
ತೀರ್ಥಹಳ್ಳಿ: ಕರ್ನಾಟಕದ ಶಬರಿಮಲೆ ಅಯ್ಯಪ್ಪ ಸ್ವಾಮಿ ಕ್ಷೇತ್ರವೆಂದೇ ಪ್ರಸಿದ್ಧವಾಗಿರುವ ಇಲ್ಲಿಗೆ ಸಮೀಪದ ಬೆಜ್ಜವಳ್ಳಿಯಲ್ಲಿ ಬುಧವಾರ ಮಕರ ಸಂಕ್ರಾಂತಿ ಮಹೋತ್ಸವ ಮತ್ತು ಶ್ರೀಗಳ ಪೀಠಾರೋಹಣದ ವರ್ಧಂತ್ತೋತ್ಸವ ಸಮಾರಂಭ ವೈಭವದಿಂದ ನಡೆಯಿತು.
ಸಾವಿರಾರು ಭಕ್ತರು ದರ್ಶನ ಪಡೆದು ವಸ್ತ್ರ, ಶಸ್ತ್ರ, ಪಲ್ಲಕ್ಕಿ, ಆಭರಣೋತ್ಸವ (ತಿರುವಾಭರಣ) ವೀಕ್ಷಿಸಿದರು. ಮಧ್ಯಾಹ್ನ ಗುರುಮನೆಯಿಂದ ಅಯ್ಯಪ್ಪನ ಆಭರಣೋತ್ಸವ ಮತ್ತು ಪರಿವಾರ ದೈವಗಳ ರಾಜಪಲ್ಲಕ್ಕಿ ಉತ್ಸವ ನಡೆಯಿತು. ಆಭರಣಗಳು ಸನ್ನಿಧಾನ ತಲುಪುವ ವೇಳೆ ಆಕಾಶದಲ್ಲಿ ಭಕ್ತರಿಗೆ ಗರುಡ ದರ್ಶನವಾಯಿತು. ನಂತರ ದೇವರ ಉಯ್ಯಾಲೆ ಸೇವೆ, ಕನಕಾಭಿಷೇಕ, ಮಹಾಕಲಶ ಕುಂಭಾಭಿಷೇಕ ನಡೆದವು.
ಗುರುಡ ವೀಕ್ಷಣೆಯ ವಿಸ್ಮಯ ನೋಡಲು ಹೊರ ರಾಜ್ಯಗಳಿಂದಲೂ ಭಕ್ತರು ಆಗಮಿಸಿದ್ದರು. ಗುರುಮನೆಯಲ್ಲಿ ಕ್ಷೇತ್ರ ಗಣಗಳ ದೈವದರ್ಶನ ನಂತರ ಉತ್ಸವ ಮೂರ್ತಿಯ ಮೆರವಣಿಗೆ ನಡೆಯಿತು. ವಿಶ್ವಸಂತೋಷ ಭಾರತಿ ಶ್ರೀಪಾದರು ಸಾನ್ನಿಧ್ಯ ವಹಿಸಿದ್ದರು. ಗೌರಿಗದ್ದೆ ಅವಧೂತ ವಿನಯ್ ಗುರೂಜಿ ಆಶೀರ್ವಚನ ನೀಡಿದರು. ಸಾಯಂಕಾಲ ಜ್ಯೋತಿ ಪೂಜೆ, ಅಡ್ಡಪಲ್ಲಕ್ಕಿ ಉತ್ವವ ಜರುಗಿದವು.
ನಟ ಶಿವರಾಜಕುಮಾರ್ ಅಯ್ಯಪ್ಪ ಮಾಲೆ ಧರಿಸಿ ಇರುಮುಡಿ ಹೊತ್ತುಕೊಂಡು ದೇವರ ಸೇವೆ ಮಾಡಿದರು. ನಂತರ ನಡೆದ ಸಾರ್ವಜನಿಕ ಸಭೆಯಲ್ಲಿ ‘ಶ್ರೀ ಹರಿಹರಾತ್ಮಜ ಪೀಠ’ ಪ್ರಶಸ್ತಿ ಸ್ವೀಕರಿಸಿದರು.
