
ಶಿವಮೊಗ್ಗ: ದೇಶದ ಮಾಲೀಕರು ರೈತರು. ಅದನ್ನು ಘಂಟಾಘೋಷವಾಗಿ ಹೇಳುವ ಅಧಿಕಾರ ಹಾಗೂ ಧೈರ್ಯ ರೈತ ಸಂಘಕ್ಕೆ ಮಾತ್ರ ಇದೆ ಎಂದು ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆ ಅಧ್ಯಕ್ಷ ಎಚ್.ಆರ್.ಬಸವರಾಜಪ್ಪ ಹೇಳಿದರು.
ನಗರದಲ್ಲಿ ಭಾನುವಾರ ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆ ಸಂಸ್ಥಾಪಕ ಎನ್.ಡಿ.ಸುಂದರೇಶ ಅವರ ನೆನಪಿನ ಸಭೆ ಉದ್ಘಾಟಿಸಿ ಮಾತನಾಡಿದರು.
ಇಂದು ರೈತರ ಪರ ಹೋರಾಟದ ದಿಕ್ಕು ದೆಸೆ ಬದಲಾಗಿದೆ. ಆದರೆ ಬಹಳಷ್ಟು ರೈತ ಸಂಘಗಳು ವಸೂಲಿಗೆ ಇಳಿದಿರುವುದು ಬೇಸರದ ಸಂಗತಿ. ಆದರೂ ಜನ ನಿಜವಾದ ರೈತ ಸಂಘ ಯಾವುದು ಎಂದು ಗುರುತಿಸಿ ಹೋರಾಟಕ್ಕೆ ಸದಾ ಬೆಂಬಲ ನೀಡುತ್ತಿದ್ದಾರೆ ಎಂದರು.
ರೈತರ ಏಳಿಗೆಗೆ ದುಡಿದವರಲ್ಲಿ ಎನ್.ಡಿ.ಸುಂದರೇಶ ಕೊಡುಗೆ ಅಪಾರ. ಸುಂದರೇಶ ಅವರದ್ದು ಮಾತೃಹೃದಯ. ಜೊತೆಗೆ ಅಷ್ಟೇ ನಿಷ್ಠುರವಾದಿಯಾಗಿದ್ದರು. ಅವರ ಗುಣಗಳನ್ನು ರೈತರು ಅಳವಡಿಸಿಕೊಳ್ಳಬೇಕಿದೆ ಎಂದು ಹೇಳಿದ ಬಸವರಾಜಪ್ಪ, ರಾಜ್ಯದಲ್ಲಿ ಸರಿಯಾಗಿ ರಾಜಕಾರಣ ಮಾಡಿದ್ದರೆ ರೈತ ಸಂಘವೇ ಅಧಿಕಾರದ ಚುಕ್ಕಾಣಿ ಹಿಡಿಯಬೇಕಿತ್ತು. ಆದರೆ ಅದು ಸಾಧ್ಯವಾಗಲಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.
ರೈತರ ಪಂಪ್‌ಸೆಟ್‌ಗಳಿಗೆ ಉಚಿತ ವಿದ್ಯುತ್ ಸಂಪರ್ಕ ಕಲ್ಪಿಸಲು ರೈತ ಸಂಘದ ಹೋರಾಟ ಕಾರಣ. ಆದರೆ ಇದೀಗ ಎಸ್.ಬಂಗಾರಪ್ಪ ಹಾಗೂ ಬಿ.ಎಸ್.ಯಡಿಯೂರಪ್ಪ ಕೊಟ್ಟಿದ್ದು ಎಂದು ಹೇಳುತ್ತಿದ್ದಾರೆ ಎಂದರು.
ರಾಜ್ಯ ರೈತ ಸಂಘದ ಗೌರವಾಧ್ಯಕ್ಷ ಕುರುವ ಗಣೇಶ, ಕಾರ್ಯಾಧ್ಯಕ್ಷ ಅಬ್ಬಣಿ ಶಿವಪ್ಪ, ಉಪಾಧ್ಯಕ್ಷರಾದ ಟಿ.ಎಂ.ಚಂದ್ರಪ್ಪ, ಹಿಟ್ಟೂರು ರಾಜು, ಹೊನ್ನೂರು ಮುನಿಯಪ್ಪ, ತರೀಕೆರೆ ಮಹೇಶ್, ಸಂಘಟನಾ ಕಾರ್ಯದರ್ಶಿ ಮಲ್ಲಿಕಾರ್ಜುನ, ನಾಗರಾಜ್, ದುಗ್ಗಪ್ಪಗೌಡ, ಹಸಿರು ಸೇನೆಯ ಸಂಚಾಲಕರಾದ ಸಂತೋಷ್ ನಾಯ್ಕ, ಆನಂದ್, ಮಹಿಳಾ ಘಟಕದ ಸಂಚಾಲಕರಾದ ಭಾಗ್ಯ ರಾಘವೇಂದ್ರ, ಜಿಲ್ಲಾ ಘಟಕದ ಅಧ್ಯಕ್ಷ ಕೆ.ರಾಘವೇಂದ್ರ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಇ.ಬಿ.ಜಗದೀಶ್ ಇದ್ದರು.
