
ಸಾಗರ: ಚಲನಚಿತ್ರ ಹಾಗೂ ರಂಗಭೂಮಿಯ ಅಭಿನಯ ಕಲೆಯಲ್ಲಿ ಉಮಾಶ್ರೀ ಅವರನ್ನು ಮೀರಿಸುವ ಕಲಾವಿದರು ವಿರಳ ಎಂದು ಶಾಸಕ ಗೋಪಾಲಕೃಷ್ಣ ಬೇಳೂರು ಹೇಳಿದರು.
ಇಲ್ಲಿನ ಕಾಗೋಡು ತಿಮ್ಮಪ್ಪ ರಂಗಮಂದಿರದಲ್ಲಿ ಬೆಂಗಳೂರಿನ ರಂಗ ಸಂಪದ ಸಂಸ್ಥೆ ಸಾಗರದ ಸ್ಪಂದನ ರಂಗ ತಂಡದ ಸಹಯೋಗದಲ್ಲಿ ಆಯೋಜಿಸಿದ್ದ ‘ಶರ್ಮಿಷ್ಠೆ’ ಏಕವ್ಯಕ್ತಿ ರಂಗಪ್ರಯೋಗದ ನಂತರ ಉಮಾಶ್ರೀ ಅವರನ್ನು ಸನ್ಮಾನಿಸಿ ಮಾತನಾಡಿದರು.
ಪುರಾಣದ ಕತೆಯನ್ನು ವರ್ತಮಾನದ ಸಂದರ್ಭಕ್ಕೆ ಪ್ರಸ್ತುತಗೊಳಿಸುವ ರೀತಿಯಲ್ಲಿ ರಂಗ ನಿರ್ದೇಶಕ ಚಿದಂಬರರಾವ್ ಜಂಬೆ ಅವರು ಅತ್ಯಂತ ಸಮರ್ಥವಾಗಿ ಶರ್ಮಿಷ್ಠೆ ಪ್ರಯೋಗವನ್ನು ರಂಗಕ್ಕೆ ಅಳವಡಿಸಿದ್ದಾರೆ. ಹಲವು ಪಾತ್ರಗಳನ್ನು ರಂಗದ ಮೇಲೆ ಅಭಿನಯಿಸುವ ಸವಾಲವನ್ನು ಉಮಾಶ್ರೀ ಅವರು ಯಶಸ್ವಿಯಾಗಿ ನಿರ್ವಹಿಸಿದ್ದಾರೆ ಎಂದರು.
ಚಲನಚಿತ್ರ, ರಾಜಕೀಯ ಕ್ಷೇತ್ರದಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದ್ದರೂ ಉಮಾಶ್ರೀ ಅವರು ರಂಗಭೂಮಿಯ ಮೂಲ ಸೆಳೆತವನ್ನು ಇನ್ನೂ ಉಳಿಸಿಕೊಂಡಿದ್ದಾರೆ ಎಂಬುದಕ್ಕೆ ಶರ್ಮಿಷ್ಠೆ ರಂಗಪ್ರಯೋಗ ಸಾಕ್ಷಿಯಾಗಿದೆ ಎಂದು ಸ್ಪಂದನ ರಂಗ ತಂಡದ ಎಂ.ವಿ.ಪ್ರತಿಭಾ ಹೇಳಿದರು.
ಮಾಜಿ ಸಚಿವ ಕಾಗೋಡು ತಿಮ್ಮಪ್ಪ, ಪ್ರಮುಖರಾದ ಡಾ.ರಾಜನಂದಿನಿ ಕಾಗೋಡು, ಬಿ.ಟಾಕಪ್ಪ, ರಂಗ ಸಂಪದ ಸಂಸ್ಥೆಯ ಅಪ್ಪಯ್ಯ, ನಾಗೇಶ್, ಮೇಕಪ್ ರಾಮಕೃಷ್ಣ, ಚಂದ್ರಕಾಂತ್, ಶಿವಪ್ರಸಾದ್, ಅರುಣ್ ಮೂರ್ತಿ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.