ADVERTISEMENT

ಸಾಗರ | ಮಾರಿಕಾಂಬಾ ದೇವಿಯ ರಾಜಬೀದಿ ಉತ್ಸವ ವೈಭವ

​ಪ್ರಜಾವಾಣಿ ವಾರ್ತೆ
Published 5 ಫೆಬ್ರುವರಿ 2026, 2:54 IST
Last Updated 5 ಫೆಬ್ರುವರಿ 2026, 2:54 IST
ಸಾಗರದಲ್ಲಿ ಮಾರಿಕಾಂಬಾ ದೇವಿಯನ್ನು ತವರುಮನೆಯಿಂದ ಗಂಡನ ಮನೆಗೆ ಕಳುಹಿಸುವ ರಾಜಬೀದಿ ಉತ್ಸವ ಮಂಗಳವಾರ ತಡರಾತ್ರಿ ನಡೆಯಿತು 
ಸಾಗರದಲ್ಲಿ ಮಾರಿಕಾಂಬಾ ದೇವಿಯನ್ನು ತವರುಮನೆಯಿಂದ ಗಂಡನ ಮನೆಗೆ ಕಳುಹಿಸುವ ರಾಜಬೀದಿ ಉತ್ಸವ ಮಂಗಳವಾರ ತಡರಾತ್ರಿ ನಡೆಯಿತು    

ಸಾಗರ: ಇಲ್ಲಿನ ಮಾರಿಕಾಂಬಾ ದೇವಿ ಜಾತ್ರೆ ಪ್ರಯುಕ್ತ ಮಾರಿಕಾಂಬಾ ದೇವಿಯ ಉತ್ಸವಮೂರ್ತಿಯನ್ನು ತವರುಮನೆ ದೇವಾಲಯದಿಂದ ಗಂಡನ ಮನೆ ದೇವಾಲಯಕ್ಕೆ ಕಳುಹಿಸುವ ರಾಜಬೀದಿ ಉತ್ಸವ ಮಂಗಳವಾರ ತಡರಾತ್ರಿ ಅದ್ದೂರಿಯಿಂದ ನಡೆಯಿತು.

ತವರುಮನೆ ದೇವಾಲಯದಲ್ಲಿ ದೇವಿಗೆ ಪೂಜೆ ಸಲ್ಲಿಸಿದ ನಂತರ ಗಂಡನ ಮನೆ ದೇವಸ್ಥಾನದ ಅರ್ಚಕರಿಂದ (ಪೋತರಾಜ) ಚಾಟಿ ಸೇವೆ ನಡೆಯಿತು. ಇದೇ ವೇಳೆ ಅಸಾದಿ ಜನಾಂಗದವರು ದೇವಿಯನ್ನು ನಿಂದಿಸುವ ಶಾಸ್ತ್ರವನ್ನು ನಡೆಸಿದರು.

ನಂತರ ಸಾವಿರಾರು ಸಂಖ್ಯೆಯಲ್ಲಿ ಸೇರಿದ್ದ ಭಕ್ತರ ಹರ್ಷೋದ್ಗಾರದ ನಡುವೆ ಮಧ್ಯರಾತ್ರಿ 1 ಗಂಟೆ ವೇಳೆಗೆ ದೇವಿಯ ಉತ್ಸವಮೂರ್ತಿಯನ್ನು ಹೂವಿನಿಂದ ಅಲಂಕೃತಗೊಳಿಸಿದ ರಥದ ಮೇಲೆ ಕೂರಿಸಲಾಯಿತು.

ADVERTISEMENT

ಮೆರವಣಿಗೆಯಲ್ಲಿ ಹುಲಿವೇಷ, ಡೊಳ್ಳು ಕುಣಿತ, ಬೆದರುಗೊಂಬೆ, ಚಂಡೆ, ಕೀಲುಕುದುರೆ, ಪೂಜಾ ಕುಣಿತ, ತಮಟೆ ವಾದನ ಮೊದಲಾದ ಜಾನಪದ ಕಲಾ ಪ್ರಕಾರಗಳ ತಂಡಗಳು ಭಾಗವಹಿಸಿದ್ದವು. ಶಾಸಕ ಗೋಪಾಲಕೃಷ್ಣ ಬೇಳೂರು ಡೊಳ್ಳು ಕುಣಿತದ ತಂಡದ ಜೊತೆ ಹೆಜ್ಜೆ ಹಾಕಿದರು.

ಇದೇ ಮೊದಲ ಬಾರಿಗೆ ಡಿಜೆ ಸೌಂಡ್ಸ್‌ಗೆ ಮೆರವಣಿಗೆಯಲ್ಲಿ ಅವಕಾಶ ನೀಡಿದ್ದರಿಂದ ಇದರ ಅಬ್ಬರಕ್ಕೆ ಜಾನಪದ ತಂಡಗಳ ಪ್ರದರ್ಶನಕ್ಕೆ ಅಡ್ಡಿಯುಂಟಾಗಿತ್ತು. ಅಶೋಕ ವೃತ್ತದಲ್ಲಿ ಡಿಜೆ ಸೌಂಡ್ಸ್ ಎದುರು ಕೆಲವರು ನರ್ತಿಸುತ್ತ ಅತೀರೇಕದ ವರ್ತನೆ ಮಾಡಿದಾಗ ಪೊಲೀಸರು ಲಾಟಿ ಬೀಸಿ ಗುಂಪನ್ನು ಚದುರಿಸಿದರು.

