ADVERTISEMENT

ಗುಡ್ಡೇಕಲ್ಲು; ಬಾಲಸುಬ್ರಹ್ಮಣ್ಯನಿಗೆ ಜಾತ್ರೆ ಸಂಭ್ರಮ

ಸಾವಿರಾರು ಭಕ್ತರು ಭಾಗಿ; ಹರೋಹರ ಘೋಷಣೆ – ರಥೋತ್ಸವ ಇಂದು

​ಪ್ರಜಾವಾಣಿ ವಾರ್ತೆ
Published 23 ಜುಲೈ 2022, 6:39 IST
Last Updated 23 ಜುಲೈ 2022, 6:39 IST
   

ಶಿವಮೊಗ್ಗ: ಮಲೆನಾಡು, ಮಧ್ಯ ಕರ್ನಾಟಕದಲ್ಲಿ ನೆಲೆಸಿರುವ ತಮಿಳು ಸಮುದಾಯದವರ ಆರಾಧ್ಯ ದೈವ ಇಲ್ಲಿನ ಗುಡ್ಡೇಕಲ್ಲು ಬೆಟ್ಟದ ಬಾಲ ಸುಬ್ರಹ್ಮಣ್ಯಸ್ವಾಮಿಯ ಅಡಿ ಕೃತ್ತಿಕಾ ಜಾತ್ರಾ ಮಹೋತ್ಸವಕ್ಕೆ ಆಷಾಢ ಶುಕ್ರವಾರ ದಿನ ಭರ್ಜರಿ ಚಾಲನೆ ದೊರೆತಿದೆ.

ಶಿವಮೊಗ್ಗ, ಭದ್ರಾವತಿ, ಹೊಳೆಹೊನ್ನೂರು ಮಾತ್ರವಲ್ಲದೇ ದಾವಣಗೆರೆ, ಚಿತ್ರದುರ್ಗ, ಚಿಕ್ಕಮಗಳೂರು ಜಿಲ್ಲೆಯ ತರೀಕೆರೆ, ಕಡೂರು, ಬೀರೂರು ಭಾಗದಿಂದ ಸಾವಿರಾರು ಮಂದಿ ತಮಿಳು ಸಮುದಾಯದವರು ಹರಕೆ ತೀರಿಸಲು ಸುಬ್ರಹ್ಮಣ್ಯ ಸ್ವಾಮಿಯ ಮುಡಿ ಹೊತ್ತು ಬೆಟ್ಟಕ್ಕೆ ಬಂದರು. ವಾದ್ಯಗಳ ಸದ್ದಿನ ನಡುವೆ ಹರೋಹರ ಘೋಷಣೆ ಮಾರ್ದನಿಸಿತ್ತು.

ಆಷಾಢ ಮಾಸದ ಮಳೆ ಲೆಕ್ಕಿಸದೇ ಮಕ್ಕಳು, ಮಹಿಳೆಯರು, ಯುವಜನರು, ಹೊಸದಾಗಿ ಮದುವೆಯಾದ ದಂಪತಿ ದೇವರ ದರ್ಶನ ಪಡೆಯಲು ಸರತಿಯಲ್ಲಿ ಹೆಜ್ಜೆ ಹಾಕಿದರು.

ADVERTISEMENT

ಕೋವಿಡ್ ಕಾರಣ ಕಳೆದ ಎರಡು ವರ್ಷಗಳಿಂದ ಜಾತ್ರೆಗೆ ಅವಕಾಶ ನೀಡಿರಲಿಲ್ಲ. ಹೀಗಾಗಿ, ಈ ವರ್ಷ ಜಾತ್ರೆಗೆ ಹೆಚ್ಚಿನ ಜನ ಸೇರುತ್ತಿದ್ದಾರೆ. ಅದು ಇಡೀ ಪರಿಸರಕ್ಕೆ ವಿಶೇಷ ಕಳೆತಂದಿದೆ. ಶನಿವಾರ ಕೃತ್ತಿಕಾ ನಕ್ಷತ್ರದ ದಿನ ಬಾಲಸುಬ್ರಹ್ಮಣ್ಯ ಸ್ವಾಮಿಯ ರಥೋತ್ಸವ ಜರುಗಲಿದೆ ಎಂದು ದೇವಸ್ಥಾನ ಟ್ರಸ್ಟ್ ಸಮಿತಿ ಅಧ್ಯಕ್ಷ ರಾಜು ತಿಳಿಸಿದರು.

