ADVERTISEMENT

ಶಿವಮೊಗ್ಗ: ನಗರದ ಸರ್ಕಾರಿ ಶಾಲೆಗಳಿಗೆ ಕಾಯಕಲ್ಪ

87 ಶಾಲೆಗಳಿಗೆ ₹ 15 ಕೋಟಿ ವೆಚ್ಚ, ಡಿಸೆಂಬರ್ ಅಂತ್ಯದ ಒಳಗೆ ಪೂರ್ಣ

​ಪ್ರಜಾವಾಣಿ ವಾರ್ತೆ
Published 20 ನವೆಂಬರ್ 2020, 13:43 IST
Last Updated 20 ನವೆಂಬರ್ 2020, 13:43 IST
ಶಿವಮೊಗ್ಗದ ಕೆ.ಆರ್.ಪುರಂ ಸರ್ಕಾರಿ ಶಾಲೆಗೆ ಶುಕ್ರವಾರ ಜಿಲ್ಲಾ ಉಸ್ತುವಾರಿ ಸಚಿವ ಕೆ.ಎಸ್.ಈಶ್ವರಪ್ಪ ಭೇಟಿ ನೀಡಿ, ಪರಿಶೀಲಿಸಿದರು.
ಶಿವಮೊಗ್ಗದ ಕೆ.ಆರ್.ಪುರಂ ಸರ್ಕಾರಿ ಶಾಲೆಗೆ ಶುಕ್ರವಾರ ಜಿಲ್ಲಾ ಉಸ್ತುವಾರಿ ಸಚಿವ ಕೆ.ಎಸ್.ಈಶ್ವರಪ್ಪ ಭೇಟಿ ನೀಡಿ, ಪರಿಶೀಲಿಸಿದರು.   

ಶಿವಮೊಗ್ಗ: ನಗರದ 87 ಸರ್ಕಾರಿ ಶಾಲೆಗಳನ್ನು ₹ 15 ಕೋಟಿ ವೆಚ್ಚದಲ್ಲಿ ದುರಸ್ತಿ ಮಾಡಲಾಗುತ್ತಿದೆ. ಎಲ್ಲ ಕಾಮಗಾರಿಗಳೂ ಡಿಸೆಂಬರ್ ಒಳಗೆ ಪೂರ್ಣಗೊಳ್ಳಲಿವೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಕೆ.ಎಸ್.ಈಶ್ವರಪ್ಪ ಹೇಳಿದರು.

ನಗರದ ಹಲವು ಶಾಲೆಗಳಿಗೆ ಭೇಟಿ ನೀಡಿ ಪರಿಶೀಲಿಸಿದ ನಂತರ ಅವರು ಸುದ್ದಿಗಾರರ ಜತೆ ಮಾತನಾಡಿದರು.

ಇದೇ ಮೊದಲ ಬಾರಿಗೆ ಶಿವಮೊಗ್ಗ ನಗರದ ಸರ್ಕಾರಿ ಶಾಲೆಗಳ ದುರಸ್ತಿ ಹಾಗೂ ಮೂಲಸೌಲಭ್ಯ ಅಭಿವೃದ್ಧಿಗೆ ಅನುದಾನ ಬಿಡುಗಡೆ ಮಾಡಲಾಗಿದೆ. ಇದರಲ್ಲಿ ₹ 10ಕೋಟಿ, ನೈಸರ್ಗಿಕ ವಿಕೋಪ ವಿಶೇಷ ಪರಿಹಾರದಲ್ಲಿ ₹ 4.5 ಕೋಟಿ ಅನುದಾನ ಸೇರಿದೆ. ಇದರಲ್ಲಿ 10 ಪ್ರೌಢಶಾಲೆಗಳು, 76 ಪ್ರಾಥಮಿಕ ಶಾಲೆಗಳು ಸೇರಿವೆ. 36 ಕಾಮಗಾರಿಗಳು ಪೂರ್ಣಗೊಂಡಿವೆ. 30 ಶಾಲೆಗಳಲ್ಲಿ ಕಾಮಗಾರಿ ಪ್ರಗತಿಯಲ್ಲಿದೆ. ಇನ್ನೂ 20 ಶಾಲೆಗಳಲ್ಲಿ ಕಾಮಗಾರಿ ಆರಂಭಿಸಬೇಕಾಗಿದ್ದು, ತಕ್ಷಣ ಪ್ರಾರಂಭಿಸಲು ಸೂಚನೆ ನೀಡಲಾಗಿದೆ. ಶೌಚಾಲಯ, ಚಾವಣಿ ದುರಸ್ತಿ, ಹೊಸ ಕೊಠಡಿ ನಿರ್ಮಾಣ, ಪೀಠೋಪಕರಣ, ನೀರಿನ ವ್ಯವಸ್ಥೆ ಒದಗಿಸಲಾಗುವುದು ಎಂದು ವಿವರ ನೀಡಿದರು.

