
ಶಿವಮೊಗ್ಗ:ಜಿಲ್ಲೆಯ ತಾಲ್ಲೂಕುಗಳಲ್ಲೊಂದಾದ ಹೊಸನಗರಕ್ಕೆ ಸ್ವತಂತ್ರ ವಿಧಾನಸಭಾ ಕ್ಷೇತ್ರದ ಸ್ಥಾನಮಾನವನ್ನು ಮತ್ತೆ ನೀಡಬೇಕು ಎಂಬ ಬೇಡಿಕೆ ಅಲ್ಲಿನ ಜನರಲ್ಲಿ ದಿನೇದಿನೇ ಹರಳುಗಟ್ಟುತ್ತಿದೆ.
‘ಭೌಗೋಳಿಕವಾಗಿ ದೂರ’ ಎಂಬ ಕಾರಣಕ್ಕೆ ಸಾಗರ, ತೀರ್ಥಹಳ್ಳಿ ವಿಧಾನಸಭಾ ಕ್ಷೇತ್ರಗಳ ಅಭಿವೃದ್ಧಿಯ ಹಾದಿಯಲ್ಲಿ ತಮ್ಮನ್ನು ನಿರ್ಲಕ್ಷಿಸಲಾಗಿದೆ ಎಂಬ ಭಾವನೆಯೂ ತಾಲ್ಲೂಕಿನ ಜನರಲ್ಲಿ ಮನೆಮಾಡಿದೆ. ಹೀಗಾಗಿ ಪ್ರತ್ಯೇಕ ವಿಧಾನಸಭಾ ಕ್ಷೇತ್ರ ರಚನೆಗೆ ಆಗ್ರಹಿಸಿ ಜನಹೋರಾಟದ ಸಿದ್ಧತೆಯೂ ಸದ್ದಿಲ್ಲದೇ ನಡೆಯುತ್ತಿದೆ.
ಹೊಸನಗರ ವಿಧಾನಸಭಾ ಕ್ಷೇತ್ರ 2008ರಲ್ಲಿ ತನ್ನ ಸ್ವತಂತ್ರ ಅಸ್ತಿತ್ವ ಕಳೆದುಕೊಂಡು 2028ಕ್ಕೆ 20 ವರ್ಷ ಆಗುವುದರಿಂದ ಕ್ಷೇತ್ರ ಮರು ವಿಂಗಡಣೆಯಾದಲ್ಲಿ ಮತ್ತೆ ಮನ್ನಣೆ ಸಿಗಬಹುದು ಎಂಬ ಸಣ್ಣ ಆಶಾಭಾವ ಸ್ಥಳೀಯರದ್ದು.
ಮೊದಲಿನಿಂದಲೂ ತೀರ್ಥಹಳ್ಳಿ, ಸಾಗರ ವಿಧಾನಸಭಾ ಕ್ಷೇತ್ರಗಳಲ್ಲಿ ಹರಿದು ಹಂಚಿಹೋಗಿದ್ದ ಹೊಸನಗರ ತಾಲ್ಲೂಕಿಗೆ 1967ರಲ್ಲಿ ಮೊದಲ ಬಾರಿಗೆ ಸ್ವತಂತ್ರ ಕ್ಷೇತ್ರದ ಮನ್ನಣೆ ದೊರಕಿತ್ತು. ಆಗ ಶಿವಮೊಗ್ಗ ನಗರದ ಕೆಲವು ಬಡಾವಣೆ, ಶಿವಮೊಗ್ಗ ತಾಲ್ಲೂಕಿನ ಕುಂಸಿ, ಆಯನೂರು, ಹೊಳಲೂರು, ನಿದಿಗೆ ಭಾಗವೂ ಆ ಕ್ಷೇತ್ರದ ವ್ಯಾಪ್ತಿಗೆ ಸೇರಿದ್ದವು.
