ADVERTISEMENT

ಕಾರ್ಗಲ್: ಚೌಡೇಶ್ವರಿ ಜಾತ್ರೋತ್ಸವ ಇಂದಿನಿಂದ

ಶರಾವತಿ ಕಣಿವೆಯ ಶಕ್ತಿ ದೇವತೆ

​ಪ್ರಜಾವಾಣಿ ವಾರ್ತೆ
Published 4 ಮಾರ್ಚ್ 2026, 4:06 IST
Last Updated 4 ಮಾರ್ಚ್ 2026, 4:06 IST
ವಿದ್ಯಾಧೀಶ ತೀರ್ಥ ಶ್ರೀಪಾದ ವಡೇರ ಸ್ವಾಮೀಜಿ
ವಿದ್ಯಾಧೀಶ ತೀರ್ಥ ಶ್ರೀಪಾದ ವಡೇರ ಸ್ವಾಮೀಜಿ   

ಕಾರ್ಗಲ್: ಕಾರ್ಗಲ್ ಹೊರವಲಯದ ನದಿ ತೀರದಲ್ಲಿ ನೆಲೆ ನಿಂತಿರುವ ಶರಾವತಿ ಕಣಿವೆಯ ಶಕ್ತಿ ದೇವತೆ ಮಹಾಲಸಾ ಚೌಡೇಶ್ವರಿ ದೇವಿಯ 28ನೇ ಜಾತ್ರೋತ್ಸವ ಮಾರ್ಚ್‌ 4ರಿಂದ 8ರ ವರೆಗೆ ಅತ್ಯಂತ ವಿಜೃಂಭಣೆಯಿಂದ ನಡೆಸಲು ತೀರ್ಮಾನಿಸಲಾಗಿದೆ ಎಂದು ಧರ್ಮದರ್ಶಿ ವಿನೋದ ಮಹಾಲೆ ತಿಳಿಸಿದರು. 

ಐದು ದಿನಗಳ ಕಾಲ ನಡೆಯಲಿರುವ ಜಾತ್ರೋತ್ಸವಕ್ಕೆ ಅಗತ್ಯ ಸಿದ್ಧತೆಗಳನ್ನು ಪರಿಶೀಲಿಸಿ ಅವರು ಮಾತನಾಡಿದರು.

ಗೌಡಸಾರಸ್ವತ ಬ್ರಾಹ್ಮಣ ಸಮಾಜದ ವಿದ್ಯಾಧೀಶ ತೀರ್ಥ ಶ್ರೀಪಾದ ವಡೇರ ಸ್ವಾಮೀಜಿ ಅವರ ಸಾನ್ನಿಧ್ಯದಲ್ಲಿ ನಡೆಯಲಿರುವ ಜಾತ್ರೋತ್ಸವದಲ್ಲಿ ವಿವಿಧ ಧಾರ್ಮಿಕ, ಸಾಂಸ್ಕೃತಿಕ, ಮಹಾ ಅನ್ನ ಸಂತರ್ಪಣೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.

ADVERTISEMENT

ಜಾತ್ರೋತ್ಸವಕ್ಕೆ ರಾಜ್ಯ ಹಾಗೂ ಹೊರ ರಾಜ್ಯದಿಂದ ಭಕ್ತರು ಪ್ರತಿ ನಿತ್ಯ ಬರಲಿದ್ದು, ಅವರಿಗೆ ಊಟ ಮತ್ತು ವಸತಿ ವ್ಯವಸ್ಥೆಗಳನ್ನು ಸಿದ್ಧಗೊಳಿಸಲಾಗಿದೆ. ದೇಗಲುದಲ್ಲಿ 5 ದಿನಗಳ ಕಾಲ ಯಜ್ಞ ಯಾಗಾದಿಗಳು ಸಹಿತ, 108 ಕುಂಭಾಭಿಷೇಕ, ಸಾಮೂಹಿಕ ಗಣಹೋಮ ಸೇರಿದಂತೆ ವಿವಿಧ ಪೂಜಾ ಕಾರ್ಯಗಳಿಗೆ ಸಿದ್ಧತೆ ನಡೆಸಲಾಗಿದೆ. ಇಲ್ಲಿನ ಪ್ರಧಾನ ದೇವತೆ ಶ್ರೀ ಚೌಡೇಶ್ವರಿ ಮಹಾಲಸಾ ದೇವಿಯ ಆರಾಧನೆಯೊಂದಿಗೆ, ಲಕ್ಷ್ಮೀ, ಸರಸ್ವತಿ, ದುರ್ಗೆಯರ ಪೂಜಾ ಕಾರ್ಯ, ವೀರಾಂಜನೇಯ, ನಾಗದೇವರಿಗೆ ಜಾತ್ರೋತ್ಸವ ಕಾಲದಲ್ಲಿ ಅಭಿಷೇಕಗಳ ನಡೆಸಲಾಗುವುದು ಎಂದು ಅವರು ಮಾಹಿತಿ ನೀಡಿದರು. 

