ADVERTISEMENT

ಹೊಸನಗರ ಪಿಕಾರ್ಡ್ ಬ್ಯಾಂಕ್‌ನಲ್ಲಿ ಕಳವಿಗೆ ಯತ್ನ: ಬಂಧನ

​ಪ್ರಜಾವಾಣಿ ವಾರ್ತೆ
Published 5 ಫೆಬ್ರುವರಿ 2023, 6:30 IST
Last Updated 5 ಫೆಬ್ರುವರಿ 2023, 6:30 IST
ಕಬಾಬ್ ಗಣೇಶ
ಕಬಾಬ್ ಗಣೇಶ   

ಹೊಸನಗರ: ಇಲ್ಲಿನ ಪಿಕಾರ್ಡ್ ಬ್ಯಾಂಕ್‌ನಲ್ಲಿ ಕಳವು ಮಾಡಲು ಯತ್ನಿಸಿದ್ದ ಆರೋಪಿಯನ್ನು ಹೊಸನಗರ ಪೊಲೀಸರು ಶನಿವಾರ ಬಂಧಿಸಿದ್ದಾರೆ.

ಕಾಳಿಕಪುರದ ಕಬಾಬ್ ಗಣೇಶ್‌ ಬಂಧಿತ ವ್ಯಕ್ತಿ. ಶುಕ್ರವಾರ ರಾತ್ರಿ ಸುಮಾರು 3 ಗಂಟೆ ವೇಳೆಗೆ ಪಟ್ಟಣದ ಮುಖ್ಯ ರಸ್ತೆಯಲ್ಲಿರುವ ಬ್ಯಾಂಕ್‌ನಲ್ಲಿ ಆರೋಪಿ ಕಳವಿಗೆ ಯತ್ನಿಸುತ್ತಿದ್ದನು.

ಬ್ಯಾಂಕ್ ಮುಂಭಾಗದ ಎರಡು ಬಾಗಿಲು ಬೀಗ ಮುರಿದು ಒಳ ನುಗ್ಗಿದ ಆರೋಪಿ, ಅಲ್ಲಿ ಹಣಕ್ಕಾಗಿ ಹುಡುಕಾಡುತ್ತಿರುವಾಗ ಶಬ್ದ ಕೇಳಿ ಅಕ್ಕ ಪಕ್ಕದ ಕಾವಲುಗಾರರು ಪೊಲೀಸರಿಗೆ ಸುದ್ದಿ ಮುಟ್ಟಿಸಿದ್ದಾರೆ. ಪೊಲೀಸರು ಬರುವ ಮುನ್ನವೇ ಆರೋಪಿ ಅಲ್ಲಿಂದ ಓಡಿ ಹೋಗಿದ್ದಾನೆ. ಬ್ಯಾಂಕ್ ಪಿಗ್ಮಿ ಸಂಗ್ರಾಹಕ, ಕಾವಲುಗಾರರ ಸಹಕಾರದಿಂದ ಪೊಲೀಸರು ಹಿಡಿಯಲು ಪ್ರಯತ್ನಿಸಿದರು.

ADVERTISEMENT

ಹೆಲ್ಮೆಟ್‌ ಹಾಕಿಕೊಂಡು ಓಡುತ್ತಿದ್ದ ಆರೋಪಿ ಓಡಿ ಓಡಿ ಸುಸ್ತಾದ್ದರಿಂದ ಹೆಲ್ಮೆಟ್‌ ತೆಗೆದಾಗ, ಆರೋಪಿ ಕಬಾಬ್‌ ಗಣೇಶ್‌ ಎಂದು ಸ್ಥಳೀಯರಿಂದ ಗುರುತು ಪತ್ತೆಯಾಗಿದೆ. ಮರು ದಿನ ಕಬಾಬ್ ಗಣೇಶನ ಮನೆಗೆ ಪೊಲೀಸರು ಭೇಟಿ ನೀಡಿ, ಹೊರಗೆ ಇದ್ದ ಆರೋಪಿಯನ್ನು ಉಪಾಯದಿಂದ ಬಂಧಿಸಿದರು.

ಕಬಾಬ್‌ ಗಣೇಶ್‌ ಪಟ್ಟಣದ ಬೀದಿಯಲ್ಲಿ ಕಬಾಬ್ ಅಂಗಡಿ ನಡೆಸು ತ್ತಿದ್ದ ಎಂದು ಸ್ಥಳೀಯರು ತಿಳಿಸಿದ್ದಾರೆ.

ವಿವಿಧೆಡೆ ಕಳವು ಪ್ರಕರಣ– ಶಂಕೆ: ತಾಲ್ಲೂಕಿನಲ್ಲಿ ಎರಡು ತಿಂಗಳಿಂದ ಹತ್ತಾರು ಕಡೆಗಳಲ್ಲಿ ಕಳವು ಪ್ರಕರಣಗಳು ನಡೆದಿವೆ. ಕಪಿಲ ಫೈನಾನ್ಸ್, ವೀರಶೈವ ಪತ್ತಿನ ಸಹಕಾರ ಸಂಘ (ಎರಡು ಬಾರಿ), ರಕ್ಷಿತಾ ಫೈನಾನ್ಸ್, ನಗರ ನೀಲಕಂಠೇಶ್ವರ ಸೊಸೈಟಿ, ಪುರಪೆಮನೆ ಸೊಸೈಟಿಗಳಲ್ಲಿ ಕಳವು ನಡೆದಿತ್ತು. ಎಲ್ಲ ಕಡೆಗಳಲ್ಲೂ ಒಂದೇ ಮಾದರಿಯಲ್ಲಿ ಕಳವು ಮಾಡಲಾಗಿದೆ. ಈ ಕಳವು ಪ್ರಕರಣಗಳಲ್ಲಿ ಕಬಾಬ್ ಗಣೇಶನೇ ಬಾಗಿ ಆಗಿರಬಹುದು ಎಂಬ ಶಂಕೆ ವ್ಯಕ್ತಪಡಿಸಿ, ಪೊಲೀಸರು ಮುಂದಿನ ತನಿಖೆ ಕೈಗೊಂಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.