ADVERTISEMENT

ಪುಸ್ತಕ ಓದುಗರ ಸಂಖ್ಯೆ ಹೆಚ್ಚಾಗಲಿ: ಸವಿತಾ ಆಶಯ

ಓದುಗರ–ಸಾಹಿತಿಗಳ ಮುಕ್ತ ಸಂವಾದಕ್ಕೆ ವೇದಿಕೆಯಾದ ಕರ್ನಾಟಕ ಸಂಘ

​ಪ್ರಜಾವಾಣಿ ವಾರ್ತೆ
Published 5 ಡಿಸೆಂಬರ್ 2022, 4:21 IST
Last Updated 5 ಡಿಸೆಂಬರ್ 2022, 4:21 IST
ಶಿವಮೊಗ್ಗದ ಕರ್ನಾಟಕ ಸಂಘದಲ್ಲಿ ‌ಶನಿವಾರ ನಡೆದ ಸಮಾರಂಭದಲ್ಲಿ ಪುಸ್ತಕ ಬಹುಮಾನ ಪುರಸ್ಕತರನ್ನು ಸನ್ಮಾನಿಸಲಾಯಿತು. ಸವಿತಾ ನಾಗಭೂಷಣ, ಎಂ.ಎನ್. ಸುಂದರರಾಜ್, ಪ್ರೊ.ಎಂ. ಆಶಾಲತಾ ಚಿತ್ರದಲ್ಲಿದ್ದಾರೆ.
ಶಿವಮೊಗ್ಗದ ಕರ್ನಾಟಕ ಸಂಘದಲ್ಲಿ ‌ಶನಿವಾರ ನಡೆದ ಸಮಾರಂಭದಲ್ಲಿ ಪುಸ್ತಕ ಬಹುಮಾನ ಪುರಸ್ಕತರನ್ನು ಸನ್ಮಾನಿಸಲಾಯಿತು. ಸವಿತಾ ನಾಗಭೂಷಣ, ಎಂ.ಎನ್. ಸುಂದರರಾಜ್, ಪ್ರೊ.ಎಂ. ಆಶಾಲತಾ ಚಿತ್ರದಲ್ಲಿದ್ದಾರೆ.   

ಶಿವಮೊಗ್ಗ: ಕನ್ನಡ ಪುಸ್ತಕ ಓದುವವರ ಸಂಖ್ಯೆ ಹೆಚ್ಚಾಗಬೇಕು. ಆಗ ಮಾತ್ರ ಕನ್ನಡ ಲೇಖಕರ ಶ್ರಮ ಸಾರ್ಥಕವಾಗಲಿದೆ ಎಂದು ಕವಯತ್ರಿ ಸವಿತಾ ನಾಗಭೂಷಣ ಹೇಳಿದರು.

ಇಲ್ಲಿನ ಕರ್ನಾಟಕ ಸಂಘದಲ್ಲಿ ಶನಿವಾರ ಸಂಜೆ ಆಯೋಜಿಸಿದ್ದ ಪುಸ್ತಕ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಅವರು ಮಾತನಾಡಿದರು.

ಬರಹಗಾರ, ಲೇಖಕನಿಗೆ ಹತ್ತಾರು ಪ್ರಶಸ್ತಿಗಳು ಬರುತ್ತವೆ. ಆದರೆ, ಅವರು ಬರೆದ ಕಥೆ ಅಥವಾ ಕವನ ಓದುಗರನ್ನು ತಲುಪಿದಾಗ ಮಾತ್ರ ಬದುಕಿಗೆ ತೃಪ್ತಿ ಸಿಗುತ್ತದೆ ಎಂದರು.

