ಶಿವಮೊಗ್ಗ: ‘ಅಸಂಘಟಿತ ಕಾರ್ಮಿಕರಿಗೆ ಧ್ವನಿ ಕಲ್ಪಿಸಲು ಗಿಗ್, ಸಿನಿ, ಸಾರಿಗೆ ಬಿಲ್‌ಗಳ ಜಾರಿ ಮೂಲಕ ಅವರಿಗೆ ಸಾಮಾಜಿಕ ಭದ್ರತೆ ಕಲ್ಪಿಸುವಲ್ಲಿ ರಾಜ್ಯ ಸರ್ಕಾರ ಯಶಸ್ವಿಯಾಗಿದೆ’ ಎಂದು ಕಾರ್ಮಿಕ ಸಚಿವ ಸಂತೋಷ್ ಲಾಡ್ ಹೇಳಿದರು.
ಕರ್ನಾಟಕ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಕಲ್ಯಾಣ ಮಂಡಳಿ, ರಾಜ್ಯ ಅಸಂಘಟಿತ ಕಾರ್ಮಿಕರ ಸಾಮಾಜಿಕ ಭದ್ರತಾ ಮಂಡಳಿ, ಸಾರಿಗೆ ಇಲಾಖೆ, ಜಿಲ್ಲಾಡಳಿತ ಹಾಗೂ ಜಿಲ್ಲಾ ಪಂಚಾಯಿತಿ ಸಹಯೋಗದೊಂದಿಗೆ ಸೋಮವಾರ ಇಲ್ಲಿ ಆಯೋಜಿಸಿದ್ದ ವಸತಿ ಸಮುಚ್ಚಯ ಭವನ ಲೋಕಾರ್ಪಣೆ ಹಾಗೂ ಅಸಂಘಟಿತ ಕಾರ್ಮಿಕರಿಗೆ ಸ್ಮಾರ್ಟ್ ಕಾರ್ಡ್ ವಿತರಣೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
‘ಅಮೆಜಾನ್, ಸ್ವಿಗ್ಗಿ, ಝೊಮ್ಯಾಟೊ, ಬ್ಲಿಂಕ್‌ಇಟ್‌ಗಳಲ್ಲಿ ಕೆಲಸ ಮಾಡುವ ಐದು ಲಕ್ಷಕ್ಕೂ ಹೆಚ್ಚು ಗಿಗ್ ಕಾರ್ಮಿಕರ ಹಿತ ರಕ್ಷಣೆಗೆ ರಾಜ್ಯ ಸರ್ಕಾರ ಗಿಗ್ ಬಿಲ್ ಪಾಸ್ ಮಾಡಿದೆ. ಸಾಗಾಣಿಕೆ ದರದ ಮೇಲೆ ಶೇ 1ರಿಂದ ಶೇ 5ರಷ್ಟು ಹಣ ಮತ್ತು ಸರ್ಕಾರ ನೀಡುವ ಅನುದಾನದಿಂದ ಅವರಿಗೆ ಸಾಮಾಜಿಕ ಭದ್ರತೆ ನೀಡಲಾಗುತ್ತಿದೆ. ಸಹ ನಟರು, ಟಿಕೆಟ್ ಕೊಡುವವರು, ತಂತ್ರಜ್ಞರು, ಪೌರಾಣಿಕ ನಾಟಕ ನಟರು ಸೇರಿ ತೆರೆಯ ಹಿಂದೆ ಕೆಲಸ ಮಾಡುವವರಿಗಾಗಿ ಸಿನಿ ಬಿಲ್ ಪಾಸ್ ಮಾಡಿದೆ. ಶೇ 1ರಿಂದ ಶೇ 2ರಷ್ಟು ಸೆಸ್ ಮತ್ತು ಸರ್ಕಾರದ ಹಣ ಸೇರಿಸಿ ಅನುಕೂಲ ಮಾಡಲಾಗಿದೆ’ ಎಂದು ಹೇಳಿದರು.
