ADVERTISEMENT

ಭೂಮಿಯ ಹಕ್ಕು ಕೊಟ್ಟರೂ ಚುನಾವಣೆಯಲ್ಲಿ ಸೋಲಬೇಕಾಯಿತು: ಕಾಗೋಡು ತಿಮ್ಮಪ್ಪ ಬೇಸರ

​ಪ್ರಜಾವಾಣಿ ವಾರ್ತೆ
Published 22 ಅಕ್ಟೋಬರ್ 2022, 5:00 IST
Last Updated 22 ಅಕ್ಟೋಬರ್ 2022, 5:00 IST
ಎಐಸಿಸಿ ಅಧ್ಯಕ್ಷರಾಗಿ ಮಲ್ಲಿಕಾರ್ಜುನ ಖರ್ಗೆ ಅವರು ಆಯ್ಕೆಯಾದ ಹಿನ್ನಲೆಯಲ್ಲಿ ಸಾಗರದ ಕಾಂಗ್ರೆಸ್ ಕಚೇರಿಯಲ್ಲಿ ಶುಕ್ರವಾರ ಏರ್ಪಡಿಸಿದ್ದ ಸಂಭ್ರಮಾಚರಣೆ ಕಾರ್ಯಕ್ರಮದಲ್ಲಿ ಮಾಜಿ ಸಚಿವ ಕಾಗೋಡು ತಿಮ್ಮಪ್ಪ, ಮಾಜಿ ಶಾಸಕ ಗೋಪಾಲಕೃಷ್ಣ ಬೇಳೂರು, ಬಿ.ಆರ್.ಜಯಂತ್, ಡಾ.ರಾಜನಂದಿನಿ ಕಾಗೋಡು ಭಾಗವಹಿಸಿದ್ದರು.
ಎಐಸಿಸಿ ಅಧ್ಯಕ್ಷರಾಗಿ ಮಲ್ಲಿಕಾರ್ಜುನ ಖರ್ಗೆ ಅವರು ಆಯ್ಕೆಯಾದ ಹಿನ್ನಲೆಯಲ್ಲಿ ಸಾಗರದ ಕಾಂಗ್ರೆಸ್ ಕಚೇರಿಯಲ್ಲಿ ಶುಕ್ರವಾರ ಏರ್ಪಡಿಸಿದ್ದ ಸಂಭ್ರಮಾಚರಣೆ ಕಾರ್ಯಕ್ರಮದಲ್ಲಿ ಮಾಜಿ ಸಚಿವ ಕಾಗೋಡು ತಿಮ್ಮಪ್ಪ, ಮಾಜಿ ಶಾಸಕ ಗೋಪಾಲಕೃಷ್ಣ ಬೇಳೂರು, ಬಿ.ಆರ್.ಜಯಂತ್, ಡಾ.ರಾಜನಂದಿನಿ ಕಾಗೋಡು ಭಾಗವಹಿಸಿದ್ದರು.   

ಸಾಗರ: ‘ಭೂ ರಹಿತರಿಗೆ ಭೂಮಿಯ ಹಕ್ಕು ಕೊಡಿಸುವಲ್ಲಿ ಹಗಲಿರುಳು ಕೆಲಸ ಮಾಡಿದರೂ ಜನರು ಚುನಾವಣೆಯಲ್ಲಿ ನನ್ನನ್ನು ಸೋಲಿಸಿ ಬೆಂಗಳೂರಿನಲ್ಲಿ ಮದ್ಯದಂಗಡಿ ಇಟ್ಟುಕೊಂಡವರಿಗೆ ಗೆಲ್ಲಿಸಿದ ಬಗ್ಗೆ ಬೇಸರ ಕಾಡುತ್ತಿದೆ’ ಎಂದು ಮಾಜಿ ಸಚಿವ ಕಾಗೋಡು ತಿಮ್ಮಪ್ಪ ಹೇಳಿದರು.

