
ಶಿವಮೊಗ್ಗ: ‘ಕರ್ನಾಟಕದಲ್ಲಿ ತಾಲಿಬಾನ್ ಸರ್ಕಾರವಿದ್ದು, ಕೆಲವು ಗೂಂಡಾ ಮುಸ್ಲಿಮರ ದುಷ್ಕೃತ್ಯಗಳಿಗೆ ರಾಜ್ಯ ಸರ್ಕಾರದ ಆಶೀರ್ವಾದವಿದೆ. ಹೀಗಾಗಿಯೇ ಬಾಗಲಕೋಟೆಯಲ್ಲಿ ಶಿವಾಜಿ ಮೆರವಣಿಗೆ ಮೇಲೆ ಮಸೀದಿಯಿಂದ ಕಲ್ಲು ತೂರಾಟ ಮಾಡಲಾಗಿದೆ’ ಎಂದು ಮಾಜಿ ಉಪಮುಖ್ಯಮಂತ್ರಿ ಕೆ.ಎಸ್.ಈಶ್ವರಪ್ಪ ಆರೋಪಿಸಿದರು.
ನಗರದಲ್ಲಿ ಶನಿವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ‘ಮೆರವಣಿಗೆಯ ಮೇಲೆ ಸುಮಾರು 200 ಮುಸ್ಲಿಮರು ಮಸೀದಿಯ ಮೇಲಿಂದ ಕಲ್ಲು ತೂರಾಟ ಮಾಡಿದ್ದಾರೆ. ಈ ವೇಳೆ ತಲೆಗೆ ಕಲ್ಲುಬಿದ್ದು ಗಾಯವಾಗಿ ರಕ್ತಸ್ರಾವ ಆಗುತ್ತಿದ್ದರೂ, ಬಾಗಲಕೋಟೆ ಎಸ್‌ಪಿ ಮಾತ್ರ ಒಂದಿಬ್ಬರು ಸಣ್ಣ ಕಲ್ಲುಗಳ ತೂರಾಟ ಮಾಡಿದ್ದಾರೆ. ಯಾರಿಗೂ ಪೆಟ್ಟಾಗಿಲ್ಲ ಎಂದು ಮಾಧ್ಯಮಗಳಿಗೆ ಹೇಳಿಕೆ ನೀಡಿದ್ದಾರೆ. ಇದು ಪೊಲೀಸ್ ಇಲಾಖೆಯ ದೌರ್ಬಲ್ಯಕ್ಕೆ ಸಾಕ್ಷಿ. ಎಸ್‌ಪಿ ಕೂಡಲೇ ರಾಜೀನಾಮೆ ಕೊಟ್ಟು ಮನೆಗೆ ಹೋಗಲಿ’ ಎಂದು ಆಗ್ರಹಿಸಿದರು.
‘ರಾಜ್ಯ ಸರ್ಕಾರ ಕೆಲವು ಗೂಂಡಾ ಮುಸ್ಲಿಮರಿಗೆ ಬೆಂಬಲ ನೀಡುತ್ತಿದೆ. ಹೀಗಾಗಿ ಗಲಭೆಕೋರರಿಗೆ ಬಲ ಬಂದಂತಾಗಿದೆ. ಅದರ ಫಲವಾಗಿ ನೆಲಮಂಗಲ, ಚಿಕ್ಕಮಗಳೂರು, ಮದ್ದೂರು, ಚಿತ್ತಾಪುರ, ದಾವಣಗೆರೆ, ಹುಬ್ಬಳ್ಳಿಯಲ್ಲಿ ಕೆಲವು ಮುಸ್ಲಿಂ ಗೂಂಡಾಗಳು ದುಷ್ಕೃತ್ಯಗಳಲ್ಲಿ ತೊಡಗಿದ್ದಾರೆ. ಕಾಂಗ್ರೆಸ್ ನಾಯಕರು ಔರಂಗಜೇಬನ ಮನಸ್ಥಿತಿಯನ್ನು ಬದಲಾಯಿಸಿಕೊಳ್ಳಬೇಕು. ಯಾವ ಮಸೀದಿಯಿಂದ ಕಲ್ಲು ತೂರಾಟ ಮಾಡಲಾಗಿದೆಯೋ ಆ ಮಸೀದಿಯನ್ನು ಸರ್ಕಾರ ಮುಟ್ಟುಗೋಲು ಹಾಕಿಕೊಳ್ಳಬೇಕು. ಅಲ್ಲಿನ ಮೌಲ್ವಿಗಳನ್ನು ತಕ್ಷಣ ಬಂಧಿಸಬೇಕು’ ಎಂದು ಒತ್ತಾಯಿಸಿದರು.