‘ಕಮರ್ಷಿಯಲ್ ಡ್ರೈವರ್, ಕ್ಲೀನರ್, ಮೆಕ್ಯಾನಿಕ್ ಸೇರಿ ಇತರೆ ಕಾರ್ಮಿಕರಿಗೆ ಅಪಘಾತ, ಮರಣ ಅಥವಾ ತೊಂದರೆ ಆದಲ್ಲಿ ₹ 5 ಲಕ್ಷ ನೀಡುವ ಯೋಜನೆ ಜಾರಿಗೆ ತರಲಾಗಿದೆ. ರಾಜ್ಯದಲ್ಲಿ ಪ್ರತಿ ದಿನ ಅಪಘಾತಗಳಲ್ಲಿ 480 ಜನ ಪ್ರಾಣ ಕಳೆದುಕೊಳ್ಳುತ್ತಿದ್ದಾರೆ. ಅವರಲ್ಲಿ ಚಾಲಕರೇ ಹೆಚ್ಚು, ಅವರ ಕುಟುಂಬಗಳಿಗೆ ನೆರವಾಗಲು ಸರ್ಕಾರ ಸಾರಿಗೆ ಬಿಲ್ ಪಾಸ್ ಮಾಡಿದೆ’ ಎಂದರು.
‘20 ಜನರಿಗಿಂತ ಹೆಚ್ಚು ಕಾರ್ಮಿಕರು ಕೆಲಸ ಮಾಡುವ ಕಡೆ ಮಾಲೀಕರು, 5 ವರ್ಷ ಕೆಲಸ ಮಾಡಿದ ಕಾರ್ಮಿಕರಿಗೆ ಕಡ್ಡಾಯವಾಗಿ ಗ್ರಾಚ್ಯುಟಿ ಪಾವತಿಸಬೇಕು. ಈ ರೀತಿಯ 6 ಸಾವಿರ ಕಂಪೆನಿಗಳು ಇಲಾಖೆಯಡಿ ನೋಂದಣಿಯಾಗಿವೆ. ಅಧಿಕಾರಿಗಳು ಗ್ರಾಚ್ಯುಟಿ ಪಾವತಿ ಬಗ್ಗೆ ಪರಿಶೀಲಿಸಬೇಕು’ ಎಂದು ಸೂಚಿಸಿದರು.
ಸಂಸದ ಬಿ.ವೈ.ರಾಘವೇಂದ್ರ ಮಾತನಾಡಿ, ‘ಶಿಕಾರಿಪುರ ಮತ್ತು ಸಾಗರದಲ್ಲಿ ಇಎಸ್‌ಐ ಆಸ್ಪತ್ರೆ ನಿರ್ಮಿಸಲು ಸರ್ಕಾರಕ್ಕೆ ಪ್ರಸ್ತಾವ ಸಲ್ಲಿಸಿದ್ದು, ಸಚಿವರು ಅದಕ್ಕೆ ಸಹಕರಿಸಬೇಕು’ ಎಂದರು.
‘ಜಿಲ್ಲೆಯಲ್ಲಿ 3.5 ಲಕ್ಷ ಅಸಂಘಟಿತ ಕಾರ್ಮಿಕರು ನೋಂದಣಿ ಆಗಿದ್ದು, ಅವರಿಗೆ ಇ–ಶ್ರಮ್ ಕಾರ್ಡ್ ನೀಡಲಾಗುತ್ತಿದೆ. ಒನ್ ನೇಷನ್ ಒನ್ ಕಾರ್ಡ್ ಕೊಡಲು ಕ್ರಮ ವಹಿಸಲಾಗುತ್ತಿದೆ. 60 ವರ್ಷ ತುಂಬಿದವರಿಗೆ ₹ 3,000 ಪಿಂಚಣಿ ಸಿಗಲಿದೆ’ ಎಂದು ಹೇಳಿದರು.
ಕಾರ್ಮಿಕ ಇಲಾಖೆ ಜಂಟಿ ನಿರ್ದೇಶಕ ಎಸ್.ಬಿ.ರವಿಕುಮಾರ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಕಾರ್ಯಕ್ರಮದಲ್ಲಿ ಸಚಿವ ಸಂತೋಷ್ ಲಾಡ್ ವಿವಿಧ ವರ್ಗಗಳ ಅಸಂಘಟಿತ ಕಾರ್ಮಿಕರಿಗೆ ಸ್ಮಾರ್ಟ್ ಕಾರ್ಡ್ ಮತ್ತು ಮೃತಪಟ್ಟವರ ಅವಲಂಬಿತರಿಗೆ ಚೆಕ್ ವಿತರಿಸಿದರು.
