ADVERTISEMENT

ಲೋಕಾಯುಕ್ತ ಸಂಸ್ಥೆ ಕತ್ತು ಹಿಸುಕಿದ್ದು ಯಾರು? ಸಿದ್ದು ವಿರುದ್ಧ ಅಶ್ವತ್ಥನಾರಾಯಣ

​ಪ್ರಜಾವಾಣಿ ವಾರ್ತೆ
Published 26 ಜನವರಿ 2023, 5:40 IST
Last Updated 26 ಜನವರಿ 2023, 5:40 IST
ಶಿವಮೊಗ್ಗದ ಗಾಂಧಿ ಬಜಾರ್‌ನ ಎಲೆರಾಮಣ್ಣ ಬೀದಿಯಲ್ಲಿ ಬುಧವಾರ ಬಿಜೆಪಿಯ ಚಾಯ್‌ ಪೇ ಚರ್ಚಾ ಕಾರ್ಯಕ್ರಮದಲ್ಲಿ ಉನ್ನತ ಶಿಕ್ಷಣ ಸಚಿವ ಡಾ.ಅಶ್ವತ್ಥ ನಾರಾಯಣ್ ಪಾಲ್ಗೊಂಡು ಮಾತನಾಡಿದರು
ಶಿವಮೊಗ್ಗದ ಗಾಂಧಿ ಬಜಾರ್‌ನ ಎಲೆರಾಮಣ್ಣ ಬೀದಿಯಲ್ಲಿ ಬುಧವಾರ ಬಿಜೆಪಿಯ ಚಾಯ್‌ ಪೇ ಚರ್ಚಾ ಕಾರ್ಯಕ್ರಮದಲ್ಲಿ ಉನ್ನತ ಶಿಕ್ಷಣ ಸಚಿವ ಡಾ.ಅಶ್ವತ್ಥ ನಾರಾಯಣ್ ಪಾಲ್ಗೊಂಡು ಮಾತನಾಡಿದರು   

ಶಿವಮೊಗ್ಗ: ‘ಅಧಿಕಾರದಲ್ಲಿದ್ದ ವೇಳೆ ಲೋಕಾಯುಕ್ತರ ಅಧಿಕಾರ ಹಿಂದಕ್ಕೆ ಪಡೆದು ಸಂಸ್ಥೆಯ ಕತ್ತು ಹಿಸುಕಿದ್ದ ಸಿದ್ದರಾಮಯ್ಯ ಅವರಿಗೆ ಈಗ ಭ್ರಷ್ಟಾಚಾರದ ಬಗ್ಗೆ ಮಾತನಾಡುವ ನೈತಿಕತೆ ಇಲ್ಲ’ ಎಂದು ಉನ್ನತ ಶಿಕ್ಷಣ ಸಚಿವ ಡಾ.ಅಶ್ವತ್ಥನಾರಾಯಣ್ ವಾಗ್ದಾಳಿ ನಡೆಸಿದರು.

ಇಲ್ಲಿನ ಗಾಂಧಿ ಬಜಾರ್‌ನ ಬಸವೇಶ್ವರ ದೇವಸ್ಥಾನದಲ್ಲಿ ಬುಧವಾರ ಬಿಜೆಪಿ ನಗರ ಘಟಕದಿಂದ ಆಯೋಜಿಸಿದ್ದ ವಿಜಯ ಸಂಕಲ್ಪ ಅಭಿಯಾನಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.

‘ಲೋಕಾಯುಕ್ತದಲ್ಲಿ ಗೊಂದಲ, ಸಮಸ್ಯೆ ನೆಪದಲ್ಲಿ ಸಂಸ್ಥೆಯ ಅಧಿಕಾರವನ್ನು ಮೊಟಕುಗೊಳಿಸಿ ರಾಜ್ಯದ ಜನರಿಗೆ ಮೋಸ ಮಾಡಿದ್ದ ಪಾಪಪ್ರಜ್ಞೆ ಸಿದ್ದರಾಮಯ್ಯ ಅವರನ್ನು ಕಾಡುತ್ತಿಲ್ಲವೇ’ ಎಂದು ಪ್ರಶ್ನಿಸಿದರು.

