ADVERTISEMENT

ಜಗತ್ತಿನ ಆರೋಗ್ಯ ವೃದ್ಧಿಸಿದ ಭಾರತದ ಯೋಗ: ಸಹಾಯಕ ಪ್ರಾಧ್ಯಾಪಕ ವಿನೋದ್ ಪ್ರಕಾಶ್

ಪದವಿ ಕಾಲೇಜು ಸಹಾಯಕ ಪ್ರಾಧ್ಯಾಪಕ ವಿನೋದ್ ಪ್ರಕಾಶ್ ಬಣ್ಣನೆ

​ಪ್ರಜಾವಾಣಿ ವಾರ್ತೆ
Published 22 ಜೂನ್ 2021, 3:04 IST
Last Updated 22 ಜೂನ್ 2021, 3:04 IST
ಶಿವಮೊಗ್ಗದ ಶಿವಗಂಗಾ ಯೋಗ ಕೇಂದ್ರದಲ್ಲಿ ಸೋಮವಾರ ಹಮ್ಮಿಕೊಂಡಿದ್ದ ಯೋಗ ದಿನಾಚರಣೆಯಲ್ಲಿ ನಡೆದ ಸಾಮೂಹಿಕ ಯೋಗ ಪ್ರದರ್ಶನ ನಡೆಯಿತು. ಜಿಲ್ಲಾ ಉಸ್ತುವಾರಿ ಸಚಿವ ಕೆ.ಎಸ್‌.ಈಶ್ವರಪ್ಪ, ಗೌರಿಗದ್ದೆಯ ವಿನಯ್‌ ಗುರೂಜಿ ಇದ್ದಾರೆ
ಶಿವಮೊಗ್ಗದ ಶಿವಗಂಗಾ ಯೋಗ ಕೇಂದ್ರದಲ್ಲಿ ಸೋಮವಾರ ಹಮ್ಮಿಕೊಂಡಿದ್ದ ಯೋಗ ದಿನಾಚರಣೆಯಲ್ಲಿ ನಡೆದ ಸಾಮೂಹಿಕ ಯೋಗ ಪ್ರದರ್ಶನ ನಡೆಯಿತು. ಜಿಲ್ಲಾ ಉಸ್ತುವಾರಿ ಸಚಿವ ಕೆ.ಎಸ್‌.ಈಶ್ವರಪ್ಪ, ಗೌರಿಗದ್ದೆಯ ವಿನಯ್‌ ಗುರೂಜಿ ಇದ್ದಾರೆ   

ಶಿವಮೊಗ್ಗ: ‘ಜಗತ್ತಿನ ಹಲವಾರು ದೇಶಗಳ ಕೋಟ್ಯಂತರ ಜನರು ಯೋಗವನ್ನು ತಮ್ಮ ದಿನನಿತ್ಯದ ಜೀವನದಲ್ಲಿ ಅಳವಡಿಸಿಕೊಂಡಿದ್ದಾರೆ. ಎಲ್ಲರೂ ಯೋಗವನ್ನು ಅನುಸರಿಸಿದರೆ ಆರೋಗ್ಯ ವೃದ್ಧಿಯಾಗುತ್ತದೆ’ ಎಂದು ಸಾಗರದ ಇಂದಿರಾಗಾಂಧಿ ಮಹಿಳಾ ಪದವಿ ಕಾಲೇಜಿನ ಸಹಾಯಕ ಪ್ರಾಧ್ಯಾಪಕ ವಿನೋದ್ ಪ್ರಕಾಶ್ ಹೇಳಿದರು.

