ADVERTISEMENT

ರಾಜಕಾರಣಿಯ ಯಶಸ್ಸನ್ನು ಹಣ, ಅಧಿಕಾರದಿಂದ ಅಳೆಯದಿರಿ

ಕಾರ್ಮಿಕ ಸಚಿವ ಸಂತೋಷ್ ಲಾಡ್ ಹೇಳಿಕೆ

​ಪ್ರಜಾವಾಣಿ ವಾರ್ತೆ
Published 16 ಮಾರ್ಚ್ 2025, 16:06 IST
Last Updated 16 ಮಾರ್ಚ್ 2025, 16:06 IST
ಸಾಗರ ತಾಲ್ಲೂಕಿನ ಆನಂದಪುರಂನಲ್ಲಿ ಶನಿವಾರ ನಡೆದ ಕಾರ್ಯಕ್ರಮದಲ್ಲಿ ಮಾಜಿ ಸಚಿವ ಕಾಗೋಡು ತಿಮ್ಮಪ್ಪ ಅವರಿಗೆ ನಾಗರಿಕ ಸನ್ಮಾನ ನೀಡಲಾಯಿತು.
ಸಾಗರ ತಾಲ್ಲೂಕಿನ ಆನಂದಪುರಂನಲ್ಲಿ ಶನಿವಾರ ನಡೆದ ಕಾರ್ಯಕ್ರಮದಲ್ಲಿ ಮಾಜಿ ಸಚಿವ ಕಾಗೋಡು ತಿಮ್ಮಪ್ಪ ಅವರಿಗೆ ನಾಗರಿಕ ಸನ್ಮಾನ ನೀಡಲಾಯಿತು.   

ಸಾಗರ: ರಾಜಕಾರಣದಲ್ಲಿ ಕಾಗೋಡು ತಿಮ್ಮಪ್ಪ ಅವರ ಯಶಸ್ಸು ಹಣ, ಅಧಿಕಾರವನ್ನು ಮೀರಿದ್ದಾಗಿದೆ. ರಾಜಕಾರಣಿಗಳ ಯಶಸ್ಸನ್ನು ಕೇವಲ ಹಣ, ಅಧಿಕಾರದ ಮಾನದಂಡದಿಂದ ಅಳೆಯುವ ಪ್ರವೃತ್ತಿ ಸರಿಯಲ್ಲ ಎಂದು ಕಾರ್ಮಿಕ ಸಚಿವ ಸಂತೋಷ್ ಲಾಡ್ ಹೇಳಿದರು.

ತಾಲ್ಲೂಕಿನ ಆನಂದಪುರದ ಮಾರಿಕಾಂಬಾ ದೇವಸ್ಥಾನದ ಆವರಣದಲ್ಲಿ ಗ್ರಾಮಸ್ಥರು ಶನಿವಾರ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ಮಾಜಿ ಸಚಿವ ಕಾಗೋಡು ತಿಮ್ಮಪ್ಪ ಅವರಿಗೆ ನಾಗರಿಕ ಸನ್ಮಾನ ನೀಡಿ ಅವರು ಮಾತನಾಡಿದರು.

ಸಂದಿಗ್ಧ ಕಾಲ ಕೆಲವೊಮ್ಮೆ ಶ್ರೇಷ್ಠ ನಾಯಕರನ್ನು ಹುಟ್ಟು ಹಾಕುತ್ತದೆ. ಚರಿತ್ರೆ ಸೃಷ್ಟಿಸಿದ ಅಂತಹ ಅಪರೂಪದ ನಾಯಕರ ಪೈಕಿ ಕಾಗೋಡು ತಿಮ್ಮಪ್ಪ ಒಬ್ಬರಾಗಿದ್ದಾರೆ. ಕಾಗೋಡರ ಪರಿಶ್ರಮದ ರಾಜಕಾರಣದ ಹಾದಿ ಹಲವರ ಬದುಕನ್ನು ಹಸನಾಗಿಸಿದೆ ಎಂದು ತಿಳಿಸಿದರು.

