ADVERTISEMENT

700 ಅನ್ನದಾತರ ಸಾವು ನ್ಯಾಯವೇ: ಮಾಜಿ ಶಾಸಕ ಮಧು ಬಂಗಾರಪ್ಪ ಪ್ರಶ್ನೆ

​ಪ್ರಜಾವಾಣಿ ವಾರ್ತೆ
Published 27 ನವೆಂಬರ್ 2021, 7:30 IST
Last Updated 27 ನವೆಂಬರ್ 2021, 7:30 IST
ಆನವಟ್ಟಿಯ ಕುಬಟೂರು ಗ್ರಾಮದಲ್ಲಿ ನಡೆದ ಗ್ರಾಮ ಪಂಚಾಯಿತಿ ಸದಸ್ಯರ ಸಭೆಯಲ್ಲಿ ಮಾಜಿ ಶಾಸಕ ಮಧು ಬಂಗಾರಪ್ಪ ಅವರು ಅಭ್ಯರ್ಥಿ ಪ್ರಸನ್ನಕುಮಾರ್‌ ಪರವಾಗಿ ಮತಯಾಚಿಸಿದರು.
ಆನವಟ್ಟಿಯ ಕುಬಟೂರು ಗ್ರಾಮದಲ್ಲಿ ನಡೆದ ಗ್ರಾಮ ಪಂಚಾಯಿತಿ ಸದಸ್ಯರ ಸಭೆಯಲ್ಲಿ ಮಾಜಿ ಶಾಸಕ ಮಧು ಬಂಗಾರಪ್ಪ ಅವರು ಅಭ್ಯರ್ಥಿ ಪ್ರಸನ್ನಕುಮಾರ್‌ ಪರವಾಗಿ ಮತಯಾಚಿಸಿದರು.   

ಆನವಟ್ಟಿ: ಮೋದಿ ಸರ್ಕಾರವನ್ನು ಅನ್ನದಾತರು ಹೋರಾಟದ ಮೂಲಕ ಬಗ್ಗಿಸಿದ್ದಾರೆ. ಪೂರ್ವಾಪರ ಆಲೋಚನೆ ಇಲ್ಲದೆ ಜಾರಿಗೆ ತಂದ ಪ್ರಮುಖ ಮೂರು ಕೃಷಿ ಕಾಯ್ದೆಗಳನ್ನು ತಡವಾಗಿ ಹಿಂಪಡೆಯುವ ನಿರ್ಧಾರ ಮಾಡಿದ್ದರ ಪರಿಣಾಮ ಹೋರಾಟದಲ್ಲಿ 700 ಅನ್ನದಾತರ ಸಾವು ಸಂಭವಿಸಿದೆ. ಇದು ನ್ಯಾಯವೇ ಎಂದು ಮಾಜಿ ಶಾಸಕ ಮಧು ಬಂಗಾರಪ್ಪ ಪ್ರಶ್ನಿಸಿದರು.

ಆನವಟ್ಟಿಯ ಕುಬಟೂರು ಗ್ರಾಮದ ಬಂಗಾರ ನಿವಾಸದ ಆವರಣದಲ್ಲಿ ಗುರುವಾರ ವಿಧಾನಪರಿಷತ್ ಚುನಾವಣೆ ಸಂಬಂಧ ಹಮ್ಮಿಕೊಂಡಿದ್ದ ಗ್ರಾಮ ಪಂಚಾಯಿತಿ ಸದಸ್ಯರ ಸಭೆಯಲ್ಲಿ ಅವರು ಮಾತನಾಡಿದರು.

