ADVERTISEMENT

ಹೊಳೆಹೊನ್ನೂರು: ಇದ್ದೂ ಇಲ್ಲದಂತಾದ ಶುದ್ಧ ನೀರಿನ ಘಟಕ

ಹೊಳೆಹೊನ್ನೂರು ಪಟ್ಟಣ: ಮೇಲ್ದರ್ಜೆಗೇರಿದರೂ ಇಲ್ಲ ಸೌಲಭ್ಯ

ಕುಮಾರ್ ಅಗಸನಹಳ್ಳಿ
Published 20 ಜನವರಿ 2025, 6:40 IST
Last Updated 20 ಜನವರಿ 2025, 6:40 IST
ಹೊಳೆಹೊನ್ನೂರಿನಲ್ಲಿರುವ ಶುದ್ಧ ಕುಡಿಯುವ ನೀರಿನ ಘಟದ ಹತ್ತಿರ ಬಿದ್ದಿರುವ ಕಸದ ರಾಶಿ
ಹೊಳೆಹೊನ್ನೂರಿನಲ್ಲಿರುವ ಶುದ್ಧ ಕುಡಿಯುವ ನೀರಿನ ಘಟದ ಹತ್ತಿರ ಬಿದ್ದಿರುವ ಕಸದ ರಾಶಿ   

ಹೊಳೆಹೊನ್ನೂರು: ಇಲ್ಲಿನ ಪಟ್ಟಣ ಪಂಚಾಯಿತಿಯ ನಿರ್ಲಕ್ಷ್ಯ ಧೋರಣೆಯಿಂದಾಗಿ ಪಟ್ಟಣದಲ್ಲಿರುವ ಒಂದು ಶುದ್ಧ ನೀರಿನ ಘಟಕ ಕೆಟ್ಟು ನಿಂತಿದ್ದು, ಇರುವ ಒಂದೇ ಘಟಕ ಜನರಿಗೆ ಆಸರೆಯಾಗಿದೆ. ಆದರೆ ಅದು ಕೂಡಾ ಹಲವಾರು ಸಮಸ್ಯೆಗಳಿಂದ ಕೂಡಿದ್ದು, ಬಗೆಹರಿಯುವ ಲಕ್ಷಣಗಳು ಕಾಣಿಸುತ್ತಿಲ್ಲ.

ಕೆಟ್ಟಿರುವ ಶುದ್ಧ ನೀರಿನ ಘಟಕವನ್ನು ದುರಸ್ತಿ ಮಾಡುವ ಬಗ್ಗೆ ಸಾರ್ವಜನಿಕರು ಹಲವಾರು ಬಾರಿ ಮನವಿ ಮಾಡಿದರೂ, ಪಟ್ಟಣ ಪಂಚಾಯಿತಿ ಅಧಿಕಾರಿಗಳು ತಮಗೂ ಅದಕ್ಕೂ ಸಂಬಂಧವಿಲ್ಲ ಎನ್ನುವಂತೆ ವರ್ತಿಸುತ್ತಿಸುತ್ತಿದ್ದಾರೆ. ನಾಲ್ಕೈದು ವರ್ಷಗಳ ಹಿಂದೆ ಪಟ್ಟಣ ಪಂಚಾಯಿತಿಯಾಗಿ ಮೇಲ್ದರ್ಜೆಗೇರಿದ ಬಳಿಕ, ಇಲ್ಲಿಯವರೆಗೂ ಪಟ್ಟಣ ಪಂಚಾಯಿತಿ ಚುನಾವಣೆ ನಡೆದಿಲ್ಲ. ಚುನಾಯಿತ ಪ್ರತಿನಿಧಿಗಳಲ್ಲದೆ ಅಧಿಕಾರಿಗಳೇ ದರ್ಬಾರು ನಡೆಸುತ್ತಿದ್ದಾರೆ ಎಂದು ಸ್ಥಳೀಯರು ಆರೋಪಿಸಿದ್ದಾರೆ.

5,000ಕ್ಕೂ ಹೆಚ್ಚು ಜನಸಂಖ್ಯೆ ಇರುವ ಪಟ್ಟಣದಲ್ಲಿ ಕುಡಿಯುವ ನೀರು ಸರಿಯಾಗಿ ಸಿಗುತ್ತಿಲ್ಲ. 3 ಕಿ.ಮೀ. ದೂರದ ಕೂಡ್ಲಿ ಗ್ರಾಮದ ತುಂಗಾ ನದಿಯಿಂದ ಪೈಪ್ ಲೈನ್ ಮುಖಾಂತರ ನೀರನ್ನು ಪಟ್ಟಣಕ್ಕೆ ಸರಬರಾಜು ಮಾಡಲಾಗುತ್ತಿದೆ. ಅದರೆ ಇದು ಕುಡಿಯುವುದಕ್ಕೆ ಯೋಗ್ಯವಲ್ಲ ಎಂಬುದಾಗಿ ಕುಡಿಯುವ ನೀರು ಸರಬರಾಜು ಇಲಾಖೆ ತಿಳಿಸಿದ್ದರೂ ಪಟ್ಟಣ ಪಂಚಾಯಿತಿ ಈ ಬಗ್ಗೆ ಗಮನ ಹರಿಸುತ್ತಿಲ್ಲ ಎಂದು ಜನರು ದೂರಿದ್ದಾರೆ. 

