ADVERTISEMENT

ಶಿವಮೊಗ್ಗ: ಭಾರಿ ಮಳೆಯಿಂದ ಬಡಾವಣೆ, ಶಾಲೆ ಜಲಾವೃತ

ಶಿವಮೊಗ್ಗದ ಲಷ್ಕರ್ ಮೊಹಲ್ಲಾದಲ್ಲಿ ಚರಂಡಿಗಳು ಭರ್ತಿಯಾಗಿ ರಸ್ತೆ ಮೇಲೆ ಹರಿದ ನೀರು

​ಪ್ರಜಾವಾಣಿ ವಾರ್ತೆ
Published 16 ನವೆಂಬರ್ 2021, 5:55 IST
Last Updated 16 ನವೆಂಬರ್ 2021, 5:55 IST
ಶಿವಮೊಗ್ಗ ತಾಲ್ಲೂಕಿನ ಗಾಜನೂರು ಗ್ರಾಮದ ತೋಟದಲ್ಲಿ ನೀರು ನಿಂತಿರುವುದು
ಶಿವಮೊಗ್ಗ ತಾಲ್ಲೂಕಿನ ಗಾಜನೂರು ಗ್ರಾಮದ ತೋಟದಲ್ಲಿ ನೀರು ನಿಂತಿರುವುದು   

ಶಿವಮೊಗ್ಗ: ಜಿಲ್ಲೆಯ ವಿವಿಧೆಡೆ ಭಾನುವಾರ ರಾತ್ರಿ ಸುರಿದ ಭಾರಿ ಮಳೆಗೆ ಜನರು ತತ್ತರಿಸಿ ಹೋಗಿದ್ದಾರೆ.

ಗುಡುಗು ಸಹಿತ ಬಿಡುವು ನೀಡದೆ ಸುರಿದ ಮಳೆಗೆ ತಗ್ಗು ಪ್ರದೇಶಗಳಿಗೆ ನೀರು ನುಗ್ಗಿ ಅವಾಂತರ ಸೃಷ್ಟಿಸಿದೆ. ಲಷ್ಕರ್ ಮೊಹಲ್ಲಾದಲ್ಲಿ ಚರಂಡಿಗಳು ಭರ್ತಿಯಾಗಿ, ರಸ್ತೆ
ಮೇಲೆ ನೀರು ಹರಿದಿದೆ. ಅಲ್ಲದೇ ಹಲವು ಮನೆಗಳು, ಮಳಿಗೆಯೊಳಗೆ ನೀರು ನುಗ್ಗಿತ್ತು. ನೀರನ್ನು ಹೊರಗೆ ಹಾಕಲು ಜನರು ಹರಸಾಹಸಪಟ್ಟರು.

ಭಾರಿ ಮಳೆಯಿಂದಾಗಿ ಶಿವಮೊಗ್ಗದಲ್ಲಿ ಜನ ಮತ್ತು ವಾಹನ ಸಂಚಾರ ಕಷ್ಟಕರವಾಗಿತ್ತು. ಭಾರಿ ಮಳೆ ವಾಹನ ಸವಾರರಲ್ಲಿ ಆತಂಕ ಮೂಡಿಸಿದೆ. ಜೀವಭಯದಲ್ಲಿಯೇ ವಾಹನ ಚಲಾಯಿಸುವಂತೆ ಮಾಡಿದೆ. ಸ್ಮಾರ್ಟ್‌ ಸಿಟಿ ಕಾಮಗಾರಿಗಾಗಿ ಅಗೆದಿರುವ ಗುಂಡಿಗಳಲ್ಲಿ ವಾಹನಗಳು ಸಿಲುಕಿಕೊಳ್ಳುತ್ತಿವೆ. ಶಿವಮೊಗ್ಗ ನಗರದ ಪ್ರಮುಖ ರಸ್ತೆಗಳಲ್ಲಿ ಸ್ಮಾರ್ಟ್ ಸಿಟಿ ಕಾಮಗಾರಿ ನಡೆಯುತ್ತಿದೆ. ಪೈಪ್, ಕೇಬಲ್ ಅಳವಡಿಕೆ, ಚರಂಡಿ ಕಾಮಗಾರಿ ಸೇರಿ ವಿವಿಧ ಕೆಲಸಗಳಿಗಾಗಿ ಗುಂಡಿಗಳನ್ನು ಅಗೆದು ಬಿಡಲಾಗಿದೆ. ಕೆಲವು ಕಡೆ ಗುಂಡಿ ಮುಚ್ಚಿದ್ದರೂ ಮಣ್ಣು ಸರಿಯಾಗಿ ಹಾಕಿಲ್ಲ. ಮಳೆ ಸುರಿಯುತ್ತಿದ್ದಂತೆ ವಾಹನ ಸವಾರರಿಗೆ ಈ ಗುಂಡಿಗಳು ದುಃಸ್ವಪ್ನದಂತೆ ಕಾಡಲು ಆರಂಭಿಸಿವೆ.

