ADVERTISEMENT

ಶಿರಾಳಕೊಪ್ಪ: ಮುಸ್ಲಿಮರ ವಿರುದ್ಧ ಸುಳ್ಳು ಆರೋಪ: ಧರಣಿ ಎಚ್ಚರಿಕೆ

6ರಂದು ಪೊಲೀಸ್ ಠಾಣೆ ಮುಂದೆ ಮುಸ್ಲಿಂ ಒಕ್ಕೂಟದ ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 4 ಫೆಬ್ರುವರಿ 2023, 6:27 IST
Last Updated 4 ಫೆಬ್ರುವರಿ 2023, 6:27 IST
ಸೈಯದ್ ಬಿಲಾಲ್
ಸೈಯದ್ ಬಿಲಾಲ್   

ಶಿರಾಳಕೊಪ್ಪ: ‘ಹಿಂದೂ ಜಾಗರಣ ವೇದಿಕೆ ಜ.30ರಂದು ನಡೆಸಿದ ಪ್ರತಿಭಟನೆಯಲ್ಲಿ ಮುಸ್ಲಿಂ ಸಮಾಜದ ವಿರುದ್ಧ ಸುಳ್ಳು ಆರೋಪಗಳನ್ನು ಮಾಡಿದ್ದು, ವೇದಿಕೆ ವಿರುದ್ಧ ಕ್ರಮ ಕೈಗೊಳ್ಳಬೇಕು’ ಎಂದು ಆಗ್ರಹಿಸಿ ಪೊಲೀಸ್ ಠಾಣೆಯ ಎದುರು ಫೆಬ್ರುವರಿ 6ರಂದು ಪ್ರತಿಭಟನೆ ಮಾಡಲಾಗುವುದು’ ಎಂದು ಟೌನ್ ಕಾಂಗ್ರೆಸ್ ಅಧ್ಯಕ್ಷ ಸೈಯದ್ ಬಿಲಾಲ್ ಹೇಳಿದರು.

‘ತಮ್ಮ ವಿರುದ್ಧ ಹಿಂದೂ ಜಾಗರಣ ವೇದಿಕೆ ನಾಯಕರು ಮಾಡಿರುವ ಆರೋಪಕ್ಕೆ ನ್ಯಾಯಾಲಯದಲ್ಲಿ ಖಾಸಗಿ ಪ್ರಕರಣ ದಾಖಲಿಸಿದ್ದೇನೆ. ಅವರಿಗೆ ಪಟ್ಟಣದಲ್ಲಿ 8ರಿಂದ 10 ಜನ ಮುಖಂಡರ ಬೆಂಬಲವಿದೆ. ಹಿಂದೂ ಜಾಗರಣ ವೇದಿಕೆಯ ಆರೋಪಗಳಿಗೆ ಪೊಲೀಸರಿಂದ ಉತ್ತರ ಲಭಿಸದಿದ್ದರೆ, ಅವರನ್ನು ಬೆಂಬಲಿಸುತ್ತಿರುವ ಸ್ಥಳೀಯ ಹಿಂದೂ ಮುಖಂಡರ ಮನೆ ಎದುರು ಉತ್ತರ ನೀಡುವಂತೆ ಒತ್ತಾಯಿಸಿ ಧರಣಿ ಮಾಡುತ್ತೇವೆ’ ಎಂದು ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಅವರು ಎಚ್ಚರಿಸಿದರು.

‘ಹಿಂದೆ ಪಟ್ಟಣದಲ್ಲಿ ರಾಮಮಂದಿರ ಸ್ತಬ್ಧಚಿತ್ರ ಸುಟ್ಟರು, ಟೌನ್ ಬಿಜೆಪಿ ಅಧ್ಯಕ್ಷ ಮಂಚಿ ಶಿವಾನಂದ ಮನೆ ಮೇಲೆ ಬಾಂಬ್ ದಾಳಿ ಮಾಡಿದರು ಎಂದು ಮುಸ್ಲಿಂ ಸಮಾಜದ ಕಡೆಗೆ ಬೊಟ್ಟು ಮಾಡಲಾಗಿತ್ತು. ಈ ಬಗ್ಗೆ ಪೊಲೀಸರು ಇದುವರೆಗೂ ಕ್ರಮ ಕೈಗೊಂಡಿಲ್ಲ. ಈ ರೀತಿ ಸುಳ್ಳು ಆರೋಪ ಮಾಡುತ್ತಿರುವ ಹಿಂದೂ ಪರ ಸಂಘನೆಗಳನ್ನು ಪಿಎಫ್ಐ ಮಾದರಿಯಲ್ಲಿ ಬ್ಯಾನ್ ಮಾಡಬೇಕು’ ಎಂದು ಪುರಸಭೆ ಸದಸ್ಯ ಮುದಾಸೀರ್ ಒತ್ತಾಯಿಸಿದರು.

ADVERTISEMENT

‘ಪಟ್ಟಣದಲ್ಲಿ ಮುಸ್ಲಿಂರ ಜನಸಂಖ್ಯೆ ಶೇ 72ರಷ್ಟಿದೆ. ದಾವೂದ್ ಇಬ್ರಾಹಿಂ, ಜಿನ್ನಾ ರೀತಿಯ ವ್ಯಕ್ತಿಗಳು ಪಟ್ಟಣದಲ್ಲಿದ್ದಾರೆ ಎಂದು ಊರಿನ ಬಗ್ಗೆ ಅಪಪ್ರಚಾರ ಮಾಡುತ್ತಿದ್ದಾರೆ. ಹೊರಗಿನ ವ್ಯಕ್ತಿಗಳು ತಮ್ಮ ಲಾಭಕ್ಕಾಗಿ ಪಟ್ಟಣದ ನಾಗರಿಕರನ್ನು ‘ಗೊಂಬೆ’ಯಂತೆ ಆಟವಾಡಿಸುತ್ತಿದ್ದಾರೆ. ಮುಸ್ಲಿಂ ಸಮಾಜದ ವಿರುದ್ಧ ಅಪಪ್ರಚಾರ ಮಾಡುತ್ತಿರುವ ವ್ಯಕ್ತಿಗಳ ವಿರುದ್ಧ ಕಾನೂನು ಕ್ರಮ ಜರುಗಿಸಬೇಕು’ ಎಂದು ಅಂಜುಮನ್ ಇಸ್ಲಾಮಿಕ್ ಕಮಿಟಿಯ ಸೈಯದ್ ಹಾಷಂ ಆಗ್ರಹಿಸಿದರು.

‘ಹಿಂದೂ, ಮುಸ್ಲಿಮರ ಮಧ್ಯ ಕಂದಕ ಉಂಟಾದರೆ ಸಮಾಜದ ಸ್ವಾಸ್ಥ್ಯ ಹದಗೆಡುತ್ತದೆ’ ಎಂದು ತಾಲ್ಲೂಕು ಯೂತ್ ಕಾಂಗ್ರೆಸ್ ಉಪಾಧ್ಯಕ್ಷ ಹಾರೂನ್ ಹೇಳಿದರು.

ಎಂಜಿನಿಯರ್ ಅತೀಕ್ ಅಹ್ಮದ್, ಟೌನ್ ಕಾಂಗ್ರೆಸ್ ಉಪಾಧ್ಯಕ್ಷ ರಾಜಾಸಾಬ್, ಪುರಸಭೆ ಸದಸ್ಯ ಸಾದಿಕ್, ಮುಖಂಡ ಶಫೀರ್ ಸೇರಿದಂತೆ ಸಮಾಜದ ಪ್ರಮುಖರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.