ADVERTISEMENT

ಹೊಳೆಹೊನ್ನೂರು: ಚುನಾವಣೆ ನಡೆಯದೆ ತ್ರಿಶಂಕು ಸ್ಥಿತಿಯಲ್ಲಿ ಮೂರು ಗ್ರಾಮ ಪಂಚಾಯಿತಿ

ಕುಮಾರ್ ಅಗಸನಹಳ್ಳಿ
Published 3 ಮಾರ್ಚ್ 2026, 3:04 IST
Last Updated 3 ಮಾರ್ಚ್ 2026, 3:04 IST
ಹೊಳೆಹೊನ್ನೂರು ಸಮೀಪದ ಹನುಮಂತಾಪುರ ಗ್ರಾಮ ಪಂಚಾಯಿತಿ
ಹೊಳೆಹೊನ್ನೂರು ಸಮೀಪದ ಹನುಮಂತಾಪುರ ಗ್ರಾಮ ಪಂಚಾಯಿತಿ   

ಹೊಳೆಹೊನ್ನೂರು: ಈಚೆಗೆ ರಾಜ್ಯದ ವಿವಿಧ ಗ್ರಾಮ ಪಂಚಾಯಿತಿ ಸದಸ್ಯರ ಅಧಿಕಾರವಧಿ ಮುಕ್ತಾಯವಾಗಿದ್ದು, ಶೀಘ್ರ ಚುನಾವಣೆ ನಡೆಸಲೂ ಸಿದ್ಧತೆಗಳು ಜರುಗಿವೆ. ಈ ನಡುವೆ ಕಳೆದ 5 ವರ್ಷಗಳಿಂದ ಚುನಾವಣೆಯೇ ನಡೆಯದ ಹನುಮಂತಾಪುರ ಹಾಗೂ ಸಿದ್ಲೀಪುರ ಗ್ರಾಮ ಪಂಚಾಯಿತಿಗಳಿಗೆ ಈ ಬಾರಿಯಾದರೂ ಚುನಾವಣೆ ನಡೆಯುವುದೇ ಎಂಬ ಪ್ರಶ್ನೆ ಈ ಪಂಚಾಯಿತಿ ವ್ಯಾಪ್ತಿಯ ಗ್ರಾಮಸ್ಥರನ್ನು ಕಾಡುತ್ತಿದೆ.

5 ವರ್ಷಗಳ ಹಿಂದೆ ಹೊಳೆಹೊನ್ನೂರು ಗ್ರಾಮ ಪಂಚಾಯಿತಿಯನ್ನು ಪಟ್ಟಣ ಪಂಚಾಯಿತಿಯನ್ನಾಗಿ ಮೇಲ್ದರ್ಜೆಗೇರಿಸಲಾಗಿತ್ತು. ಆಗ ಹನುಮಂತಾಪುರ ಗ್ರಾಮ ಪಂಚಾಯಿತಿಯಿಂದ ಜಂಬರಘಟ್ಟ ಹಾಗೂ ಸಿದ್ಲೀಪುರದಿಂದ ಡಣಾಯಪುರ ಗ್ರಾಮವನ್ನು ಪಟ್ಟಣ ಪಂಚಾಯಿತಿಗೆ ಸೇರಿಸಲಾಗಿತ್ತು. ಇದರಿಂದ ಈ ಪಂಚಾಯಿತಿಗಳಿಗೆ ಸದಸ್ಯರ ಸಂಖ್ಯೆ ಕಡಿಮೆ ಆಗಲಿದೆ ಎಂದು ಜಿಲ್ಲಾಡಳಿತ ಇವುಗಳಿಗೆ ಚುನಾವಣೆಯನ್ನೇ ನಡೆಸಿಲ್ಲ. 

ಈ ಎರಡು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಜನಸಂಖ್ಯೆ ಕಡಿಮೆಯಾಗಿದ್ದು, ಅನುದಾನ ಕೊರತೆಯಿಂದಾಗಿ ಗ್ರಾಮಗಳ ಅಭಿವೃದ್ಧಿಯೂ ಕುಂಠಿತವಾಗಿದೆ. ಅನುದಾನ ಸದ್ಬಳಕೆಯಾಗುತ್ತಿಲ್ಲ. ಬಂದ ಅನುದಾನ ಬೇಕಾಬಿಟ್ಟಿ ಬಳಕೆಯಾಗುತ್ತಿದ್ದು, ಇದಕ್ಕೆ ಕಡಿವಾಣ ಹಾಕಲು ಗ್ರಾಮಾಡಳಿತದ ಅವಶ್ಯಕತೆ ಇದೆ. ಈ ದೃಷ್ಟಿಯಿಂದ ಚುನಾವಣೆ ನಡೆಸಬೇಕು ಎಂಬುದು ಈ ಭಾಗದ ಗ್ರಾಮಸ್ಥರ ಆಗ್ರಹ.  