2008ರಲ್ಲಿ ಮಾಂಟೆಕ್ ಸಿಂಗ್ ಅಹ್ಲುವಾಲಿಯಾ ನೇತೃತ್ವದ ಕ್ಷೇತ್ರ ಪುನರ್‌ವಿಂಗಡಣಾ ಸಮಿತಿ ಹೊಸನಗರ ಕ್ಷೇತ್ರದ ವಿಧಾನಸಭಾ ಸ್ಥಾನಮಾನ ರದ್ದುಗೊಳಿಸಿತ್ತು. ವಿಧಾನಸಭಾ ಕ್ಷೇತ್ರವೊಂದಕ್ಕೆ ಅಗತ್ಯವಿರುವಷ್ಟು ಜನಸಂಖ್ಯೆ ಆ ತಾಲ್ಲೂಕಿನ ವ್ಯಾಪ್ತಿಯಲ್ಲಿ ಇಲ್ಲ ಎಂಬ ಕಾರಣವನ್ನು ಸಮಿತಿ ಮುಂದಿಟ್ಟಿತ್ತು.
ಹೀಗಾಗಿ, ಹೊಸನಗರ ತಾಲ್ಲೂಕಿನ ಕಸಬಾ ಹಾಗೂ ಕೆರೆಹಳ್ಳಿ ಹೋಬಳಿ ಸಾಗರ ವಿಧಾನಸಭಾ ಕ್ಷೇತ್ರ ಹಾಗೂ ಈ ಮೊದಲೇ ತೀರ್ಥಹಳ್ಳಿ ಕ್ಷೇತ್ರದಲ್ಲಿದ್ದ ನಗರ ಹೋಬಳಿಯ ಜೊತೆಗೆ ಹುಂಚ ಹೋಬಳಿಯನ್ನು ತೀರ್ಥಹಳ್ಳಿ ಕ್ಷೇತ್ರಕ್ಕೆ ಸೇರಿಸಲಾಯಿತು.
‘ಹೊಸನಗರಕ್ಕೆ ಮೂರು ಜಿಲ್ಲಾ ಪಂಚಾಯಿತಿ ಕ್ಷೇತ್ರ, ಪಟ್ಟಣ ಪಂಚಾಯಿತಿ, ತಾಲ್ಲೂಕು ಪಂಚಾಯಿತಿಯ ಬಲ ಇದೆ. ಆದರೆ ವಿಧಾನಸಭಾ ಕ್ಷೇತ್ರ ಇಲ್ಲ. ಈಗ ಹೊಸನಗರ ತಾಲ್ಲೂಕಿಗೆ ಇಬ್ಬರು ಶಾಸಕರು. ಆದರೆ ಯಾರೂ ನಮ್ಮವರಲ್ಲ. ತೀರ್ಥಹಳ್ಳಿ ಕೇಂದ್ರ ಸ್ಥಾನ, ಸಹಜವಾಗಿಯೇ ಶಾಸಕರು ಅಲ್ಲಿಗೆ ಹೆಚ್ಚು ಒತ್ತು ಕೊಡುತ್ತಾರೆ. ಸಾಗರ ಕೇಂದ್ರ ಸ್ಥಾನ ಆಗಿರುವುದರಿಂದ ಶಾಸಕರಿಗೆ ಆ ಭಾಗದ ಮೇಲೆಯೇ ಹೆಚ್ಚು ಪ್ರೀತಿ. ಹೀಗಾಗಿ ನಾವು ಅನಾಥರು’ ಎಂದು ನಗರದ ನಿವಾಸಿ ಗ್ರಾಮ ಪಂಚಾಯ್ತಿ ಮಾಜಿ ಅಧ್ಯಕ್ಷ ಕರುಣಾಕರ ಶೆಟ್ಟಿ ಅಳಲು ತೋಡಿಕೊಳ್ಳುತ್ತಾರೆ.
ಈಶಾನ್ಯದ ಮಾನದಂಡ ಅನ್ವಯಿಸಲಿ:
‘ಈಶಾನ್ಯ ಭಾರತದ ಅಸ್ಸಾಮ್ ಹಾಗೂ ಮಿಜೋರಾಮ್‌ನಲ್ಲಿ ವಿಧಾನಸಭಾ ಕ್ಷೇತ್ರಗಳನ್ನು ಗುರುತಿಸುವಾಗ ಜನಸಂಖ್ಯೆಯನ್ನು ಮಾದರಿ ಆಗಿ ಇಟ್ಟುಕೊಂಡಿಲ್ಲ. ಹೊಸನಗರ ಕೂಡ ದಟ್ಟ ಅರಣ್ಯ ಹಾಗೂ ಐದು ಜಲಾಶಯಗಳಿಂದ ಕೂಡಿದ ತಾಲ್ಲೂಕು. ಹೀಗಾಗಿ ಅದೇ ಮಾನದಂಡಗಳು ಹೊಸನಗರಕ್ಕೂ ಅನ್ವಯಿಸಲಿ’ ಎಂದು ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷ ಕಲಗೋಡು ರತ್ನಾಕರ ಸರ್ಕಾರವನ್ನು ಒತ್ತಾಯಿಸಿದ್ದಾರೆ.
