ADVERTISEMENT

Jog Falls: ಜೋಗದತ್ತ ಪ್ರವಾಸಿಗರ ದಂಡು

​ಪ್ರಜಾವಾಣಿ ವಾರ್ತೆ
Published 21 ಜುಲೈ 2025, 4:06 IST
Last Updated 21 ಜುಲೈ 2025, 4:06 IST
<div class="paragraphs"><p>ಕಾರ್ಗಲ್ ಸಮೀಪದ ಜೋಗ ಜಲಪಾತ ವೀಕ್ಷಣೆಗೆ ಭಾನುವಾರ ಬಂದಿದ್ದ ಪ್ರವಾಸಿಗರ ದಂಡು</p></div>

ಕಾರ್ಗಲ್ ಸಮೀಪದ ಜೋಗ ಜಲಪಾತ ವೀಕ್ಷಣೆಗೆ ಭಾನುವಾರ ಬಂದಿದ್ದ ಪ್ರವಾಸಿಗರ ದಂಡು

   

ಕಾರ್ಗಲ್: ವಿಶ್ವ ವಿಖ್ಯಾತ ಜೋಗ ಜಲಪಾತ ಪ್ರಕೃತಿ ದತ್ತವಾದ ಜಲಸಿರಿಯ ವೈಭವದೊಂದಿಗೆ, ಹಚ್ಚ ಹಸಿರಿನ ಪಶ್ಚಿಮ ಘಟ್ಟಗಳ ಸಾಲಿನಿಂದ ಶರಾವತಿ ಕಣಿವೆಯ ಆಳಕ್ಕೆ ಧುಮ್ಮಿಕ್ಕುತ್ತಿರುವ ರಮ್ಯ ನೋಟದ ವೀಕ್ಷಣೆಗೆ ಸಾವಿರಾರು ಸಂಖ್ಯೆಯಲ್ಲಿ ಪ್ರವಾಸಿಗರು ಭಾನುವಾರ ಇಲ್ಲಿ ಭೇಟಿ ನೀಡಿದರು.

ಕಣಿವೆ ಪ್ರದೇಶದಲ್ಲಿ ನಿರಂತರವಾಗಿ ಸುರಿಯುತ್ತಿರುವ ಮಳೆಯಿಂದಾಗಿ ಬೆಟ್ಟ ಗುಡ್ಡಗಳಿಂದ ಹರಿಯುತ್ತಿರುವ ನೀರು ಶರಾವತಿ ನದಿ ಸೇರಿ ಜೋಗ ಜಲಪಾತದಲ್ಲಿ ಧುಮ್ಮಿಕ್ಕುತ್ತಿದೆ. ಸಿಂಹ ಘರ್ಜನೆಯೊಂದಿಗೆ ಬೃಹತ್ ಬಂಡೆಗಳ ಮೇಲೆ ಬಿದ್ದು ಹರಿಯುತ್ತಿರುವ ರೋರರ್, ಬಾಹ್ಯಾಕಾಶಕ್ಕೆ ನುಗ್ಗುವ ನೌಕೆಯಂತೆ ಕಂಗೊಳಿಸುತ್ತಿರುವ

ADVERTISEMENT

ರಾಕೆಟ್, ಭೋರ್ಭಂಡೆಗಳ ಮೇಲೆ ನುಣುಪಾಗಿ ಜಾರುತ್ತಾ ಶರಾವತಿ ಕಣಿವೆಯಾಳಕ್ಕೆ ಸೇರಿಕೊಳ್ಳುವ ರಾಣಿ ಜಲಪಾತದ ದೃಶ್ಯ ನೋಡುಗರನ್ನು ನಿಬ್ಬೆರಗಾಗಿಸುತ್ತಿದೆ.

ಜೋಗ ಜಲಪಾತದತ್ತ ಪ್ರವಾಸಿಗರು ಸಾಗರೋಪಾದಿಯಲ್ಲಿ ಹರಿದು ಬರುತ್ತಿದ್ದು, ಸಂಚಾರ ದಟ್ಟಣೆ ನಿಯಂತ್ರಿಸಲು ಪೊಲೀಸ್ ಇಲಾಖೆ ಹರಸಾಹಸ ಪಡುತ್ತಿದೆ.