ADVERTISEMENT

ರಾಜ್ಯದ ನಾನಾ ಭಾಗಗಳಲ್ಲಿ ಈಗಾಗಲೇ ಸ್ಥಳೀಯ ಸಂಸ್ಥೆಗಳ ಚುನಾವಣಾ ಕಾವು ಶುರುವಾಗಿದೆ. ಅಭ್ಯರ್ಥಿಗಳು ತೆರೆ ಮರೆಯಲ್ಲಿ ಪ್ರಚಾರವನ್ನೂ ಆರಂಭಿಸಿದ್ದಾರೆ. ಆದರೆ ಹನುಮಂತಾಪುರ, ಸಿದ್ಲೀಪುರ ಗ್ರಾಮ ಪಂಚಾಯಿತಿ ಚುನಾವಣೆಗೆ ಸ್ಪರ್ಧಿಸಲು ಬಯಸಿರುವವರು ಕಾದು ನೋಡುವ ನಿರ್ಧಾರಕ್ಕೆ ಬಂದಿದ್ದಾರೆ.

‘ಗ್ರಾಮಾಡಳಿತ ಅಸ್ತಿತ್ವದಲ್ಲಿ ಇರದ ಕಾರಣ ಬಾಕ್ಸ್ ಚರಂಡಿಗಳು ಸ್ವಚ್ಛಗೊಂಡಿಲ್ಲ. ನರೇಗಾ ಯೋಜನೆಯಡಿಯ ಕಾಮಗಾರಿಗಳೂ ಸರಿಯಾಗಿ ನಡೆಯುತ್ತಿಲ್ಲ. ಇದರಲ್ಲಿ ಭ್ರಷ್ಟಾಚಾರದ ವಾಸನೆ ಬರುತ್ತಿದೆ. ಕಾಮಗಾರಿಗಳ ಬಗ್ಗೆ ಅಧಿಕಾರಿಗಳೇ ನಿರ್ಧಾರ ಕೈಗೊಳ್ಳುತ್ತಿದ್ದಾರೆ. ಜನಸಾಮಾನ್ಯರ ಸಮಸ್ಯೆಗಳಿಗೆ ಅವರು ಸರಿಯಾಗಿ ಸ್ಪಂದಿಸುತ್ತಿಲ್ಲ’ ಎಂದು ಗ್ರಾಮದ ನಿವಾಸಿ ಆರ್‌.ಸಿದ್ದೇಶ್ ದೂರಿದರು. 

ತ್ರಿಶಂಕು ಸ್ಥಿತಿಯಲ್ಲಿ ಎಮ್ಮೆಹಟ್ಟಿ ಗ್ರಾ.ಪಂ:

ಸಮೀಪದ ಎಮ್ಮೆಹಟ್ಟಿ ಗ್ರಾಮ ಪಂಚಾಯಿತಿಯನ್ನು ಪಟ್ಟಣ ಪಂಚಾಯಿತಿಗೆ ಸೇರ್ಪಡೆ ಮಾಡದಂತೆ ಗ್ರಾಮಸ್ಥರು ಹೈಕೋರ್ಟ್‌ಗೆ ಮನವಿ ಸಲ್ಲಿಸಿದ್ದರು. ಆದರೆ, ಈಚೆಗೆ ಶಾಸಕಿ ಶಾರದಾ ಪೂರ್ಯಾನಾಯ್ಕ ವಿಧಾನಮಂಡಲದ ಅಧಿವೇಶನದಲ್ಲಿ ಈ ಬಗ್ಗೆ ಪ್ರಸ್ತಾ‍ಪಿಸಿ ಪಟ್ಟಣ ಪಂಚಾಯಿತಿ ವ್ಯಾಪ್ತಿಯಿಂದ ಎಮ್ಮೆಹಟ್ಟಿಯನ್ನು  ಕೈಬಿಡುವಂತೆ ಮನವಿ ಸಲ್ಲಿಸಿದ್ದರು. ಇದಕ್ಕೆ ಸ್ಪಂದಿಸಿರುವ ಪೌರಾಡಳಿತ ಸಚಿವ ರೆಹಮಾನ್ ಖಾನ್, ಪಟ್ಟಣ ಪಂಚಾಯಿತಿಯಿಂದ ಬೇರ್ಪಡಿಸುವುದಾಗಿ ಭರವಸೆ ನೀಡಿದ್ದರು.