ಶಿವಮೊಗ್ಗ : ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ರೈತ ವಿರೋಧಿ ಧೋರಣೆ ಮುಂದುವರಿಸುತ್ತಿರುವುದರಿಂದ ಮುಂದಿನ ದಿನಗಳಲ್ಲಿ ಹೋರಾಟ ಅನಿವಾರ್ಯವಾಗಲಿದೆ ಎಂದು ರಾಜ್ಯ ರೈತ ಸಂಘ ಹಾಗೂ ಹಸಿರುಸೇನೆ ರಾಜ್ಯ ಘಟಕದ ಅಧ್ಯಕ್ಷ ಕೋಡಿಹಳ್ಳಿ ಚಂದ್ರಶೇಖರ್ ಹೇಳಿದರು.
ಸಂಘಟನೆಯ ಜಿಲ್ಲಾ ಘಟಕದಿಂದ ಭಾನುವಾರ ಕರ್ನಾಟಕ ಸಂಘದಲ್ಲಿ ಆಯೋಜಿಸಿದ್ದ ಎನ್.ಡಿ.ಸುಂದರೇಶ್ ನೆನಪಿನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು ಬೆಳೆಗಳಿಗೆ ವೈಜ್ಞಾನಿಕ ಬೆಲೆ ನಿಗದಿ ಮಾಡುವಂತೆ ಒತ್ತಾಯಿಸುತ್ತಾ ಬಂದಿದ್ದರೂ ಸರ್ಕಾರ ಅದನ್ನು ಗಂಭೀರವಾಗಿ ಪರಿಗಣಿಸಿಲ್ಲ. ಬೆಳೆ ಕಟಾವು ಮಾಡಿ ರೈತ ಮಾರಾಟ ಮಾಡಬೇಕಾದ ಸಂದರ್ಭದಲ್ಲಿಯೇ ಬೆಲೆ ಕುಸಿತವಾಗುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಸಂಘಟನೆಯ ರಾಜ್ಯ ಗೌರವಾಧ್ಯಕ್ಷ ಮಂಜುನಾಥಗೌಡ ಮಾತನಾಡಿ ಎನ್.ಡಿ. ಸುಂದರೇಶ್ ಅವರ ಹೋರಾಟದ ಹಾದಿಯನ್ನು ಸ್ಮರಿಸಿಕೊಳ್ಳಬೇಕಿದೆ. ರೈತ ಮುಖಂಡರಾದ ನಂಜುಂಡಸ್ವಾಮಿ ಎನ್.ಡಿ. ಸುಂದರೇಶ್ ಹಾಕಿಕೊಟ್ಟ ಮಾರ್ಗದಲ್ಲಿ ಅವರ ಆ ಲೋಚನೆಗಳಿಗೆ ಪೂರಕವಾಗಿ ಹೋರಾಟ ನಡೆಸಬೇಕಿದೆ ಎಂದರು. ಸಂಘಟನೆ ರಾಜ್ಯ ಉಪಾಧಕ್ಷ ವೀರಣ್ಣ ಮಾತನಾಡಿ ಸೂಜಿಗಲ್ಲಿನಂತೆ ರೈತರನ್ನು ಸೆಳೆಯುವ ವ್ಯಕ್ತಿತ್ವ ಸುಂದರೇಶ್ ಅವರದ್ದಾಗಿತ್ತು. ಅವರ ಹೋರಾಟದ ಫಲವಾಗಿ ಸರ್ಕಾರಗಳು ರೈತರ ಪರವಾದ ಕಾನೂನುಗಳ ರೂಪಿಸಿದ್ದವು ಎಂದು ಸ್ಮರಿಸಿದರು.
ರಾಜ್ಯ ಉಪಾಧ್ಯಕ್ಷ ಉಮೇಶ್ ಪಾಟೀಲ್ ರಾಜ್ಯ ಕಾರ್ಯದರ್ಶಿ ಬಾಬು ಪ್ರಮುಖರಾದ ವೀರಣ್ಣ ಅರುಣ್ ಕುಮಾರ್ ಕಾರ್ಮಿಕ ಮುಖಂಡ ಮಾರುತಿ ಮಹಿಳಾ ಕಾರ್ಯದರ್ಶಿ ಪವಿತ್ರಾ ಹಾಸನ ಜಿಲ್ಲಾ ಘಟಕದ ಅಧ್ಯಕ್ಷ ಮಂಜುನಾಥ್ ಸರ್ವಮಂಗಳಮ್ಮ ಭಕ್ತರಹಳ್ಳಿ ಭೈರೇಗೌಡ ಧನಂಜಯ ಆರಾಧ್ಯ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.