ADVERTISEMENT

ಕನ್ನಡ ಸಾಂಸ್ಕೃತಿಕ, ಸಾರಸ್ವತ ಲೋಕದಲ್ಲಿ ಕರ್ನಾಟಕ ಸಂಘದ ಹೆಸರು ಚಿರಸ್ಥಾಯಿಯಾಗಿದೆ. ಕೆಲವು ಸಂಘ–ಸಂಸ್ಥೆಗಳು ಐದರಿಂದ ಹತ್ತು ವರ್ಷಗಳವರೆಗೆ ಮಾತ್ರ ಕಾರ್ಯನಿರ್ವಹಿಸುತ್ತವೆ. ಕೆಲವು ಅನುದಾನ ಬಂದಾಗ ಮಾತ್ರ ಕಾರ್ಯಚಟುವಟಿಕೆ ನಡೆಸುತ್ತವೆ. ಆದರೆ, 92 ವಸಂತಗಳನ್ನು ಕಂಡಿರುವ ಸಂಘವು ಕನ್ನಡವನ್ನು ಜಾಗೃತಗೊಳಿಸುವ ಕೆಲಸ ಮಾಡುತ್ತಿದೆ ಎಂದು ಪ್ರಶಸ್ತಿ ಪುರಸ್ಕೃತರಾದ ಮೋಹನ್ ಮಾತನಾಡಿದರು.

ಸಂಘ ಅಥವಾ ಸಂಘಟನೆ ಬೆಳೆಯುವುದು ಕಷ್ಟ. ಅದರಲ್ಲೂ ಸರ್ಕಾರೇತರ ಸಂಸ್ಥೆಗಳು ಬೆಳೆಯುವುದು ಸುಲಭದ ಮಾತಲ್ಲ. ಸಾಹಿತ್ಯ ಕೂಡ ಕಲೆಯ ಒಂದು ಅಂಗವಾಗಿದ್ದು, ಅಂತಹ ಸಾಹಿತ್ಯ ಚಟುವಟಿಕೆಗೆ ಕರ್ನಾಟಕ ಸಂಘ ವೇದಿಕೆ ಕಲ್ಪಿಸಿದೆ ಎಂದು ಲೇಖಕಿ ದೀಪಾ ಪಡಕಿ ತಿಳಿಸಿದರು.

‘ಕರ್ನಾಟಕ ಸಂಘ ನೀಡುವ ಪ್ರಶಸ್ತಿ ಪ್ರತಿಷ್ಠಿತವಾಗಿದೆ. ಕುವೆಂಪು ಅವರ ಹೆಸರಿನ ಪ್ರಶಸ್ತಿ ನನ್ನ ಲೇಖನಕ್ಕೆ ಸಿಕ್ಕಿರುವುದು ಖುಷಿ ಕೊಟ್ಟಿದೆ. ಅದರಲ್ಲೂ ಪಾರದರ್ಶಕವಾಗಿ ಪ್ರಶಸ್ತಿಗೆ ಆಯ್ಕೆ ಮಾಡುವುದು ಹೆಮ್ಮೆಯ ವಿಚಾರವಾಗಿದೆ’ ಎಂದುಲೇಖಕ ಲೋಕೇಶ್ ಅಗಸನಕಟ್ಟೆ ಹೇಳಿದರು.

ಅನುವಾದಕ ಎಂದೂ ಮೂಲಕೃತಿಯ ಹಾದಿಯಲ್ಲಿ ಸಾಗಬೇಕು. ಯಾವುದೇ ಕೃತಿಯನ್ನು ಅನುವಾದಕ್ಕೆ ಆಯ್ಕೆ ಮಾಡುವಾಗ ಸಾಮಾಜಿಕ ಬದ್ಧತೆ ಅತ್ಯವಶ್ಯ. ಯಾವ ಕಾಲಘಟ್ಟದಲ್ಲಿ ಲೇಖಕ ಬರೆದಿರುತ್ತಾನೆ. ಅದು ಸಮಕಾಲೀನಕ್ಕೆ ಸೂಕ್ತವೇ ಎಂಬುದನ್ನು ಗಮನಿಸಬೇಕು ಎಂದು ಪ್ರೇಮಪತ್ರ ಕೃತಿಗೆ ಬಹುಮಾನ ಪಡೆದ ಡಾ.ಎ. ಮೋಹನ್ ಕುಂಟಾರು ಹೇಳಿದರು.

