ADVERTISEMENT

ರೈತರ ಹಿತ ಕಾಪಾಡಲು ಸರ್ಕಾರ ಬದ್ಧ: ಮಧು ಬಂಗಾರಪ್ಪ

ಸಚಿವರ ಭರವಸೆಗೆ ಒಪ್ಪದ ಪ್ರತಿಭಟನಕಾರರು; ಅಣೆಕಟ್ಟೆಯತ್ತ ಸಾಗಿದ ಪಾದಯಾತ್ರೆ: ರೈತ ಮುಖಂಡರು ವಶಕ್ಕೆ

​ಪ್ರಜಾವಾಣಿ ವಾರ್ತೆ
Published 25 ಅಕ್ಟೋಬರ್ 2024, 16:10 IST
Last Updated 25 ಅಕ್ಟೋಬರ್ 2024, 16:10 IST
ಕಾರ್ಗಲ್ ಸಮೀಪದ ಚೈನಾಗೇಟ್ ಬಳಿಯ ಶರಾವತಿ ನದಿದಂಡೆಯಲ್ಲಿ ಲಿಂಗನಮಕ್ಕಿ ಪಾದಯಾತ್ರೆ ಮೊಟಕುಗೊಳಿಸುವಂತೆ ಸಚಿವ ಮಧು ಬಂಗಾರಪ್ಪ ಅವರು ರೈತ ಮುಖಂಡರ ಮನವೊಲಿಸಲು ಯತ್ನಿಸಿದರು
ಕಾರ್ಗಲ್ ಸಮೀಪದ ಚೈನಾಗೇಟ್ ಬಳಿಯ ಶರಾವತಿ ನದಿದಂಡೆಯಲ್ಲಿ ಲಿಂಗನಮಕ್ಕಿ ಪಾದಯಾತ್ರೆ ಮೊಟಕುಗೊಳಿಸುವಂತೆ ಸಚಿವ ಮಧು ಬಂಗಾರಪ್ಪ ಅವರು ರೈತ ಮುಖಂಡರ ಮನವೊಲಿಸಲು ಯತ್ನಿಸಿದರು   

ಕಾರ್ಗಲ್: ‘ಭೂಮಿ ಹಕ್ಕಿಗಾಗಿ ರೈತರು ನಡೆಸುತ್ತಿರುವ ಪಾದಯಾತ್ರೆಯನ್ನು ಕೈಬಿಟ್ಟು, ಸರ್ಕಾರದೊಂದಿಗೆ ಮಾತುಕತೆಗೆ ಮುಂದೆ ಬನ್ನಿ. ರೈತರ ಹಿತ ಕಾಪಾಡಲು ಸರ್ಕಾರ ಬದ್ಧವಾಗಿದೆ’  ಎಂದು ಜಿಲ್ಲಾ ಉಸ್ತುವಾರಿ ಸಚಿವ ಮಧು ಬಂಗಾರಪ್ಪ ತಿಳಿಸಿದರು. 

ಇಲ್ಲಿಗೆ ಸಮೀಪದ ಚೈನಾಗೇಟ್ ಸೇತುವೆಯ ಬಳಿ ಶರಾವತಿ ನದಿ ದಂಡೆಯಲ್ಲಿ ನೂರಾರು ರೈತರು ನಡೆಸಿದ ರಸ್ತೆ ತಡೆ ವೇಳೆ ಅವರು ಪ್ರತಿಭಟನಕಾರರನ್ನು ಉದ್ದೇಶಿಸಿ ಮಾತನಾಡಿದರು.

‘ಮಾಜಿ ಮುಖ್ಯಮಂತ್ರಿ ಬಂಗಾರಪ್ಪ ಅವರ ಮಗನಾಗಿ ರೈತ ಪರ ಕಾಳಜಿಗಳು ನನ್ನಲ್ಲಿವೆ. ಮಾಜಿ ಸಚಿವರಾದ ಕಾಗೋಡು ತಿಮ್ಮಪ್ಪ ಅವರಿಂದ ಹಲವು ಜನಪರವಾದ ರೈತ ಚಿಂತನೆಗಳನ್ನು ಮೈಗೂಡಿಸಿಕೊಂಡಿದ್ದೇನೆ. ರೈತ ಕುಟುಂಬದ ಸಂಕಷ್ಟಗಳ ಬಗ್ಗೆ ಮಾಹಿತಿ ಇರುವ ಕಾರಣ ನಾನು ಈಗಾಗಲೇ ಮುಖ್ಯಮಂತ್ರಿ ಜತೆ ಶಿವಮೊಗ್ಗ ಜಿಲ್ಲೆಯ ರೈತರ ಸಂಕಷ್ಟಗಳ ಬಗ್ಗೆ ಸವಿಸ್ತಾರವಾಗಿ ಚರ್ಚಿಸಿದ್ದೇನೆ’ ಎಂದು ಮಧು ಬಂಗಾರಪ್ಪ ಹೇಳಿದರು. 