ADVERTISEMENT

ಬುದ್ಧ, ಬಸವ, ಅಂಬೇಡ್ಕರ್, ಲೋಹಿಯಾ ಅವರ ಸಿದ್ಧಾಂತವನ್ನು ರಾಜಕಾರಣದಲ್ಲಿ ಹೇಗೆ ಮುಂದುವರಿಸಬಹುದು ಎಂಬುದನ್ನು ಕಾಗೋಡು ಅವರು ತಮ್ಮ ಕೆಲಸಗಳ ಮೂಲಕ ತೋರಿಸಿ ಕೊಟ್ಟಿದ್ದಾರೆ. ರಾಜ್ಯದ ಮೂಲೆ ಮೂಲೆಗಳಲ್ಲಿ ಭೂರಹಿತರಿಗೆ ಭೂಮಿಯ ಹಕ್ಕು ದೊರಕಿದ್ದರೆ ಅದಕ್ಕೆ ಕಾಗೋಡು ತಿಮ್ಮಪ್ಪ ಅವರ ದೂರದೃಷ್ಟಿತ್ವ ಕಾರಣವಾಗಿದೆ ಎಂದರು.

ಬಡವರಿಗೆ ಭೂಮಿಯ ಹಕ್ಕು ನೀಡುವ ವಿಷಯದಲ್ಲಿ ಕಾಗೋಡರಿಗೆ ಇರುವ ಕಾಳಜಿ ಪ್ರಶ್ನಾತೀತ. ಅವರು ಕಂದಾಯ ಸಚಿವರಾಗಿದ್ದಾಗ ಭೂ ಹಂಚಿಕೆ ಕುರಿತು ಹೊರಡಿಸಿದ ಸುತ್ತೋಲೆ ಬಡವರ ಪಾಲಿಗೆ ವರದಾನವಾಗಿತ್ತು. ಆದರೆ ಈಗಿನ ಸುತ್ತೋಲೆಗಳು ಭೂ ಹಂಚಿಕೆಗೆ ತಡೆಯೊಡ್ಡುತ್ತಿದ್ದು ಇವುಗಳನ್ನು ಬದಲಿಸದಿದ್ದರೆ ಸರ್ಕಾರಕ್ಕೆ ಅಪಖ್ಯಾತಿ ಬರುತ್ತದೆ ಎಂದು ಶಾಸಕ ಗೋಪಾಲಕೃಷ್ಣ ಬೇಳೂರು ಹೇಳಿದರು.

‘ಬಂಗಾರಪ್ಪ, ಕಾಗೋಡು ತಿಮ್ಮಪ್ಪ ಇಬ್ಬರೂ ನಮ್ಮ ರಾಜ್ಯದ ರಾಜಕಾರಣದ ಎರಡು ಕಣ್ಣುಗಳಿದ್ದಂತೆ. ಕಾಗೋಡು ಮುಖ್ಯಮಂತ್ರಿಯಾಗುವ ಅರ್ಹತೆ ಇದ್ದವರು. ಕಾರಣಾಂತರಗಳಿಂದ ಅವರಿಗೆ ಅವಕಾಶ ತಪ್ಪಿದೆ. ಅವರಿಬ್ಬರ ಹಾದಿಯಲ್ಲಿ ಮುನ್ನಡೆಯುವ ಶಪಥ ಮಾಡುತ್ತೇನೆ’ ಎಂದು ಬೇಳೂರು ತಿಳಿಸಿದರು.

ಕಾಗೋಡು ತಿಮ್ಮಪ್ಪ ಅವರು ವಿಧಾನಸಭೆಯಲ್ಲಿ ಮಾಡಿರುವ ಭಾಷಣಗಳನ್ನು ಕೃತಿ ರೂಪದಲ್ಲಿ ಪ್ರಕಟಿಸಿ ಯುವ ತಲೆಮಾರಿಗೆ ತಲುಪಿಸುವ ಕೆಲಸ ಆಗಬೇಕಿದೆ ಎಂದು ಕೊಪ್ಪದ ವಕೀಲ ಸುಧೀರ್ ಕುಮಾರ್ ಮುರೊಳ್ಳಿ ಅಭಿಪ್ರಾಯಪಟ್ಟರು.

1972ರಲ್ಲಿ ಕಾಗೋಡು ತಿಮ್ಮಪ್ಪ ಅವರು ಶಾಸಕರಾಗಿರದಿದ್ದರೆ ಭೂ ಸುಧಾರಣೆ ಕಾಯ್ದೆ ಜಾರಿಗೆ ಬರುವುದು ಕಷ್ಟವಿತ್ತು. ಅವರ ಸೈದ್ಧಾಂತಿಕ ಬದ್ಧತೆಯ ನಾಯಕತ್ವದಿಂದಾಗಿ ದುರ್ಬಲ ವರ್ಗದವರಿಗೆ ಒಂದಿಷ್ಟಾದರೂ ಶಕ್ತಿ ದೊರಕಿದೆ ಎಂದು ಹಿರಿಯ ಮುಖಂಡ ಬಿ.ಆರ್.ಜಯಂತ್ ಹೇಳಿದರು.