ADVERTISEMENT

ಕಾರ್ಡ್‌ಗಳಿಗೆ ಕರೆನ್ಸಿ ಇಲ್ಲದೇ ಪರದಾಟ: ಇರುವ ಒಂದು ಶುದ್ಧ ನೀರಿನ ಘಟಕವು ನೀರು ಸರಬರಾಜು ಮಾಡುತ್ತಿದೆ. ಪಟ್ಟಣದ ಜನರು ನೀರು ಪಡೆಯಬೇಕಾದರೆ ಬಳಸುವ ಕಾರ್ಡ್‌ಗಳಿಗೆ ಕರೆನ್ಸಿ ಇಲ್ಲದೇ ಪರದಾಡುವಂತ ಸ್ಥಿತಿ ನಿರ್ಮಾಣವಾಗಿದೆ. ಕಳೆದ ಒಂದು ತಿಂಗಳಿಂದಲೂ ಕರೆನ್ಸಿ ಹಾಕದೇ ಇರುವುದರಿಂದ ಸಾರ್ವಜನಿಕರು ಕುಡಿಯುವ ನೀರಿಗಾಗಿ ಪರದಾಡುವಂತಾಗಿದೆ. 

‘ಹೊಸ ಕಾರ್ಡ್‌ ವಿತರಣೆ ವಿಚಾರದಲ್ಲಿ ಪಟ್ಟಣ ಪಂಚಾಯಿತಿ ಹಾರಿಕೆ ಉತ್ತರವನ್ನು ನೀಡುತ್ತಿದೆ. ಗ್ರಾಮ ಪಂಚಾಯಿತಿ ಆಗಿದ್ದಾಗ ಕಾರ್ಡ್ ವಿತರಣೆಗೆ ಟೆಂಡರ್ ಆಗಿದೆ. ಹೀಗಾಗಿ ನಮಗೂ ಅದಕ್ಕೂ ಸಂಬಂಧವಿಲ್ಲ. ಟೆಂಡರ್‌ ಪಡೆದವರು ಅದನ್ನು ನಿರ್ವಹಿಸಬೇಕು ಎಂಬ ಅಧಿಕಾರಿಗಳು ಹೇಳುತ್ತಿದ್ದಾರೆ. ಟೆಂಡರ್ ಪಡೆದವರ ಸುಳಿವೇ ಇಲ್ಲ’ ಎಂಬುದು ಸಾರ್ವಜನಿಕರ ಅಳಲು.

ಸೊಳ್ಳೆಗಳ ಕಾಟ: ಶುದ್ದ ನೀರಿನ ಘಟಕದ ಹತ್ತಿರ ಸ್ವಚ್ಛತೆ ಇಲ್ಲದ ಕಾರಣ ಸೊಳ್ಳೆಗಳ ಕಾಟ ಹೆಚ್ಚಾಗಿದೆ. ಇಲ್ಲಿ ಹಗಲು ಹೊತ್ತಿನಲ್ಲೇ ಸೊಳ್ಳೆ ಕಾಟ ಇದ್ದು, ನೀರು ತರಲು ಹೋದ ಜನರು ಪರಿತಪಿಸುತ್ತಿದ್ದಾರೆ. ಪಕ್ಕದಲ್ಲೇ ಒಣ ಹುಲ್ಲಿನ ರಾಶಿಯಿದ್ದು, ಸುತ್ತಮುತ್ತಲಿನ ಜನರು ಕಸವನ್ನು ತಂದು ಅಲ್ಲಿಯೇ ಹಾಕುತ್ತಿರುವುದರಿಂದ ಸ್ವಚ್ಛತೆ ಇಲ್ಲದಂತಾಗಿದೆ.

ಕಳೆದ ಒಂದು ತಿಂಗಳಿಂದ ಕಾರ್ಡ್‌ಗಳಿಗೆ ಕರೆನ್ಸಿ ಹಾಕಿಲ್ಲ. ಕಾರ್ಡ್‌ ಇಲ್ಲದೇ ನೀರು ತುಂಬಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ. ಹೊಸ ಕಾರ್ಡ್‌ಗಳನ್ನು ಮಾಡುತ್ತಿಲ್ಲ. ಕುಡಿಯುವ ನೀರಿಗಾಗಿ ಪರದಾಡು ಸ್ಥಿತಿಯಿದೆ
ಸುಬ್ಬಲಕ್ಷ್ಮಿ, ಗೃಹಿಣಿ
ನಮಗೂ ಅದಕ್ಕೂ ಸಂಬಂಧವಿಲ್ಲ. ಈ ಬಗ್ಗೆ ಯಾವುದೇ ಮಾಹಿತಿಯಿಲ್ಲ. ಏನು ಬೇಕಾದರೂ ಮಾಡಿಕೊಳ್ಳಿ. ನಮ್ಮನ್ನು ಪ್ರಶ್ನೆ ಮಾಡುವ ಅಧಿಕಾರ ನಿಮಗಿಲ್ಲ. ನಾವೇನಿದ್ದರೂ ನಮಗೆ ಇಷ್ಟ ಬಂದಹಾಗೆ ಕೆಲಸ ಮಾಡುತ್ತೇವೆ
ಅಣ್ಣಪ್ಪ ದ್ವಿತೀಯ ದರ್ಜೆ ಗುಮಾಸ್ತ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.