ADVERTISEMENT

‘ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರಿಗೂ ಎಲ್ಲ ಸಮಸ್ಯೆಗಳ ಬಗ್ಗೆ ತಿಳಿಸಿ ಗಮನ ಸೆಳೆದಿದ್ದೇನೆ. ಶರಾವತಿ ಮುಳುಗಡೆ ಸಂತ್ರಸ್ತರ ಬವಣೆ, ಕರೂರು ಭಾರಂಗಿ ಹೋಬಳಿಗಳ ಅಭಯಾರಣ್ಯದ ಸಮಸ್ಯೆಗಳು, ಉರುಳುಗಲ್ಲಿನ ಪರಿಸ್ಥಿತಿಗಳ ಬಗ್ಗೆ ಅಧ್ಯಯನ ಮಾಡಿ ಸರ್ಕಾರಕ್ಕೆ ವರದಿ ಸಲ್ಲಿಸಲು ಈಗಾಗಲೇ ಅಧಿಕಾರಿಗಳ ಮಟ್ಟದ ಕಾರ್ಯಪಡೆಯನ್ನು ರಚಿಸಲಾಗಿದೆ. ರೈತ ಮುಖಂಡರು ಬೆಂಗಳೂರಿಗೆ ಬಂದು ವಿಶೇಷ ಕಾರ್ಯಪಡೆಯೊಂದಿಗೆ ಚರ್ಚೆ ನಡೆಸಲು ಅಗತ್ಯವಾದ ವೇದಿಕೆಯನ್ನು ಮುಖ್ಯಮಂತ್ರಿ ಜತೆ ಚರ್ಚಿಸಿ ಅತಿ ಶೀಘ್ರದಲ್ಲಿ ಅವಕಾಶ ಮಾಡಿಕೊಡಲಾಗುವುದು’ ಎಂದರು.

‘ಇಲ್ಲಿಯವರೆಗೂ ಸರ್ಕಾರದ ಮಟ್ಟದಲ್ಲಿ ಆಗಿರುವ ಸಾಧಕ–ಬಾಧಕಗಳ ಬಗ್ಗೆ ಸವಿಸ್ತಾರವಾದ ಚರ್ಚೆಯನ್ನು ಮುಖ್ಯಮಂತ್ರಿ ಮತ್ತು ಸರ್ಕಾರದ ಕಾರ್ಯದರ್ಶಿ ಜತೆ ಮಾತನಾಡಿ ಗಮನ ಸೆಳೆಯೋಣ. ಕೂಡಲೇ ಪಾದಯಾತ್ರೆಯನ್ನು ಕೈ ಬಿಡಿ’ ಎಂದು ರೈತಸಂಘದ ಪ್ರಮುಖರ ಬಳಿ ಕೋರಿದರು.

ಈ ಸಂದರ್ಭದಲ್ಲಿ ರೈತ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ದಿನೇಶ್ ಶಿರವಾಳ, ಶ್ರೀಕರ, ಮಲೆನಾಡು ಭೂ ರೈತರ ಹೋರಾಟ ವೇದಿಕೆ ಅಧ್ಯಕ್ಷ ತೀ.ನಾ ಶ್ರೀನಿವಾಸ, ಮುಖಂಡರಾದ ಜಿ.ಟಿ. ಸತ್ಯನಾರಾಯಣ, ಮಲ್ಲಿಕಾರ್ಜುನ ಹಕ್ರೆ, ಪರಮೇಶ್ವರ ದೂಗೂರು ಹಾಗೂ ಇತರರು ರೈತರ ಸಮಸ್ಯೆಗಳನ್ನು ಮಧು ಬಂಗಾರಪ್ಪ ಅವರ ಗಮನಕ್ಕೆ ತಂದರು.

ಅಂತಿಮವಾಗಿ ಸಚಿವರ ಮಾತಿಗೆ ಪೂರ್ಣವಾಗಿ ಒಪ್ಪದ ರೈತ ಮುಖಂಡರು, ಲಿಂಗನಮಕ್ಕಿ ಪಾದಯಾತ್ರೆಯನ್ನು ಮುಂದುವರಿಸಿದರು.

ಲಿಂಗನಮಕ್ಕಿ ಅಣೆಕಟ್ಟೆ ಮಾರ್ಗದಲ್ಲಿ ಸಾಗಿದ ನೂರಾರು ರೈತರ ಪಾದಯಾತ್ರೆಯನ್ನು ಕಾರ್ಗಲ್ ಚೌಡೇಶ್ವರಿ ದೇವಸ್ಥಾನದ ಬಳಿ ಪೋಲೀಸರು ತಡೆದರು, ರೈತರನ್ನು ವಶಕ್ಕೆ ಪಡೆದು ಪೊಲೀಸ್ ವಾಹನಗಳಲ್ಲಿ ಸಾಗರ ಪಟ್ಟಣಕ್ಕೆ ಕೊಂಡೊಯ್ದರು. ಉಪವಿಭಾಗಾಧಿಕಾರಿ ಯತೀಶ್, ತಹಶೀಲ್ದಾರ್ ಚಂದ್ರಶೇಖರ ನಾಯ್ಕ, ಡಿವೈಎಸ್ಪಿ ಗೋಪಾಲಕೃಷ್ಣ ನಾಯ್ಕ ಇದ್ದರು.

ಕಾರ್ಗಲ್ ಸಮೀಪದ ಚೌಡೇಶ್ವರಿ ದೇವಾಲಯದ ಬಳಿ ಲಿಂಗನಮಕ್ಕಿ ಅಣೆಕಟ್ಟು ಮಾರ್ಗದಲ್ಲಿ ಪಾದಯಾತ್ರೆ ಹೊರಟಿದ್ದ ರೈತ ಮುಖಂಡರನ್ನು ಪೊಲೀಸರು ತಡೆದು ವಶಕ್ಕೆ ಪಡೆದರು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.