ಬಾಗಲಕೋಟೆ ಉಪಚುನಾವಣೆಗೂ ಗಲಭೆಗೂ ಯಾವುದೇ ಸಂಬಂಧವಿಲ್ಲ ಎಂದು ಈಶ್ವರಪ್ಪ ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯಿಸಿದರು.
ರಾಷ್ಟ್ರಭಕ್ತರ ಬಳಗದ ಪ್ರಮುಖರಾದ ಕೆ.ಈ. ಕಾಂತೇಶ್, ಈ. ವಿಶ್ವಾಸ್, ಮೋಹನ್ ಜಾಧವ್, ಕುಬೇರಪ್ಪ, ಮಹಾಲಿಂಗಶಾಸ್ತ್ರಿ, ರಾಜು, ಎಂ.ಜಿ. ಬಾಲು, ಗಿರೀಶ್, ಅರುಣ್ ಇದ್ದರು.
ಪಟ್ಟಭದ್ರರು ಯಾರು ಬಹಿರಂಗಪಡಿಸಿ; ಸಿಎಂಗೆ ಒತ್ತಾಯ
‘ಕುರಿ ಕಾಯುತ್ತಿದ್ದವನು ಸಿಎಂ ಆದದ್ದೇ ಪಟ್ಟಭದ್ರರ ಕಣ್ಣು ಕೆಂಪಾಗಿಸಿದೆ. ಪಟ್ಟಭದ್ರರಿಗೆ ಹೆದರಿ ರಣರಂಗ ಬಿಟ್ಟು ಓಡಿಹೋಗುವ ಹೇಡಿ ನಾನಲ್ಲ’ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿದ್ದಾರೆ. ಆ ಪಟ್ಟಭದ್ರರು ಯಾರು? ಎಂಬುದನ್ನು ಅವರೇ ಬಹಿರಂಗಪಡಿಸಲಿ ಎಂದು ಕೆ.ಎಸ್.ಈಶ್ವರಪ್ಪ ಆಗ್ರಹಿಸಿದರು.
ಆ ಪಟ್ಟಭದ್ರರು ಮುಖ್ಯಮಂತ್ರಿ ಸ್ಥಾನಕ್ಕೆ ಪಟ್ಟುಹಿಡಿದಿರುವ ಡಿ.ಕೆ.ಶಿವಕುಮಾರ್ ಇಲ್ಲವೇ ಕಾಂಗ್ರೆಸ್ ಹೈಕಮಾಂಡಾ? ಎಂಬುದನ್ನು ಸಿದ್ದರಾಮಯ್ಯ ಹೇಳಲಿ. ಈ ವಿಚಾರದಲ್ಲಿ ಅವರು ಜಾತಿ ಪ್ರಸ್ತಾಪಿಸಿರುವುದನ್ನು ಒಪ್ಪಲು ಸಾಧ್ಯವಿಲ್ಲ. ಬದಲಿಗೆ ಪಟ್ಟಭದ್ರರು ಯಾರು ಎಂಬುದನ್ನು ಬಹಿರಂಗಪಡಿಸಿ ಅವರು ಹೀರೊ ಆಗಲಿ ಎಂದು ಹೇಳಿದರು.
ಸಿಎಂ ಕುರ್ಚಿಗಾಗಿ ಸಿದ್ದರಾಮಯ್ಯ ಹಾಗೂ ಡಿ.ಕೆ.ಶಿವಕುಮಾರ್ ನಡುವಿನ ಹಗ್ಗ ಜಗ್ಗಾಟ ಕಂಡು ರಾಜ್ಯದ ಜನರು ಗೊಂದಲಕ್ಕೀಡಾಗಿದ್ದಾರೆ. ಮುಖ್ಯಮಂತ್ರಿ ಸ್ಥಾನದ ವಿಚಾರದಲ್ಲಿ ಡಿ.ಕೆ.ಶಿವಕುಮಾರ್ ಹೈಕಮಾಂಡ್ ಹಾಗೂ ತಮ್ಮ ನಡುವೆ ಮಾತುಕತೆ ನಡೆದಿದೆಯೇ? ನಡೆದಿದ್ದರೆ ಅದು ಏನೆಂಬುದನ್ನು ಸಿದ್ದರಾಮಯ್ಯ ಬಹಿರಂಗಪಡಿಸಿ ಗೊಂದಲ ಪರಿಹರಿಸಬೇಕು ಎಂದು ಈಶ್ವರಪ್ಪ ಒತ್ತಾಯಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.