ಶಿವಮೊಗ್ಗ: ಚಿಕ್ಕಮಗಳೂರು ಜಿಲ್ಲೆಯ ಜಲಾನಯನ ಪ್ರದೇಶದಲ್ಲಿ ವ್ಯಾಪಕ ಮಳೆ ಸುರಿಯುತ್ತಿರುವ ಹಾಗೂ ಮುಂಗಾರು ಪೂರ್ವ ಹಂತದಲ್ಲಿನ ವರ್ಷಧಾರೆಯ ಪರಿಣಾಮ ಇಲ್ಲಿನ ಲಕ್ಕವಳ್ಳಿಯ ಭದ್ರಾ ಜಲಾಶಯದಲ್ಲಿ 40 ವರ್ಷಗಳ ನಂತರ ಈ ಬಾರಿ ಜೂನ್ ಅಂತ್ಯಕ್ಕೆ ಅತಿಹೆಚ್ಚಿನ ನೀರಿನ ಸಂಗ್ರಹ ದಾಖಲಿಸಿದೆ.
ಭದ್ರಾ ಜಲಾಶಯದಲ್ಲಿ 1995ರ ಜೂನ್ 30ರಂದು 158.1 ಅಡಿ ನೀರು ಶೇಖರಣೆಗೊಂಡಿತ್ತು. ಅದು ಇಲ್ಲಿಯವರೆಗಿನ ದಾಖಲೆಯಾಗಿತ್ತು. ಈ ಬಾರಿ (2025ರ ಜೂನ್ 30ಕ್ಕೆ) 162.9 ಅಡಿ ನೀರು ಸಂಗ್ರಹಗೊಂಡು ಹೊಸ ದಾಖಲೆ ಬರೆದಿದೆ.
ಸದ್ಯ (ಜುಲೈ 4) ಜಲಾಶಯದಲ್ಲಿ ನೀರಿನಮಟ್ಟ 167.1 ಅಡಿ ಇದ್ದು, ಮಳೆ ಇನ್ನಷ್ಟು ಬಿರುಸುಗೊಂಡಿರುವುದರಿಂದ ಒಳಹರಿವು ಹೆಚ್ಚಳಗೊಂಡು ಭರ್ತಿಯತ್ತ ದಾಪುಗಾಲು ಇಡುತ್ತಿದೆ.
40 ಅಡಿ ಹೆಚ್ಚು ಅಧಿಕ: ಭದ್ರಾ ಜಲಾಶಯದಲ್ಲಿ ಕಳೆದ ವರ್ಷ ಇದೇ ದಿನ (2024ರ ಜುಲೈ 4) 127 ಅಡಿ ನೀರು ಸಂಗ್ರಹವಿತ್ತು. 4,908 ಕ್ಯುಸೆಕ್ ಒಳಹರಿವು ಇತ್ತು. ಈ ವರ್ಷ 40 ಅಡಿಯಷ್ಟು ಅಧಿಕ ಪ್ರಮಾಣದ ನೀರು ಸಂಗ್ರಹಗೊಂಡಿದೆ. 21,982 ಕ್ಯುಸೆಕ್ ಒಳಹರಿವು ಇದ್ದು, ಇದು ಮಳೆಯ ಸಮೃದ್ಧಿಯನ್ನು ಬಿಂಬಿಸುತ್ತಿದೆ. 186 ಅಡಿ ನೀರಿನ ಸಂಗ್ರಹ ಸಾಮರ್ಥ್ಯದ ಜಲಾಶಯ ಭರ್ತಿ ಆಗಲು 19 ಅಡಿಯಷ್ಟೇ ಬಾಕಿ ಇದೆ.
ಪವರ್‌ಹೌಸ್ ಮೂಲಕ ನೀರು: ಮಳೆಗಾಲದ ಆರಂಭದಲ್ಲಿಯೇ ಜಲಾಶಯ ಭರ್ತಿ ಆಗುತ್ತಿರುವ ಕಾರಣ ಸದ್ಯ 3,394 ಕ್ಯುಸೆಕ್ ನೀರನ್ನು ಪವರ್‌ಹೌಸ್ ಮೂಲಕ ನದಿಗೆ ಹರಿಸಲಾಗುತ್ತಿದೆ.