ನಗರದ ನೆಹರೂ ಕ್ರೀಡಾಂಗಣದಲ್ಲಿ ಸೋಮವಾರ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ, ಭಾರತ ಸ್ವಾತಂತ್ರ್ಯೋತ್ಸವ ವರ್ಷಾಚರಣೆ ಸಮಿತಿ, ನೆಹರೂ ಯುವಕೇಂದ್ರದ ಸಹಯೋಗದಲ್ಲಿ ಆಯೋಜಿಸಲಾಗಿದ್ದ ಅಂತರರಾಷ್ಟ್ರೀಯ ಯೋಗ ದಿನಾಚರಣೆ ಮತ್ತು ಭಾರತ ಸ್ವಾತಂತ್ರ್ಯೋತ್ಸವದ ಅಮೃತ ವರ್ಷಾಚರಣೆಯ ಉಪನ್ಯಾಸ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಯೋಗ ಎನ್ನುವ ಅದ್ಭುತ ಜೀವನ ಮಂತ್ರವನ್ನು ಭಾರತ ಪ್ರಪಂಚಕ್ಕೆ ನೀಡಿದೆ. ವಿಶ್ವಸಂಸ್ಥೆಯ ಇತಿಹಾಸದಲ್ಲೇ ಮೊದಲ ಬಾರಿ 170ಕ್ಕೂ ಹೆಚ್ಚಿನ ದೇಶಗಳಿಂದ ಸ್ವೀಕೃತಗೊಂಡು ಅಂತರರಾಷ್ಟ್ರೀಯ ಯೋಗ ದಿನಾಚರಣೆ ಅಧಿಕೃತವಾಗಿ ಘೋಷಣೆಗೊಂಡಿದೆ. ಇದು ಭಾರತದ ಹಿರಿಮೆಗೆ ಸಿಕ್ಕ ಗೌರವ ಎಂದು ಹರ್ಷ ವ್ಯಕ್ತಪಡಿಸಿದರು.

ADVERTISEMENT

ದೇಶದ ಪ್ರತಿಯೊಬ್ಬರಿಗೂ ಸ್ವಾತಂತ್ರ್ಯದ ಅನುಭವ ನೀಡುವುದು ಸ್ವಾತಂತ್ರ್ಯೋತ್ಸವದ ಗುರಿಯಾಗಬೇಕು. ಪ್ರತಿಯೊಬ್ಬರ ಜೀವನದಲ್ಲೂ ಆರ್ಥಿಕ ಸ್ವಾತಂತ್ರ್ಯದ ಅನುಭವ ನೀಡಬೇಕಾಗಿದೆ. ಹಲವು ಸಾಮಾಜಿಕ ವಿಕೃತಿಗಳಿಗೆ ಬಲಿಯಾಗಿ ಸಾಮಾಜಿಕ ಸ್ವಾತಂತ್ರ್ಯದ ಅನುಭವದಿಂದ ವಂಚಿತರಾದವರಿಗೆ ಸಾಮಾಜಿಕ ನ್ಯಾಯ ನೀಡಬೇಕಾಗಿದೆ. ಕೋಟ್ಯಂತರ ಕ್ರಾಂತಿವೀರ ಯುವಕರ ತ್ಯಾಗ– ಬಲಿದಾನದಿಂದ ನಮಗೆ ಸ್ವಾತಂತ್ರ್ಯ ದೊರಕಿದೆ. ಒಂದು ದೇಶ ಸಾಮರ್ಥ್ಯ ಕಳೆದುಕೊಂಡಾಗ ಸ್ವಾತಂತ್ರ್ಯಕ್ಕೆ ಅಪಾಯ ಕಟ್ಟಿಟ್ಟಬುತ್ತಿ ಎಂದು ಎಚ್ಚರಿಸಿದರು.

ಶಿವಮೊಗ್ಗದ ಶಿವಗಂಗಾ ಯೋಗ ಕೇಂದ್ರದ ಯೋಗಾಚಾರ್ಯ ರುದ್ರಾರಾಧ್ಯ ಮತ್ತು ತಂಡ ಯೋಗ ಉಪನ್ಯಾಸ ಮತ್ತು ಪ್ರಾತ್ಯಕ್ಷಿಕೆ ಕಾರ್ಯಕ್ರಮ ನಡೆಸಿಕೊಟ್ಟರು.

ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಸಹಾಯಕ ನಿರ್ದೇಶಕ ಮಂಜುನಾಥ್‌, ಕನ್ನಡ ಮತ್ತು ಸಂಸ್ಕತಿ ಇಲಾಖೆ ಸಹಾಯಕ ನಿರ್ದೇಶಕ ಉಮೇಶ್, ನೆಹರೂ ಯುವಕೇಂದ್ರ ಅಧಿಕಾರಿ ಉಲ್ಲಾಸ್ ಉಪಸ್ಥಿತರಿದ್ದರು.

ಕಣಾದ ಯೋಗ ಮತ್ತು ರಿಸರ್ಚ್ ಫೌಂಡೇಷನ್: ಭಾರತೀಯ ಸಂಸ್ಕೃತಿ ಪ್ರತೀಕವಾದ ಯೋಗಕ್ಕೆ ಅಂತರರಾಷ್ಟ್ರೀಯ ಮನ್ನಣೆ ಇದೆ
ಎಂದು ಸಚಿವ ಕೆ.ಎಸ್.ಈಶ್ವರಪ್ಪ ಹೇಳಿದರು.