ಧರ್ಮದರ್ಶಿ ಮಂಡಲದ ಮೋಹನ ಎಂ. ಪೈ ಮಾತನಾಡಿ, ಕ್ಷೇತ್ರದ ಪಾರಂಪರಿಕ ಪೂಜಾ ವಿಧಿ ವಿಧಾನಗಳಿಗೆ ಅನುಗುಣವಾಗಿ ಧರ್ಮದರ್ಶಿ ಮತ್ತು ದರುಶನ ಪಾತ್ರಿ ವಿನೋದ ಮಹಾಲೆ ಅವರಿಂದ ಬರುವ ಭಕ್ತರಿಗೆ ಸಿದ್ಧ ಪುರುಷನ ದರುಶನ ಸೇವೆ ನೀಡಲಾಗುವುದು ಎಂದು ತಿಳಿಸಿದರು.

ಕ್ಷೇತ್ರದ ಕಾರ್ಯ ಯೋಜನೆಗಳ ವ್ಯವಸ್ಥಾಪಕ ಮಂಡಳಿ ಮುಖ್ಯಸ್ಥ ಶಿವಾನಂದ ಪ್ರಭು ಮಾತನಾಡಿ, ಮಾರುತಿ ರಂಗಮಂದಿರದಲ್ಲಿ ಪ್ರತಿಭಾ ಪುರಸ್ಕಾರ ಕಾರ್ಯಕ್ರಮ ನಡೆಯಲಿದ್ದು, ಮಾ.4 ರಂದು ಶರಾವತಿ ಕೊಳ್ಳದ ಚಿಣ್ಣರ ಕೃಷ್ಣ ವೇಷ ಪ್ರದರ್ಶನ, ಮಾ. 5 ರಂದು ಮಿಮಿಕ್ರಿ ಗೋಪಿ ಮತ್ತು ತಂಡದವರಿಂದ ಹಾಸ್ಯ ಕಾರ್ಯಕ್ರಮ, ಮಾ. 6 ರಂದು ಪೌರಾಣಿಕ ಯಕ್ಷಗಾ, ಮಾ. 7 ರಂದು ಭರತನಾಟ್ಯ, ಮಾ.8 ರಂದು ಅತಿಥಿ ಕಲಾವಿದರ ನೃತ್ಯ ಕಾರ್ಯಕ್ರಮ ಸಂಘಟಿಸಲಾಗಿದೆ ಎಂದು ಮಾಹಿತಿ ನೀಡಿದರು.

ಚೌಡೇಶ್ವರಿ ಧರ್ಮದರ್ಶಿ ಮಂಡಲದ ಅಜಿತ್ ಮಹಾಲೆ, ಪ್ರವೀಣ್ ಮಹಾಲೆ, ಶ್ರೀರಾಮ ಪ್ರಭು, ಪ್ರಹ್ಲಾದ ಎಂ. ಪೈ, ರತ್ನಾಕರ, ಚಂದ್ರಕುಮಾರ್ ಮುಂತಾದವರು ಉಪಸ್ಥಿತರಿದ್ದರು.

ಮಹಾಲಸಾ ಚೌಡೇಶ್ವರಿ ದೇವಿಯ

ವಿದ್ಯಾಧಿರಾಜ ತೀರ್ಥ ಶ್ರೀಪಾದರ ವಾಸ್ತವ್ಯ..

ಗೋವಾದ ಶ್ರೀ ಸಂಸ್ಥಾನ ಗೋಕರ್ಣ ಪರ್ತಗಾಳಿ ಜೀವೋತ್ತಮ ಮಠಾಧೀಶ ವಿದ್ಯಾಧೀಶ ತೀರ್ಥ ಶ್ರೀಪಾದ ವಡೇರ ಸ್ವಾಮೀಜಿ ಅವರು ಐದು ದಿನಗಳ ಕಾಲ ಚೌಡೇಶ್ವರಿ ಕ್ಷೇತ್ರದಲ್ಲಿ ವಾಸ್ತವ್ಯ ಹೂಡಲಿದ್ದು ಭಕ್ತಾದಿಗಳು ಮತ್ತು ಸಮಾಜ ಬಾಂಧವರಿಗೆ ಖುಷಿ ತಂದಿದೆ.  ಪೂಜ್ಯರು ಕೈಗೊಳ್ಳುವ ಪೂಜಾ ವಿಧಿ ವಿಧಾನಗಳಿಗೆ ಅಗತ್ಯವಾದ ಸಕಲ ರೀತಿಯ ಸೌಕರ್ಯಗಳನ್ನು ದ್ವಾರಕನಾಥ ಕಲಾಮಂದಿರದಲ್ಲಿ ಚೌಡೇಶ್ವರಿ ಪ್ರತಿಷ್ಠಾನದ ವತಿಯಿಂದ ಕೈಗೊಳ್ಳಲಾಗಿದೆ.    

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.