ಶಿವಮೊಗ್ಗ: ‘ಗ್ಯಾರಂಟಿ ಯೋಜನೆಗಳು ಜನ ಸಾಮಾನ್ಯರ ಬದುಕಿನಲ್ಲಿ ಮಂದಹಾಸ ಮೂಡಿಸುವುದರ ಜೊತೆಗೆ ಆರ್ಥಿಕ ಸ್ವಾವಲಂಬನೆಯನ್ನು ನೀಡಿದೆ’ ಎಂದು ಗ್ಯಾರಂಟಿ ಯೋಜನೆಗಳ ತಾಲ್ಲೂಕು ಘಟಕ ಅಧ್ಯಕ್ಷ ಎಚ್.ಎಂ. ಮಧು ತಿಳಿಸಿದರು.
ತಾಲ್ಲೂಕು ಪಂಚಾಯಿತಿ ಸಭಾಂಗಣದಲ್ಲಿ ಶನಿವಾರ ಆಯೋಜಿಸಿದ್ದ ತಾಲ್ಲೂಕು ಗ್ಯಾರಂಟಿ ಯೋಜನೆಗಳ ಅನುಷ್ಠಾನದ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಜಿಲ್ಲೆಯಲ್ಲಿ 5 ಗ್ಯಾರಂಟಿ ಯೋಜನೆಗಳು ಯಶಸ್ವಿಯಾಗಿ ಜಾರಿಯಾಗಿದ್ದು, ಬಡವರ ಆಶಾಕಿರಣವಾಗಿರುವ ಅನ್ನಭಾಗ್ಯ ಯೋಜನೆಯು ಆಸರೆಯಾಗಿದೆ. ಹಸಿವು ಮುಕ್ತ ಭಾರತ ಮತ್ತು ‘ಸುಸ್ಥಿರ ಅಭಿವೃದ್ಧಿ ಗುರಿ-2030’ ತಲುಪಲು ಸಹಕಾರಿಯಾಗಿದೆ ಎಂದರು.
ಗೃಹಲಕ್ಷಿ ಯೋಜನೆಯ ಹಣವು 2025ರ ಜೂನ್ ತಿಂಗಳವರೆಗೆ ಬಿಡುಗಡೆಯಾಗಿದೆ. 2,044 ಐಟಿ, ಜಿಎಸ್‌ಟಿ ಫಲಾನುಭವಿಗಳು ಇದ್ದು, 298 ಮರಣ ಹೊಂದಿರುವ ಫಲಾನುಭವಿಗಳನ್ನು ಗುರುತಿಸಲಾಗಿದೆ. ಎನ್‌ಪಿಸಿಐ ಸಮಸ್ಯೆಯಿರುವ 90 ಫಲಾನುಭವಿಗಳಿಗೆ ಪರಿಹಾರ ಒದಗಿಸುವ ಕೆಲಸ ಮಾಡಲಾಗುತ್ತಿದೆ ಎಂದು ಸಿಡಿಪಿಒ ಗಂಗೂಬಾಯಿ ತಿಳಿಸಿದರು.
ತಾಲ್ಲೂಕು ಗ್ಯಾರಂಟಿ ಯೋಜನೆಗಳ ಸಮಿತಿಯ ಸದಸ್ಯ ಕಾರ್ಯದರ್ಶಿ ಹಾಗೂ ಕಾರ್ಯನಿರ್ವಾಹಕ ಅಧಿಕಾರಿ ತಾರಾ ಹಾಗೂ ತಾಲ್ಲೂಕು ಗ್ಯಾರಂಟಿ ಯೋಜನೆ ಸಮಿತಿಯ ಸದಸ್ಯರು ಇದ್ದರು.
ಯುವನಿಧಿ: ₹1.95 ಕೋಟಿ ಜಮೆ
ಜಿಲ್ಲೆಯಲ್ಲಿ ಯುವನಿಧಿ ಯೋಜನೆಯಡಿ ಫಲಾನುಭವಿಗಳ ಖಾತೆಗೆ ₹1.95 ಕೋಟಿ ಹಣ ಜಮೆಯಾಗಿದೆ. ಶಿವಮೊಗ್ಗ ತಾಲ್ಲೂಕಿನಲ್ಲಿ ಜೂನ್ ತಿಂಗಳವರೆಗೆ ₹59.71 ಲಕ್ಷ ಜಮೆಯಾಗಿದೆ. ಶಕ್ತಿ ಯೋಜನೆಯಡಿ ಶಿವಮೊಗ್ಗ ತಾಲ್ಲೂಕಿನಲ್ಲಿ 20.76 ಕೋಟಿ ಮಹಿಳೆಯರು ಪ್ರಯಾಣಿಸಿದ್ದು ಸಾರಿಗೆ ಇಲಾಖೆಗೆ ಶೇ 37 ರಷ್ಟು ಅಂದರೆ ₹73.28 ಕೋಟಿ ಆದಾಯ ದೊರೆತಿದೆ ಎಂದು ಸಿಡಿಪಿಒ ಗಂಗೂಬಾಯಿ ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.