ವದಂತಿಗಳಿಗೆ ಕಿವಿಗೊಡಬೇಡಿ: ‘ಜಲಾಶಯ ಅವಧಿಗೆ ಮುನ್ನವೇ ಭರ್ತಿ ಆಗುತ್ತಿದೆ. ಹೀಗಾಗಿ ಬಲದಂಡೆ ಕಾಲುವೆ ಕಾಮಗಾರಿ ತುರ್ತಾಗಿ ಮುಗಿಸಿ ನೀರು ಬಿಡಲು ಹಗಲು–ರಾತ್ರಿ ಕೆಲಸ ನಡೆಸಿದ್ದೇವೆ. ಎಡದಂಡ ಕಾಲುವೆಗೆ ಗೇಟ್ ಅಳವಡಿಕೆ ಕಾರ್ಯ ನಿಗದಿತ ಅವಧಿಯಲ್ಲಿ ಮುಗಿಸಲು ಸಮರೋಪಾದಿಯಲ್ಲಿ ಕೆಲಸ ಮಾಡುತ್ತಿದ್ದೇವೆ. ಆದರೂ ಕೆಲವರು ಸಾಮಾಜಿಕ ಜಾಲತಾಣದಲ್ಲಿ ವದಂತಿಗಳನ್ನು ಹಬ್ಬಿಸುತ್ತಿದ್ದಾರೆ. ಜಲಾಶಯ ಸೋರಿಕೆ ಆಗುತ್ತಿದೆ ಎಂದು ನಿಂತ ನೀರಿನ ವಿಡಿಯೊ ಹಾಕುತ್ತಿದ್ದಾರೆ. ಅಚ್ಚುಕಟ್ಟು ಪ್ರದೇಶದ ವ್ಯಾಪ್ತಿಯ ರೈತರು ಗೊಂದಲಕ್ಕೊಳಗಾಗಬೇಡಿ’ ಎಂದು ಕರ್ನಾಟಕ ನೀರಾವರಿ ನಿಗಮದ ಅಧಿಕಾರಿಗಳು ಮನವಿ ಮಾಡುತ್ತಾರೆ.
ಆಗಸ್ಟ್ ಮೊದಲ ವಾರ ಕಾಲುವೆಗೆ ನೀರು?
ಈ ಬಾರಿ ಎಡದಂಡೆ ಕಾಲುವೆಗೆ ಹೊಸ ಗೇಟ್ ಅಳವಡಿಕೆ ಕಾರ್ಯ ನಡೆದಿದೆ. ಇನ್ನೊಂದೆಡೆ ಕುಡಿಯುವ ನೀರಿನ ಕಾಮಗಾರಿಗೆ ಒಡೆಯಲಾಗಿದ್ದ ಬಲದಂಡೆ ಕಾಲುವೆಯ ದುರಸ್ತಿ ಕಾರ್ಯವೂ ಭರದಿಂದ ನಡೆಯುತ್ತಿದೆ. ‘ವಾರದೊಳಗೆ ಬಲದಂಡೆ ಕಾಮಗಾರಿ ಪೂರ್ಣಗೊಳಿಸಲು ನಿರ್ಧರಿಸಲಾಗಿತ್ತು. ಬಿಆರ್‌ಪಿಯಲ್ಲಿ ವಿಪರೀತ ಮಳೆ ಬರುತ್ತಿರುವುದರಿಂದ ಕೆಲಸ 10 ದಿನಗಳಲ್ಲಿ ಮುಗಿಯಬಹುದು. ಆಗಸ್ಟ್ ಮೊದಲ ವಾರದಲ್ಲಿ ಬಲದಂಡೆ ಕಾಲುವೆಯಲ್ಲಿ ನೀರು ಹರಿಸಲು ಸಿದ್ಧತೆ ನಡೆದಿದೆ. ಅಷ್ಟರೊಳಗೆ ಐಸಿಸಿ ಸಭೆ ಕರೆದು ದಿನಾಂಕ ನಿಗದಿಗೊಳಿಸುವಂತೆ ಕಾಡಾ ಆಡಳಿತಕ್ಕೆ ಮನವಿ ಮಾಡಲಾಗಿದೆ’ ಎಂದು ನೀರಾವರಿ ನಿಗಮದ ಅಧಿಕಾರಿಗಳು ಹೇಳುತ್ತಾರೆ.
