ADVERTISEMENT

ಭೂಕುಸಿತ ಸ್ಥಳಗಳ ಗುರುತು, ಪರಿಹಾರ ಕ್ರಮ;ಸರ್ಕಾರಕ್ಕೆ₹ 80 ಕೋಟಿ ವೆಚ್ಚದ ಪ್ರಸ್ತಾವ

ಜಿಎಸ್‌ಐ ವರದಿ; ಜಿಲ್ಲೆಯಲ್ಲಿ 306 ಸಂಭವನೀಯ ಭೂಕುಸಿತ ಸ್ಥಳಗಳ ಗುರುತು, 24 ಅತಿಸೂಕ್ಷ್ಮ

​ಪ್ರಜಾವಾಣಿ ವಾರ್ತೆ
Published 20 ಜೂನ್ 2025, 6:47 IST
Last Updated 20 ಜೂನ್ 2025, 6:47 IST
ಮೂರು ವರ್ಷಗಳ ಹಿಂದೆ ಸಾಗರ ತಾಲ್ಲೂಕಿನ ಅಂಬಾರಗುಡ್ಡದ ಬಳಿ ಗುಡ್ಡ ಕುಸಿದಿದ್ದ ನೋಟ (ಪ್ರಜಾವಾಣಿ ಸಂಗ್ರಹ ಚಿತ್ರ)
ಮೂರು ವರ್ಷಗಳ ಹಿಂದೆ ಸಾಗರ ತಾಲ್ಲೂಕಿನ ಅಂಬಾರಗುಡ್ಡದ ಬಳಿ ಗುಡ್ಡ ಕುಸಿದಿದ್ದ ನೋಟ (ಪ್ರಜಾವಾಣಿ ಸಂಗ್ರಹ ಚಿತ್ರ)   

ಶಿವಮೊಗ್ಗ: 24 ಅತಿಸೂಕ್ಷ್ಮ ಸ್ಥಳಗಳು ಸೇರಿದಂತೆ ಶಿವಮೊಗ್ಗ ಜಿಲ್ಲೆಯಲ್ಲಿ ಸಂಭವನೀಯ ಭೂಕುಸಿತದ 306 ಸ್ಥಳಗಳನ್ನು ಭಾರತೀಯ ಭೂ ಸರ್ವೇಕ್ಷಣಾ ಇಲಾಖೆ (GSI-Geological Survay of India) ಗುರುತಿಸಿದೆ.

ಜಿಎಸ್‌ಐ ವರದಿ ಆಧರಿಸಿ ಭೂಕುಸಿತ ತಡೆಯಲು ಹಾಗೂ ಸಂಭವನೀಯ ಆಪತ್ತು ನಿರ್ವಹಣೆಗೆ ಜಿಲ್ಲಾ ವಿಪತ್ತು ನಿರ್ವಹಣಾ ಕೋಶ ₹80 ಕೋಟಿ ವೆಚ್ಚದ ಕಾರ್ಯಯೋಜನೆ ಸಿದ್ಧಪಡಿಸಿ ಆರು ತಿಂಗಳ ಹಿಂದೆ ಸರ್ಕಾರಕ್ಕೆ ಸಲ್ಲಿಸಿದೆ. ಕೇಂದ್ರದ ಮಿಟಿಗೇಷನ್‌ ಫಂಡ್‌ನಿಂದ ಹಣ ಪಡೆದು ರಾಜ್ಯ ಸರ್ಕಾರ ಕೊಡಬೇಕಿದೆ. ಅದಿನ್ನೂ ಆಗಿಲ್ಲ.

