ADVERTISEMENT

ಕುವೆಂಪು ವಿಶ್ವವಿದ್ಯಾಲಯ ಘಟಿಕೋತ್ಸವ: ಕನ್ನಡ ವಿಭಾಗದಲ್ಲಿ ಚಿನ್ನದ ‘ವಸಂತ’

ವೆಂಕಟೇಶ ಜಿ.ಎಚ್.
Published 23 ಜನವರಿ 2025, 6:02 IST
Last Updated 23 ಜನವರಿ 2025, 6:02 IST
   

ಶಿವಮೊಗ್ಗ: ಕುವೆಂಪು ವಿಶ್ವವಿದ್ಯಾಲಯದ ಆವರಣದಲ್ಲಿ ಬುಧವಾರ ನಡೆದ ಘಟಿಕೋತ್ಸವ ಸಾಮಾನ್ಯ ಪದವಿ ಮಾತ್ರವಲ್ಲದೇ ದೂರ ಶಿಕ್ಷಣದಲ್ಲಿ ಪದವಿ ಪಡೆದವರಿಗೂ ವೇದಿಕೆ ಕಲ್ಪಿಸಿತು. ಹೀಗಾಗಿ ಪದವಿಯ ಮುಕುಟ ಧರಿಸುವ ಕನಸಿನೊಂದಿಗೆ ರಾಜ್ಯದ ವಿವಿಧೆಡೆಯಿಂದ ಬಂದಿದ್ದವರ ಕಲರವಕ್ಕೆ ಸಭಾಂಗಣ ಸಾಕ್ಷಿಯಾಯಿತು.

ಎಂ.ಎ ಕನ್ನಡ ವಿಭಾಗದಲ್ಲಿ ಬಿ.ಜೆ.ವಸಂತಕುಮಾರ್ 10 ಚಿನ್ನದ ಪದಕ, ಎಂ.ಎಸ್ಸಿ ಪರಿಸರ ವಿಜ್ಞಾನ ವಿಷಯದಲ್ಲಿ ಸಾನಿಯಾ ಫಿರ್ದೋಸ್ 6 ಚಿನ್ನದ ಪದಕ ಪಡೆದರು. ಎಂ.ಎ ಸಮಾಜಶಾಸ್ತ್ರ ವಿಭಾಗದಲ್ಲಿ ಎಸ್.ಎಸ್.ರಕ್ಷಿತಾ, ಎಂಬಿಎ ವ್ಯವಹಾರ ನಿರ್ವಹಣಾ ಅಧ್ಯಯನ ವಿಭಾಗದಲ್ಲಿ ಎಸ್.ರಕ್ಷಿತ್, ಎಂಎಸ್ಸಿ ಜೈವಿಕ ತಂತ್ರಜ್ಞಾನ ಅಧ್ಯಯನ ವಿಭಾಗದಲ್ಲಿ ಎಸ್.ಶುಭಶ್ರೀ, ಶಿವಮೊಗ್ಗದ ಎಟಿಎನ್‌ಸಿಸಿ ಕಾಲೇಜಿನ ಜಿ.ಹರ್ಷಿತಾ ಬಿಕಾಂನಲ್ಲಿ ತಲಾ 5 ಚಿನ್ನದ ಪದಕ ಗಳಿಸಿದರು.

ಚಿನ್ನದ ಫಸಲು ತೆಗೆದ ‘ಕನ್ನಡ’ದ ಕುವರ: ಚಿಕ್ಕಮಗಳೂರು ಜಿಲ್ಲೆ ಬಾಳೆಹೊನ್ನೂರು ತಾಲ್ಲೂಕು ಭೈರನಮಕ್ಕಿಯ ಬಿ.ಜೆ.ವಸಂತಕುಮಾರ್ ಎಂ.ಎ ಕನ್ನಡದಲ್ಲಿ 10 ಚಿನ್ನದ ಪದಕ ಪಡೆದರು. 34ನೇ ಘಟಿಕೋತ್ಸವದಲ್ಲಿ ಹೆಚ್ಚು ಚಿನ್ನದ ಫಸಲು ತೆಗೆದ ಶ್ರೇಯ ತಮ್ಮದಾಗಿಸಿಕೊಂಡರು.