ಶಾಸಕಿ ಶಾರದಾ ಪೂರ್ಯಾನಾಯ್ಕ, ವಿಧಾನ ಪರಿಷತ್ ಸದಸ್ಯರಾದ ಡಿ.ಎಸ್.ಅರುಣ್, ಡಾ.ಧನಂಜಯ ಸರ್ಜಿ, ರಾಜ್ಯ ಭೋವಿ ಅಭಿವೃದ್ದಿ ನಿಗಮದ ಅಧ್ಯಕ್ಷ ಎಸ್.ರವಿಕುಮಾರ್, ಅಲೆಮಾರಿ ಅಭಿವೃದ್ಧಿ ನಿಗಮದ ಅಧ್ಯಕ್ಷೆ ಪಲ್ಲವಿ, ಸೂಡಾ ಅಧ್ಯಕ್ಷ ಎಚ್.ಎಸ್. ಸುಂದರೇಶ್, ಕಾರ್ಮಿಕ ಇಲಾಖೆ ಆಯುಕ್ತ ಡಾ.ಗೋಪಾಲಕೃಷ್ಣ , ರಾಜ್ಯ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಕಲ್ಯಾಣ ಮಂಡಳಿ ಕಾರ್ಯದರ್ಶಿ ಭಾರತಿ, ಜಿಲ್ಲಾ ಪಂಚಾಯಿತಿ ಸಿಇಒ ಎನ್. ಹೇಮಂತ್ ಹಾಜರಿದ್ದರು.
‘ಗ್ಯಾರಂಟಿ; ಜಿಡಿಪಿಯಲ್ಲಿ ಕರ್ನಾಟಕ ನಂ. 1’
‘ಗ್ಯಾರಂಟಿ ಯೋಜನೆಗಳ ಯಶಸ್ವಿ ಅನುಷ್ಠಾನದ ಪರಿಣಾಮ ದೇಶದ ಇತರೆ ರಾಜ್ಯಗಳಿಗೆ ಹೋಲಿಸಿದರೆ ಕರ್ನಾಟಕದ ಜಿಡಿಪಿ ದರ ಮೊದಲ ಸ್ಥಾನಕ್ಕೆ ಏರಿದೆ’ ಎಂದು ಸಚಿವ ಸಂತೋಷ್ ಲಾಡ್ ಹರ್ಷ ವ್ಯಕ್ತಪಡಿಸಿದರು. ‘ಸರ್ಕಾರ ಗ್ಯಾರಂಟಿ ಅಡಿ ₹ 56000 ಕೋಟಿಯಿಂದ ₹ 60000 ಕೋಟಿವರೆಗೆ ಪ್ರತಿ ವರ್ಷ ವೆಚ್ಚ ಮಾಡುತ್ತಿದೆ. ಇದನ್ನು ಬಡವರಿಗೆ ನೀಡುತ್ತಿರುವುದರಿಂದ ಅದು ಸಂಪೂರ್ಣವಾಗಿ ಮತ್ತೆ ಮಾರುಕಟ್ಟೆಗೆ ವಾಪಸ್ ಬರುತ್ತಿದೆ. ಇದರಿಂದ ಜಿಡಿಪಿ ದರ ಏರಿಕೆ ಆಗಿದೆ’ ಎಂದು ಹೇಳಿದರು. ‘ಖಾಸಗಿ ಸಂಸ್ಥೆ ಹಾಗೂ ಕಂಪೆನಿಗಳಲ್ಲಿ ಕೆಲಸ ಮಾಡುವ ಪರಿಶಿಷ್ಟ ಜಾತಿ ಪಂಗಡದವರಿಗೆ ಪಾವತಿಸಲು ಕಾರ್ಮಿಕ ಇಲಾಖೆಯಿಂದ ಶೇ 50ರಷ್ಟು ಹಣ ನೀಡುವ ‘ಆಶಾದೀಪ’ ಯೋಜನೆ ದೇಶದಲ್ಲಿಯೇ ಮೊದಲು ಜಾರಿಗೆ ತಂದಿದ್ದೇವೆ. ಸಣ್ಣ ಸಣ್ಣ ಕೆಲಸ ಮಾಡುವ 91 ಸಮುದಾಯಗಳನ್ನು ಗುರುತಿಸಿ ಸ್ಮಾರ್ಟ್ ಕಾರ್ಡ್ ನೀಡಲಾಗುತ್ತಿದೆ. ಅಸಂಘಟಿತ ವರ್ಗದ ಕಾರ್ಮಿಕರ ಸಾಮಾಜಿಕ ಭದ್ರತೆಗಾಗಿ ಡೀಸೆಲ್ ಪೆಟ್ರೋಲ್‌ನಿಂದ 50 ಪೈಸೆಯಿಂದ ₹ 1 ಸೆಸ್ ನೀಡಿದಲ್ಲಿ ಅನುಕೂಲವಾಗುತ್ತದೆ’ ಎಂದು ಹೇಳಿದ ಸಚಿವರು ‘ಆಶಾ ಕಾರ್ಯಕರ್ತೆಯರ ಗೌರವಧನ ಹೆಚ್ಚಳ ಬೇಡಿಕೆ ಈಡೇರಿಸಲು ಪ್ರಯತ್ನಿಸುತ್ತೇನೆ’ ಎಂದು ಭರವಸೆ ನೀಡಿದರು.