ಶೀಘ್ರ ನದಿಗೆ ನೀರು ಬಿಡುಗಡೆ: ಕೆಎನ್‌ಎನ್
ಶಿವಮೊಗ್ಗ: ಸುರಕ್ಷತೆ ದೃಷ್ಟಿಯಿಂದ ಭದ್ರಾ ಜಲಾಶಯದಲ್ಲಿ ನೀರಿನ ಸಂಗ್ರಹ ನಿಗದಿತ ಪ್ರಮಾಣಕ್ಕಿಂತ ಹೆಚ್ಚಾದಲ್ಲಿ ಹೆಚ್ಚುವರಿ ನೀರನ್ನು ಹೊರಬಿಡಬೇಕಾಗಿರುತ್ತದೆ. ಈಗಿನ ಮಳೆ ಒಳಹರಿವು ಗಮನಿಸಿದರೆ ಜಲಾಶಯ ಬೇಗನೇ ಭರ್ತಿ ಆಗುವ ಸಾಧ್ಯತೆ ಇದೆ. ಅಣೆಕಟ್ಟೆ ಸುರಕ್ಷತೆ ದೃಷ್ಟಿಯಿಂದ ಯಾವುದೇ ಸಮಯದಲ್ಲಾದರೂ ಹೆಚ್ಚುವರಿ ನೀರನ್ನು ಸ್ಪಿಲ್ ವೇ ಗೇಟ್ ಮುಖಾಂತರ ನದಿಗೆ ಬಿಡಲಾಗುವುದು ಎಂದು ಭದ್ರಾ ಯೋಜನಾ ನೀರಾವರಿ ಸಲಹಾ ಸಮಿತಿ ಸದಸ್ಯ ಕಾರ್ಯದರ್ಶಿ ಆರ್. ರವಿಚಂದ್ರ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಭದ್ರಾ ನದಿಯ ಎಡ ಮತ್ತು ಬಲ ದಂಡೆಯ ಉದ್ದಕ್ಕೂ ತಗ್ಗು ಪ್ರದೇಶದಲ್ಲಿ ವಾಸಿಸುವ ಜನರು ಮುಂಜಾಗ್ರತೆಯಾಗಿ ಸುರಕ್ಷಿತ ಸ್ಥಳಗಳಿಗೆ ತೆರಳಬೇಕು. ನದಿ ಪಾತ್ರದಲ್ಲಿ ಸಾರ್ವಜನಿಕರು ತಿರುಗಾಡುವುದು ಜಾನುವಾರುಗಳನ್ನು ಮೇಯಿಸುವುದನ್ನು ನಿಷೇಧಿಸಲಾಗಿದೆ. ಸಾರ್ವಜನಿಕರು ಸಹಕರಿಸುವಂತೆ ಅವರು ಕೋರಿದ್ದಾರೆ.
ಜಲಾಶಯದಲ್ಲಿ ನೀರು ಸಂಗ್ರಹಿಸದೇ ನದಿಗೆ ನೀರು ಬಿಡಲಾಗುತ್ತಿದೆ ಎಂದು ತಪ್ಪಾಗಿ ಭಾವಿಸಿ ಅಚ್ಚುಕಟ್ಟು ವ್ಯಾಪ್ತಿಯ ರೈತರು ಕರೆ ಮಾಡುತ್ತಿದ್ದಾರೆ. Rule Curve ಅನ್ವಯ ಜಲಾಶಯದ ಸುರಕ್ಷತೆಗೆ ತಕ್ಕಂತೆ ನೀರು ಸಂಗ್ರಹಿಸಲಾಗುತ್ತದೆ-ಆರ್.ರವಿಚಂದ್ರ, ಭದ್ರಾ ಯೋಜನಾ ನೀರಾವರಿ ಸಲಹಾ ಸಮಿತಿ ಸದಸ್ಯ ಕಾರ್ಯದರ್ಶಿ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.