ADVERTISEMENT

ಕಾರ್ಗಲ್: ತಳಕಳಲೆ ಹಿನ್ನೀರಿನಲ್ಲಿ ₹ 10 ಕೋಟಿ ವೆಚ್ಚದಲ್ಲಿ ಜಲಸಾಹಸ ಕೇಂದ್ರ

​ಪ್ರಜಾವಾಣಿ ವಾರ್ತೆ
Published 1 ಮಾರ್ಚ್ 2025, 14:23 IST
Last Updated 1 ಮಾರ್ಚ್ 2025, 14:23 IST
ಕಾರ್ಗಲ್ ಸಮೀಪದಲ್ಲಿರುವ ತಳಕಳಲೆ ಜಲಾಶಯದ ಹಿನ್ನೀರಿನ ಬೋಟಿಂಗ್ ಕೇಂದ್ರದ ಸ್ಥಳ
ಕಾರ್ಗಲ್ ಸಮೀಪದಲ್ಲಿರುವ ತಳಕಳಲೆ ಜಲಾಶಯದ ಹಿನ್ನೀರಿನ ಬೋಟಿಂಗ್ ಕೇಂದ್ರದ ಸ್ಥಳ   

ಕಾರ್ಗಲ್: ಜೋಗಕ್ಕೆ ಬರುವ ಪ್ರವಾಸಿಗರಿಗೆ ಸರ್ವ ಋತು ಪ್ರವಾಸಿ ತಾಣದ ಅನುಭವ ನೀಡುವ ನಿಟ್ಟಿನಲ್ಲಿ ತಳಕಳಲೆ ಹಿನ್ನೀರಿನ ದಡದಲ್ಲಿ ₹ 10 ಕೋಟಿ ವೆಚ್ಚದಲ್ಲಿ ಜಲ ಸಾಹಸ ಕ್ರೀಡೆ ಮತ್ತು ಬೋಟಿಂಗ್ ಕೇಂದ್ರದ ಕಾಮಗಾರಿಗೆ ಚಾಲನೆ ನೀಡಲಾಗಿದೆ ಎಂದು ಶಾಸಕ ಗೋಪಾಲಕೃಷ್ಣ ಬೇಳೂರು ತಿಳಿಸಿದರು.

ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಜೋಗ ಜಲಪಾತ ಪ್ರದೇಶದಲ್ಲಿ ₹ 185 ಕೋಟಿ ವೆಚ್ಚದ ಕಾಮಗಾರಿಗಳು ನಡೆಯುತ್ತಿದ್ದು, ಆ ಕಾಮಗಾರಿಗಳಲ್ಲಿ ತಳಕಳಲೆ ಹಿನ್ನೀರ ಪ್ರದೇಶದ ಬೋಟಿಂಗ್ ಘಟಕವನ್ನು ಸೇರ್ಪಡೆಗೊಳಿಸಲಾಗಿದೆ. ತಳಕಳಲೆ ಜಲಾಶಯ ಶರಾವತಿ ಜಲವಿದ್ಯುದಾಗರಕ್ಕೆ ನೀರು ಪೂರೈಸುವಲ್ಲಿ ವರ್ಷ ಪೂರ್ತಿ ನೀರಿನ ಪ್ರಮಾಣವನ್ನು ಸಮ ಪ್ರಮಾಣದಲ್ಲಿ  ಕಾಯ್ದುಕೊಂಡಿರುತ್ತದೆ. ಹಾಗಾಗಿ ತಳಕಳಲೆ ಹಿನ್ನೀರಿನ ನೀರು ಮತ್ತು ಹಚ್ಚ ಹಸುರಿನಿಂದ ಕಂಗೊಳಿಸುವ ನಿಸರ್ಗ ರಮಣೀಯವಾದ ದ್ವೀಪಗಳನ್ನು ನೋಡುವುದೇ ಒಂದು ಸೊಬಗು’ ಎಂದರು.

‘ಹಿನ್ನೀರಿನ ದಡದಲ್ಲಿ ನಿಂತಿರುವ ನೀರಿನ ಆಳದಲ್ಲಿಯೇ ಆಧುನಿಕ ತಂತ್ರಜ್ಞಾನ ಬಳಸಿ ಬೋಟಿಂಗ್ ಮತ್ತು ಜಲ ಸಾಹಸ ಕ್ರೀಡೆಗೆ ಪೂರಕವಾದ ದಂಡೆಯನ್ನು ನಿರ್ಮಿಸಲಾಗುತ್ತಿದೆ. ಬೋಟಿಂಗ್ ದಂಡೆಯ ಸನಿಹದಲ್ಲಿಯೇ ಅತ್ಯಾಧುನಿಕ ಮಾದರಿಯಲ್ಲಿ ಪ್ರವಾಸಿಗರಿಗೆ ಬೇಸಿಗೆಯ ಬಿಸಿಲಿನಿಂದ ಮತ್ತು ಮಳೆ ನೀರಿನಿಂದ ಯಾವುದೇ ರೀತಿಯ ಅಡಚಣೆಗಳು ಉಂಟಾಗದಂತೆ ವಿಶ್ರಾಂತಿ ಕಟ್ಟಡವನ್ನು ನಿರ್ಮಿಸಲಾಗುತ್ತದೆ. ಈ ವಿಶ್ರಾಂತಿ ಗೃಹಗಳ ಮೇಲ್ಮಹಡಿಗಳಲ್ಲಿ ತಳಕಳಲೆ ಹಿನ್ನೀರಿನ ಪ್ರದೇಶ ಮತ್ತು ಜಂಗಲ್ ಲಾಡ್ಜ್ ಕಾಟೇಜ್‌ಗಳು ಮತ್ತು ನಡಿಗೆ ಕಾರಿಡಾರ್ ವೀಕ್ಷಣೆಗೆ ಗೋಪುರಗಳನ್ನು ನಿರ್ಮಿಸಲಾಗುವುದು. ಕಾಮಗಾರಿಗಳನ್ನು ಕರ್ನಾಟಕ ವಿದ್ಯುತ್ ನಿಗಮದ ನುರಿತ ಎಂಜಿನಿಯರ್‌ಗಳ ತಂಡ ಮೇಲ್ವಿಚಾರಣೆ ನಡೆಸಲಿದೆ’ ಎಂದು ತಿಳಿಸಿದರು.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.