ಮತ್ತೆ ಮನೆ ಮಾಡಿದ ಆತಂಕ:

ADVERTISEMENT

ಹೊಸನಗರ ತಾಲ್ಲೂಕಿನ ಅರಮನೆಕೊಪ್ಪ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕುಂದಗಲ್‌ನಲ್ಲಿ ಮೂರು ದಿನಗಳ ಹಿಂದೆ ಭೂ ಕುಸಿತ ಆಗಿದೆ. ಈಗ ಮತ್ತೊಂದು ಮಳೆಗಾಲ ಶುರುವಾಗಿದ್ದು, ಮಲೆನಾಡಿನಲ್ಲಿ ಭೂ ಕುಸಿತದ ಆತಂಕ ಮತ್ತೆ ಮನೆಮಾಡಿದೆ. ಹೀಗಾಗಿ ಜಿಎಸ್‌ಐ ವರದಿ ಮತ್ತೆ ಮುನ್ನೆಲೆಗೆ ಬಂದಿದೆ.

ಜಿಎಸ್‌ಐ ತಜ್ಞರು ಶಿವಮೊಗ್ಗ ಜಿಲ್ಲೆಯಲ್ಲಿ ಭೂ ಕುಸಿತದ ಸಾಧ್ಯತೆಯ ಪ್ರದೇಶಗಳನ್ನು ಸೂಕ್ಷ್ಮ, ಅತಿಸೂಕ್ಷ್ಮ ಹಾಗೂ ಸಾಮಾನ್ಯ ಎಂದು ವರ್ಗೀಕರಿಸಿದ್ದಾರೆ.

ಅರಣ್ಯ ನಾಶ, ಸ್ಫೋಟಕಗಳ ಬಳಸಿ ವಿಪರೀತ ಗಣಿಗಾರಿಕೆ, ನಗರೀಕರಣ, ಹೆದ್ದಾರಿ ನಿರ್ಮಾಣ, ವಿದ್ಯುತ್, ನೀರಾವರಿ ಯೋಜನೆಗಳ ಅನುಷ್ಠಾನ ಹಾಗೂ ಅಭಿವೃದ್ಧಿ ಚಟುವಟಿಕೆಗಳು ಪಶ್ಚಿಮಘಟ್ಟದ ಸುಸ್ಥಿರ ರಚನೆಗೆ ಪೆಟ್ಟು ನೀಡಿದೆ. ಭೂಕುಸಿತ, ಆಗಾಗ ಸಣ್ಣ ಪ್ರಮಾಣದ ಭೂಮಿ ಕಂಪನ, ಆಳವಾದ ಕಂದಕಗಳ ಸೃಷ್ಟಿಗೆ ಕಾರಣವಾಗುತ್ತಿದೆ ಎಂಬುದನ್ನು ಉಲ್ಲೇಖಿಸಿದ್ದಾರೆ. 

‘ಅಪಾಯದ ಸಾಧ್ಯತೆ ಹೆಚ್ಚಿರುವ ಅತಿಸೂಕ್ಷ್ಮ ಪ್ರದೇಶಗಳಲ್ಲಿ ಪರಿಹಾರ ಕಾರ್ಯಗಳನ್ನು ಜಿಲ್ಲಾ ವಿಪತ್ತು ನಿರ್ವಹಣಾ ಕೋಶ ಕೈಗೆತ್ತಿಕೊಂಡು ಈಗಾಗಲೇ ಸಣ್ಣ ಪ್ರಮಾಣದಲ್ಲಿ ಚಟುವಟಿಕೆ ಕೂಡ ಆರಂಭಿಸಿದೆ. ಸರ್ಕಾರದ ನೆರವು ದೊರೆತಲ್ಲಿ ಶಾಶ್ವತ ಪರಿಹಾರ ಕ್ರಮಗಳನ್ನು ಕೈಗೆತ್ತಿಕೊಳ್ಳಲು ಸಾಧ್ಯ’ ಎಂದು ಜಿಲ್ಲಾ ವಿಪತ್ತು ನಿರ್ವಹಣಾ ಕೋಶದ ತಜ್ಞರೊಬ್ಬರು ಹೇಳುತ್ತಾರೆ.