ADVERTISEMENT

ದುಬಾರಿ ವಾಚ್ ಯಾರು ಕೊಟ್ಟರು: ಸಿದ್ದರಾಮಯ್ಯ ಮುಖ್ಯಮಂತ್ರಿ ಆಗಿದ್ದಾಗ ಅವರಿಗೆ ದುಬಾರಿ ಬೆಲೆಯ ಹ್ಯೂಬ್ಲೊ ವಾಚ್ ಯಾರು ಕೊಟ್ಟರು. ‘ಅದು ಕಳ್ಳತನದ ಮಾಲಾ, ಪೊಲೀಸರು ತಂದುಕೊಟ್ಟದ್ದಾ?’ ಎಂದು ಆಗ ಕುಮಾರಸ್ವಾಮಿ ಪ್ರಶ್ನಿಸಿದ್ದರು. ಹಾಕಿಕೊಂಡವರಿಗೆ ಅದನ್ನು ಕೊಟ್ಟವರು ಯಾರು ಎಂದು ಹೇಳುವ ಧೈರ್ಯ ಇರಬೇಕಲ್ಲವೇ? ಎಂದರು.

‘ಸರಳ ಸಜ್ಜನ, ಬಡವರ ಬಂಧು ಎಂದು ಹೇಳಿಕೊಳ್ಳುವ ಸಿದ್ದರಾಮಯ್ಯ ದುಬಾರಿ ಬೆಲೆಯ ಇಂಪೋರ್ಟೆಡ್ ಶೂ, ಬಟ್ಟೆ, ಸನ್‌ಗ್ಲಾಸ್‌ ಧರಿಸುತ್ತಾರೆ. ಅವರಿಗೆ 75 ವರ್ಷ ಆಗಿದೆ ರಾಜಕೀಯ ನಿವೃತ್ತಿ ಆಗಬಾರದಾ? 65ನೇ ವಯಸ್ಸಿನಲ್ಲಿಯೇ ನಿವೃತ್ತಿ ಆಗುವುದಾಗಿ ಹೇಳಿದ್ದರು. ಏಕೆ ಆಗಲಿಲ್ಲ. ಅವರ ಪಕ್ಷದಲ್ಲಿ ನಾಯಕರು ಇಲ್ಲವೇ?’ ಎಂದು
ಪ್ರಶ್ನಿಸಿದರು.

‘ರಾಜಕೀಯ ಕ್ಷೇತ್ರ ಖಾಸಗಿ ಕಂಪನಿ ಅಲ್ಲ. ಬದಲಿಗೆ ಜನರ ಸೇವೆ ಮಾಡಲು ಇರುವ ವೇದಿಕೆ ಎಂಬುದನ್ನು ಕಾಂಗ್ರೆಸ್‌ ನಾಯಕರು ಅರ್ಥ ಮಾಡಿಕೊಳ್ಳಬೇಕು’ ಎಂದು ಕಿವಿಮಾತು ಹೇಳಿದರು.

ಸಾಧನೆ ಮನೆ ಮನೆಗೆ ತಿಳಿಸಿ: ಪಕ್ಷ ಹಾಗೂ ಸರ್ಕಾರದ ಸಾಧನೆಗಳನ್ನು ಮನೆ ಮನೆಗೆ ತಲು‍ಪಿಸುವುದು ವಿಜಯ ಸಂಕಲ್ಪ ಅಭಿಯಾನ ಕಾರ್ಯಕ್ರಮದ ಉದ್ದೇಶ ಎಂದು ಡಾ.ಅಶ್ವತ್ಥನಾರಾಯಣ ಹೇಳಿದರು.

‘ಜನರನ್ನು ತಲುಪಲು ಗೋಡೆ ಬರಹ, ಕರಪತ್ರ, ಚರ್ಚಾ ಕಾರ್ಯಕ್ರಮ ಹಮ್ಮಿಕೊಂಡು ಪಕ್ಷದ ಸದಸ್ಯತ್ವ ನೋಂದಣಿಗೆ ಶ್ರಮಿಸಲು ಸಲಹೆ ನೀಡಿದರು. ಎಲ್ಲ ಜಾತಿ, ಧರ್ಮದವರಿಗೂ ಪಕ್ಷದ ವೇದಿಕೆಯಲ್ಲಿ ಪಾಲ್ಗೊಳ್ಳಲು ಅವಕಾಶ ಮಾಡಿಕೊಡಬೇಕು’ ಎಂದರು.