ಕರ್ನಾಟಕ ಜಾನಪದ ಅಕಾಡೆಮಿಯ ನಿಕಟಪೂರ್ವ ಅಧ್ಯಕ್ಷ ಬಿ.ಟಾಕಪ್ಪ ಅಧ್ಯಕ್ಷತೆ ವಹಿಸಿದ್ದರು. ಕೆಪಿಸಿಸಿ ವಕ್ತಾರ ಅನಿಲ್ ಕುಮಾರ್, ಸನ್ಮಾನ ಸಮಿತಿ ಕಾರ್ಯಾಧ್ಯಕ್ಷ ಸೋಮಶೇಖರ್ ಲ್ಯಾವಿಗೆರೆ ಇದ್ದರು.

ಜಗದೀಶ್ ಕನ್ನಮನೆ ರೈತ ಗೀತೆ ಹಾಡಿದರು. ರಾಮು ಸ್ವಾಗತಿಸಿದರು .ಚೇತನ್ ರಾಜ್ ಕಣ್ಣೂರು ಸನ್ಮಾನ ಪತ್ರ ವಾಚಿಸಿದರು. ಉಮೇಶ್ ನಿರೂಪಿಸಿದರು . ಸಾದ್ವಿನಿ ಕೊಪ್ಪ ಮತ್ತು ಸಂಗಡಿಗರಿಂದ ಸಂಗೀತ ಕಾರ್ಯಕ್ರಮ ನಡೆಯಿತು.

ಜಾತಿ ವಿರುದ್ಧ ಮಾತನಾಡುವವರಿಂದಲೇ ಜಾತೀಯತೆ

ಇಂದು ಎಲ್ಲೆಡೆ ಹೇಳುವುದೊಂದು ಮಾಡುವುದೊಂದು ಎಂಬ ಆಷಾಢಭೂತಿತನ ಆವರಿಸಿದೆ. ಜಾತಿ ವಿರುದ್ಧ ಮಾತನಾಡುವವರೇ ಜಾತೀಯತೆ ಪಾಲಿಸುತ್ತಾರೆ. ರಾಜಕಾರಣದಲ್ಲಿ ಕಾಲೆಳೆಯುವ ಅವಕಾಶವಾದಿತನ ನೆಲೆಯೂರಿದೆ. ಎಲ್ಲವನ್ನೂ ಮಾರುಕಟ್ಟೆ ಮನಸ್ಸಿನಿಂದ ಅಳೆಯಲಾಗುತ್ತಿದೆ. ಹೀಗಾಗಿಯೇ ರಾಜಕಾರಣದಲ್ಲಿ ಒಳ್ಳೆಯವರಿಗೆ ನೆಲೆ ಸಾಧ್ಯವಾಗುತ್ತಿಲ್ಲ ಎಂದು ಸಚಿವ ಸಂತೋಷ್ ಲಾಡ್ ವಿಷಾದಿಸಿದರು.

ಬಾಲ್ಯದಲ್ಲಿ ಮಾವ ಕೊಟ್ಟ ಪೆಟ್ಟಿನಿಂದ ಶಕ್ತಿ ಬಂದಿದೆ

ಬಾಲ್ಯದಲ್ಲಿ ಸೋದರ ಮಾವ ಕಾಗೋಡರ ಎದುರು ನಿಲ್ಲುವ ಧೈರ್ಯ ಇರಲಿಲ್ಲ. ಅನೇಕ ಬಾರಿ ಮಾಡಿದ ತಪ್ಪಿಗಾಗಿ ಅವರ ಕೈಯಿಂದ ಏಟು ತಿಂದಿದ್ದೇನೆ. ಹಾಗೆ ತಿಂದ ಏಟುಗಳೇ ಶಾಸಕನಾಗುವ ಶಕ್ತಿ ಕೊಟ್ಟಿತು ಎಂದು ಬೇಳೂರು ತಮ್ಮ ಬಾಲ್ಯದ ದಿನಗಳನ್ನು ನೆನಪಿಸಿಕೊಂಡರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.