2011ರ ಜನಗಣತಿಯ ವೇಳೆ ಹೊಸನಗರ ತಾಲ್ಲೂಕಿನ ಜನಸಂಖ್ಯೆ 1.18 ಲಕ್ಷ ಇತ್ತು. ಈಗ ಶೇ 15ರಷ್ಟು ಹೆಚ್ಚಳವಾಗಿದ್ದರೂ 1.50 ಲಕ್ಷಕ್ಕೆ ಹೆಚ್ಚಳವಾಗಿರುತ್ತದೆ. ಹೀಗಾಗಿ ಹೊಸನಗರ, ಕಸಬಾ, ನಗರ, ಹುಂಚ ಹಾಗೂ ಕೆರೆಹಳ್ಳಿ ಹೋಬಳಿಗಳನ್ನು ಸೇರಿಸಿ ಪ್ರತ್ಯೇಕ ವಿಧಾನಸಭಾ ಕ್ಷೇತ್ರದ ಮನ್ನಣೆ ಸಿಗಲಿ ಎಂಬುದು ನಮ್ಮ ಆಶಯ ಎನ್ನುತ್ತಾರೆ.
ವಿಧಾನಸಭಾ ಕ್ಷೇತ್ರದ ಮನ್ನಣೆ ಇಲ್ಲದಿರುವುದು ತಾಲ್ಲೂಕಿನ ಒಟ್ಟಾರೆ ಅಭಿವೃದ್ಧಿಗೆ ತೊಂದರೆ ಆಗಿದೆ. ಶರಾವತಿಗೆ ಭೂಮಿ ಕೊಟ್ಟಿದ್ದೇವೆ. ದೇಶದ ಅಭಿವೃದ್ಧಿಯಲ್ಲಿ ನಮ್ಮ ಪಾತ್ರ ದೊಡ್ಡದು. ನಮಗೆ ಮನ್ನಣೆ ಇಲ್ಲದಿದ್ದರೆ ಹೇಗೆ?ಕಲಗೋಡು ರತ್ನಾಕರ ಮಾಜಿ ಅಧ್ಯಕ್ಷ ಜಿಲ್ಲಾ ಪಂಚಾಯಿತಿ
ಹೊಸನಗರ ಸ್ವತಂತ್ರ ವಿಧಾನಸಭಾ ಕ್ಷೇತ್ರಕ್ಕೆ ಒತ್ತಾಯಿಸಿ ಈಗಾಗಲೇ ಮುಖ್ಯ ಚುನಾವಣಾ ಆಯುಕ್ತರಿಗೆ ಮನವಿ ಕೊಟ್ಟಿದ್ದೇವೆ. ಜನಹೋರಾಟಕ್ಕೆ ಮೂಲೆಗದ್ದೆ ಚನ್ನಬಸವ ಸ್ವಾಮೀಜಿ ನೇತೃತ್ವದಲ್ಲಿ ಪಕ್ಷಾತೀತವಾಗಿ ಪಾದಯಾತ್ರೆ ನಡೆಸಲಿದ್ದೇವೆಬಿ.ಸ್ವಾಮಿರಾವ್ ಮಾಜಿ ಶಾಸಕರು
ಭೌಗೋಳಿಕವಾಗಿ ಸಾಗರ–ಹೊಸನಗರ ಕ್ಷೇತ್ರದ ವ್ಯಾಪ್ತಿ 270 ಕಿ.ಮೀ ಆಗುತ್ತದೆ. ಅಭಿವೃದ್ಧಿಗೆ ಅನುದಾನ ಸಾಕಾಗದು. ಸ್ವತಂತ್ರ ಕ್ಷೇತ್ರದ ಹೋರಾಟಕ್ಕೆ ಬೆಂಬಲ ನೀಡಲಿದ್ದೇನೆ. ಕ್ಷೇತ್ರ ಪುನರ್ ವಿಂಗಡಣೆ ಸಂದರ್ಭ ಪರಿಗಣಿಸಿದರೆ ಅಭಿವೃದ್ಧಿ ದೃಷ್ಟಿಯಿಂದ ಒಳ್ಳೆಯದುಬೇಳೂರು ಗೋಪಾಲಕೃಷ್ಣ ಸಾಗರ ಶಾಸಕ
