ADVERTISEMENT

ಶಿವಮೊಗ್ಗ: ಮೊದಲ ದಿನವೇ 67756 ಲೀಟರ್ ಮದ್ಯ ಖಾಲಿ!

6 ಅಂಗಡಿಗಳ ಸಂಗ್ರಹ ಸಂಪೂರ್ಣ ಖಾಲಿ

​ಪ್ರಜಾವಾಣಿ ವಾರ್ತೆ
Published 4 ಮೇ 2020, 14:32 IST
Last Updated 4 ಮೇ 2020, 14:32 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಶಿವಮೊಗ್ಗ: ಜಿಲ್ಲೆಯ 151 ಅಂಗಡಿಗಳಲ್ಲಿ ಸೋಮವಾರ ಬೆಳಿಗ್ಗೆಯಿಂದ ಮದ್ಯ ಮಾರಾಟ ಆರಂಭವಾಗಿದ್ದು, ಮದ್ಯ ಪ್ರಿಯರು ಸರದಿ ಸಾಲಿನಲ್ಲಿ ನಿಂತು ಖರೀದಿಸಿದರು. ಜಿಲ್ಲಾ ಕೇಂದ್ರದಿಂದ ತಾಲ್ಲೂಕುಗಳಿಗೆ ಬಸ್‌ ಸಂಚಾರ ಆರಂಭವಾಗಿದ್ದು ಸಾಮಾನ್ಯ ಜನರ ಸಂತಸಕ್ಕೆ ಕಾರಣವಾಗಿತ್ತು.

ಮೊದಲ ದಿನವೇ 50,256 ಸಾವಿರ ಲೀಟರ್ ಲಿಕ್ಕರ್, 17,500 ಲೀಟರ್ ಬಿಯರ್ ಮಾರಾಟವಾಗಿವೆ. 6 ಅಂಗಡಿಗಳ ಸಂಗ್ರಹ ಸಂಪೂರ್ಣ ಖಾಲಿಯಾಗಿವೆ.

ಬೆಳಿಗ್ಗೆ 9ರಿಂದಲೇ ಮದ್ಯದ ಅಂಗಡಿಗಳು ಬಾಗಿಲು ತೆರೆದಿದ್ದವು. ಜನರು ಅಂತರ ಕಾಯ್ದುಕೊಂಡು, ಮಾಸ್ಕ್‌ ಧರಿಸಿ ಸರದಿಯಲ್ಲಿ ಸಾಗಿದರು. ಎಂಎಸ್‌ಐಎಲ್‌ ಸೇರಿದಂತೆ ಕೆಲವು ಅಂಗಡಿಗಳ ಬಳಿ ಭಾರಿ ಜನಸಂದಣಿ ಕಂಡು ಬಂತು. ಒಳ ಪ್ರದೇಶಗಳ ಅಂಗಡಿಗಳ ಮುಂದೆ ಸಾಧಾರಣ ಜನರು ಇದ್ದರು.

ADVERTISEMENT

ಬಹುತೇಕ ಅಂಗಡಿಗಳ ಮುಂದೆ ಬ್ಯಾರಿಕೇಡ್ ಅಳವಡಿಸಲಾಗಿತ್ತು. ಅಗತ್ಯ ಇರುವ ಕಡೆ ಪೊಲೀಸ್ ಭದ್ರತೆ ಒದಗಿಸಲಾಗಿತ್ತು.

ಕೆಲವರು ಮದ್ಯ ಖರೀದಿಸಿದ ನಂತರ ಅಲ್ಲೇ ಕುಡಿದು ಸಂತಸ ವ್ಯಕ್ತಪಡಿಸಿದರು. ಪೊಲೀಸರು ಬರುತ್ತಿದ್ದಂತೆ ಅಲ್ಲಿಂದ ಕಾಲ್ಕಿತ್ತರು. ಮದ್ಯದಂಗಡಿ ಮಾಲೀಕರು, ಸಿಬ್ಬಂದಿ ಮಾಸ್ಕ್‌ ಧರಿಸಿ ನಿಯಮಗಳನ್ನು ಪಾಲಿಸಿದರು. ಏಕ ಕಾಲಕ್ಕೆ ಐದು ಜನರಿಗೆ ಮದ್ಯ ಖರೀದಿಸಲು ಅವಕಾಶ ನೀಡಲಾಗಿತ್ತು. ಮೊದಲ ದಿನ ಒಬ್ಬರಿಗೆ ಒಂದು ಬಾಟಲ್, ಅರ್ಧ ಬಾಟಲ್ ಅಥವಾ 90 ಎಂಎಲ್‌, 10 ಪೌಚ್ ಮಾರಾಟ ಮಾಡಲು ಅವಕಾಶ ನೀಡಲಾಗಿತ್ತು. ಬೆಳಿಗ್ಗೆ 9ರಿಂದ ಸಂಜೆ 7ರವರೆಗೆ ಮದ್ಯದಂಗಡಿಗಳು ಕಾರ್ಯನಿರ್ವಹಿಸಿದವು. ಬಹುತೇಕ ಅಂಗಡಿಗಳ ಸಂಗ್ರಹ ಬೇಗನೆ ಖಾಲಿಯಾಯಿತು.