ಹಿಂದೆಯೂ ವರದಿ ಕಪಾಟು ಸೇರಿತ್ತು:

ಪಶ್ಚಿಮಘಟ್ಟದಲ್ಲಿ ಸಂಭವನೀಯ ಭೂಕುಸಿತದ ಸ್ಥಳಗಳು ಹಾಗೂ ಅದನ್ನು ತಡೆಯಲು ಕೈಗೊಳ್ಳಬೇಕಾದ ಕ್ರಮಗಳ ಬಗ್ಗೆ ರಾಜ್ಯ ಜೀವ ವೈವಿಧ್ಯಮಂಡಳಿ ಅಧ್ಯಯನ ನಡೆಸಿತ್ತು. ಆಗಲೂ ಜಿಎಸ್‌ಐ ಹಾಗೂ ಇಸ್ರೊ ಕೈಜೋಡಿಸಿದ್ದವು. 2021ರ ಏಪ್ರಿಲ್ 1ರಂದು ಅಂದಿನ ಜೀವವೈವಿಧ್ಯ ಮಂಡಳಿ ಅಧ್ಯಕ್ಷ ಅನಂತ ಹೆಗಡೆ ಅಶೀಸರ ಸರ್ಕಾರಕ್ಕೆ ವರದಿ ಸಲ್ಲಿಸಿದ್ದರು.

ಭಾರಿ ಭೂ-ಕುಸಿತ ಪ್ರಕರಣಗಳನ್ನು ನೈಸರ್ಗಿಕ ವಿಪತ್ತು ವ್ಯಾಖ್ಯೆಯಡಿ ತರುವಂತೆ, ಭೂ-ಕುಸಿತ ನಿಯಂತ್ರಣ ಮಾರ್ಗೋಪಾಯಗಳ ಬಗ್ಗೆ ಕ್ರಿಯಾ ಯೋಜನೆ ರೂಪಿಸಿ, ಕಾಲಮಿತಿಯಲ್ಲಿ ವೈಜ್ಞಾನಿಕವಾಗಿ ಅನುಷ್ಠಾನಗೊಳಿಸಲು ಮಂಡಳಿ ಶಿಫಾರಸು ಮಾಡಿತ್ತು. ಆದರೆ ಯಾವುದೇ ಕ್ರಮ ಆಗದೇ ಆ ವರದಿ ಕಪಾಟು ಸೇರಿದೆ.

ಮಳೆಗಾಲ; ಮಲೆನಾಡಿನಲ್ಲಿ ಭೂಕುಸಿತದ ಆತಂಕ ಜಿಎಸ್‌ಐ ವರದಿ ಆಧರಿಸಿ ಪರಿಹಾರ ಕ್ರಮಗಳಿಗೆ ಸಿದ್ಧತೆ 6 ತಿಂಗಳ ಹಿಂದೆ ಸರ್ಕಾರಕ್ಕೆ ಕಾರ್ಯಯೋಜನೆ ಸಲ್ಲಿಕೆ ಗುರುದತ್ತ ಹೆಗಡೆ ಶಿವಮೊಗ್ಗ ಜಿಲ್ಲಾಧಿಕಾರಿ

ಭೂ ಕುಸಿತದಿಂದ ಬಹಳಷ್ಟು ಜೀವ ಹಾನಿ ಆದಾಗ ಮಾತ್ರ ಶಾಶ್ವತ ಪರಿಹಾರ ಕ್ರಮದ ಬಗ್ಗೆ ಚರ್ಚೆಯಾಗುತ್ತದೆ. ಅನಂತರ ಸರ್ಕಾರ ಮರೆತು ಬಿಡುತ್ತದೆ. ಆದರೆ ಮಲೆನಾಡಿನ ಜನ ಆತಂಕದಲ್ಲಿಯೇ ಬದುಕಬೇಕಿದ
ಅನಂತ ಹೆಗಡೆ ಅಶೀಸರ ರಾಜ್ಯ ಜೀವ ವೈವಿಧ್ಯ ಮಂಡಳಿ ಮಾಜಿ ಅಧ್ಯಕ್ಷ
ಸಂಭವನೀಯ ಭೂ ಕುಸಿತದ ಸ್ಥಳಗಳನ್ನು ಗುರುತಿಸಿ ಅಧಿಕಾರಿಗಳು ನಿಗಾ ಇಟ್ಟಿದ್ದಾರೆ. ಆಗುಂಬೆ ಘಾಟಿಯಲ್ಲಿ ವಾಹನ ಸಂಚಾರ ಕೂಡ ನಿಷೇಧಿಸಲಾಗಿದೆ.
ಗುರುದತ್ತ ಹೆಗಡೆ ಶಿವಮೊಗ್ಗ ಜಿಲ್ಲಾಧಿಕಾರಿ