ಹೊಸನಗರದ ಭೌಗೋಳಿಕ ವ್ಯಾಪ್ತಿ ಬಹಳ ದೊಡ್ಡದಿದೆ. ಮುಳುಗಡೆ ಪ್ರದೇಶ ಒಳಗೊಂಡಂತೆ ಸ್ಥಳೀಯವಾಗಿ ಸಂಪರ್ಕ ಸಾಧನಗಳು ಇಲ್ಲ. ವಿಧಾನಸಭಾ ಕ್ಷೇತ್ರ ಚಿಕ್ಕದಾಗಿದ್ದರೆ ಅಭಿವೃದ್ಧಿ ಸಾಧ್ಯ. ಹೀಗಾಗಿ ತಾಲ್ಲೂಕಿನ ಜನರ ಹೋರಾಟಕ್ಕೆ ನನ್ನ ಬೆಂಬಲವೂ ಇದೆಆರಗ ಜ್ಞಾನೇಂದ್ರ ತೀರ್ಥಹಳ್ಳಿ ಶಾಸಕ
ಶರಾವತಿ ಮುಳುಗಡೆ ಸಂತ್ರಸ್ತರ ನೆಲೆ ಹೊಸನಗರ ಕ್ಷೇತ್ರ. ಅಲ್ಲಿನ ಜನರ ಬವಣೆಗಳ ನಿವಾರಣೆಗೆ ಆವೈಜ್ಞಾನಿಕ ನೀತಿಯಿಂದ ಕೈತಪ್ಪಿ ಹೋಗಿರುವ ಕ್ಷೇತ್ರ ಪುನರ್ ರಚನೆ ಮಾಡುವುದು ಅತ್ಯಗತ್ಯರೇಣುಕಾನಂದ ಸ್ವಾಮೀಜಿ ನಾರಾಯಣಗುರು ಆಶ್ರಮ ನಿಟ್ಟೂರು
ಸೈಕಲ್ ಜಾಥಾ ಗ್ರಾ.ಪಂ ನಿರ್ಣಯದ ಬಲ ಹೊಸನಗರ ವಿಧಾನಸಭಾ ಕ್ಷೇತ್ರದ ಕನಸಿನ ಮೊದಲ ಹೆಜ್ಜೆಯಾಗಿ ನಗರದ ಕರುಣಾಕರಶೆಟ್ಟಿ ಸೈಕಲ್ ಜಾಥಾದ ಮೂಲಕ ಜನಜಾಗೃತಿ ಮೂಡಿಸಿದ್ದಾರೆ. 10 ದಿನಗಳ ಕಾಲ ತಾಲ್ಲೂಕಿನ 30 ಗ್ರಾಮ ಪಂಚಾಯಿತಿಗಳಿಗೂ ಸೈಕಲ್‌ನಲ್ಲಿ ತೆರಳಿದ್ದಾರೆ. ಈ ಸಂದರ್ಭದಲ್ಲಿ ವಿಧಾನಸಭಾ ಕ್ಷೇತ್ರದ ಬೇಡಿಕೆ ಒಳಗೊಂಡ ನಿರ್ಣಯದ ಪ್ರತಿಯನ್ನು ಆಯಾ ಗ್ರಾಮ ಪಂಚಾಯಿತಿಯಿಂದ ಪಡೆದುಕೊಂಡಿದ್ದಾರೆ. ಜ. 29ರಂದು ಜಯನಗರ ಗ್ರಾಮ ಪಂಚಾಯಿತಿಯಲ್ಲಿ ಅವರ ಜಾಥಾ ಪೂರ್ಣಗೊಂಡಿದೆ. ‘ತಾಲ್ಲೂಕಿಗೆ ಒಂದು ವಿಧಾನಸಭಾ ಕ್ಷೇತ್ರ ಇದ್ದರೆ ಅಭಿವೃದ್ಧಿ ಸಾಧ್ಯ. ಅರ್ಧ ಸಾಗರ ಅರ್ಧ ತೀರ್ಥಹಳ್ಳಿ ಕ್ಷೇತ್ರಗಳಿಗೆ ಹೊಸನಗರ ತಾಲ್ಲೂಕು ಹಂಚಿಕೆ ಆಗಿರುವುದರಿಂದ ‘ಎತ್ತು ಏರಿಗೆ ಎಳೆದರೆ ಕೋಣ ನೀರಿಗೆ ಎಳೆದಂತೆ’ ಎಂಬಂತಾಗಿದೆ. ಜನರು ಬಡಪಾಯಿ ಆಗುತ್ತಿದ್ದಾರೆ’ ಎಂದು ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷರೂ ಆದ ಕರುಣಾಕರ ಶೆಟ್ಟಿ ಹೇಳುತ್ತಾರೆ.
