ಶಿವಮೊಗ್ಗ: ಸಂಯುಕ್ತ ಕಿಸಾನ್ ಮೋರ್ಚಾ ರಾಷ್ಟ್ರೀಯ ನಾಯಕ ರಾಕೇಶ್ ಟಿಕಾಯತ್ ಅವರ ಮೇಲೆ ರಾಜಸ್ತಾನದ ಅಲ್ವಾರ್ ಜಿಲ್ಲೆಯಲ್ಲಿ ನಡೆದ ಗುಂಡಿನ ದಾಳಿಯನ್ನು ಜಿಲ್ಲೆಯ ಸಂಯುಕ್ತ ಕಿಸಾನ್ ಮೋರ್ಚಾ ಹಾಗೂ ಐಕ್ಯ ಹೋರಾಟ ಸಮಿತಿ ಮುಖಂಡರು ಖಂಡಿಸಿದ್ದಾರೆ.
ಇಂತಹ ಕೃತ್ಯಗಳು ಪ್ರಜಾಪ್ರಭುತ್ವದ ಕಗ್ಗೋಲೆ ಮಾಡುತ್ತವೆ. ದೇಶದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದ ನಂತರದಲ್ಲಿ ಪ್ರಜಾಪ್ರಭುತ್ವ ವ್ಯವಸ್ಥೆ ನಾಶವಾಗುತ್ತಿದೆ. ಬಿಜೆಪಿ ಮತ್ತು ಅದರ ಪರಿವಾರದ ಸಂಘಟನೆಗಳು ಜನಪರ ಚಳವಳಿಗಳ ನಾಯಕರುಗಳನ್ನೇ ಗುರಿ ಮಾಡಿವೆ. ನಿರಂತರ ದಾಳಿ ನಡೆಸುವ, ಅಧಿಕಾರ ದುರುಪಯೋಗ ಪಡಿಸಿಕೊಂಡು ಸುಳ್ಳು ಕೇಸುಗಳನ್ನು ದಾಖಲಿಸುವ, ಜೈಲಿನಲ್ಲಿಡುವ ಕೆಲಸ ಮಾಡಲಾಗುತ್ತಿವೆ ಎಂದು ಮುಖಂಡರಾದ ಕೆ.ಟಿ.ಗಂಗಾಧರ್. ಎಚ್.ಆರ್.ಬಸವರಾಜಪ್ಪ, ಎಂ.ಶ್ರೀಕಾಂತ್, ಕೆ.ಎಲ್.ಅಶೋಕ್, ಕೆ.ಪಿ.ಶ್ರೀಪಾಲ, ಎಂ.ಗುರುಮೂರ್ತಿ, ಎನ್.ರಮೇಶ್,ಎಚ್.ಟಿ. ಹಾಲೇಶಪ್ಪ, ಎಚ್.ಸಿ.ಯೊಗೇಶ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ರಾಕೇಶ್ ಟಿಕಾಯತ್ ತರದ ಜನ ನಾಯಕರಿಗೆ ದೇಶದಲ್ಲಿ ಸಿಗುತ್ತಿರುವ ಜನ ಬೆಂಬಲ ಕಂಡು ಹತಾಶೆಯಿಂದ ಬಿಜೆಪಿ, ಎಬಿವಿಪಿ ಮುಖಂಡರು ಇಂತಹ ಕೃತ್ಯಗಳಲ್ಲಿ ತೊಡಗಿದ್ದಾರೆ. ರಾಜಸ್ತಾನದ ಅಲ್ವಾರ್ ಜೆಲ್ಲೆಯಲ್ಲಿ ಶುಕ್ರವಾರ ರೈತ ಮಹಾ ಪಂಚಾಯತ್ ಮುಗಿಸಿ ಬರುವಾಗ ಎಬಿವಿಪಿ ಅಧ್ಯಕ್ಷ ಕುಲದೀಪ್ ಯಾದವ್ ಮತ್ತು ಆತನ ಸಹಚರರು ಟಿಕಾಯತ್ ಅವರ ಕಾರಿನ ಮೇಲೆ ಗುಂಡಿನ ದಾಳಿ ನಡೆಸಿದ್ದಾರೆ. ಇದೊಂದು ಹೈಯ್ಯ ಕೃತ್ಯ. ಹೇಡಿಗಳು ಈ ರೀತಿಯ ಕೆಲಸ ಮಾಡುತ್ತಾರೆ. ನೇರವಾಗಿ ಎದುರಿಸಲಾಗದ ಬಿಜೆಪಿ, ಸಂಘಪರಿವಾರ ಈ ರೀತಿ ಹೀನ ಕೃತ್ಯ ಎಸಗುತ್ತಿದೆ, ಕುಪದೀಪ್ ಯಾದವ್‌ನನ್ನು ತಕ್ಷನ ಬಂಧಿಸಬೇಕು. ಆತ ಪ್ರತಿನಿದಿಸುವ ಸಂಘಟನೆ ನಿಷೇಧಿಸಬೇಕು ಎಂದು ಒತ್ತಾಯಿಸಿದ್ದಾರೆ.
ಕೇಂದ್ರ ಸರ್ಕಾರ ರೈತ ವಿರೋಧಿ ಕೃಷಿ ಕಾಯಿದೆಗಳನ್ನು ಹಿಂಪಡೆಯಬೇಕು. ಈ ರೀತಿಯ ದಾಳಿಗಳ ಮೂಲಕ, ಸುಳ್ಳು ಪ್ರಕರಣಗಳನ್ನು ದಾಖಲಿಸುವ, ಜೈಲಿನಲ್ಲಿಡುವ ಮೂಲಕ ಹೋರಾಟವನ್ನು ಹತ್ತಿಕುವ ಭ್ರಮೆಯಿಂದ ಹೊರಬರಬೇಕು. ಇಲ್ಲದಿದ್ದರೆ ಮುಂದಿನ ದಿನದಲ್ಲಿ ಹೋರಾಟ ಇನ್ನಷ್ಟು ತೀವ್ರ ಗೊಳಿಸುತ್ತೇವೆ ಎಂದು ಎಚ್ಚರಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.