ಜಿಎಸ್‌ಐ ಗುರುತಿಸಿದ 24 ಅತಿಸೂಕ್ಷ್ಮ ಪ್ರದೇಶ.. ಶಿವಮೊಗ್ಗ ಜಿಲ್ಲೆಯಲ್ಲಿ ಹೊಸನಗರ ಸಾಗರ ಹಾಗೂ ತೀರ್ಥಹಳ್ಳಿ ತಾಲ್ಲೂಕುಗಳಲ್ಲಿ ಸಂಭವನೀಯ ಭೂ ಕುಸಿತದ 24 ಅತಿ ಸೂಕ್ಷ್ಮ ಸ್ಥಳಗಳನ್ನು ಜಿಎಸ್‌ಐ ಗುರುತಿಸಿದೆ. ಹೊಸನಗರ ತಾಲ್ಲೂಕಿನ ನಿಟ್ಟೂರು ಹೊಸೂರು ಸಂಪೆಕಟ್ಟೆ ಕೈರಗುಂದ ಅರಮನೆಕೊಪ್ಪ ಹಾಗೂ ಕರೀಮನೆ ಸಾಗರ ತಾಲ್ಲೂಕಿನ ಆನಂದಪುರ ಕಲ್ಮನೆ ಯಡಜಿಗಳಮನೆ ಆವಿನಹಳ್ಳಿ ಬಾರಂಗಿ ಹೋಬಳಿಯ ತಲವಾಟ ಬಾರಂಗಿ ಅರಳಗೋಡು ಬನುಕುಳಿ ಭೀಮನೇರಿ ಕರೂರು ಹೋಬಳಿಯ ಚನ್ನಗೊಂಡ ಕುದರೂರು ಸಣ್ಣಶಾನುಭೋಗ ತುಮರಿ ತೀರ್ಥಹಳ್ಳಿ ತಾಲ್ಲೂಕಿನ ಆಗುಂಬೆ ಬಿದರಗೋಡು ಹೊಸಳ್ಳಿ ಕುಡುಮಲ್ಲಿಗೆ ಮಂಡಗದ್ದೆ ಹಾಗೂ ಮುತ್ತೂರು ಹೋಬಳಿಯ ದೇವಂಗಿ ಈ ಪಟ್ಟಿಯಲ್ಲಿ ಸೇರಿವೆ.

