ADVERTISEMENT

ಶರಾವತಿ: ಸಮಾಲೋಚನಾ ಸಭೆ ಇಂದು

ಪಕ್ಷಭೇದ ಮರೆತು ಹೋರಾಟಕ್ಕೆ ಸಜ್ಜುಗೊಂಡ ಶಿವಮೊಗ್ಗ ಜಿಲ್ಲೆ

​ಪ್ರಜಾವಾಣಿ ವಾರ್ತೆ
Published 21 ಜೂನ್ 2019, 17:53 IST
Last Updated 21 ಜೂನ್ 2019, 17:53 IST
ಲಿಂಗನಮಕ್ಕಿ ಜಲಾಶಯದ ಸಂಗ್ರಹ ಚಿತ್ರ
ಲಿಂಗನಮಕ್ಕಿ ಜಲಾಶಯದ ಸಂಗ್ರಹ ಚಿತ್ರ   

ಶಿವಮೊಗ್ಗ: ಜಿಲ್ಲೆಯ ಲಿಂಗನಮಕ್ಕಿ ಜಲಾಶಯದಿಂದ ಬೆಂಗಳೂರಿಗೆ ನೀರು ಹರಿಸುವ ಸರ್ಕಾರದ ಯೋಜನೆಯನ್ನು ಧಿಕ್ಕರಿಸಿ ಪಕ್ಷಾತೀತ ಹೋರಾಟ ನಡೆಸಲು ಜಿಲ್ಲೆಯ ಎಲ್ಲ ರಾಜಕೀಯ ಪಕ್ಷಗಳು, ಪ್ರಗತಿಪರ ಸಂಘಟನೆಗಳು, ಪರಿಸರವಾದಿಗಳು ಹಾಗೂ ಶರಾವತಿ ನದಿಪಾತ್ರದ ಹಳ್ಳಿಗಳ ಜನರು ನಿರ್ಧರಿಸಿದ್ದು, ಈ ಬಗ್ಗೆ ಶನಿವಾರ (ಜೂನ್ 22ರಂದು) ಸಂಜೆ 5ಕ್ಕೆ ಸಾಗರದ ಸರ್ಕಾರಿ ನೌಕರರ ಭವನದಲ್ಲಿ ಸಮಾಲೋಚನಾ ಸಭೆ ಹಮ್ಮಿಕೊಂಡಿದ್ದಾರೆ.

ಬೆಂಗಳೂರಿನ ಕುಡಿಯುವ ನೀರಿನ ಸಮಸ್ಯೆ ಪರಿಹಾರಕ್ಕಾಗಿ 430 ಕಿ.ಮೀ ದೂರದ ಲಿಂಗನಮಕ್ಕಿ ಜಲಾಶಯದಿಂದ ಪೈಪ್‌ಲೈನ್ ಮೂಲಕ ನೀರು ಸಾಗಿಸಲು ಡಿ.ಪಿ.ಆರ್ ಸಿದ್ಧಪಡಿಸುವಂತೆ ಉಪಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ ಆದೇಶ ನೀಡಿದ ಬೆನ್ನಲ್ಲೇ ಜಿಲ್ಲೆಯಲ್ಲಿ ಆಕ್ರೋಶ ವ್ಯಕ್ತವಾಗಿದೆ. ಸರ್ಕಾರದ ಈ ನಿರ್ಧಾರವನ್ನು ಖಂಡಿಸಿ ಹೋರಾಟ ನಡೆಸಲು ಚರ್ಚೆಗಳು ಆರಂಭಗೊಂಡಿವೆ. ಹೋರಾಟದ ಭೂಮಿಕೆ ಸಿದ್ಧಪಡಿಸಲು ಈಗಾಗಲೇ ಸಾಮಾಜಿಕ ಜಾಲತಾಣವನ್ನು ಪ್ರಮುಖವಾಗಿ ಬಳಸಿಕೊಂಡು ‘ಶರಾವತಿ ನದಿಗಾಗಿ ನಾವು’ ಎಂಬ ವೇದಿಕೆಅಸ್ತಿತ್ವಕ್ಕೆ ಬಂದಿದೆ.

ಲಿಂಗನಮಕ್ಕಿ ಜಲಾಶಯದಿಂದ ನೀರು ಹರಿಸುವುದರಿಂದ ಉಂಟಾಗಬಹುದಾದ ಸಮಸ್ಯೆಗಳು, ಪರಿಣಾಮಗಳ ಕುರಿತು ಈಗಾಗಲೇ ಸರ್ಕಾರಕ್ಕೆ ಮನವರಿಕೆ ಮಾಡಿಕೊಡುವ ಚಿಂತನೆ ನಡೆದಿದೆ. ಕಾಂಗ್ರೆಸ್‌ ಮುಖಂಡ ಕಾಗೋಡು ತಿಮ್ಮಪ್ಪ, ಶಾಸಕ ಹರತಾಳು ಹಾಲಪ್ಪ, ಸಾಹಿತಿ ನಾ.ಡಿಸೋಜ, ರಂಗಕರ್ಮಿಗಳಾದ ಕೆ.ವಿ.ಅಕ್ಷರ, ಪ್ರಸನ್ನ, ಗ್ರಾಮ ಪಂಚಾಯಿತಿ ಸದಸ್ಯರಿಂದ ಆರಂಭಗೊಂಡು ಮಾಜಿ ಸಚಿವರು, ಹಾಲಿ ಶಾಸಕರು, ರಾಜಕೀಯ ಮುಖಂಡರು, ಪ್ರಗತಿಪರ ಹೋರಾಟಗಾರರು ಒಳಗೊಂಡಂತೆ ಹಂತ ಹಂತವಾಗಿ ಹೋರಾಟ ರೂಪಿಸಲು ಸಿದ್ಧತೆ ನಡೆದಿದೆ.

ADVERTISEMENT

ಚಳವಳಿಗಳ ನೆಲವೀಗ ‘ಶರಾವತಿ ಉಳಿಸಿ’ ಎಂಬ ಮತ್ತೊಂದು ಬದುಕಿನ ಹೋರಾಟಕ್ಕೆ ಅಣಿಯಾಗತೊಡಗಿದೆ. ಸಮಾಜವಾದಿ ಚಳವಳಿ, ಭೂಮಿ ಹಕ್ಕಿನ ಗೇಣಿ ಹೋರಾಟ, ಈಚಿನ ‘ತುಂಗಾ ಉಳಿಸಿ’ ಹೋರಾಟಗಳು ಫಲಪ್ರದವಾಗಿ ಜನರ ಬದುಕನ್ನು ಕಟ್ಟಿದ್ದು ಇತಿಹಾಸ. ಈ ನೆಲದಲ್ಲಿ ಚಳವಳಿಯ ಕಾವುಇನ್ನೂ ಆರಿಲ್ಲ ಎಂಬುದು ‘ಶರಾವತಿ ಉಳಿಸಿ’ ಘೋಷಣೆಯೊಂದಿಗೆ ಮತ್ತೆ ಮೊಳಗುವ ದಟ್ಟ ಮುನ್ಸೂಚನೆಗಳು ಕಾಣುತ್ತಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.