ADVERTISEMENT

ಹೆಗಲತ್ತಿ ಸಂತ್ರಸ್ತ ಕುಟುಂಬಗಳಿಗೆ ಶೀಘ್ರ ಪರಿಹಾರ: ಸಚಿವ ಈಶ್ವರಪ್ಪ

ಕಳೆದ ವರ್ಷ ಗುಡ್ಡ ಜರಿದ ಸ್ಥಳಕ್ಕೆ ಭೇಟಿ

​ಪ್ರಜಾವಾಣಿ ವಾರ್ತೆ
Published 8 ಆಗಸ್ಟ್ 2020, 13:55 IST
Last Updated 8 ಆಗಸ್ಟ್ 2020, 13:55 IST
ತೀರ್ಥಹಳ್ಳಿ ತಾಲ್ಲೂಕಿನ ಹೆಗಲತ್ತಿ ಗ್ರಾಮಕ್ಕೆ ಶನಿವಾರ ಸಚಿವ ಕೆ.ಎಸ್. ಈಶ್ವರಪ್ಪ ಭೇಟಿ ನೀಡಿ ಹಾನಿಗೀಡಾದ ಪ್ರದೇಶ ವೀಕ್ಷಿಸಿ ಸಂತ್ರಸ್ತರ ಅಳಲು ಆಲಿಸಿದರು
ತೀರ್ಥಹಳ್ಳಿ ತಾಲ್ಲೂಕಿನ ಹೆಗಲತ್ತಿ ಗ್ರಾಮಕ್ಕೆ ಶನಿವಾರ ಸಚಿವ ಕೆ.ಎಸ್. ಈಶ್ವರಪ್ಪ ಭೇಟಿ ನೀಡಿ ಹಾನಿಗೀಡಾದ ಪ್ರದೇಶ ವೀಕ್ಷಿಸಿ ಸಂತ್ರಸ್ತರ ಅಳಲು ಆಲಿಸಿದರು   

ತೀರ್ಥಹಳ್ಳಿ:ಕಳೆದ ವರ್ಷಮಲೆಮಹದೇಶ್ವರ ದೇವರ ಗುಡ್ಡ ಜರಿದು ಹಾನಿಯಾಗಿದ್ದತಾಲ್ಲೂಕಿನ ಮಂಡಗದ್ದೆ ಹೋಬಳಿಯ ಹೆಗಲತ್ತಿ ಗ್ರಾಮದ ಸಂತ್ರಸ್ತ ಕುಟುಂಬಗಳಿಗೆ ಶೀಘ್ರ ಸಾಗುವಳಿ ಜಮೀನು ಅಭಿವೃದ್ಧಿಗೆ ಅನುದಾನ ನೀಡಲಾಗುವುದು ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಕೆ.ಎಸ್. ಈಶ್ವರಪ್ಪ ಹೇಳಿದರು.

ಶನಿವಾರ ತಾಲ್ಲೂಕಿನ ಹೆಗಲತ್ತಿ ಗ್ರಾಮಕ್ಕೆ ಭೇಟಿ ನೀಡಿ ಜಮೀನು ಹಾನಿಯಾದ ಪ್ರದೇಶವನ್ನು ವೀಕ್ಷಿಸಿ ಮಾತನಾಡಿದರು.

ಹೆಗಲತ್ತಿ ಗ್ರಾಮದಲ್ಲಿ ಹಾನಿಗೊಳಗಾದ ಪ್ರದೇಶದ ಅಭಿವೃದ್ಧಿಗೆ ಎನ್‌ಡಿಆರ್‌ಎಫ್ ಪ್ರಕೃತಿ ವಿಕೋಪ ಪರಿಹಾರ ನಿಧಿ ಅಡಿಯಲ್ಲಿ ಅನುದಾನ ಮಂಜೂರು ಮಾಡಲಾಗುತ್ತದೆ. ಈ ಭಾಗದಲ್ಲಿ ಮಳೆಯಾಗುತ್ತಿರುವುದರಿಂದ ಮತ್ತೊಮ್ಮೆ ಗುಡ್ಡ ಜರಿಯಬಹುದು ಎಂಬ ಆತಂಕ ಸಂತ್ರಸ್ತ ಕುಟುಂಬಗಳಲ್ಲಿದೆ. ಸಂತ್ರಸ್ತರಿಗೆ ವಸತಿ ಕಲ್ಪಿಸಲು ಸೂಕ್ತ ಸ್ಥಳ ನಿಗದಿ ಮಾಡಬೇಕು ಎಂದು ಜಿಲ್ಲಾಧಿಕಾರಿಗೆ ಸೂಚಿಸಿದರು.

