ADVERTISEMENT

ಸೊರಬ: ಅರಣ್ಯ ಅರ್ಜಿ ಪರಿಶೀಲಿಸಲು ರೈತರ ಆಗ್ರಹ

​ಪ್ರಜಾವಾಣಿ ವಾರ್ತೆ
Published 9 ಫೆಬ್ರುವರಿ 2022, 4:19 IST
Last Updated 9 ಫೆಬ್ರುವರಿ 2022, 4:19 IST
ಸೊರಬದಲ್ಲಿ ಅರಣ್ಯ ಹಕ್ಕು ಕಾಯ್ದೆಯಡಿ ವಜಾ ಮಾಡಲಾದ ಅರ್ಜಿಗಳನ್ನು ಪನರ್ ಪರಿಶೀಲಿಸುವಂತೆ ಒತ್ತಾಯಿಸಿ ಮಲೆನಾಡು ರೈತರ ಹೋರಾಟ ಸಮಿತಿ ವತಿಯಿಂದ ಪ್ರತಿಭಟನೆ ನಡೆಸಲಾಯಿತು.
ಸೊರಬದಲ್ಲಿ ಅರಣ್ಯ ಹಕ್ಕು ಕಾಯ್ದೆಯಡಿ ವಜಾ ಮಾಡಲಾದ ಅರ್ಜಿಗಳನ್ನು ಪನರ್ ಪರಿಶೀಲಿಸುವಂತೆ ಒತ್ತಾಯಿಸಿ ಮಲೆನಾಡು ರೈತರ ಹೋರಾಟ ಸಮಿತಿ ವತಿಯಿಂದ ಪ್ರತಿಭಟನೆ ನಡೆಸಲಾಯಿತು.   

ಸೊರಬ: ಅರಣ್ಯ ಹಕ್ಕು ಕಾಯ್ದೆಯಡಿ ವಜಾ ಮಾಡಿದ ಅರ್ಜಿಗಳನ್ನು ಪುನರ್ ಪರಿಶೀಲಿಸಲು ಆದೇಶಿಸಬೇಕು ಹಾಗೂ ಕೇಂದ್ರ ಸರ್ಕಾರ ಕಾಯ್ದೆ ತಿದ್ದುಪಡಿ ಮಾಡುವವರೆಗೂ ಯಾವುದೇ ಅರ್ಜಿ ವಜಾ ಮಾಡಬಾರದು ಎಂದು ಮಲೆನಾಡು ರೈತರ ಹೋರಾಟ ಸಮಿತಿ ವತಿಯಿಂದ ಮಂಗಳವಾರ ತಹಶೀಲ್ದಾರ್ ಅವರ ಕಚೇರಿ ಎದುರು ಪ್ರತಿಭಟನೆ ನಡೆಸಲಾಯಿತು.

ಪ್ರತಿಭಟನೆಯ ನೇತೃತ್ವ ವಹಿಸಿದ್ದ ಮಲೆನಾಡು ರೈತರ ಹೋರಾಟ ಸಮಿತಿಯ ಸಂಚಾಲಕ ತೀ.ನ. ಶ್ರೀನಿವಾಸ್ ಮಾತನಾಡಿ, ‘ತಾಲ್ಲೂಕಿನಲ್ಲಿ ಬಂಗಾರಪ್ಪನವರ ಕಾಲದ ನಂತರ ರೈತರ ಕಷ್ಟಗಳನ್ನು ಕೇಳುವವರೇ ಇಲ್ಲವಾಗಿದ್ದಾರೆ. ಹಾಲಿ ಶಾಸಕರು ರೈತರಿಗೆ ಭೂಮಿ ಕೊಡಿಸುವ ಬದಲು ಭೂಮಿ ಕಸಿದುಕೊಳ್ಳುತ್ತಿದ್ದಾರೆ. ಅರಣ್ಯ ಹಕ್ಕು ಕಾಯ್ದೆಯಡಿ ಭೂ ಮುಂಜೂರಾತಿಗೆ ಅರ್ಜಿ ಸಲ್ಲಿಸದ ತಾಲ್ಲೂಕಿನ ರೈತರ 10 ಸಾವಿರ ಅರ್ಜಿಗಳನ್ನು ಉಪ ವಿಭಾಗಾಧಿಕಾರಿ ಸಮಿತಿ ವಜಾ ಮಾಡಿರುವುದು ರೈತ ವಿರೋಧಿ ಕ್ರಮವಾಗಿದೆ’ ಎಂದು ಆರೋಪಿಸಿದರು.

