಬಂದ ಅಶೋಕ ನಗರ, ಶೇಷಾದ್ರಿಪುರಂ ಹಾಗೂ ಅಣ್ಣಾನಗರದಲ್ಲಿರುವ ನ್ಯಾಯಬೆಲೆ ಅಂಗಡಿಗಳ ಲೈಸೆನ್ಸ್ ರದ್ದುಪಡಿಸಲಾಗಿದೆ. ಗುತ್ಯಪ್ಪ ಕಾಲೋನಿ ಸೇರಿದಂತೆ ಎರಡು ನ್ಯಾಯಬೆಲೆ ಅಂಗಡಿಗಳಲ್ಲಿ ಲೋಪದೋಷ ಸರಿಪಡಿಸಿಕೊಳ್ಳುವಂತೆ ಎಚ್ಚರಿಕೆ ನೀಡಲಾಗಿದೆ ಎಂದ ಹೇಳಿದರು.
ಆಯೋಗದ ಸದಸ್ಯರಾದ ಲಿಂಗರಾಜ ಕೋಟೆ, ಮಾರುತಿ ಎಂ.ದೊಡ್ಡಲಿಂಗಣ್ಣವರ, ಸುಮಂತ ರಾವ್, ಕೆ.ಎಸ್.ವಿಜಯಲಕ್ಷ್ಮಿ ಹಾಜರಿದ್ದರು.
ಆಯೋಗದ ಅಧ್ಯಕ್ಷರು ಹೇಳಿದ್ದು: ಆಹಾರ ಆಯೋಗ ಜಿಲ್ಲೆಯಲ್ಲಿ ಇನ್ನೂ ಎರಡು ದಿನ ಇರಲಿದೆ. ಉಳಿದ ಕಡೆ ಪಡಿತರ ವಿತರಣೆಯಲ್ಲಿ ಏನೇ ಸಮಸ್ಯೆ ಇದ್ದರೂ ಸಾರ್ವಜನಿಕರು ನೇರವಾಗಿ (ಮೊಬೈಲ್ ಸಂಖ್ಯೆ: 94484–66099) ಸಂಪರ್ಕಿಸಬಹುದು. ನಾಲ್ಕು ಮಂಗಳವಾರ ಹೊರತಾಗಿ ತಿಂಗಳಲ್ಲಿ 26 ದಿನಗಳ ಕಾಲವೂ ನ್ಯಾಯಬೆಲೆ ಅಂಗಡಿಯವರು ದಾಸ್ತಾನು ಖಾಲಿಯಾಗುವವರೆಗೂ ಪಡಿತರ ವಿತರಣೆ ಮಾಡಬೇಕು. 3 ತಿಂಗಳಿಂದ ಜಿಲ್ಲೆಯಲ್ಲಿ ಅನ್ನಸುವಿಧಾ ಯೋಜನೆ ಜಾರಿಯಲ್ಲಿದೆ. 75 ವರ್ಷ ತುಂಬಿದ ವೃದ್ಧರಿಗೆ ಮನೆಗೆ ಹೋಗಿ ಪಡಿತರ ಕೊಟ್ಟು ಬರಬೇಕು. ಅದು ಕಡ್ಡಾಯ. ಬಯೊಮೆಟ್ರಿಕ್ ಸಮಸ್ಯೆ ಹೇಳಿ ಪಡಿತರದಾರರನ್ನು ವಾಪಸ್ ಕಳಿಸುವಂತಿಲ್ಲ. ಕೈಯಲ್ಲಿ ಬರೆದುಕೊಂಡು ಪಡಿತರ ನೀಡಬೇಕು. ಜಿಲ್ಲೆಯ ಎಲ್ಲ ನ್ಯಾಯಬೆಲೆ ಅಂಗಡಿಗಳ ಮುಂದೆ ಆಹಾರ ಆಯೋಗದ ಸದಸ್ಯರ ಸಂಪರ್ಕ ಸಂಖ್ಯೆ ಒಳಗೊಂಡ ಫಲಕ ಹಾಕುವಂತೆ ಅಧಿಕಾರಿಗಳಿಗೆ ಸೂಚನೆ.