ಮುಂಬರುವ ಚುನಾವಣೆ ವೇಳೆಗೆ ಎಮ್ಮೆಹಟ್ಟಿ ಗ್ರಾಮ ಪಂಚಾಯಿತಿಯ ಭವಿಷ್ಯ ನಿರ್ಧಾರವಾಗುವುದೇ? ಇಲ್ಲವೇ ತ್ರಿಶಂಕು ಸ್ಥಿತಿಯಲ್ಲಿ ಇದು ಉಳಿಯುವುದೇ ಎಂಬುದನ್ನು ಕಾದು ನೋಡಬೇಕಿದೆ. 

ಎಮ್ಮೆಹಟ್ಟಿಯನ್ನು ಗ್ರಾ.ಪಂ. ಆಗಿ ಉಳಿಸಲು ಪ್ರಯತ್ನಿಸಲಾಗಿದೆ. ಅಧಿವೇಶನದಲ್ಲೂ ಈ ಬಗ್ಗೆ ಗಮನ ಸೆಳೆದಿದ್ದೆ. ಸಚಿವ ಪ್ರಿಯಾಂಕ್‌ ಖರ್ಗೆ ಅವರಿಗೆ ಕಡತಗಳನ್ನು ಸಲ್ಲಿಸಲಾಗಿದ್ದು ಅನುಮೋದನೆ ದೊರೆತಿದೆ. ರಾಜ್ಯಪಾಲರಿಂದ ಅಂಗೀಕೃತವಾಗಬೇಕಿದೆ
ಶಾರದಾ ಪೂರ್ಯಾನಾಯ್ಕ ಶಿವಮೊಗ್ಗ ಗ್ರಾಮಾಂತರ ಶಾಸಕಿ
5 ವರ್ಷಗಳಿಂದ ಪ.ಪಂ.ನಿಂದ ಯಾವುದೇ ಕೆಲಸವಾಗಿಲ್ಲ. ಸರ್ಕಾರ ಸ್ಥಳೀಯ ಸಂಸ್ಥೆ ಚುನಾವಣೆ ನಡೆಸುವ ಸಿದ್ಧತೆಯಲ್ಲಿದ್ದು ಅಷ್ಟರಲ್ಲಿ ಎಮ್ಮೆಹಟ್ಟಿ ಗ್ರಾ.ಪಂ.ಯನ್ನು ಪ.ಪಂ.ನಿಂದ ಬೇರ್ಪಡಿಸಬೇಕು. ಈ ಕುರಿತು ಅಧಿಕೃತ ಘೋಷಣೆ ಹೊರಡಿಸಬೇಕು
ಮಲ್ಲೇಶ್ ರಾವ್ (ಕಗ್ಗಿ) ಎಮ್ಮೆಹಟ್ಟಿ ಗ್ರಾಮಸ್ಥ
ಜನಪ್ರತಿನಿಧಿಗಳಿಲ್ಲದೇ ಐದು ವರ್ಷಗಳು ಕಳೆದು ಹೋಗಿವೆ. ಚುನಾಯಿತಿ ಸದಸ್ಯರು ಇಲ್ಲವಾದಲ್ಲಿ ಅಧಿಕಾರಿಗಳ ಪಾರುಪತ್ಯ ಹೆಚ್ಚುತ್ತದೆ. ಅನುದಾನದ ಕೊರತೆ ಕಾಣುತ್ತಿದೆ. ಆದ್ದರಿಂದ ಸರ್ಕಾರ ಕೂಡಲೇ ಈ ಬಗ್ಗೆ ಕ್ರಮ ಕೈಗೊಳ್ಳಬೇಕು
ಎಚ್.ಆರ್. ಬಸವರಾಜಪ್ಪ ರೈತ ಸಂಘದ ರಾಜ್ಯ ಘಟಕದ ಅಧ್ಯಕ್ಷ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.