ADVERTISEMENT

ಗುಡ್ಡ ಜರಿದ ಪ್ರದೇಶದಲ್ಲಿ ನೀರು ಹರಿಯಲು ಕಾಲುವೆ ನಿರ್ಮಾಣ, ಜಮೀನಿನಲ್ಲಿ ಸಂಗ್ರಹವಾದ ಹೂಳು, ಮರದ ದಿಮ್ಮೆ ತೆರವುಗೊಳಿಸಲು ಪ್ರಕೃತಿ ಪರಿಹಾರ ನಿಧಿ ಅಡಿಯಲ್ಲಿ ಅನುದಾನ ಒದಗಿಸಲಾಗುತ್ತದೆ. ಅಡಿಕೆ ತೋಟ ನಿರ್ಮಾಣಕ್ಕೆ ತೋಟಗಾರಿಕೆ ಇಲಾಖೆ ಮೇಲ್ವಿಚಾರಣೆಯಲ್ಲಿ ಎನ್‌ಆರ್‌ಇಜಿ ಯೋಜನೆ ಅಡಿ ಗಿಡಗಳ ನಾಟಿಗೆ ಅನುದಾನ ನೀಡಲಾಗುತ್ತದೆ. ಸಂತ್ರಸ್ತ ಕುಟುಂಬಗಳಿಗೆ ನೀಡುವ ನೆರವು ವಿಶೇಷ ಪ್ಯಾಕೇಜ್ ಎಂದು ಪರಿಗಣಿಸಲಾಗುತ್ತದೆ ಎಂದರು.

ಶಾಸಕ ಆರಗ ಜ್ಞಾನೇಂದ್ರ, ‘ಹೆಗಲತ್ತಿ ಗ್ರಾಮದ ಜನರ ನೋವಿಗೆ ಮಾನವೀಯ ನೆಲೆಯಲ್ಲಿ ಸ್ಪಂದಿಸಲಾಗುವುದು. ಎನ್‌ಡಿಆರ್‌ಎಫ್ ನೀಡಿರುವ ಹಣಕಾಸಿನ ನೆರವು ಜೀವನ ನಿರ್ವಹಣೆಗೆ ಸಾಲುವುದಿಲ್ಲ. ಸಂತ್ರಸ್ತ ಕುಟುಂಬಗಳಿಗೆ ವಿಶೇಷ ನೆರವಿನ ಅಗತ್ಯವಿದೆ ಎಂಬ ಕುರಿತು ಅನೇಕ ಸಭೆಗಳಲ್ಲಿ ಸರ್ಕಾರದ ಗಮನಕ್ಕೆ ತಂದಿದ್ದೇನೆ. ಶೀಘ್ರ ಅಗತ್ಯ ನೆರವು ನೀಡಬೇಕು’ ಎಂದು ಆಗ್ರಹಿಸಿದರು.

ಮಾಜಿ ಜಿಲ್ಲಾ ಪಂಚಾಯಿತಿ ಅಧ್ಯಕ್ಷ ಅಶೋಕಮೂರ್ತಿ, ‘ಜಮೀನಿನಲ್ಲಿ ತುಂಬಿರುವ ಹೂಳು, ಮರಗಳನ್ನು ತೆರವುಗೊಳಿಸಲು ಹೆಚ್ಚಿನ ಅನುದಾನದ ಅಗತ್ಯವಿದೆ’ ಎಂದರು.

ಜಿಲ್ಲಾ ಪಂಚಾಯಿತಿ ಕೃಷಿ ಮತ್ತು ಕೈಗಾರಿಕೆ ಸ್ಥಾಯಿ ಸಮಿತಿ ಅಧ್ಯಕ್ಷ ಕಾಸರವಳ್ಳಿ ಶ್ರೀನಿವಾಸ್, ಜಿಲ್ಲಾಧಿಕಾರಿ ಕೆ.ಬಿ. ಶಿವಕುಮಾರ್, ಜಿಲ್ಲಾ ಪಂಚಾಯಿತಿ ಸಿಇಒ ಎಂ.ಎಲ್. ವೈಶಾಲಿ, ಉಪ ವಿಭಾಗಾಧಿಕಾರಿ ಪ್ರಕಾಶ್, ತಹಶೀಲ್ದಾರ್ ಡಾ.ಎಸ್.ಬಿ. ಶ್ರೀಪಾದ್, ಎಪಿಎಂಸಿ ಅಧ್ಯಕ್ಷ ಸಾಲೇಕೊಪ್ಪ ರಾಮಚಂದ್ರ, ತಾಲ್ಲೂಕು ಪಂಚಾಯಿತಿ ಸದಸ್ಯ ಬೇಗುವಳ್ಳಿ ಕವಿರಾಜ್, ಮಂಡಗದ್ದೆ ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ಮಧು ಶೆಟ್ಟಿ, ಪ್ರಮುಖರಾದ ತಳಲೆ ಪ್ರಸಾದ್ ಶೆಟ್ಟಿ, ಮಧುರಾಜ್ ಹೆಗ್ಡೆ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.