ADVERTISEMENT

ಹೊಳೆಹೊನ್ನೂರು: ಬೈಪಾಸ್‌ ಬಂತು.. ವ್ಯಾಪಾರ ಹೋಯ್ತು..!

ಊರೊಳಗೆ ವಾಹನಗಳ ಓಡಾಟ ಕ್ಷೀಣ.. ಹೆಚ್ಚಿದೆ ವರ್ತಕರ ಗೋಳು

ಕುಮಾರ್ ಅಗಸನಹಳ್ಳಿ
Published 15 ಅಕ್ಟೋಬರ್ 2025, 5:46 IST
Last Updated 15 ಅಕ್ಟೋಬರ್ 2025, 5:46 IST
ಹೊಳೆಹೊನ್ನೂರಿನ ನೃಪತುಂಗ ಸರ್ಕಲ್ ಖಾಲಿ ಖಾಲಿಯಾಗಿರುವುದು
ಹೊಳೆಹೊನ್ನೂರಿನ ನೃಪತುಂಗ ಸರ್ಕಲ್ ಖಾಲಿ ಖಾಲಿಯಾಗಿರುವುದು   

ಹೊಳೆಹೊನ್ನೂರು: ಸಂಚಾರ ದಟ್ಟಣೆ ತಗ್ಗಿಸಲೆಂದು ಪಟ್ಟಣದ ಹೊರ ವಲಯದಲ್ಲಿ ಬೈಪಾಸ್ ನಿರ್ಮಿಸಿ, ಭದ್ರಾ ನದಿಗೆ ಹೊಸ ಸೇತುವೆ ನಿರ್ಮಿಸಿದ ನಂತರ ಊರಿನೊಳಗೆ ವ್ಯಾಪಾರ ವಹಿವಾಟು ಕುಂಠಿತಗೊಂಡು ವರ್ತಕರಿಗೆ ಹಾಗೂ ವ್ಯಾಪಾರ– ವಹಿವಾಟು ನೆಚ್ಚಿಕೊಮಡು ಜೀವನ ಸಾಗಿಸುತ್ತಿದ್ದ ಕೆಲವು ಕಾರ್ಮಿಕರಿಗೆ ತೊಂದರೆಯಾಗಿದೆ.

ಆರು ತಿಂಗಳ ಹಿಂದೆ ಹೊಸ ಸೇತುವೆಯು ಸಂಚಾರಕ್ಕೆ ಮುಕ್ತವಾಗಿದೆ. ಇದರಿಂದ ಪಟ್ಟಣದಲ್ಲಿ ವಾಹನ ಸಂಚಾರ ಕಡಿಮೆಯಾಗಿ ಜನರೇ ಊರೊಳಗೆ ಬಾರದಂತಾಗಿ ನೇರವಾಗಿ ವ್ಯಾಪಾರ, ವಹಿವಾಟಿಗೆ ಹೊಡೆತಬಿದ್ದಿದೆ.

ಶಿವಮೊಗ್ಗ, ಚನ್ನಗಿರಿ, ದಾವಣಗೆರೆ, ಚಿತ್ರದುರ್ಗ, ಬೆಂಗಳೂರು ಕಡೆಗೆ ಓಡಾಡುವ ಸಾವಿರಾರು ವಾಹನಗಳು ಈಗ ಬೈಪಾಸ್ ಮೂಲಕವೇ ಸಂಚರಿಸುತ್ತಿದ್ದು, ಪಟ್ಟಣದ ಒಳಗೆ ಬರುತ್ತಿಲ್ಲ. ಮೊದಲು ಜನ–ವಾಹನ ದಟ್ಟಣೆಯಿಂದ ಪಟ್ಟಣದಲ್ಲಿ ನಿತ್ಯ ಆಗುತ್ತಿದ್ದ ವ್ಯಾಪಾರ– ವಹಿವಾಟು ಈಗ ಕುಸಿದಿದೆ. ಇದು ವರ್ತಕರ ಆರ್ಥಿಕತೆಗೆ ಮಾತ್ರವಲ್ಲ ಪಟ್ಟಣದ ಅಭಿವೃದ್ಧಿಗೂ ಹಿನ್ನಡೆ ಉಂಟುಮಾಡಿದೆ ಎಂಬುದು ವ್ಯಾಪಾರಸ್ಥರ ದೂರು.

ADVERTISEMENT

ಬೇಕರಿ, ದಿನಸಿ ಅಂಗಡಿ, ಹೋಟೆಲ್‌ಗಳು, ಗಿರಣಿ, ಮಸಾಲೆ ಮಂಡಕ್ಕಿ, ಎಗ್ ರೈಸ್, ಗೋಬಿ ಮಂಚೂರಿ, ಪಾನಿಪುರಿ ಅಂಗಡಿಗಳು, ಮೆಡಿಕಲ್ ಸ್ಟೋರ್, ಬಟ್ಟೆ, ಚಹದ ಅಂಗಡಿಗಳು ಸೇರಿದಂತೆ ಹಲವಾರು ವ್ಯಾಪಾರದಾರರಿಗೆ ದೊಡ್ಡ ಹೊಡೆತ ಬಿದ್ದಿದೆ. ವಹಿವಾಟು ಮುಂದಿನ ದಿನಗಳಲ್ಲಿ ಇನ್ನೂ ನಷ್ಟದ ಹಾದಿಯಲ್ಲಿ ಸಾಗಲಿದೆ ಎಂಬುದು ಅವರ ಅಭಿಪ್ರಾಯವಾಗಿದೆ.