ಸುಪ್ರೀಂ ಕೋರ್ಟ್ ರೈತರಿಗೆ ಸಹಜವಾದ ನ್ಯಾಯ ನೀಡುವ ನಿಟ್ಟಿನಲ್ಲಿ ಅಧಿಕಾರಿಗಳು ರೈತರಿಗೆ ದಾಖಲೆ ಒದಗಿಸಲು ಸಹಾಯ ಮಾಡಿ ಎಂದು ಆದೇಶ ನೀಡಿದೆ. ಆದರೆ, ಅಧಿಕಾರಿಗಳು ಆದೇಶ ಪತ್ರವನ್ನು ಕಸದ ಬುಟ್ಟಿಗೆ ಹಾಕಿ ಇಂಥದ್ದೇ ದಾಖಲೆ ಬೇಕು ಎಂದು ಒತ್ತಾಯಿಸುವ ಮೂಲಕ ಸುಪ್ರೀಂ ಕೋರ್ಟ್ ಆದೇಶ ಉಲ್ಲಂಘಿಸಿದ್ದಾರೆ ಎಂದು ದೂರಿದರು.

ADVERTISEMENT

ಈ ಹಿಂದೆ ಮುಖ್ಯಮಂತ್ರಿ ಹಾಗೂ ಸಂಸದರು ಅರಣ್ಯ ಹಕ್ಕು ತಿದ್ದುಪಡಿ ಮಾಡಿ 75 ವರ್ಷಗಳಿಂದ 25 ವರ್ಷಗಳಿಗೆ ಇಳಿಕೆ ಮಾಡುತ್ತೇವೆ ಎಂದು ಮಾತು ನೀಡಿದ್ದಾರೆ. ತಾಲ್ಲೂಕಿನ ಗೆಂಡ್ಲ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಶಿಡ್ಡಿಹಳ್ಳಿ, ತಾಳಗುಪ್ಪ ಕಾತೂರು ಗ್ರಾಮಗಳಲ್ಲಿನ ರೈತರ ಮೇಲೆ ಕಾನೂನು ಬಾಹಿರವಾಗಿ ಪ್ರಕರಣ ದಾಖಲಿಸಿರುವುದನ್ನು ಹಿಂಪಡೆಯಬೇಕು ಎಂದು ಆಗ್ರಹಿಸಿದರು.

1978ರ ಮೊದಲು ಅರಣ್ಯ ಭೂಮಿ ಸಾಗುವಳಿ ಮಾಡಿದ ರೈತರಿಗೆ ಕನಿಷ್ಠ 3 ಎಕರೆ ಜಮೀನು ಮುಂಜೂರು ಮಾಡಬೇಕು ಎಂಬ ಆದೇಶವನ್ನು ತಕ್ಷಣ ಜಾರಿ ಮಾಡಬೇಕು. ಹಕ್ಕುಪತ್ರ ಪಡೆದ ರೈತರ ಜಮೀನು ಅರಣ್ಯ ಜಮೀನು ಎಂದು ನಮೂದಾಗಿರುವು
ದನ್ನು ರದ್ದು ಪಡಿಸಬೇಕು. ಫಾರಂ ನಂ 50, 53, 57ರ ಅಡಿ ಅರ್ಜಿ ಸಲ್ಲಿಸಿದವರಿಗೆ ಜಮೀನು ಮಂಜೂರು ಮಾಡಬೇಕು ಎಂದು ಆಗ್ರಹಿಸಿದರು.

ಪರಶುರಾಮ ಶಿಡ್ಡಿಹಳ್ಳಿ, ಅಶೋಕ ಮಳೆಕೊಪ್ಪ, ವೀರೇಶಪ್ಪ, ಹನುಮಂತಪ್ಪ ಬೆಟ್ಟದ ಕೂರ್ಲಿ, ಶಿವಪ್ಪ ತವನಂದಿ, ಅಬ್ದುಲ್ ಅಜೀಜ್, ಪಟ್ಟಪ್ಪ ಗುಡ್ಡೆ ಕೊಪ್ಪ ಪಾಲ್ಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.