ದೇವಸ್ಥಾನ ಮಾತ್ರವಲ್ಲ ಗುಡ್ಡೇಕಲ್ಲು ಬೆಟ್ಟದ ಪರಿಸರದಲ್ಲೂ ಜಾತ್ರೆಯ ಸಂಭ್ರಮ ಕಳೆಗಟ್ಟಿದೆ. ಹರಕೆ ಹೊತ್ತವರು ಬರುವ ಭಕ್ತರಿಗೆ ದೇವಸ್ಥಾನದ ಅಂಗಳದಲ್ಲಿ ಊಟ, ಉಪಾಹಾರದ ದಾಸೋಹ ಹಮ್ಮಿಕೊಂಡಿದ್ದಾರೆ. ಪುಳಿಯೋಗರೆ, ಮೊಸರನ್ನ, ಉಪ್ಪಿಟ್ಟು, ಪೊಂಗಲ್, ಅನ್ನ ಸಾಂಬಾರ್‌ನ ಘಮಲು ವ್ಯಾಪಿಸಿದ್ದು ಬಂದ ಭಕ್ತಾದಿಗಳಿಗೆ ಪ್ರಸಾದದ ರೂಪದಲ್ಲಿ ಕೊಡಲಾಯಿತು. ‘ಕಳೆದ ನಾಲ್ಕು ವರ್ಷಗಳಿಂದ ಜಾತ್ರೆಯ ವೇಳೆ ಭಕ್ತರಿಗೆ ಅನ್ನಸಂತರ್ಪಣೆ ಹಮ್ಮಿಕೊಳ್ಳುತ್ತಿದ್ದೇವೆ. ಇದು ನಾವು ದೇವರಿಗೆ ಸಲ್ಲಿಸುವ ಸೇವೆ‘ ಎಂದು ಶಿವಮೊಗ್ಗದ ಆಶಿಕಾ ಫೌಂಡೇಶನ್‌ನ ಜ್ಯೋತಿ ಹೇಳಿದರು.

ಖರೀದಿ ಜೋರು: ಜಾತ್ರೆಯಲ್ಲಿ ಬಳೆ, ಟಿಕ್ಕಲಿ, ಟೇಪು, ಸರ ಖರೀದಿಯಲ್ಲಿ ಮಹಿಳೆಯರು, ಮಕ್ಕಳು ತೊಡಗಿದ್ದರು. ಜೊತೆಗೆ ಮನೆಗೆ ಒಯ್ಯಲು ಖಾರ ಮಂಡಕ್ಕಿ, ಜಿಲೇಬಿ, ಬತ್ತಾಸು ಸಿಹಿ ತಿಂಡಿಯ ಪೊಟ್ಟಣ ಕಟ್ಟಿಸಿಕೊಳ್ಳುವುದು ಕಾಣಸಿಕ್ಕಿತು.ಮಕ್ಕಳ ಆಟಿಕೆ, ಬಲೂನ್, ಪ್ಲಾಸ್ಟಿಕ್ ಸಾಮಗ್ರಿಗಳ ಮಾರಾಟವೂ ಜೋರಾಗಿತ್ತು. ದೇವಸ್ಥಾನದ ಸುತ್ತಲೂ ನೂರಾರು ಅಂಗಡಿ, ಹೋಟೆಲ್, ಪೂಜಾ ಸಾಮಗ್ರಿಗಳ ಮಳಿಗೆ ತಲೆಎತ್ತಿವೆ. ಜಾತ್ರೆಗೆ ಬಂದವರು ಆಟಿಕೆಗಳನ್ನು ಬಳಸಿ ಸಂತಸಪಟ್ಟರು. ಕಾಲೇಜು ವಿದ್ಯಾರ್ಥಿಗಳು ದೊಡ್ಡ ಸಂಖ್ಯೆಯಲ್ಲಿ ಕಂಡು ಬಂದರು. ಭಕ್ತಿ-ಭಾವದ ಸಮ್ಮಿಳಿತದ ಪರಿಸರದಲ್ಲಿ ಖುಷಿಯ ಗಳಿಗೆಗೆ ಸಾಕ್ಷಿಯಾದರು.