ಜಲಪಾತದ ಪ್ರಮುಖ ವೀಕ್ಷಣಾ ಸ್ಥಳಗಳಾದ ಶಿವಮೊಗ್ಗ ಜಿಲ್ಲೆಯ ಸೀತಾಕಟ್ಟೆ ಸೇತುವೆಯಿಂದ ಕಾರ್ಗಲ್ – ಸಾಗರ ಮಾರ್ಗದ ಶಿರೂರು ಕೆರೆಯವರೆಗೂ ಅಂದಾಜು 3 ಕಿ.ಮೀ. ಉದ್ದ ರಸ್ತೆಯ ಇಕ್ಕೆಲಗಳಲ್ಲಿ ವಾಹನ ನಿಲುಗಡೆ ಮಾಡಲಾಗಿತ್ತು. ನಾಡಿನ ಪ್ರಸಿದ್ಧ ಯಾತ್ರಾ ಸ್ಥಳವಾದ ಸಿಗಂದೂರು, ವಡನ್ ಬೈಲು ಮಾರ್ಗಗಳಿಂದ ಸಾವಿರಾರು ಪ್ರವಾಸಿ ವಾಹನಗಳು ಜೋಗಕ್ಕೆ ಆಗಮಿಸುತ್ತಿದ್ದು, ವಾರಾಂತ್ಯದ ಕಾರಣ ಪ್ರವಾಸಿಗರ ಸಂಖ್ಯೆ ಇಮ್ಮಡಿಗೊಂಡಿದೆ.

ಜೋಗ ನಿರ್ವಹಣಾ ಪ್ರಾಧಿಕಾರದ ₹ 183 ಕೋಟಿ ಮೊತ್ತದ ವಿವಿಧ ಅಭಿವೃದ್ಧಿ ಕಾಮಗಾರಿಗಳು ಭರದಿಂದ ಸಾಗುತ್ತಿರುವುದರಿಂದ ಮೈಸೂರು ಬಂಗಲೆಯ ಮುಂಭಾಗದಿಂದ ಪ್ರವಾಸಿಗರಿಗೆ ಜಲಪಾತ ವೀಕ್ಷಣೆಗೆ ಅವಕಾಶ ಕಲ್ಪಿಸಲಾಗಿದೆ.

ಅಂದಾಜು 5 ಸಾವಿರಕ್ಕೂ ಹೆಚ್ಚು ಪ್ರವಾಸಿ ವಾಹನಗಳು ಜೋಗಕ್ಕೆ ಆಗಮಿಸಿದ್ದು, ₹2 ಲಕ್ಷಕ್ಕೂ ಹೆಚ್ಚಿನ ಪ್ರವೇಶ ಶುಲ್ಕ ಭಾನುವಾರ ಸಂಗ್ರಹವಾಗಿದೆ ಎಂದು ಪ್ರವಾಸೋದ್ಯಮ ಇಲಾಖೆಯ ಮೂಲಗಳು ತಿಳಿಸಿದೆ.

ಜೋಗದ ರಾಣಿ ಫಾಲ್ಸ್ ನೆತ್ತಿಯ ಪ್ರದೇಶದಲ್ಲಿ ನೂತನವಾಗಿ ನಿರ್ಮಾಣವಾಗಿರುವ ಪಾರ್ಕಿಂಗ್ ಜಾಗದಲ್ಲಿ ಏಕ ಕಾಲಕ್ಕೆ 500 ವಾಹನಗಳ ನಿಲುಗಡೆ ವ್ಯವಸ್ಥೆ ಮಾಡಲಾಗಿದೆ. ‘ಆದಷ್ಟು ಬೇಗ ಲೋಕಾರ್ಪಣೆಗೊಂಡರೆ ಸಂಚಾರ ದಟ್ಟಣೆ ನಿಯಂತ್ರಣ ಸಾಧ್ಯವಾಗುತ್ತದೆ. ಈ ನಿಟ್ಟಿನಲ್ಲಿ ಶಾಸಕ ಗೋಪಾಲಕೃಷ್ಣ ಬೇಳೂರು ಗಮನಹರಿಸಬೇಕು’ ಎಂದು ಸ್ಥಳೀಯರು ಮತ್ತು ಪ್ರವಾಸಿಗರು ಅಭಿಪ್ರಾಯ ವ್ಯಕ್ತಪಡಿಸುತ್ತಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.