Cut-off box - ಪಕ್ಷಾತೀತ ಹೋರಾಟ ಪಾದಯಾತ್ರೆಗೆ ಸಿದ್ಧತೆ.. ‘ಹೊಸನಗರ ಸ್ವತಂತ್ರ ವಿಧಾನಸಭಾ ಕ್ಷೇತ್ರಕ್ಕೆ ಆಗ್ರಹಿಸಿ ಪಕ್ಷಾತೀತ ಹೋರಾಟಕ್ಕೆ ವೇದಿಕೆ ಸಜ್ಜುಗೊಂಡಿದೆ. ಮೂಲೆಗದ್ದೆ ಮಠದ ಶ್ರೀಗಳು ರಾಮಚಂದ್ರಾಪುರ ಮಠದ ರಾಘವೇಶ್ವರ ಭಾರತಿ ಶ್ರೀಗಳು ನಿಟ್ಟೂರು ನಾರಾಯಣಗುರು ಆಶ್ರಮದ ರೇಣುಕಾನಂದ ಸ್ವಾಮೀಜಿ ಹುಂಚ ಸಾರಂಗಜೆಡ್ಡು ಸಂಸ್ಥಾನದ ಶ್ರೀಗಳು ಮಾಜಿ ಶಾಸಕ ಸ್ವಾಮಿರಾಯರು ನೇತೃತ್ವ ವಹಿಸಲಿದ್ದಾರೆ. ಹೊಸನಗರದಿಂದ ಶಿವಮೊಗ್ಗದ ಜಿಲ್ಲಾಧಿಕಾರಿ ಕಚೇರಿಗೆ ಪಾದಯಾತ್ರೆಯಲ್ಲಿ ತೆರಳಿ ಗ್ರಾಮ ಪಂಚಾಯಿತಿಗಳ ನಿರ್ಣಯದ ಪ್ರತಿಗಳೊಂದಿಗೆ ಮನವಿ ಸಲ್ಲಿಸಲು ನಿರ್ಧರಿಸಿದ್ದೇವೆ. ಇದೇ ವಾರ ಸಭೆ ನಡೆಸಿ ದಿನಾಂಕ ನಿಗದಿ ಮಾಡಲಿದ್ದೇವೆ’ ಎಂದು ಕಲಗೋಡು ರತ್ನಾಕರ ಹೇಳುತ್ತಾರೆ. ‘ಸ್ವತಂತ್ರ ಕ್ಷೇತ್ರಕ್ಕಾಗಿ ನಡೆಸುತ್ತಿರುವ ನಮ್ಮ ಹೋರಾಟ ಯಾವುದೇ ಜನಪ್ರತಿನಿಧಿಗಳ ವಿರುದ್ಧ ಅಲ್ಲ. ಬದಲಿಗೆ ನಮ್ಮ ಭಾವನೆಗಳ ಅಭಿವ್ಯಕ್ತಿ ಮಾತ್ರ’ ಎನ್ನುತ್ತಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.