ಟ್ರಾಫಿಕ್ ಮುಕ್ತ:

ಬೈಪಾಸ್‌ನಲ್ಲಿ ಸಂಚಾರಕ್ಕೆ ಅನುವು ಮಾಡಿಕೊಟ್ಟ ಹಿನ್ನೆಲೆಯಲ್ಲಿ ಪಟ್ಟಣದಲ್ಲಿ ಸಾಕಷ್ಟು ಟ್ರಾಫಿಕ್ ಕಡಿಮೆಯಾಗಿದೆ. ಇದರಿಂದಾಗಿ ಶಾಲೆ- ಕಾಲೇಜಿಗೆ ಹೋಗುವ ವಿದ್ಯಾರ್ಥಿಗಳಿಗೆ ಅನುಕೂಲವಾಗಿದೆ. ಪಟ್ಟಣದಲ್ಲಿ ಸದಾ ವಾಹನಗಳಿಂದ ತುಂಬಿರುತ್ತಿದ್ದ ರಸ್ತೆಯೂ ಖಾಲಿಯಾಗಿದೆ. ಪಟ್ಟಣ ನಿಶ್ಯಬ್ದ ವಾತಾವರಣದಿಂದ ಕೂಡಿದೆ. ಹಬ್ಬ– ಹರಿದಿನಗಳು ಬಂದರೆ ರಸ್ತೆಯಲ್ಲಿ ವಾಹನ ಚಲಾಯಿಸುವುದರಲ್ಲಿ ಸಾರ್ವಜನಿಕರು ಓಡಾಡುವುದಕ್ಕೂ ಪರದಾಡುವ ಸ್ಥಿತಿ ಇತ್ತು. ಈಗ ವಾಹನಗಳಲ್ಲದೇ ಬಿಕೋ ಅನ್ನುತ್ತಿದೆ.

ಸಂತೆ ಮೈದಾನ ಕೂಡ ಹೊರ ವಲಯದಲ್ಲಿರುವ ಕೃಷಿ ಉತ್ಪನ್ನ ಮಾರುಕಟ್ಟೆಯ ಪ್ರಾಂಗಣಕ್ಕೆ ಸ್ಥಳಾಂತರಗೊಂಡಿದೆ. ಚನ್ನಗಿರಿ ರಸ್ತೆ ಹಾಗೂ ಎಮ್ಮೆಹಟ್ಟಿ, ಅಗಸನಹಳ್ಳಿ, ಹೊಳೆಬೈರನಹಳ್ಳಿ, ದಾಸರಕಲ್ಲಹಳ್ಳಿಯಿಂದ ಬರುತ್ತಿದ್ದ ಗ್ರಾಹಕರು ಬೈಪಾಸ್ ಮುಖಾಂತರ ವ್ಯವಹಾರ ಮಾಡಿಕೊಂಡು ಹೋಗುವುದರಿಂದ ಪಟ್ಟಣದ ಸಂಪರ್ಕವೇ ಇಲ್ಲದಂತಾಗಿದೆ. ಪ್ರತಿಯೊಂದು ಅಗತ್ಯ ವಸ್ತುವಿಗೂ ಪಟ್ಟಣಕ್ಕೆ ಬರುತ್ತಿದ್ದ ಸುತ್ತಮುತ್ತಲಿನ ಗ್ರಾಮಸ್ಥರು ಇದೀಗ ಶಿವಮೊಗ್ಗದತ್ತ ಮುಖ ಮಾಡುತ್ತಿದ್ದಾರೆ.

ಈಗಾಗಲೇ ಬೈಪಾಸ್‌ನಲ್ಲಿ ಕೆಲವೊಂದು ಸಣ್ಣಪುಟ್ಟ ಅಂಗಡಿಗಳು ಆರಂಭವಾಗಿದ್ದು, ಮುಂದಿನ ದಿನಗಳಲ್ಲಿ ವ್ಯಾಪಾರಸ್ಥರು ಆ ಕಡೆ ಮುಖ ಮಾಡಿದರೆ ಪಟ್ಟಣ ಹಾಳು ಕೊಂಪೆಯಾಗುವುದರಲ್ಲಿ ಸಂದೇಹವಿಲ್ಲ.

ವೀರೇಶ್
ಬೈಪಾಸ್ ನಿರ್ಮಾಣವಾಗಿದ್ದರಿಂದ ಹೆಚ್ಚು ವಾಹನಗಳು ಪಟ್ಟಣದಿಂದ ಆಚೆ ಹೋಗುತ್ತಿವೆ. ನಮಗೆ ಅರ್ಧದಷ್ಟು ವ್ಯಾಪಾರವೂ ಆಗುತ್ತಿಲ್ಲ
ವೀರೇಶ್, ವರ್ತಕ
ಬೈಪಾಸ್ ಆಗಿರುವದರಿಂದ ತುಂಬಾ ಅನುಕೂಲವಾಗಿದೆ. ಪಟ್ಟಣದಲ್ಲಿ ಪದೇಪದೇ ಟ್ರಾಫಿಕ್ ಜಾಮ್ ಆಗುತ್ತಿತ್ತು. ಈಗ ಆ ಸಮಸ್ಯೆ ಶಾಶ್ವತವಾಗಿ ದೂರವಾಗಿದೆ
ಸಂಗನಾಥ , ಗ್ರಾಹಕ ಅರಹತೊಳಲು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.