‘67,756 ಲೀಟರ್ ಮದ್ಯ ಒಂದೇ ದಿನ ಮಾರಾಟವಾಗಿರುವುದು ದಾಖಲೆ. ಎಷ್ಟು ಮೊತ್ತದ ಮದ್ಯ. ಆದಾಯ ಎಷ್ಟು ಎನ್ನುವ ಕುರಿತು ಮಾಹಿತಿ ಕಲೆ ಹಾಕಲಾಗುತ್ತಿದೆ’ ಎಂದು ಅಬಕಾರಿ ಇಲಾಖೆ ಉಪ ಆಯುಕ್ತ ಕ್ಯಾ.ಅಜಯ್‌ಕುಮಾರ್ ಮಾಹಿತಿ ನೀಡಿದರು.

ಜಿಲ್ಲೆಯ ಒಳಗೆ ಬಸ್‌ ಸಂಚಾರ: ನಗರದ ಕೆಎಸ್‌ಆರ್‌ಟಿಸಿ ಬಸ್‌ ನಿಲ್ದಾಣದಿಂದ ಜಿಲ್ಲೆಯ ತಾಲ್ಲೂಕು ಕೇಂದ್ರಗಳಿಗೆ ಸೋಮವಾರ ಬಸ್ ಸಂಚಾರ ಆರಂಭಗೊಂಡಿತು. ಮೊದಲ ದಿನ ಸಾರ್ವಜನಿಕರಿಗೆ 45 ಬಸ್‌ಗಳ ಸೇವೆ ಲಭ್ಯವಾಯಿತು.

ಹೊಸನಗರ, ಸಾಗರ, ತೀರ್ಥಹಳ್ಳಿ, ಸೊರಬ, ಭದ್ರಾವತಿ, ಶಿಕಾರಿಪುರ ತಾಲ್ಲೂಕುಗಳ ಮಧ್ಯೆ ಬಸ್ ಸಂಚಾರಕ್ಕೆ ಅವಕಾಶ ಮಾಡಿಕೊಡಲಾಗಿತ್ತು. ಸಾಗರ ಮಾರ್ಗದಲ್ಲಿ ಪ್ರಯಾಣಿಕರ ಸಂಖ್ಯೆ ಹೆಚ್ಚಿತ್ತು. ಸಾಗರದ ಬಸ್ ಬಂದ ಕೂಡಲೇ ಪ್ರಯಾಣಿಕರು ಮುತ್ತಿಕೊಂಡರು. ಕೆಎಸ್‌ಆರ್‌ಟಿಸಿ ಅಧಿಕಾರಿಗಳು ಜನರನ್ನು ನಿಯಂತ್ರಿಸಿ, ಬಸ್‌ ಹತ್ತಲು ಸಹಕರಿಸಿದರು.

ಅಂತರ ಕಾಯ್ದುಕೊಂಡು, ಮಾಸ್ಕ್ ಧರಿಸಿದವರಿಗೆ ಬಸ್ ಹತ್ತಲು ಆದ್ಯತೆ ನೀಡಿದರು. ಬಸ್ ಹತ್ತುವ ಮೊದಲು ಪ್ರಯಾಣಿಕರ ಮೊಬೈಲ್ ನಂಬರ್ ಪಡೆಯಲಾಯಿತು. ಕೈಗೆ ಸ್ಯಾನಿಟೈಸರ್ ಹಾಕಿದ ನಂತರ ಪ್ರಯಾಣಿಕರು ಬಸ್‌ ಹತ್ತಿದರು. ಒಂದು ಬಸ್‌ನಲ್ಲಿ 50 ಸೀಟುಗಳಿದ್ದರೂ, 27 ಪ್ರಯಾಣಿಕರಿಗೆ ಅವಕಾಶ ನೀಡಲಾಗಿತ್ತು.

ಹೊಸನಗರಕ್ಕೆ ಹೋಗುವ ಮಾರ್ಗದ ಬಸ್‌ಗಳು ರಿಪ್ಪನ್‌ಪೇಟೆ, ಆಯನೂರಿನಲ್ಲಿ ನಿಲ್ಲಿಸಲಿಲ್ಲ. ಅಲ್ಲಿ ಅಂತರ ಕಾಪಾಡಿಕೊಳ್ಳಲು ವ್ಯವಸ್ಥೆ ಮಾಡದ ಕಾರಣ ಬಸ್ ನಿಲುಗಡೆಗೆ ಅವಕಾಶ ನೀಡಿಲ್ಲ ಎಂದು ಅಧಿಕಾರಿಗಳು ಮಾಹಿತಿ ನೀಡಿದರು.

‘ಲಾಕ್‌ಡೌನ್ ನಂತರ ಶಿವಮೊಗ್ಗ ವಿಭಾಗದ ಬಸ್‌ಗಳು ನಿಲುಗಡೆ ಮಾಡಿದ ಪರಿಣಾಮ ಒಟ್ಟು ₹ 16 ಕೋಟಿ ನಷ್ಟವಾಗಿದೆ. ಈಗ ಒಂದು ಬಸ್‌ನಲ್ಲಿ ಅರ್ಧದಷ್ಟು ಪ್ರಯಾಣಿಕರ ಸಂಚಾರಕ್ಕೆ ಅವಕಾಶ ಕಲ್ಪಿಸಲಾಗಿದೆ. ದರ ಮಾತ್ರ ಹೆಚ್ಚುವರಿ ಪಡೆಯುತ್ತಿಲ್ಲ. ಈ ಸಮಯದಲ್ಲಿ ಲಾಭಕ್ಕಿಂತ ಜನರ ಆರೋಗ್ಯ ಮುಖ್ಯ’ ಎಂದು ವಿಭಾಗ ನಿಯಂತ್ರಣಾಧಿಕಾರಿ ನವೀನ್ ಮಾಹಿತಿ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.