ADVERTISEMENT

ವಸಂತಕುಮಾರ್‌ ಅವರು ಕೃಷಿಕ ಜಗದೀಶ್‌ ಹಾಗೂ ಸುಜಾತಾ ದಂಪತಿ ಪುತ್ರ. ಸದ್ಯ ಅಲ್ಲಿನ ಜಯಪುರದ ಬಿಜಿಎಸ್‌ ಪದವಿಪೂರ್ವ ಕಾಲೇಜಿನಲ್ಲಿ ಉಪನ್ಯಾಸಕ. ‘ಇಷ್ಟೊಂದು ಚಿನ್ನದ ಪದಕಗಳ ನಿರೀಕ್ಷೆ ಇರಲಿಲ್ಲ. ನಿರೀಕ್ಷೆ ಇಲ್ಲದೇ ಬಂದಿರುವುದರಿಂದ ತುಂಬಾ ಖುಷಿ ಆಗಿದೆ. ಪರೀಕ್ಷೆ ಉದ್ದೇಶಕ್ಕೆ ಓದಲಿಲ್ಲ. ಜ್ಞಾನ ವೃದ್ಧಿಸಿಕೊಳ್ಳಲು ಓದಿದೆ’ ಎಂದು ಅವರು ಹೇಳಿದರು.

‘ನನ್ನ ಅಜ್ಜ ಸತೀಶಪ್ಪ ಕೂಡ ಇಲ್ಲಿಯೇ ಎಂಎ ಕನ್ನಡ ಓದಿದ್ದರು. ಅವರಿಗೆ ಕಾರಣಾಂತರದಿಂದ ರ‌್ಯಾಂಕ್ ಪಡೆಯಲು ಆಗಿರಲಿಲ್ಲ. ಇಲ್ಲಿಗೆ ಎಂಎಗೆ ಪ್ರವೇಶ ಪಡೆಯಲು ಬಂದಾಗಲೇ ಅದನ್ನು ಹೇಳಿದ್ದರು. ಆಗಲೇ ರ‌್ಯಾಂಕ್ ಪಡೆಯುವ ಸಂಕಲ್ಪ ಮಾಡಿದ್ದೆ. ಅದು ಈಡೇರಿದೆ. ಅಜ್ಜ ಕೂಡ ಬಂದು ಈ ಸಂತಸದ ಕ್ಷಣಕ್ಕೆ ಸಾಕ್ಷಿಯಾಗಿದ್ದಾರೆ’ ಎಂದರು.

ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಅಧ್ಯಕ್ಷತೆ ವಹಿಸಿದ್ದರು. ಕುಲಪತಿ ಶರತ್ ಅನಂತಮೂರ್ತಿ, ಶಾಲಾ ಶಿಕ್ಷಣ ಹಾಗೂ ಸಾಕ್ಷರತಾ ಇಲಾಖೆ ಸಚಿವ ಮಧು ಬಂಗಾರಪ್ಪ, ವಿಧಾನ ಪರಿಷತ್ ಸದಸ್ಯ ಡಿ.ಎಸ್.ಅರುಣ್ ಪಾಲ್ಗೊಂಡಿದ್ದರು.

ಎಂಬಿಎ ಓದುವಾಗಲೇ ಪಾರ್ಟ್‌ಟೈಂ ಕೆಲಸ

ಎಂಬಿಎ ವ್ಯವಹಾರ ನಿರ್ವಹಣಾ ಅಧ್ಯಯನ ವಿಭಾಗದಲ್ಲಿ ಐದು ಚಿನ್ನದ ಪದಕಗಳನ್ನು ಪಡೆದಿರುವ ಶಿವಮೊಗ್ಗದ ಎಸ್.ರಕ್ಷಿತ್, ಸದ್ಯ ಪಿನಾಕಲ್ ಕಂಪನಿ ಉದ್ಯೋಗಿ. ರಕ್ಷಿತ್ ತಂದೆ ಗಾರೆ ಕೆಲಸ ಮಾಡುತ್ತಾರೆ. ಅಮ್ಮ ಟೈಲರ್‌.

‘ಬಿ.ಕಾಂ ಮುಗಿಸಿದಾಗಲೇ ಯಾವುದಾದರೂ ಕೆಲಸಕ್ಕೆ ಸೇರೋಣ ಅನಿಸಿತ್ತು. ಪಾರ್ಟ್ ಟೈಂ ಕೆಲಸ ಮಾಡುತ್ತಲೇ ಎಂಬಿಎ ಓದಿದೆ ಎನ್ನುವ ರಕ್ಷಿತ್, ಐದು ಪದಕಗಳನ್ನು ಪಡೆಯಲು ಕಷ್ಟ ಆಗಿಲ್ಲ. ಬೆಳಿಗ್ಗೆ 7ಕ್ಕೆ ಮನೆ ಬಿಡುತ್ತಿದ್ದೆ. ರಾತ್ರಿ ಮನೆಗೆ ವಾಪಸ್‌ ಹೋಗುತ್ತಿದ್ದೆ’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.