‘ಕಾಂಗ್ರೆಸ್ ಸರ್ಕಾರ ಸ್ಥಳೀಯ ಸಂಸ್ಥೆಗಳಿಗೆ ಪರಮಾಧಿಕಾರ ನೀಡಿತ್ತು. ಆದರೆ, ಬಿಜೆಪಿ ಸರ್ಕಾರ, ಗ್ರಾಮ ಪಂಚಾಯಿತಿಗಳ ಅಧಿಕಾರ ಮೊಟಕುಗೊಳಿಸುವ ಹೀನ ಕೆಲಸಕ್ಕೆ ಕೈ ಹಾಕಿದೆ. ನಾನು ಶಾಸಕನಾಗಿದ್ದಾಗ ಸೊರಬ ತಾಲ್ಲೂಕಿಗೆ ಅತಿ ಹೆಚ್ಚು ಆಶ್ರಯ ಮನೆಗಳನ್ನು ಕೊಟ್ಟಿದ್ದೆ. ಆದರೆ, ಬಿಜೆಪಿ ಸರ್ಕಾರದ ಅವಧಿಯಲ್ಲಿ ಮನೆಗಳನ್ನು ಕೊಟ್ಟು ಹಿಂಪಡೆಯುವ ಮೂಲಕ ಸ್ಥಳೀಯ ಜನಪ್ರತಿನಿಧಿಗಳನ್ನು ಕಡೆಗಣಿಸಿದೆ. ಆದಕಾರಣ ಪರಿಷತ್ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಪ್ರಸನ್ನಕುಮಾರ್‌ ಅವರನ್ನು ಗೆಲ್ಲಿಸುವ ಮೂಲಕ ತಕ್ಕ ಉತ್ತರ ನೀಡಬೇಕು’ ಎಂದು ಹೇಳಿದರು.

ADVERTISEMENT

ವಿಧಾನಪರಿಷತ್ ಸದಸ್ಯ ಆರ್. ಪ್ರಸನ್ನ ಕುಮಾರ್‌, ‘15ನೇ ಹಣಕಾಸಿನಲ್ಲಿ ಅನುದಾನದ ಪ್ರಮಾಣ ಹೆಚ್ಚಾಗಬೇಕಿತ್ತು. ಆದರೆ, 14ನೇ ಹಣಕಾಸಿನ ಅನುದಾನದ ಅರ್ಧದಷ್ಟು ನೀಡಲಾಗಿದೆ. ಎಸ್‌ಬಿಎಂ, ಜೆಜೆಎಲ್ ಯೋಜನೆಯ ಕಾರಣಗಳನ್ನು ನೀಡಿ ಕೊಟ್ಟಿರುವ ಅನುದಾನವನ್ನು ಗ್ರಾಮ ಪಂಚಾಯಿತಿ ಸದಸ್ಯರು ಅಭಿವೃದ್ಧಿ ಕೆಲಸಗಳಿಗೆ ಬಳಕೆ ಮಾಡಲು ಸಾಧ್ಯವಾಗದಂತೆ ಮಾಡಿದೆ’ ಎಂದು ಆರೋಪಿಸಿದರು.

ವಿಧಾನಪರಿಷತ್ ಚುನಾವಣೆಯಲ್ಲಿ ಶೇ 95ರಷ್ಟು ಮತದಾನದ ಹಕ್ಕು ಗ್ರಾಮ ಪಂಚಾಯಿತಿಗೆ ಇರುವುದರಿಂದ ಕಾಂಗ್ರೆಸ್‌ಗೆ ಮತ ಚಲಾಯಿಸಿ, ಬಿಜೆಪಿಗೆ ತಕ್ಕ ಪಾಠ ಕಲಿಸಬೇಕು ಎಂದರು.

ಕಾಂಗ್ರೆಸ್ ಜಿಲ್ಲಾ ಅಧ್ಯಕ್ಷ ಎಚ್.ಎಸ್. ಸುಂದರೇಶ್, ಬ್ಲಾಕ್ ಅಧ್ಯಕ್ಷರಾದ ಆರ್.ಸಿ. ಪಾಟೀಲ್, ಅಣ್ಣಪ್ಪ, ಮುಖಂಡರಾದ ಕಲಗೊಡು ರತ್ನಾಕರ, ಕೆ.ಪಿ. ರುದ್ರಗೌಡ, ಗಣಪತಿ, ಎಂ.ಡಿ. ಶೇಖರ್, ಶ್ರೀಧರ, ಚೌಟಿ ಚಂದ್ರಶೇಖರ್ ಪಾಟೀಲ್, ವಿಜಯಲಕ್ಷ್ಮೀ ಪಾಟೀಲ್, ಶಿವಲಿಂಗೇಗೌಡ, ಕರುಣಾಕರ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.