ಬೆಳಗಿನ ಜಾವ 6 ಗಂಟೆ ಹೊತ್ತಿಗೆ ದೇವಿಯ ಉತ್ಸವ ಮೂರ್ತಿಯನ್ನು ಗಂಡನ ಮನೆ ದೇವಸ್ಥಾನದ ಎದುರಿನಲ್ಲಿ ರಾಜಸ್ತಾನದ ಜೋದಪುರ ಶೈಲಿಯಲ್ಲಿ ನಿರ್ಮಿಸಿರುವ ಭವ್ಯ ಮಂಟಪದ ಗದ್ದುಗೆಯಲ್ಲಿ ಪ್ರತಿಷ್ಠಾಪಿಸಲಾಯಿತು.

ನಂತರ ಸಂಪ್ರದಾಯದಂತೆ ದೇವಿಯ ವಿಗ್ರಹಕ್ಕೆ ಕೋರೆಹಲ್ಲು ಚಿತ್ರಿಸುವ ಶಾಸ್ತ್ರ ನಡೆಯಿತು. ಗದ್ದುಗೆಯಲ್ಲಿ ಪ್ರಥಮ ಪೂಜೆ ನಡೆದ ನಂತರ ಭಕ್ತರಿಗೆ ಭಂಡಾರ ವಿತರಿಸಲಾಯಿತು. ಇಲ್ಲಿಯೂ ದೇವಿಯ ದರ್ಶನ ಪಡೆಯಲು ಮಂಗಳವಾರ ರಾತ್ರಿ 10ರಿಂದಲೇ ಭಕ್ತರು ಸರತಿ ಸಾಲಿನಲ್ಲಿ ನಿಂತಿದ್ದರು.

ಮಾರಿಕಾಂಬಾ ದೇವಸ್ಥಾನದ ಆಡಳಿತ ನಿರ್ವಹಣೆಗೆ ಸಮಿತಿ ಇದ್ದು ದೇವಸ್ಥಾನ ಮುಜರಾಯಿ ಇಲಾಖೆ ವ್ಯಾಪ್ತಿಗೆ ಸೇರದಿದ್ದರೂ ಜಾತ್ರೆಯಲ್ಲಿ ಅಧಿಕಾರಿಗಳ ಹಸ್ತಕ್ಷೇಪಕ್ಕೆ ಸಾರ್ವಜನಿಕ ವಲಯದಲ್ಲಿ ತೀವ್ರ ಅಸಮಾಧಾನ ವ್ಯಕ್ತವಾಗಿದೆ.

ಸಾಗರದಲ್ಲಿ ಮಾರಿಕಾಂಬಾ ದೇವಿಯನ್ನು ತವರುಮನೆಯಿಂದ ಗಂಡನ ಮನೆಗೆ ಕಳುಹಿಸುವ ರಾಜಬೀದಿ ಉತ್ಸವ ಮಂಗಳವಾರ ತಡರಾತ್ರಿ ನಡೆಯಿತು.
ಮಧ್ಯವರ್ತಿಗಳ ಹಾವಳಿ...
ಜಾತ್ರೆಯಲ್ಲಿನ ತಾತ್ಕಾಲಿಕ ವಾಣಿಜ್ಯ ಮಳಿಗಗಳ ಹರಾಜಿನಲ್ಲಿ ಮಧ್ಯವರ್ತಿಗಳ ಹಾವಳಿ ತಡೆಯಲು ಮುಚ್ಚಿದ ಲಕೋಟೆಯಲ್ಲಿ ಟೆಂಡರ್ ಸಲ್ಲಿಸುವ ಪದ್ದತಿಯನ್ನು ಜಾರಿಗೆ ತಂದಿದ್ದರೂ ಮಧ್ಯವರ್ತಿಗಳ ಹಾವಳಿ ನಿಂತಿಲ್ಲ ಎಂದು ವ್ಯಾಪಾರಸ್ಥರು ದೂರುತ್ತಿದ್ದಾರೆ. ಹರಾಜಿನಲ್ಲಿ ಮಳಿಗೆ ಪಡೆದ ಕೆಲವು ಮಧ್ಯವರ್ತಿಗಳು ಜಾತ್ರೆ ಆರಂಭವಾಗಿ ಎರಡು ದಿನ ಕಳೆದರೂ ಗಿರಾಕಿಗಳು ಸಿಗದೆ ಹತಾಶರಾಗಿದ್ದು ಕೆಲವು ಮಳಿಗೆಗಳು ಖಾಲಿ ಉಳಿದಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.