ADVERTISEMENT

ಎಲ್ಲಾ ಕಾಮಗಾರಿಗಳನ್ನು ಡಿಸೆಂಬರ್ ಅಂತ್ಯದ ಒಳಗಾಗಿ ಪೂರ್ಣಗೊಳಿಸಬೇಕು. ಕಾಮಗಾರಿಗಳನ್ನು ಇನ್ನೂ ಆರಂಭಿಸದ ಗುತ್ತಿಗೆದಾರರ ಟೆಂಡರ್ ರದ್ದುಗೊಳಿಸಬೇಕು. ಕಪ್ಪುಪಟ್ಟಿಗೆ ಸೇರಿಸಬೇಕು. ಅವರ ವಿರುದ್ಧ ಪ್ರಕರಣ ದಾಖಲಿಸಬೇಕು. ಕಾಮಗಾರಿ ಗುಣಮಟ್ಟದಲ್ಲಿ ಯಾವುದೇ ರಾಜಿ ಮಾಡಿಕೊಳ್ಳದೇ ಉತ್ತಮ ಗುಣಮಟ್ಟ ಕಾಯ್ದುಕೊಳ್ಳಬೇಕು ಎಂದು ಎಚ್ಚರಿಕೆ ನೀಡಿದರು.

ಶಾಲೆಗಳಿಗೆ ಅಗತ್ಯವಿರುವ ಪೀಠೋಪಕರಣಗಳನ್ನು ರಾಷ್ಟ್ರೀಯ ಶಿಕ್ಷಣ ಸಮಿತಿ ಒದಗಿಸಲಿದೆ. ಹೊರ ಪೀಠೋಪಕರಣ ಹಾಗೂ ಹಳೆ ಪೀಠೋಪಕರಣಗಳ ದುರಸ್ತಿಗೂ ಸಮಿತಿ ನೆರವು ನೀಡಲಿದೆ. ಡಿಸೆಂಬರ್ ಅಂತ್ಯದೊಳಗೆ ನಗರದ ಎಲ್ಲ ಶಾಲೆಗಳ ದುರಸ್ತಿ ಕಾರ್ಯ ಪೂರ್ಣಗೊಳಿಸಲಾಗುವುದು ಎಂದರು.

ಶಾಲೆಗಳನ್ನು ಪುನರ್ ಆರಂಭಿಸುವ ಕುರಿತು ಶಿಕ್ಷಣ ಸಚಿವ ಎಸ್.ಸುರೇಶ್ ಕುಮಾರ್ ಸಮಾಲೋಚನೆ ನಡೆಸುತ್ತಿದ್ದಾರೆ. ಶಾಲೆ ಆರಂಭವಾಗುವ ಮೊದಲೇ ಎಲ್ಲ ಕಾರ್ಯಗಳನ್ನು ಪೂರ್ಣಗೊಳಿಸಲಾಗುವುದು. ಮಕ್ಕಳ ಬರುವಿಕೆಗೆ ಸಿದ್ಧವಿರಲಿವೆ ಎಂದು ಮಾಹಿತಿ ನೀಡಿದರು.

ಕರ್ನಾಟಕ ಪಬ್ಲಿಕ್ ಶಾಲೆ, ಬಿ.ಬಿ.ರಸ್ತೆ ಶಾಲೆ, ದೊಡ್ಡಪೇಟೆ, ಭೂಪಾಳ ಶಾಲೆ, ಎಸ್‌ಪಿಎಂ ರಸ್ತೆಯಲ್ಲಿರುವ ಸರ್ಕಾರಿ ಶಾಲೆಗಳಿಗೆ ಭೇಟಿ ನೀಡಿ ಕಾಮಗಾರಿಗಳ ಪರಿಶೀಲನೆ ನಡೆಸಿರು. ಅಲ್ಲಿನ ಎಸ್‍ಡಿಎಂಸಿ ಸದಸ್ಯರು, ಅಧಿಕಾರಿಗಳ ಜತೆ ಸಮಾಲೋಚನೆ ನಡೆಸಿದರು.

ಮೇಯರ್ ಸುವರ್ಣಾ ಶಂಕರ್, ಉಪ ಮೇಯರ್ ಸುರೇಖಾ ಮುರಳೀಧರ್, ಸಾರ್ವಜನಿಕ ಶಿಕ್ಷಣ ಇಲಾಖೆ ಉಪ ನಿರ್ದೇಶಕ ರಮೇಶ್ ಮತ್ತಿತರರು ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.