ಶಿವಮೊಗ್ಗ: ಔಟ್ ಲುಕ್– ಐಕೇರ್ ಸಂಸ್ಥೆ ಬಿಡುಗಡೆ ಮಾಡಿರುವ ದೇಶದ ಸಾರ್ವಜನಿಕ ವಿಶ್ವವಿದ್ಯಾಲಯದ ರ‍್ಯಾಂಕಿಂಗ್‌ನಲ್ಲಿ ಕುವೆಂಪು ವಿವಿ 30ನೇ ಶ್ರೇಣಿ ಪಡೆದಿದೆ. ಕಳೆದ ತಿಂಗಳು ನ್ಯಾಕ್‌ನಿಂದ ‘ಎ’ ಶ್ರೇಣಿ ಪಡೆದು ಹೆಮ್ಮೆ ಮೂಡಿಸಿದ್ದ ವಿವಿ, ಮತ್ತೆ ರಾಷ್ಟ್ರಮಟ್ಟದಲ್ಲಿ ಗಮನ ಸೆಳೆಯುವ ಸಾಧನೆ ಮಾಡಿದೆ.
ಐದು ಮಾನದಂಡಗಳಲ್ಲಿ ಸಾರ್ವಜನಿಕ ವಿಶ್ವವಿದ್ಯಾಲಯಗಳನ್ನು 1,000 ಅಂಕಗಳಿಗೆ ಮೌಲ್ಯಮಾಪನ ಮಾಡಿರುವ ರ‍್ಯಾಂಕಿಂಗ್ ಶೈಕ್ಷಣಿಕ ಮತ್ತು ಸಂಶೋಧನಾ ಚಟುವಟಿಕೆಗಳಿಗೆ 400 ಅಂಕಗಳು, ಕೈಗಾರಿಕಾ ವಿನಿಮಯಕ್ಕೆ 200 ಅಂಕಗಳು, ಮೂಲ ಸೌಕರ್ಯಗಳಿಗೆ 150 ಅಂಕಗಳು, ಆಡಳಿತ ಮತ್ತು ವಿಸ್ತರಣೆಗೆ 150 ಅಂಕಗಳು ಹಾಗೂ ವೈವಿಧ್ಯತೆ ಚಟುವಟಿಕೆಗಳಿಗೆ 100 ಅಂಕಗಳ ನಿಗದಿಗೊಳಿಸಿದೆ. ಕುವೆಂಪು ವಿವಿ ಒಟ್ಟು 862.25 ಅಂಕಗಳೊಂದಿಗೆ 30ನೇ ಸ್ಥಾನ ಪಡೆದಿದೆ.
‘ಮಲೆನಾಡು ಭಾಗದ ಹೆಮ್ಮೆಯ ಶಿಕ್ಷಣ ಸಂಸ್ಥೆ ಆದ ಕುವೆಂಪು ವಿವಿ, ಗ್ರಾಮೀಣ ವಿದ್ಯಾರ್ಥಿಗಳಿಗೆ ಜಾಗತಿಕ ಗುಣಮಟ್ಟದ ಶಿಕ್ಷಣವನ್ನು ಕೊಡಮಾಡುತ್ತಿರುವುದನ್ನು ಈ ರ್ಯಾಂಕಿಂಗ್ ಮತ್ತೊಮ್ಮೆ ಸಾಬೀತು ಪಡಿಸಿದೆ’ ಎಂದು ಕುಲಪತಿ ಪ್ರೊ. ಶರತ್ ಅನಂತಮೂರ್ತಿ ಪ್ರತಿಕ್ರಿಯಿಸಿದ್ದಾರೆ.
ವಿಶ್ವವಿದ್ಯಾಲಯದ ಸ್ನಾತಕೋತ್ತರ ಕೋರ್ಸ್ ಗಳ ಪ್ರವೇಶಾತಿ ಕೌನ್ಸಿಲಿಂಗ್ ಆ. 29 ಮತ್ತು 30ಕ್ಕೆ ನಿಗದಿಯಾಗಿದ್ದು ವಿದ್ಯಾರ್ಥಿಗಳು ಆ. 22ರವರೆಗೆ ಪ್ರವೇಶಾತಿಗೆ ಅರ್ಜಿ ಸಲ್ಲಿಸಬಹುದು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.