ADVERTISEMENT

ಸ್ವಾಮಿ ವಿವೇಕಾನಂದ ಬಡಾವಣೆಯಲ್ಲಿ ಕಾಮಗಾರಿ ನಡೆಯುತ್ತಿದೆ. ಇದಕ್ಕಾಗಿ ತೆಗೆದಿದ್ದ ಗುಂಡಿಯಲ್ಲಿ ಕಾರು ಸಿಲುಕಿದೆ. ಅದೃಷ್ಟವಶಾತ್ ಯಾವುದೇ ಸಮಸ್ಯೆಯಾಗಿಲ್ಲ. ನಗರದ ಪ್ರಮುಖ ರಸ್ತೆಗಳಾದ ಕುವೆಂಪು ರಸ್ತೆ, ಜೈಲ್ ರಸ್ತೆ, ಬಾಲರಾಜ ಅರಸ್ ರಸ್ತೆ, ಸವಳಂಗ ರಸ್ತೆ, ಎಎನ್‌ಕೆ ರಸ್ತೆ, ಅಚ್ಯುತರಾವ್ ಲೇಔಟ್, ವೆಂಕಟೇಶ ನಗರ ಸೇರಿ ವಿವಿಧೆಡೆ ಗುಂಡಿ ಅಗೆಯಲಾಗಿದೆ. ಇಲ್ಲೆಲ್ಲ ಸವಾರರು ಆತಂಕದಲ್ಲೇ ವಾಹನ ಚಲಾಯಿಸುವಂತಾಗಿದೆ. ‌

ಭಾರಿ ಮಳೆಗೆ ಹೊಲ, ಗದ್ದೆ, ತೋಟಗಳಿಗೆ ನೀರು ನುಗ್ಗಿದ್ದು, ಕೈಗೆ ಬಂದ ತುತ್ತು ಬಾಯಿಗೆ ಬರದಂತಹ ಪರಿಸ್ಥಿತಿ ಉಲ್ಬಣಿಸಿದೆ.

ಶಾಲೆಗೆ ನುಗ್ಗಿದ ನೀರು: ಶಿವಮೊಗ್ಗದ ಎನ್.ಟಿ. ರಸ್ತೆಯಲ್ಲಿರುವ ನ್ಯೂ ಮಂಡ್ಲಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲಾ ಆವರಣಕ್ಕೆ ಮಳೆ ನೀರು ನುಗ್ಗಿದ್ದು, ಒಂದು ಅಡಿಗೂ
ಹೆಚ್ಚು ನೀರು ನಿಂತಿದೆ. ಸೋಮವಾರ ಶಾಲೆಗೆ ಬಂದಿದ್ದ ಮಕ್ಕಳಿಗೆ ಬಿಸಿಯೂಟ ನೀಡಿ ಮನೆಗೆ ವಾಪಸ್ ಕಳುಹಿಸಲಾಗಿದೆ.

***

ಮೋರಿ ಎತ್ತರದಲ್ಲಿದ್ದು, ಶಾಲೆ ತಗ್ಗಿನಲ್ಲಿರುವುದರಿಂದ ನೀರು ಬಂದು ನಿಲ್ಲುತ್ತದೆ. ಶಾಲೆಯಲ್ಲಿ 176 ವಿದ್ಯಾರ್ಥಿಗಳಿದ್ದು, ನೀರು ನುಗ್ಗಿರುವುದರಿಂದ ಒಂದು ದಿನ ರಜೆ ಘೋಷಿಸಲಾಗಿದೆ.

ನಾಗರಾಜ್‌, ಕ್ಷೇತ್ರ ಶಿಕ್ಷಣಾಧಿಕಾರಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.