ನಂತರ ಮಾತನಾಡಿದ ಅವರು, ‘ನಮ್ಮ ಕುಟುಂಬದವರು ಅಯ್ಯಪ್ಪ ಸ್ವಾಮಿ ಭಕ್ತರು. ಮಾಲಾಧಾರಿಯಾಗಿ ಬೆಜ್ಜವಳ್ಳಿಗೆ ಭೇಟಿ ನೀಡಿರುವುದು ಸಂತೋಷ ತಂದಿದೆ. ಪ್ರೀತಿ, ವಿಶ್ವಾಸದಿಂದ ಧರ್ಮದ ಜತೆಗಿನ ಭಾವನಾತ್ಮಕ ಸಂಬಂಧಗಳು ವೃದ್ಧಿ ಆಗುತ್ತವೆ. ಭಕ್ತಿಯಿಂದ ನಡೆದುಕೊಂಡಾಗ ದೇವರ ಆರ್ಶೀವಾದ ದೊರೆಯುತ್ತದೆ’ ಎಂದರು.
ಶಾಸಕ ಆರಗ ಜ್ಞಾನೇಂದ್ರ ಮಾತನಾಡಿ, ‘ಸನಾತನ ಮೌಲ್ಯಗಳನ್ನು ಅಳಿಸುವುದಕ್ಕೆ ಯಾರಿಂದಲೂ ಸಾಧ್ಯವಿಲ್ಲ. ಧರ್ಮ ರಕ್ಷಣೆಗೆ ನಮ್ಮ ಜನರು ಸಿದ್ಧರಾಗಿದ್ದಾರೆ. ಹೆದರಿಸಿ ಧರ್ಮ ಕಟ್ಟುತ್ತೇವೆ ಎಂದವರಿಗೆ ತಕ್ಕ ಉತ್ತರ ಸಿಗುತ್ತಿದೆ. ಅಯ್ಯಪ್ಪಸ್ವಾಮಿ ಮಾಲಾಧಾರಿಗಳ ಭಕ್ತಿ ಮೆಚ್ಚುವಂತಹದ್ದು. ನಾನು ಕೂಡ ಮಾಲಾಧಾರಿಯಾಗಿ ಶಬರಿಮಲೆ ಅಯ್ಯಪ್ಪಸ್ವಾಮಿ ದರ್ಶನ ಪಡೆದಿದ್ದೇನೆ’ ಎಂದರು.
ಹರಿಹರ ಪೀಠದ ವಿಶ್ವಸಂತೋಷ ಭಾರತೀ ಶ್ರೀಪಾದರು ಮಾತನಾಡಿ, ‘ಬೆಜ್ಜವಳ್ಳಿ ವಿಶೇಷ ಧಾರ್ಮಿಕ ಕ್ಷೇತ್ರವಾಗಿ ಗುರುತಾಗಿದೆ. ಶಿವರಾಜ್‌ಕುಮಾರ್ ಇರುಮುಡಿ ಹೊತ್ತು ಕ್ಷೇತ್ರದಲ್ಲಿ ಸೇವೆ ಸಲ್ಲಿಸಿದ್ದಾರೆ. ಅಯ್ಯಪ್ಪ ಮಾಲಾಧಾರಿಗಳ ಸೇವೆಯನ್ನು ಅಯ್ಯಪ್ಪ ಅನುಗ್ರಹಪೂರ್ವಕವಾಗಿ ಈಡೇರಿಸುತ್ತಾನೆ’ ಎಂದು ಹೇಳಿದರು.
ವೇದಿಕೆಯಲ್ಲಿ ಗೀತಾ ಶಿವರಾಜಕುಮಾರ್, ಎಂಎಡಿಬಿ ಅಧ್ಯಕ್ಷ ಆರ್.ಎಂ.ಮಂಜುನಾಥ ಗೌಡ, ಜಿ.ಪಂ.ಮಾಜಿ ಅಧ್ಯಕ್ಷ ಅಶೋಕಮೂರ್ತಿ, ಗೋವಾ ವಿದ್ಯಾಪ್ರಭೋದಿನಿ ಚೇರ್ಮನ್ ಸಂಜಯ್ ವಲವಾಳ್ಕರ್, ಗೋವಾ ರಾಜ್ಯ ಭಾರತ್ ಸ್ವಾಭಿಮಾನ್ ಪ್ರಭಾರಿ ಕಮಲೇಶ್ ಬಂದೇಕರ್, ಉದ್ಯಮಿ ರಾಘವಶೆಟ್ಟಿ ಇದ್ದರು.
ಜನಪದ ಗಾಯಕ ಕೆ.ಯುವರಾಜ್, ಹುಬ್ಬಳ್ಳಿ ಅಯ್ಯಪ್ಪಸ್ವಾಮಿ ಗುರುಸ್ವಾಮಿ ಶಿವಾನಂದ ಬಾರ್ಕಿ ಶ್ರೀ ಹರಿಹರಾತ್ಮಜ ಪೀಠ ಪ್ರಶಸ್ತಿ ಸ್ವೀಕರಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.