‘ಸಾಹಿತ್ಯ, ಸಂಗೀತದಂತೆ ನನ್ನನ್ನು ಬಹುವಾಗಿ ಕಾಡಿದ್ದು ಧರ್ಮ. ನಾನು ಹುಟ್ಟಿರುವ ಸಮಾಜದ ಕಟ್ಟುಪಾಡುಗಳು, ದೈನಂದಿನ ಬದುಕಿನ ನಿಬಂಧನೆಗಳು, ನಾನು ವ್ಯವಹರಿಸುವ ಸಮಾಜದ ಸ್ವಾತಂತ್ರ್ಯ ಇದೆಲ್ಲವನ್ನೂ ನಾನು ಸೂಕ್ಷ್ಮವಾಗಿ ಪರಿಗಣಿಸಿದ್ದೇನೆ’ ಎಂದು ಭಾರತೀಯ ಧರ್ಮ ಪುಸ್ತಕದ ಲೇಖಕ ಡಾ.ಸರ್ಫ್ರಾಜ್ ಚಂದ್ರಗುತ್ತಿ ತಿಳಿಸಿದರು.

ಸಂಘದ ಅಧ್ಯಕ್ಷ ಎಂ.ಎನ್. ಸುಂದರರಾಜ್, ಗೌರವ ಕಾರ್ಯದರ್ಶಿ ಪ್ರೊ.ಎಂ. ಪ್ರೇಮಲತಾ ಇದ್ದರು.

ಬಹುಮಾನಿತರ ವಿವರ...

ಕುವೆಂಪು ಪ್ರಶಸ್ತಿ: ವೈಷ್ಣವ ಜನತೋ (ಕಾದಂಬರಿ); ಲೋಕೇಶ ಅಗಸನಕಟ್ಟೆ

ಎಂ.ಕೆ. ಇಂದಿರಾ ಪ್ರಶಸ್ತಿ: ಆಮೆ (ಕೃತಿ); ಸ್ನೇಹಲತಾ ದಿವಾಕರ ಕುಂಬ್ಳೆ

ಎನ್.ವಿ. ಪರಮೇಶ್ವರ ಭಟ್ಟ ಪ್ರಶಸ್ತಿ: ಪ್ರೇಮ ಪತ್ರ (ಅನುವಾದಿತ ಸಾಹಿತ್ಯ); ಡಾ.ಎ. ಮೋಹನ್ ಕುಂಟಾರು

ಡಾ.ಜಿ.ಎಸ್. ಶಿವರುದ್ರಪ್ಪ ಪ್ರಶಸ್ತಿ: ಶಯ್ಯಾಗೃಹದ ಸುದ್ದಿಗಳು (ಕವನ ಸಂಕಲನ); ಡಾ.ಶೋಭಾ ನಾಯಕ

ಡಾ.ಹಾ.ಮಾ. ನಾಯಕ ಪ್ರಶಸ್ತಿ: ಓದಿನ ಮನೆ (ಅಂಕಣ ಬರಹ); ದೀಪಾ ಪಡ್ಕೆ

ಡಾ.ಯು.ಆರ್. ಅನಂತಮೂರ್ತಿ ಪ್ರಶಸ್ತಿ: ಬೊಗಸೆ ತುಂಬಾ ನಕ್ಷತ್ರಗಳು; ವಸುಮತಿ ಉಡುಪ

ಡಾ.ಕೆ.ವಿ. ಸುಬ್ಬಣ್ಣ ಪ್ರಶಸ್ತಿ: ಪಂಚಾವರಂ (ನಾಟಕ); ಮಹಾಂತೇಶ ನವಲಕಲ್

ಕುಕ್ಕೆ ಸುಬ್ರಹ್ಮಣ್ಯ ಶಾಸ್ತ್ರಿ ಪ್ರಶಸ್ತಿ: ತಿರೆಯ ತೀರಗಳಲ್ಲಿ ನಾ ಕಂಡಂತೆ (ಪ್ರವಾಸ ಕಥನ); ಎಸ್.ಪಿ. ವಿಜಯಲಕ್ಷ್ಮೀ

ಹಸೂಡಿ ವೆಂಕಟಶಾಸ್ತ್ರಿ ಪ್ರಶಸ್ತಿ: ಡೇಟಾ ದೇವರು ಬಂದಾಯ್ತು (ವಿಜ್ಞಾನ ಕೃತಿ); ಗುರುರಾಜ್ ಎಸ್. ದಾವಣಗೆರೆ

ನಾ.ಡಿಸೋಜ ಪ್ರಶಸ್ತಿ: ಕಥೆಗಳ ತೋರಣ ಭಾಗ–2 (ಮಕ್ಕಳ ಸಾಹಿತ್ಯ); ಶಾಲಿನಿ ಮೂರ್ತಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.