ಎಐಸಿಸಿ ಅಧ್ಯಕ್ಷರಾಗಿ ಮಲ್ಲಿಕಾರ್ಜುನ ಖರ್ಗೆ ಅವರು ಆಯ್ಕೆಯಾದ ನಿಮಿತ್ತ ಸಾಗರದ ಕಾಂಗ್ರೆಸ್ ಕಚೇರಿಯಲ್ಲಿ ಶುಕ್ರವಾರ ಏರ್ಪಡಿಸಿದ್ದ ಸಂಭ್ರಮಾಚರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

‘ಚುನಾವಣೆಯಲ್ಲಿ ಗೆಲ್ಲಲಿ, ಸೋಲಲಿ ಕ್ಷೇತ್ರದ ಅಭಿವೃದ್ಧಿಗೆ ನಿರಂತರವಾಗಿ ಶ್ರಮಿಸಿದ್ದೇನೆ. ದೀರ್ಘಕಾಲ ರಾಜಕೀಯ ಕ್ಷೇತ್ರದಲ್ಲಿದ್ದರೂ ಹಣ ಮಾಡಿಲ್ಲ. ಆದಾಗ್ಯೂ ನನ್ನಂತವನನ್ನು ಕ್ಷೇತ್ರದ ಜನ ಯಾಕೆ ಸೋಲಿಸಿದರು ಎಂಬುದೆ ಅರ್ಥವಾಗಿಲ್ಲ’ ಎಂದರು.

ADVERTISEMENT

ಈಗಿನ ಶಾಸಕರು ಯಾವುದೇ ಬಡವರಿಗೆ ಭೂಮಿಯ ಹಕ್ಕು ಕೊಟ್ಟಿಲ್ಲ. ಗಣಪತಿ ಕೆರೆಯ ನೀರಿನ ಮೇಲಿದ್ದ ಕಸವನ್ನು ಸ್ವಚ್ಛಗೊಳಿಸಿ ಕೆರೆ ಪಕ್ಕದಲ್ಲಿ ಧ್ವಜಸ್ತಂಭ ಮಾಡಿದ್ದೇ ಶಾಸಕರ ದೊಡ್ಡ ಸಾಧನೆಯಾಗಿದೆ ಎಂದು ಹಾಲಪ್ಪ ಅವರನ್ನು
ಟೀಕಿಸಿದರು.

ತಳ ಸಮುದಾಯದ ಹಿನ್ನಲೆಯ, ಹೋರಾಟದ ಮೂಲಕವೇ ರಾಜಕೀಯಕ್ಕೆ ಕಾಲಿಟ್ಟ ಮಲ್ಲಿಕಾರ್ಜುನ ಖರ್ಗೆಯವರಿಗೆ ಜನರ ನೋವುಗಳ ಬಗ್ಗೆ ಅರಿವು ಇದೆ. ಪಕ್ಷವನ್ನು ಸದೃಢವಾಗಿ ಸಂಘಟಿಸುವ ಕಲೆಯೂ ಅವರಿಗೆ ಕರಗತವಾಗಿದೆ. ಖರ್ಗೆ ನೇತೃತ್ವದಲ್ಲಿ ಕಾಂಗ್ರೆಸ್ ಪಕ್ಷ ಮುಂದಿನ ದಿನಗಳಲ್ಲಿ ಕಳೆದುಕೊಂಡಿರುವ ರಾಜಕೀಯ ಅಧಿಕಾರವನ್ನು ಮರಳಿ ಪಡೆಯಲಿದೆ ಎಂಬ ವಿಶ್ವಾಸ
ವ್ಯಕ್ತಪಡಿಸಿದರು.

ಮಾಜಿ ಶಾಸಕ, ಕೆಪಿಸಿಸಿ ವಕ್ತಾರ ಗೋಪಾಲಕೃಷ್ಣ ಬೇಳೂರು, ಕೆಪಿಸಿಸಿ ಕಾರ್ಯದರ್ಶಿ ಡಾ.ರಾಜನಂದಿನಿ ಕಾಗೋಡು, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಬಿ.ಆರ್.ಜಯಂತ್, ಪ್ರಮುಖರಾದ ಕಲಗೋಡು ರತ್ನಾಕರ್, ಐ.ಎನ್.ಸುರೇಶ್ ಬಾಬು, ಮಧು ಮಾಲತಿ, ಜ್ಯೋತಿ ಕೋವಿ, ಗಣಪತಿ ಮಂಡಗಳಲೆ, ಎನ್.ಲಲಿತಮ್ಮ, ಡಿ.ದಿನೇಶ್, ಅನ್ವರ್ ಭಾಷಾ, ಮಹಾಬಲ ಕೌತಿ, ಎಸ್.ಲಿಂಗರಾಜ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.