ಹರಕೆ ತೀರಿಸಿದರು: ಜಾತ್ರೆ ಹಿನ್ನೆಲೆಯಲ್ಲಿ ಬಾಲಸುಬ್ರಹ್ಮಣ್ಯ ಸ್ವಾಮಿಗೆ ವಿಶೇಷ ಅಲಂಕಾರ ಮಾಡಲಾಗಿತ್ತು. ಸಾಲಿನಲ್ಲಿ ಬಂದ ಭಕ್ತರು ದೇವರಿಗೆ ನಮಿಸಿದರು. ಬಾಲಸುಬ್ರಹ್ಮಣ್ಯ ಸ್ವಾಮಿಯ ಹರಕೆ ಕಾರಣ ಕೆಲವು ಭಕ್ತರು ಕೆನ್ನೆಗೆ ತ್ರಿಶೂಲ ಸಿಕ್ಕಿಸಿಕೊಂಡು ಸಾಗಿದರು. ಕೆಲವರು ಮೊಳೆಯ ಹಾವುಗೆ (ಚಪ್ಪಲಿ) ಧರಿಸಿ ಬೆಟ್ಟ ಏರುವುದು, ಕಾವಡಿ ಹೊತ್ತು ಸಾಗುವುದು, ಮುಡಿ ಕೊಡುವುದು ಕಾಣಸಿಕ್ಕಿತು. ದೊಡ್ಡವರು ಮಾಡಿದ್ದ ಹರಕೆ ಪುಟ್ಟ ಮಕ್ಕಳು ತೀರಿಸಿದರು.

ಬ್ಯಾನರ್ ಭರಾಟೆ: ಜಾತ್ರೆಯ ಪರಿಸರದಲ್ಲಿ ಬ್ಯಾನರ್, ಬಂಟಿಂಗ್ಸ್ ಭರಾಟೆ ಗಮನ ಸೆಳೆಯಿತು. ಎಲ್ಲ ಪಕ್ಷಗಳ ಮುಖಂಡರು, ಸಂಘ-ಸಂಸ್ಥೆಯವರು, ಚಿತ್ರನಟರ ಬೆಂಬಲಿಗರು ಜಾತ್ರೆಗೆ ಬರುವವರಿಗೆ ಶುಭಕೋರಿ ಬ್ಯಾನರ್‌ ಅಳವಡಿಸಿದ್ದರು. ಶಿವಮೊಗ್ಗ ನಗರದಿಂದ ಹೊಳೆಹೊನ್ನೂರು ಕಡೆ ಸಾಗುವ ರಸ್ತೆಯಲ್ಲಿ ಗುಡ್ಡೇಕಲ್ಲು ದೇವಸ್ಥಾನ ಇದ್ದು, ರೈಲ್ವೆ ಗೇಟ್ ದಾಟುತ್ತಿದ್ದಂತೆಯೇ ದಾರಿಯುದ್ದಕ್ಕೂ ಬ್ಯಾನರ್‌ ಸ್ವಾಗತಿಸಿದವು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.