ನಾಲ್ಕು ಜಿಲ್ಲೆಗಳಲ್ಲಿ ಜಿಎಸ್‌ಐ ಅಧ್ಯಯನ.. ಶಿವಮೊಗ್ಗ ಚಿಕ್ಕಮಗಳೂರು ಉಡುಪಿ ಹಾಗೂ ಉತ್ತರ ಕನ್ನಡ ಜಿಲ್ಲೆಗಳಲ್ಲಿ ಅಧ್ಯಯನ ನಡೆಸಿರುವ ಭಾರತೀಯ ಭೂ ಸರ್ವೇಕ್ಷಣಾ ಇಲಾಖೆಯ ತಜ್ಞರು ಇದಕ್ಕಾಗಿ ಇಸ್ರೊದಿಂದ ಪಡೆದ ಉಪಗ್ರಹ ಆಧಾರಿತ ಚಿತ್ರಗಳ ಆಧರಿಸಿ ಹಾಗೂ ಸ್ಥಳ ಪರಿಶೀಲನೆ ನಡೆಸಿ ವರದಿ ನೀಡಿದ್ದಾರೆ. ಸಂಭವನೀಯ ಭೂ ಕುಸಿತದ ಸ್ಥಳದ ಸುತ್ತಲೂ ತಡೆಗೋಡೆ ನಿರ್ಮಾಣ ಗುಡ್ಡಗಳಲ್ಲಿ ಸ್ವಾಭಾವಿಕ ನೀರು ಹರಿವಿನ ತಾಣಗಳ ಗುರುತಿಸಿ ಸರಾಗವಾಗಿ ಹರಿದುಹೋಗುವಂತೆ ವ್ಯವಸ್ಥೆ ಮಾಡುವುದು ಅತಿಸೂಕ್ಷ್ಮ ಪ್ರದೇಶದಲ್ಲಿ ವಾಸಿಸುತ್ತಿರುವವರ ತೆರವುಗೊಳಿಸುವುದು ಗಣಿಗಾರಿಕೆಗೆ ಸ್ಫೋಟಕಗಳ ಬಳಕೆ ಸ್ಥಗಿತ ಹಾಗೂ ರಸ್ತೆ ನಿರ್ಮಾಣ ಸೇರಿದಂತೆ ಅಭಿವೃದ್ಧಿ ಚಟುವಟಿಕೆಗಳನ್ನು ಕೈಗೆತ್ತಿಕೊಳ್ಳುವಾಗ ಸುಸ್ಥಿರತೆಗೆ ಒತ್ತು ಕೊಡಲು ಶಿಫಾರಸು ಮಾಡಿದ್ದಾರೆ ಎಂದು ತಿಳಿದುಬಂದಿದೆ.

ಅಪಾಯದ ಪ್ರಮಾಣ ತಗ್ಗಿಸಿದ್ದೇವೆ; ಡಿ.ಸಿ ‘ಜಿಎಸ್‌ಐ ಗುರುತಿಸಿರುವ ಬಹುತೇಕ ಅತಿಸೂಕ್ಷ್ಮಪ್ರದೇಶಗಳು ದಟ್ಟ ಕಾಡು ಹಾಗೂ ಜನವಸತಿ ಇಲ್ಲದ ಪ್ರದೇಶಗಳಲ್ಲಿವೆ. ಹೀಗಾಗಿ ಹೆಚ್ಚಿನ ಆತಂಕ ಬೇಡ’ ಎಂದು ಜಿಲ್ಲಾಧಿಕಾರಿ ಗುರುದತ್ತ ಹೆಗಡೆ ಹೇಳುತ್ತಾರೆ. ‘ತೀರ್ಥಹಳ್ಳಿ ತಾಲ್ಲೂಕಿನಲ್ಲಿ ಹೆದ್ದಾರಿ ಪಕ್ಕ ಜನವಸತಿ ಪ್ರದೇಶದ ಸಮೀಪದ ಅತಿಸೂಕ್ಷ್ಮ ಸ್ಥಳಗಳನ್ನು ಗುರುತಿಸಿ ತೀರಾ ತುರ್ತು ಇರುವ ಕಡೆ ಸಣ್ಣ ಪ್ರಮಾಣದಲ್ಲಿ ಭೂಕುಸಿತ ಮಾಡಿಸಿ ಅಪಾಯದ ಪ್ರಮಾಣ ತಗ್ಗಿಸಿದ್ದೇವೆ. ಇದಕ್ಕೆ ಜಿಲ್ಲಾ ವಿಪತ್ತು ನಿರ್ವಹಣಾ ಕೋಶದಲ್ಲಿನ ಅನುದಾನ ಬಳಸಿಕೊಂಡಿದ್ದೇವೆ’ ಎಂದು ಪ್ರತಿಕ್ರಿಯಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.