₹29.5 ಕೋಟಿ ವೆಚ್ಚದ ವಸತಿ ಸಮುಚ್ಚಯ
ಸಿದ್ಲಿಪುರದಲ್ಲಿ ಕಾರ್ಮಿಕ ಇಲಾಖೆಯಿಂದ ₹29.5 ಕೋಟಿ ವೆಚ್ಚದಲ್ಲಿ ನಿರ್ಮಿಸಿರುವ ‘ಶ್ರಮಿಕ ತಾತ್ಕಾಲಿಕ ವಸತಿ ಸಮುಚ್ಚಯ’ವನ್ನು ಸಚಿವ ಸಂತೋಷ್ ಲಾಡ್ ಸೋಮವಾರ ಲೋಕಾರ್ಪಣೆಗೊಳಿಸಿದರು. ದೇವಕಾತಿಕೊಪ್ಪ ಕೈಗಾರಿಕಾ ಪ್ರದೇಶದಲ್ಲಿರುವ ವಲಸೆ ಕಾರ್ಮಿಕರು ಮತ್ತು ಅವರ ಕುಟುಂಬದವರು ತಂಗಲು ಈ ಸಮುಚ್ಚಯ ನಿರ್ಮಿಸಲಾಗಿದೆ. ಸಿದ್ಲಿಪುರದಲ್ಲಿ 10 ಎಕರೆ ಪ್ರದೇಶದಲ್ಲಿ ಮೂರು ವಸತಿ ನಿಲಯ ಬ್ಲಾಕ್‌ಗಳು ಇದ್ದು ಪ್ರತಿ ಬ್ಲಾಕ್ ನಲ್ಲಿ 11 ಡಾರ್ಮಿಟರಿಗಳಿವೆ. ಮೂರು ವಸತಿ ಗೃಹಗಳ ಬ್ಲಾಕ್ ನಿರ್ಮಿಸಿದ್ದು ಪ್ರತಿ ಬ್ಲಾಕ್ ನಲ್ಲಿ 12 ಫ್ಲಾಟ್ ಸೇರಿ ಒಟ್ಟು 36 ಫ್ಲಾಟ್ ಇವೆ. ಡಾರ್ಮಿಟರಿಯಲ್ಲಿ ಕಾರ್ಮಿಕರು ಅಡುಗೆ ಮಾಡಿಕೊಳ್ಳಲು ಸುಸಜ್ಜಿತ ಅಡುಗೆ ಮನೆ ಶುದ್ಧ ಕುಡಿಯುವ ನೀರಿನ ವ್ಯವಸ್ಥೆ ಬಿಸಿ ನೀರಿಗಾಗಿ ಸೋಲಾರ್ ಪ್ಯಾನಲ್ ವ್ಯವಸ್ಥೆ ಇದೆ. ಆವರಣದಲ್ಲಿ ಆಡಳಿತ ಕಚೇರಿ ಇದೆ. ವಸತಿ ಸೌಕರ್ಯ ಪಡೆಯಲು ದಿನಕ್ಕೆ ₹50 ಶುಲ್ಕ ಭರಿಸಬೇಕಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.