ADVERTISEMENT

ಗಣಪತಿ ವಿಸರ್ಜನೆಗೆ 25 ಕಡೆ ಸ್ಥಳ ಗುರುತು: ಜಿಲ್ಲಾಧಿಕಾರಿ ಗುರುದತ್ತ ಹೆಗಡೆ

​ಪ್ರಜಾವಾಣಿ ವಾರ್ತೆ
Published 23 ಆಗಸ್ಟ್ 2025, 7:36 IST
Last Updated 23 ಆಗಸ್ಟ್ 2025, 7:36 IST
<div class="paragraphs"><p>ಗುರುದತ್ತ ಹೆಗಡೆ</p></div>

ಗುರುದತ್ತ ಹೆಗಡೆ

   

ಶಿವಮೊಗ್ಗ: ‘ಗಣ‍‍ಪತಿ ವಿಸರ್ಜನೆಗೆ ಶಿವಮೊಗ್ಗದಲ್ಲಿ 25 ಸ್ಥಳಗಳ ಗುರುತಿಸಲಾಗಿದೆ. ಅಲ್ಲದೇ ಇನ್ನಷ್ಟು ಸ್ಥಳಗಳ ಸಜ್ಜುಗೊಳಿಸಲಾಗುತ್ತಿದೆ. ಅಗತ್ಯದ ಸಂದರ್ಭದಲ್ಲಿ ಕ್ರೇನ್‌ಗಳ ಬಳಸಿಕೊಳ್ಳಲು ಉದ್ದೇಶಿಸಲಾಗಿದೆ’ ಎಂದು ಜಿಲ್ಲಾಧಿಕಾರಿ ಗುರುದತ್ತ ಹೆಗಡೆ ಹೇಳಿದರು.

ನಗರದ ಡಿ.ಎ.ಆರ್ ಸಭಾಂಗಣದಲ್ಲಿ ಜಿಲ್ಲೆಯಲ್ಲಿ ಶಾಂತಿ–ಸುವ್ಯವಸ್ಥೆ ಕಾಪಾಡುವ ಹಿನ್ನೆಲೆಯಲ್ಲಿ ಏರ್ಪಡಿಸಿದ್ದ ಶಾಂತಿ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ADVERTISEMENT

ನಗರದ 20 ಕಿ.ಮೀ ವ್ಯಾಪ್ತಿಯಲ್ಲಿ ಬ್ಯಾರಿಕೇಡ್‌ಗಳ ನಿರ್ಮಾಣ, 600 ಸಿ.ಸಿ.ಟಿ.ವಿ ಕ್ಯಾಮೆರಾಗಳ ಕಣ್ಗಾವಲು ಇಡಲಾಗಿದೆ. ಅಲ್ಲದೇ ಡ್ರೋಣ್‌ ಕ್ಯಾಮೆರಾಗಳ ಕೂಡ ಬಳಸಿಕೊಳ್ಳಲಾಗುತ್ತಿದೆ. ಗಣಪತಿ ವಿಸರ್ಜನೆ ಸಂದರ್ಭದಲ್ಲಿ ಮುಳುಗು ತಜ್ಞರ ಸಹಕಾರ ಪಡೆಯಲಾಗಿದೆ.

ಗಣಪತಿ ವಿಸರ್ಜನೆ ಸ್ಥಳಗಳಲ್ಲಿ ವಿದ್ಯುತ್‌ದೀಪ, ತೆಪ್ಪದ ವ್ಯವಸ್ಥೆ ಮಾಡಲು ಉದ್ದೇಶಿಸಲಾಗಿದೆ. ನಗರದೆಲ್ಲೆಡೆ ಮೂಲ ಸೌಕರ್ಯ ಒದಗಿಸಲು ವಿಶೇಷ ಗಮನಹರಿಸಲಾಗಿದೆ. ಹಬ್ಬ ನಡೆಯುವ ಮೂರು ದಿನಗಳ ಕಾಲ ನಿರಂತರ ನೀರು ಒದಗಿಸಲು ಹಾಗೂ ಅಗತ್ಯವಿರುವಲ್ಲಿ ಟ್ಯಾಂಕರ್‌ ಮೂಲಕ ನೀರು ಒದಗಿಸಲು ಸಿದ್ಧತೆ ಮಾಡಿಕೊಳ್ಳಲಾಗಿದೆ. ಸಾಂಪ್ರದಾಯಿಕವಾಗಿ ಗಣಪತಿ ವಿಸರ್ಜನೆಗೆ ಮೊಬೈಲ್‌ ವಾಹನಗಳ ಸಿದ್ಧಗೊಳಿಸಲಾಗಿದೆ ಎಂದರು.