ಸಂತೆಯೊಳಗೊಂದು ಹಾಸ್ಟೆಲ್; ಮೂರು ಕೊಠಡಿ 125 ಮಕ್ಕಳು! ಅದೊಂದು ಖಾಸಗಿ ಕಟ್ಟಡ. ಜನನಿಬಿಡಿ ಮಾರುಕಟ್ಟೆ ಪ್ರದೇಶದಲ್ಲಿ ಮೊದಲ ಅಂತಸ್ತಿನಲ್ಲಿ ಇರುವ ಕಟ್ಟಡದ ಮೂರು ಕೊಠಡಿಯಲ್ಲಿ 125 ಹೆಣ್ಣುಮಕ್ಕಳ ವಾಸ. ರಾತ್ರಿ ಎಲ್ಲರೂ ಹಾಲ್‌ನ ಕೊಠಡಿಯ ಇಕ್ಕಟ್ಟಿನಲ್ಲಿ ಮಲಗಬೇಕಾದ ದುಃಸ್ಥಿತಿ.. ಇದು ಸೋಮವಾರ ಭದ್ರಾವತಿಯ ರಂಗಪ್ಪ ಸರ್ಕಲ್‌ನ ಹಿಂದುಳಿದ ವರ್ಗಗಳ ಇಲಾಖೆಯ ಡಿ.ದೇವರಾಜ ಅರಸು ಹಿಂದುಳಿದ ವರ್ಗಗಳ ಮೆಟ್ರಿಕ್ ನಂತರದ ವಿದ್ಯಾರ್ಥಿನಿಯರ ಹಾಸ್ಟೆಲ್‌ಗೆ ರಾಜ್ಯ ಆಹಾರ ಆಯೋಗದ ಸದಸ್ಯರಾದ ಲಿಂಗರಾಜ ಕೋಟೆ ಹಾಗೂ ಕೆ.ಎಸ್.ವಿಜಯಲಕ್ಷ್ಮಿ ನೇತೃತ್ವದ ತಂಡ ಭೇಟಿ ಕೊಟ್ಟಾಗ ಕಂಡು ಬಂದ ಚಿತ್ರಣ. ಈ ಕಟ್ಟಡಕ್ಕೆ ಹಿಂದುಳಿದ ವರ್ಗಗಳ ಇಲಾಖೆ ಬಾಡಿಗೆ ರೂಪದಲ್ಲಿ ತಿಂಗಳಿಗೆ ₹1.51 ಲಕ್ಷ ಪಾವತಿಸುತ್ತದೆ ಎಂಬ ವಿಷಯ ತಿಳಿದು ಅಚ್ಚರಿ ವ್ಯಕ್ತಪಡಿಸಿದ ಲಿಂಗರಾಜ ಕೋಟೆ ವಾರ್ಡನ್ ಹಾಗೂ ಹಿಂದುಳಿದ ವರ್ಗಗಳ ಇಲಾಖೆ ತಾಲ್ಲೂಕು ಅಧಿಕಾರಿಯನ್ನು ತರಾಟೆಗೆ ತೆಗೆದುಕೊಂಡರು. ಹಾಸ್ಟೆಲ್‌ನಲ್ಲಿ ಬಿಎಸ್ಸಿ ನರ್ಸಿಂಗ್ ಎಂಎಸ್ಸಿ ಪಿಯುಸಿ ಓದುವ ಹೆಣ್ಣುಮಕ್ಕಳು ಇದ್ದಾರೆ. ಹಾಸ್ಟೆಲ್‌ನಲ್ಲಿ ಬಿಸಿನೀರಿನ ವ್ಯವಸ್ಥೆ ಇರದ ಕಾರಣ ಚಳಿಗಾಲದಲ್ಲೂ ತಣ್ಣೀರಿನ ಸ್ನಾನದ ಸಂಕಷ್ಟ ಹಾಗೂ ಕಳಪೆ ಊಟದ ಬಗ್ಗೆ ವಿದ್ಯಾರ್ಥಿನಿಯರು ಆಯೋಗದ ಸದಸ್ಯರ ಎದುರು ದೂರಿದರು. ಹಾಸ್ಟೆಲ್ ಅಂದರೆ ಅದಕ್ಕೊಂದು ವಾತಾವರಣ ಇರಲಿದೆ. ಕೆಳಗೆ ಬ್ಯಾಂಕ್ ಅಕ್ಕಪಕ್ಕ ಮಾರುಕಟ್ಟೆಯ ಗದ್ದಲ. ಅಲ್ಲಿ ಮಕ್ಕಳು ಹೇಗೆ ಓದಬೇಕು. ಬದುಕಬೇಕು? ಎಂದು ಆಕ್ರೋಶ ವ್ಯಕ್ತಪಡಿಸಿದ ಆಯೋಗದ ಸದಸ್ಯರು ತಕ್ಷಣ ಮಕ್ಕಳನ್ನು ಅಲ್ಲಿಂದ ಸ್ಥಳಾಂತರಿಸುವಂತೆ ಸೂಚನೆ ನೀಡಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.