ADVERTISEMENT

ಗ್ರಾ.ಪಂ ಅಧಿಕಾರಿ, ಸಿಬ್ಬಂದಿ ಮುಂಚೂಣಿ ಕೊರೊನಾ ವಾರಿಯರ್ಸ್‌: ಸಚಿವ ಈಶ್ವರಪ್ಪ

​ಪ್ರಜಾವಾಣಿ ವಾರ್ತೆ
Published 24 ಮೇ 2021, 10:16 IST
Last Updated 24 ಮೇ 2021, 10:16 IST
ಗ್ರಾಮೀಣಾಭಿವೃದ್ಧಿ ಸಚಿವ ಕೆ.ಎಸ್.ಈಶ್ವರಪ್ಪ
ಗ್ರಾಮೀಣಾಭಿವೃದ್ಧಿ ಸಚಿವ ಕೆ.ಎಸ್.ಈಶ್ವರಪ್ಪ    

ಶಿವಮೊಗ್ಗ: ಗ್ರಾಮ ಪಂಚಾಯಿತಿ ಅಧಿಕಾರಿಗಳು, ಸಿಬ್ಬಂದಿಯನ್ನು ಮುಂಚೂಣಿಯ ಕೊರೊನಾ ವಾರಿಯರ್‌ಗಳೆಂದು ಪರಿಗಣಿಸಲಾಗುವುದು. ಸೋಂಕು ನಿಯಂತ್ರಣಕ್ಕೆ ಶ್ರಮಿಸುವ ಪ್ರತಿ ತಾಲ್ಲೂಕಿನ ಒಂದು ಪಂಚಾಯಿತಿ ಹಾಗೂ ಮೂವರನ್ನು ಉತ್ತಮ ಸೇವಾ ಪ್ರಶಸ್ತಿಗೆ ಆಯ್ಕೆ ಮಾಡಲಾಗುವುದು ಎಂದು ಗ್ರಾಮೀಣಾಭಿವೃದ್ಧಿ ಸಚಿವ ಕೆ.ಎಸ್.ಈಶ್ವರಪ್ಪ ಹೇಳಿದರು.

ರಾಜ್ಯದ ಗ್ರಾಮೀಣ ಪ್ರದೇಶಗಳಲ್ಲಿ ಪರಿಣಾಮಕಾರಿಯಾಗಿ ಕೊರೊನಾ ನಿಯಂತ್ರಿಸುವ ಕುರಿತು ಮೈಸೂರು, ಬೆಂಗಳೂರು ವಿಭಾಗದ ಜಿಲ್ಲಾ ಪಂಚಾಯಿತಿ ಸಿಇಒಗಳು ಹಾಗೂ ಗ್ರಾಮ ಪಂಚಾಯಿತಿ ಪಿಡಿಒಗಳ ಜತೆ ಸೋಮವಾರ ನಡೆದ ವೀಡಿಯೊ ಸಂವಾದ ನಂತರ ಅವರು ಮಾಹಿತಿ ನೀಡಿದರು.

ಗ್ರಾಮ ಪಂಚಾಯಿತಿ ಅಧ್ಯಕ್ಷರು-ಸದಸ್ಯರು, ಪಿಡಿಒಗಳು ಹಾಗೂ ಕಾರ್ಯದರ್ಶಿಗಳು ಗ್ರಾಮೀಣ ಜನರ ಸಹಕಾರ ಪಡೆದು ಕೊರೋನ ಮುಕ್ತ ಗ್ರಾಮಗಳ ನಿರ್ಮಾಣಕ್ಕೆ ಸಂಕಲ್ಪ ಮಾಡಬೇಕು. ಸರ್ಕಾರ ಎಲ್ಲ ರೀತಿಯ ಸಹಕಾರ ನೀಡಲಿದೆ. ಕೋವಿಡ್‌ ಉಸ್ತುವಾರಿ ನೋಡಿಕೊಳ್ಳಲು ನೋಡೆಲ್‌ ಅಧಿಕಾರಿ ನೇಮಿಸಲಾಗುವುದು ಎಂದರು.

ADVERTISEMENT

ಗ್ರಾಮ ಪಂಚಾಯಿತಿ ಮಟ್ಟದಲ್ಲಿ ಹಿಂದೆ ರಚಿಸಲಾಗಿದ್ದ ಕಾರ್ಯಪಡೆಗಳು ಅತ್ಯಂತ ಯಶಸ್ವಿಯಾಗಿ ಕಾರ್ಯನಿರ್ವಹಿದ್ದವು. ಅವುಗಳನ್ನು ಇನ್ನಷ್ಟು ಬಲಗೊಳಿಸಿ, ಹೆಚ್ಚಿನ ಜವಾಬ್ದಾರಿ ನೀಡಲಾಗುವುದು. ಗ್ರಾಮೀಣ ಪ್ರದೇಶದಲ್ಲಿನ ಕುಟುಂಬಗಳಿಗೆ ಮನೆಯಲ್ಲೇ ಪ್ರತ್ಯೇಕ ವ್ಯವಸ್ಥೆ ಕಲ್ಪಿಸುವುದು ಸಾಧ್ಯವಿಲ್ಲ. ಹಾಗಾಗಿ, ಹೋಂ ಹೈಸೋಲೇಷನ್‌ಗೆ ಅವಕಾಶ ನೀಡುವುದಿಲ್ಲ. ಸೋಂಕಿತರಾದ ಎಲ್ಲರನ್ನೂ ಕೋವಿಡ್ ಆರೈಕೆ ಕೇಂದ್ರಗಳಿಗೆ ಕಳುಹಿಸಬೇಕು. ಎಲ್ಲ ಸ್ಥಳೀಯ ಜನಪ್ರತಿನಿಧಿಗಳೂ ಸಹಕಾರ ನೀಡಬೇಕು ಎಂದರು.

ಗ್ರಾಮ ಪಂಚಾಯಿತಿ ಅಧಿಕಾರಿಗಳು ಗ್ರಾಮದ ಸ್ವಚ್ಛತೆ,ಗೆ ಆದ್ಯತೆ ನೀಡಬೇಕು. ಕೋವಿಡ್ ಆರೈಕೆ ಕೇಂದ್ರಗಳು, ಆಸ್ಪತ್ರೆಗಳಿಗೆ ತಕ್ಷಣ ದಾಖಲಿಸಲು ಕ್ರಮ ಕೈಗೊಳ್ಳಬೇಕು. ಸಂತೆ, ಜಾತ್ರೆ, ಸಭೆ-ಸಮಾರಂಭ ನಿಷೇಧಿಸಬೇಕು. ಈ ಎಲ್ಲಾ ಚಟುವಟಿಕೆಗಳ ನಿರ್ವಹಣೆಗಾಗಿ 14 ಹಾಗೂ 15ನೇ ಹಣಕಾಸಿನ ನಿರ್ಬಂಧಿತ ಅನುದಾನ ಹಾಗೂಸರ್ಕಾರದ ₹ 50 ಲಕ್ಷ ಅನುದಾನ ಬಳಸಿಕೊಳ್ಳಬಹು ಎಂದು ಸೂಚಿಸಿದರು.

ಸಂವಾದದಲ್ಲಿ ಪಂಚಾಯಿತ್ ರಾಜ್ ಇಲಾಖೆ ಪ್ರಧಾನ ಕಾರ್ಯದರ್ಶಿ ಅತೀಕ್ ಅಹಮದ್‌, ಕಾರ್ಯದರ್ಶಿ ಉಮಾ ಮಹದೇವನ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.