ಸಭೆಯಲ್ಲಿದ್ದ ಎಸ್ಪಿ ಜಿ.ಕೆ.ಮಿಥುನಕುಮಾರ್‌ ಮಾತನಾಡಿ, ‘ಮೆರವಣಿಗೆ ಮತ್ತಿತರ ಸಂದರ್ಭದಲ್ಲಿ ಅಸಹ್ಯಕರವಾಗಿ ವರ್ತಿಸುವವರ ವಿರುದ್ಧ ಮೊಕದ್ದಮೆ ದಾಖಲಿಸಲಾಗುವುದಲ್ಲದೇ ಕಾನೂನು ಕ್ರಮ ಜರುಗಿಸಲಾಗುವುದು. ನೆರೆಯ ಜಿಲ್ಲೆಗಳಿಂದ ಬರುವವರ ಮೇಲೆ ವಿಶೇಷ ಗಮನಹರಿಸಲಾಗುವುದು. ಅದಕ್ಕಾಗಿ ನಗರದ ಹೊರವಲಯದಲ್ಲಿ ಚೆಕ್‌ಪೋಸ್ಟ್‌ಗಳ ನಿರ್ಮಿಸಲಾಗಿದೆ’ ಎಂದರು.

‘ಮೆರವಣಿಗೆ ಸಂದರ್ಭದಲ್ಲಿ ತಾಳ್ಮೆ ಕಳೆದುಕೊಳ್ಳದೇ ಸೌಹಾರ್ದಯುತವಾಗಿ ವರ್ತಿಸಬೇಕು. ತಪ್ಪು ಹೆಜ್ಜೆ ಇಟ್ಟಲ್ಲಿ ಕ್ರಮ ಅನಿವಾರ್ಯ. ಪರಸ್ಪರರಲ್ಲಿ ವಾಗ್ವಾದ ಸಲ್ಲದು. ಮುಖಂಡರು ಇಂತಹ ಸಂದರ್ಭದಲ್ಲಿ ಮಧ್ಯ ಪ್ರವೇಶಿಸಿ, ವಾತಾವರಣ ತಿಳಿಗೊಳಿಸಲು ಯತ್ನಿಸಬೇಕು. ಅಗತ್ಯವಿದ್ದಲ್ಲಿ ಪೊಲೀಸರ ಸಹಕಾರ ಪಡೆಯುವಂತೆ ಸೂಚಿಸಿದರು. ಹಬ್ಬದ ಮೆರವಣಿಗೆ ನಡೆಯುವ ದಿನ ಭವಿಷ್ಯದ ಬದುಕು ಕಲ್ಪಿಸಿಕೊಳ್ಳಲು ಹೊರಟಿರುವ ವಿದ್ಯಾರ್ಥಿಗಳಿಗೆ ಯಾವುದೇ ಅನಾನುಕೂಲವಾಗದಂತೆ ಕ್ರಮ ವಹಿಸಲಾಗುವುದು’ ಎಂದರು.

ಸಭೆಯಲ್ಲಿ ಎಎಸ್‌ಪಿಗಳಾದ ಕಾರಿಯಪ್ಪ, ರಮೇಶ್‌ಕುಮಾರ್‌, ಜಿಲ್ಲಾ ಪಂಚಾಯಿತಿ ಉಪಕಾರ್ಯದರ್ಶಿ ಸುಜಾತಾ ಉಪಸ್ಥಿತರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.