ADVERTISEMENT

ಬಾಲಕಿಗೆ ಕಿರುಕುಳ: ಗ್ರಾಮಸ್ಥರಿಂದ ರಕ್ಷಣೆ

​ಪ್ರಜಾವಾಣಿ ವಾರ್ತೆ
Published 23 ಡಿಸೆಂಬರ್ 2019, 19:31 IST
Last Updated 23 ಡಿಸೆಂಬರ್ 2019, 19:31 IST

ತೀರ್ಥಹಳ್ಳಿ: ತಾಲ್ಲೂಕಿನ ಮೇಳಿಗೆ ಸಮೀಪದ ಕೆಳಕೆರೆ ಗ್ರಾಮದ ತುಂಗಾ ನದಿ ತೀರದಲ್ಲಿ ಸೋಮವಾರ ಖಿನ್ನತೆಗೆ ಒಳಗಾಗಿದ್ದ ಬಾಲಕಿ ಪತ್ತೆಯಾಗಿದ್ದು,ಬಾಲಕಿಯನ್ನು ರಕ್ಷಿಸಿದ ಗ್ರಾಮಸ್ಥರು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಗೆ ಒಪ್ಪಿಸಿದರು.

ಶಿಕಾರಿಪುರ ತಾಲ್ಲೂಕಿನ ಬಾಲಕಿ (12 ವರ್ಷ) ಹಲವು ದಿನಗಳ ಹಿಂದೆ ಸಮೀಪದ ಬುಕ್ಕಾಪುರದಲ್ಲಿ ಶ್ರೀಮಂತರೊಬ್ಬರ ಮನೆಯಲ್ಲಿ ಮನೆಕೆಲಸಕ್ಕೆ ಸೇರಿಕೊಂಡಿದ್ದಳು. ಬಾಲಕಿ ತಾಯಿ ಹಣ ಪಡೆದು ಬಾಲಕಿಯನ್ನು ಮನೆಗೆಲಸಕ್ಕೆ ಸೇರಿಸಿದ್ದಳು ಎಂಬ ಸಂಗತಿ ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿದೆ.

ಮನೆಗೆಲಸಕ್ಕೆ ಇಟ್ಟುಕೊಂಡ ವ್ಯಕ್ತಿ ಬಾಲಕಿಗೆ ಮಾನಸಿಕ ಕಿರುಕುಳ ನೀಡುತ್ತಿದ್ದು, ಪ್ರತಿದಿನ ಬೆದರಿಸಿ ಹೊಡೆಯುತ್ತಿದ್ದ ಎಂದು ಬಾಲಕಿ ಗ್ರಾಮಸ್ಥರ ಬಳಿ ಅಳಲು ತೋಡಿಕೊಂಡಳು. ಬಾಲಕಿಯನ್ನು ಗ್ರಾಮಸ್ಥರುಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಗೆ ಒಪ್ಪಿಸಿದರು.

ADVERTISEMENT

ಶಿಶು ಅಭಿವೃದ್ಧಿ ಇಲಾಖೆ ಅಧಿಕಾರಿ ದಿವಾಕರ್ ಬಾಲಕಿಯನ್ನು ಮಕ್ಕಳ ರಕ್ಷಣಾ ಘಟಕ್ಕೆ ಒಪ್ಪಿಸಲು ಕ್ರಮ ಕೈಗೊಳ್ಳುವುದಾಗಿ ತಿಳಿಸಿದ್ದಾರೆ. ತಾತ್ಕಾಲಿಕವಾಗಿ ಬಾಲಕಿಗೆ ಸರ್ಕಾರಿ ಬಾಲಕಿಯರ ವಸತಿ ನಿಲಯದಲ್ಲಿ ವ್ಯವಸ್ಥೆ ಕಲ್ಪಿಸಲಾಗಿದೆ. ಇಲಾಖೆಯಿಂದ ವಿಚಾರಣೆಗೆ ಮಹಿಳಾ ಸಿಬ್ಬಂದಿಯನ್ನು ನೇಮಕ ಮಾಡಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.