‘ಜನಪರ ಕಾರ್ಯಕ್ರಮಗಳ ಬಗ್ಗೆ ಹೆಚ್ಚು ಹೆಚ್ಚು ತಿಳಿಸಿ. ಆಡಳಿತ ಪಕ್ಷದ ಸಾಧನೆಗಳನ್ನು ಹೇಳುವ ಜೊತೆಗೆ ಪ್ರತಿಪಕ್ಷಗಳು ತಮ್ಮ ಆಡಳಿತದ ಅವಧಿಯಲ್ಲಿ ಭ್ರಷ್ಟಾಚಾರವನ್ನು ಯಾವ ರೀತಿ ಬೆಳೆಸಿದ್ದವು. ಕಾಂಗ್ರೆಸ್ ಪಕ್ಷದ ಕುಟುಂಬ ಆಧಾರಿತ ರಾಜಕೀಯ, ಸಮಾಜ ಒಡೆಯುವ ಕೆಲಸ, ಅಧಿಕಾರ ದುರ್ಬಳಕೆ, ಭ್ರಷ್ಟಾಚಾರದ ಬಗ್ಗೆ ಮಾಹಿತಿ ನೀಡಿ’ ಎಂದು ಹೇಳಿದರು.

ಸಮಾರಂಭದಲ್ಲಿ ಸಂಸದ ಬಿ.ವೈ.ರಾಘವೇಂದ್ರ ಮಾತನಾಡಿದರು. ವಿಧಾನ ಪರಿಷತ್ ಸದಸ್ಯರಾದ ಆಯನೂರು ಮಂಜುನಾಥ್, ಎಸ್.ರುದ್ರೇಗೌಡ, ಡಿ.ಎಸ್.ಅರುಣ್, ಮೇಯರ್ ಶಿವಕುಮಾರ್, ಉಪಮೇಯರ್ ಲಕ್ಷ್ಮೀ ಶಂಕರ್‌ನಾಯ್ಕ್, ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ಟಿ.ಡಿ. ಮೇಘರಾಜ್, ಸೂಡಾ ಅಧ್ಯಕ್ಷ ನಾಗರಾಜ್, ಬಿಜೆಪಿ ನಗರ ಘಟಕದ ಅಧ್ಯಕ್ಷ ಜಗದೀಶ್, ಮುಖಂಡರಾದ ಎಸ್. ದತ್ತಾತ್ರಿ, ಕೆ.ಈ. ಕಾಂತೇಶ್‌, ಗಿರೀಶ್ ಪಟೇಲ್, ಚನ್ನಬಸಪ್ಪ, ಸಂತೋಷ್ ಬಳ್ಳಕೆರೆ, ಜ್ಞಾನೇಶ್ವರ್
ಇದ್ದರು.

ಚಾಯ್‌ ಪೇ ಚರ್ಚಾ
ವಿಜಯ ಸಂಕಲ್ಪ ಅಭಿಯಾನಕ್ಕೆ ಚಾಲನೆ ನೀಡಿದ ಡಾ.ಅಶ್ವತ್ಥ್ ನಾರಾಯಣ್ ನಂತರ ಗಾಂಧಿ ಬಜಾರ್‌ನ ಅಂಗಡಿ, ಮನೆಗಳಿಗೆ ತೆರಳಿ ಕರಪತ್ರ ನೀಡಿ ಸ್ಥಳೀಯರೊಂದಿಗೆ ಮಾತುಕತೆ ನಡೆಸಿದರು.

ಮಧ್ಯಾಹ್ನ ಎಲೆರೇವಣ್ಣ ಬೀದಿಯಲ್ಲಿ ಚಾಯ್ ಪೇ ಚರ್ಚೆ ನಡೆಸಿದರು. ಚಹಾ ಸೇವಿಸುತ್ತಾ ಸ್ಥಳೀಯರೊಂದಿಗೆ ಮಾತುಕತೆ ನಡೆಸಿದರು. ಪಕ್ಷ ಮತ್ತೆ ಅಧಿಕಾರಕ್ಕೆ ಬಂದರೆ ಉಚಿತ ಶಿಕ್ಷಣ ಹಾಗೂ ಆರೋಗ್ಯ ಸೌಲಭ್ಯ ನೀಡುವ ಬೇಡಿಕೆಗೆ ಸಚಿವರು ಸಮ್ಮತಿಸಿದರು. ಇದೇ ವೇಳೆ ಗಾಂಧಿಬಜಾರ್‌ ಮುಖ್ಯ ರಸ್ತೆಯಲ್ಲಿ ಸ್ಥಳೀಯರಿಗೆ ಪಕ್ಷದ ಸದಸ್ಯತ್ವ ಪಡೆಯಲು ಮಿಸ್ಡ್‌ ಕಾಲ್ ನೀಡುವಂತೆ ಸೂಚಿಸಿ ಸದಸ್ಯತ್ವ ಅಭಿಯಾನ ಕೂಡ ನಡೆಯಿತು. ಶಿವಪ್ಪ ನಾಯಕ ವೃತ್ತದಲ್ಲಿ ವಿಜಯ ಸಂಕಲ್ಪ ಅಭಿಯಾನ ಸಮಾರೋಪಗೊಂಡಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.