ಸರ್ಕಾರಿ ನೌಕರರ ಭವನದಲ್ಲಿ ಬಿಜೆಪಿ ನಗರ ಸಮಿತಿ, ಕಣಾದ ಯೋಗ ಮತ್ತು ರಿಸರ್ಚ್ ಫೌಂಡೇಷನ್‌ ಸಹಯೋಗದಲ್ಲಿ ನಡೆದ ವಿಶ್ವ ಯೋಗ ದಿನಾಚರಣೆಯಲ್ಲಿ ಅವರು ಮಾತನಾಡಿದರು.

‘ಭಾರತೀಯರೆಲ್ಲರೂ ಯೋಗದ ಮಹತ್ವ ಅರಿತು ಯೋಗ ಮಾಡಬೇಕು ಎಂದು ಪ್ರಧಾನಿ ಮೋದಿ ಕರೆ ನೀಡಿದ್ದಾರೆ. ವಿಶ್ವಸಂಸ್ಥೆ ಜೂನ್ 21 ರಂದು ವಿಶ್ವ ಯೋಗ ದಿನವಾಗಿ ಘೋಷಿಸಿದೆ.

ಯೋಗ ಎಲ್ಲರನ್ನೂ ಒಂದುಗೂಡಿಸುತ್ತದೆ. ಜಾತಿ, ಧರ್ಮಗಳ ಮೀರಿ ಇಡೀ ವಿಶ್ವವನ್ನೇ ತಬ್ಬಿಕೊಳ್ಳುತ್ತದೆ. ಯೋಗವನ್ನು ಪ್ರಪಂಚದ ಎಲ್ಲ ರಾಷ್ಟ್ರಗಳು ಒಪ್ಪಿವೆ. ವೈಯಕ್ತಿಕ ಆರೋಗ್ಯದ ಜತೆಗೆ ಸಾಮಾಜಿಕ ಸ್ವಾಸ್ಥ್ಯ ಕಾಪಾಡುವ ಶಕ್ತಿ ಯೋಗಕ್ಕಿದೆ. ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಸಹ ಯೋಗಕ್ಕೆ ವಿಶೇಷ ಒತ್ತು ನೀಡುತ್ತಿವೆ’ ಎಂದರು.

ಬಿಜೆಪಿ ಮುಖಂಡ ಗಿರೀಶ್ ಪಟೇಲ್‌, ‘ಯೋಗ ಮತ್ತು ಆಯುರ್ವೇದ ಇಡೀ ವಿಶ್ವದಲ್ಲಿ ಭಾರತವನ್ನು ಗುರು ಎಂದು ಬಿಂಬಿಸಿವೆ. ಮನುಕುಲಕ್ಕೆ ಯೋಗದಿಂದ ಲಾಭವಿದೆ. ಇದನ್ನು ಪ್ರಪಂಚದ ಎಲ್ಲ ದೇಶಗಳು ಮನಗಂಡಿವೆ. 126 ದೇಶಗಳಲ್ಲಿ ಯೋಗ ದಿನ ಅಚರಿಸಲಾಗುತ್ತಿದೆ. ಬಹುತೇಕ ಮುಸ್ಲಿಂ ಮತ್ತು ಕ್ರಿಶ್ಚಿಯನ್ ದೇಶಗಳು ಭಾರತದ ಯೋಗ ಮತ್ತು ಆಯುರ್ವೇದವನ್ನು ಸ್ವೀಕಾರ ಮಾಡಿದ್ದು, ಯೋಗಕ್ಕೆ ಒಂದು ಯೋಗ ಬಂದಿದೆ. ಭಾರತದ ಯೋಗ ಶಿಕ್ಷಕರಿಗೆ ವಿಶೇಷವಾದ ಬೇಡಿಕೆ ಬಂದಿದೆ’ ಎಂದರು.

ಕಣಾದ ಯೋಗ ಮುಖ್ಯಸ್ಥ ಅನಿಲ್ ಕುಮಾರ್ ಶೆಟ್ಟರ್, ಎಸ್.ಎನ್.ಚನ್ನಬಸಪ್ಪ, ಬಿಜೆಪಿ ನಗರಕಾರ್ಯದರ್ಶಿ ಸಂತೋಷ್ ಬಳ್ಳೆಕೆರೆ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.