ADVERTISEMENT

ಕಾಂಗ್ರೆಸ್‌ನವರಿಂದಲೇ ಸಿದ್ದರಾಮಯ್ಯ ಸೋಲು: ಕೆ.ಎಸ್.ಈಶ್ವರಪ್ಪ

ಶಿವಮೊಗ್ಗದಲ್ಲಿ ಸ್ಪರ್ಧಿಸಿದರೆ ನಾನೇ ಸೋಲಿಸುವೆ; ಶಾಸಕ ಕೆ.ಎಸ್.ಈಶ್ವರಪ್ಪ

​ಪ್ರಜಾವಾಣಿ ವಾರ್ತೆ
Published 1 ಮಾರ್ಚ್ 2023, 5:44 IST
Last Updated 1 ಮಾರ್ಚ್ 2023, 5:44 IST
ಕೆ.ಎಸ್‌.ಈಶ್ವರಪ್ಪ
ಕೆ.ಎಸ್‌.ಈಶ್ವರಪ್ಪ   

ಶಿವಮೊಗ್ಗ: ‘ಕೋಲಾರ ಕ್ಷೇತ್ರದಲ್ಲಿ ಪರಿಶಿಷ್ಟರ ಮತಗಳು ಅಧಿಕ ಸಂಖ್ಯೆಯಲ್ಲಿ ಇರುವುದರಿಂದ ಕಾಂಗ್ರೆಸ್‌ ಮುಖಂಡ ಸಿದ್ದರಾಮಯ್ಯ ಅಲ್ಲಿ ಸ್ಪರ್ಧಿಸುವುದಿಲ್ಲ. ಒಂದೊಮ್ಮೆ ಅಲ್ಲಿಂದಲೇ ಸ್ಪರ್ಧಿಸಿದಲ್ಲಿ, ಅವರದ್ದೇ ಪಕ್ಷದ ಮಲ್ಲಿಕಾರ್ಜುನ ಖರ್ಗೆ, ಡಾ.ಜಿ.ಪರಮೇಶ್ವರ್‌ ಹಾಗೂ ಕೆ.ಎಚ್‌. ಮುನಿಯಪ್ಪ ಒಂದಾಗಿ ಸೋಲಿಸಲಿದ್ದಾರೆ’ ಎಂದು ಶಾಸಕ ಕೆ.ಎಸ್‌.ಈಶ್ವರಪ್ಪ ಭವಿಷ್ಯ ನುಡಿದರು.

ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯದ 224 ಕ್ಷೇತ್ರಗಳ ಪೈಕಿ 223 ಕ್ಷೇತ್ರಗಳಲ್ಲಿ ಸಿದ್ದರಾಮಯ್ಯ ಎಲ್ಲಿಯೇ ಸ್ಪರ್ಧಿಸಿದರೂ ಸೋಲು ಗ್ಯಾರಂಟಿ. ಮುಸ್ಲಿಮರು ಹೆಚ್ಚಿನ ಸಂಖ್ಯೆಯಲ್ಲಿರುವ ಶಾಸಕ ಜಮೀರ್ ಅಹಮದ್ ಅವರ ಚಾಮರಾಜಪೇಟೆ ಕ್ಷೇತ್ರದಲ್ಲಿ ಸ್ಪರ್ಧಿಸಿದರೆ ಮಾತ್ರ ಸಿದ್ದರಾಮಯ್ಯ ಗೆಲುವು ಸಾಧಿಸಬಹುದು ಎಂದರು.

‘ಈ ಹಿಂದೆ ಖರ್ಗೆ, ಪರಮೇಶ್ವರ್, ಮುನಿಯಪ್ಪ ಅವರನ್ನು ಸಿದ್ದರಾಮಯ್ಯ ಸೋಲಿಸಿದ್ದಲ್ಲದೆ, ವಿ. ಶ್ರೀನಿವಾಸ ಪ್ರಸಾದ್ ಪಕ್ಷ ತ್ಯಜಿಸುವಂತೆ ಮಾಡಿದ್ದರು. ಈ ಬಾರಿ ಎಲ್ಲರೂ ಸೇರಿ ಸಿದ್ದರಾಮಯ್ಯ ವಿರುದ್ಧ ಸೇಡು ತೀರಿಸಿಕೊಳ್ಳಲಿದ್ದಾರೆ’ ಎಂದರು.

ADVERTISEMENT

ಸಿದ್ದರಾಮಯ್ಯ ಗೆಲ್ಲಲಿ ಎಂದು ಬಾದಾಮಿಯಲ್ಲಿ ಸ್ಪರ್ಧಿಸುವಂತೆ ಯಡಿಯೂರಪ್ಪ ಸಲಹೆ ನೀಡಿದ್ದಾರೆ. ಅವರ ಮಾತನ್ನು ಸಿದ್ದರಾಮಯ್ಯ ಕೇಳದಿದ್ದರೆ ಸೋಲಲಿದ್ದಾರೆ ಎಂದರು.

ಮಾರ್ಚ್‌ 1ರಿಂದ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ. ನಡ್ಡಾ ನೇತೃತ್ವದ ತಂಡ ಬುಧವಾರ ಮಲೆಮಹದೇಶ್ವರ ಬೆಟ್ಟದಿಂದ ವಿಜಯ ಸಂಕಲ್ಪ ಯಾತ್ರೆ ಆರಂಭಿಸಲಿದೆ. ಮಾರ್ಚ್ 2ರಂದು ರಕ್ಷಣಾ ಸಚಿವ ರಾಜನಾಥ್ ಸಿಂಗ್ ನೇತೃತ್ವದ ತಂಡ ಬೆಳಗಾವಿ ಜಿಲ್ಲೆ ನಂದಗಡದಿಂದ, ಮಾರ್ಚ್ 3ರಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರ ನೇತೃತ್ವದಲ್ಲಿ ಬೀದರ್‌ ಜಿಲ್ಲೆ ಬಸವ ಕಲ್ಯಾಣದಿಂದ ಹಾಗೂ ಮತ್ತೊಂದು ತಂಡ ದೇವನಹಳ್ಳಿಯಿಂದ ವಿಜಯ ಸಂಕಲ್ಪ ಯಾತ್ರೆ ಹೊರಡಲಿದೆ. ಮಾರ್ಚ್‌ 25ರಂದು ದಾವಣಗೆರೆಯಲ್ಲಿ ನಡೆಯುವ ಸಮಾವೇಶಕ್ಕೆ ಪ್ರಧಾನಿ ಮೋದಿ ಬರಲಿದ್ದಾರೆ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.